
ಸೇನಾಧಿಕಾರಿ ಸೋಫಿಯಾ ಖುರೇಶಿ ನಿಂದನೆ: ಸಂಜೆಯೊಳಗೆ ಸಚಿವನ ವಿರುದ್ಧ ಎಫ್ಐಆರ್ ದಾಖಲಿಸಿ- ಪೊಲೀಸರಿಗೆ ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನ
ಸೇನಾಧಿಕಾರಿ ಸೋಫಿಯಾ ಖುರೇಶಿ ನಿಂದನೆ: ಸಂಜೆಯೊಳಗೆ ಸಚಿವನ ವಿರುದ್ಧ ಎಫ್ಐಆರ್ ದಾಖಲಿಸಿ- ಪೊಲೀಸರಿಗೆ ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನ
ಪಾಕಿಸ್ತಾನದ ವಿರುದ್ಧದ ಸೇನಾ ಕಾರ್ಯಚರಣೆ "ಆಪರೇಷನ್ ಸಿಂಧೂರ್" ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿರುವ ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಗುರಿಯಾಗಿಸಿಕೊಂಡು ಮಧ್ಯಪ್ರದೇಶದ ಆಡಳಿತರೂಢ ಬಿಜೆಪಿ ಸರಕಾರದ ಸಚಿವ ಕುಮಾರ್ ವಿಜಯ್ ಶಾ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆ ಆರಂಭಿಸಿದೆ.
ಮಧ್ಯ ಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಅನುರಾಧ ಶುಕ್ಲ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿ ಸಚಿವ ಶಾ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸುವಂತೆ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸಂಜೆಯೊಳಗೆ ಎಫ್‌ಐಆರ್ ದಾಖಲಿಸಬೇಕು. ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ಇಲ್ಲದಿದ್ದರೆ ನಾಳೆ ತಾನು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.
ಯಾವುದೇ ನೆಪಗಳನ್ನು ನಾವು ಕೇಳುವುದಿಲ್ಲ. ಎಫ್‌ಐಆರ್ ದಾಖಲಾಗುವಂತೆ ನೋಡಿಕೊಳ್ಳಿ ಇಲ್ಲದಿದ್ದರೆ ಸರಕಾರ ತೀವ್ರ ಮುಜುಗರ ಎದುರಿಸಬೇಕಾಗುತ್ತದೆ ಎಂದು ನಾನು ಪ್ರಮಾಣ ಮಾಡಿ ಹೇಳಬಲ್ಲೆ. ಈ ವಿಚಾರದಲ್ಲಿ ನಾವು ನಿರ್ಲಕ್ಷ್ಯದಿಂದ ಇರಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಶ್ರೀಧರನ್ ಅವರು ಅಡ್ವಕೇಟ್ ಜನರಲ್ ಪ್ರಶಾಂತ್ ಸಿಂಗ್ ಅವರನ್ನು ಉದ್ದೇಶಿಸಿ ಹೇಳಿದರು.
ಕರ್ನಲ್ ಸೋಫಿಯಾ ಅವರನ್ನು "ಭಯೋತ್ಪಾದಕರ ಸಹೋದರಿ" ಎಂದು ಕರೆದು ಸಚಿವ ಶಾ ಕ್ಷಮಿಸಲಾಗದಂತಹ ಹೇಳಿಕೆ ನೀಡಿದ್ದಾರೆ. ದೇಶದ ಸಶಸ್ತ್ರ ಪಡೆಗಳನ್ನು ಅವರ ಹೇಳಿಕೆ ಗುರಿಯಾಗಿಸಿಕೊಂಡಿದೆ. ಇದರಿಂದ ಅವರ ಹೇಳಿಕೆಗಳು ಅತ್ಯಂತ ಅಪಾಯಕಾರಿ ಎಂದು ನ್ಯಾಯಪೀಠ ಹೇಳಿದೆ.
ಭಾರತೀಯ ನ್ಯಾಯ ಸಂಹಿತೆಯ 2023ರ ವಿವಿಧ ಸೆಕ್ಷನ್ ಗಳನ್ನು, ಅದರಲ್ಲಿಯೂ ದೇಶದ ಸಾರ್ವಭೌಮತೆ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನು ಉಂಟುಮಾಡುವ ಕ್ರಮಗಳನ್ನು ಅಪರಾಧೀಕರಿಸುವ ಭಾರತೀಯ ನ್ಯಾಯ ಸಮಿತಿಯ ಸೆಕ್ಷನ್ 152 ಅನ್ನು ಸಚಿವ ಶಾ ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ಹೇಳಿತು.
ಸೋಫಿಯಾ ಅವರು ಮುಸ್ಲಿಂ ಧರ್ಮೀಯರಾಗಿರುವುದರಿಂದ ಸಚಿವ ಶಾ ಅವರ ಹೇಳಿಕೆ ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು ನೀಡುವುದನ್ನು ಅಪರಾಧೀಕರಿಸುವ ಬಿ ಎನ್ ಎಸ್ ನ ಸೆಕ್ಷನ್ 196ರ ಅಡಿಯೂ ಅಪರಾಧ ಕೃತ್ಯವಾಗುತ್ತದೆ. ಅದರಂತೆ ಅವರ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ನ್ಯಾಯಪೀಠ ನಿರ್ದೇಶನದಲ್ಲಿ ಪೊಲೀಸರಿಗೆ ತಾಕೀತು ಮಾಡಿತು.
ಈ ಆದೇಶ ಪಾಲಿಸಲು ಅಡ್ವಕೇಟ್ ಜನರಲ್ ಸಿಂಗ್ ಅವರು ಹೆಚ್ಚಿನ ಸಮಯಾವಕಾಶವನ್ನು ಕೋರಿದರು.
ಸಚಿವರ ಹೇಳಿಕೆಯನ್ನು ತಿರುಚಿರುವ ಸಾಧ್ಯತೆ ಇರುವುದರಿಂದ ತನಿಖಾ ಸಂಸ್ಥೆಗೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಎಜಿ ಹೇಳಲು ಮುಂದಾದರು. ಆಗಲೂ ತೃಪ್ತವಾಗದ ನ್ಯಾಯಾಲಯ, ಮೊದಲು ಎಫ್ಐಆರ್ ನೋಂದಾಯಿಸಿ. ಇಂತಹ ಪ್ರಕರಣಗಳಲ್ಲಿ ನಾಳೆ ಎಂಬುದು ಇರುವುದಿಲ್ಲ ಎಂದು ಸ್ಪಷ್ಟಪಡಿಸಿತು.