
NI Act: ಚೆಕ್ ಅಮಾನ್ಯ ಪ್ರಕರಣ: ತಾಂತ್ರಿಕ ಕಾರಣದಿಂದ ಪ್ರಕರಣ ವಜಾ- ಅವಧಿ ಪೂರ್ಣ ಕೇಸ್ ದಾಖಲಿಸಿದ ಫಿರ್ಯಾದಿಗೆ ಪರಿಹಾರವೇನು..?
ಚೆಕ್ ಅಮಾನ್ಯ ಪ್ರಕರಣ: ತಾಂತ್ರಿಕ ಕಾರಣದಿಂದ ಪ್ರಕರಣ ವಜಾ- ಅವಧಿ ಪೂರ್ಣ ಕೇಸ್ ದಾಖಲಿಸಿದ ಫಿರ್ಯಾದಿಗೆ ಪರಿಹಾರವೇನು..?
ಚೆಕ್ ಅಮಾನ್ಯ ಪ್ರಕರಣದಲ್ಲಿ ನೋಟೀಸ್ ಜಾರಿ ಅಥವಾ ನೋಟೀಸ್ ಸೇವೆಯ ದಿನದಿಂದ 15 ದಿನಗಳಿಗೆ ಮುನ್ನವೇ ಪ್ರಕರಣ ದಾಖಲಿಸಿದರೆ ಈ ಪ್ರಕರಣ ತಾಂತ್ರಿಕ ಕಾರಣದಿಂದ ವಜಾಗೊಳ್ಳುತ್ತದೆ. ಇಂತಹ ಪ್ರಕರಣದಲ್ಲಿ ಫಿರ್ಯಾದಿಗೆ ಪರಿಹಾರವೇನು ಎಂಬ ವಿಷಯವನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದೆ.
"ಅರುಮುಗಂ ವಿರುದ್ಧ ಆನಂದ" ಪ್ರಕರಣದಲ್ಲಿ ದಾಖಲಾಗಿರುವ ಕ್ರಿಮಿನಲ್ ರಿವಿಷನ್ ಪಿಟಿಷನ್‌ನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಫಿರ್ಯಾದಿಗೆ ಚೆಕ್ ಅಮಾನ್ಯ ಪ್ರಕರಣ ದಾಖಲಿಸಲು ಮತ್ತೊಂದು ಅವಕಾಶವನ್ನು ನೀಡುವ ಮೂಲಕ ಪರ್ಯಾಯ ಕಲ್ಪಿಸಿದೆ.
ಸದ್ರಿ ಪ್ರಕರಣದಲ್ಲಿ ದೂರುದಾರರಾದ ಆನಂದ್ ಅವರು ವಿಚಾರಣಾ ನ್ಯಾಯಾಲಯದಲ್ಲಿ ನೋಟಿಸ್ ಸೇವೆಯ ದಿನಾಂಕದಿಂದ 15 ದಿನಗಳ ಅವಧಿ ಮುಗಿಯುವ ಮೊದಲೇ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ವಿಚಾರಣಾ ನ್ಯಾಯಾಲಯ, ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ಅರುಮುಗಂ ಸೆಷನ್ಸ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಈ ಮೇಲ್ಮನವಿಯನ್ನು ತಿರಸ್ಕರಿಸಿದ ಸೆಷನ್ಸ್ ಕೋರ್ಟ್, ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು.
ಇದರಿಂದ ಬಾಧಿತರಾದ ಅರ್ಜಿದಾರರು, ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಇದು ಅವಧಿಪೂರ್ವ ಫಿರ್ಯಾದು ಆಗಿದ್ದು, ವ್ಯಾಜ್ಯ ಕಾರಣದ ಕಾಲಮಿತಿಗೆ ಮುನ್ನವೇ ಈ ದೂರನ್ನು ಸಲ್ಲಿಸಿರುವುದರಿಂದ ಈ ದೂರು ನಿರ್ವಹಣೆಗೆ ಯೋಗ್ಯವಲ್ಲ ಎಂದು ಅವರು ವಾದಿಸಿದ್ದರು.
ನೋಟಿಸ್ ಸೇವೆಯ ದಿನಾಂಕದಿಂದ 15 ದಿನಗಳ ಅವಧಿ ಮುಗಿಯುವ ಮೊದಲು ಸಲ್ಲಿಸಲಾದ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ (NI) ಕಾಯ್ದೆಯ ಸೆಕ್ಷನ್ 138 ರ ಅಡಿಯಲ್ಲಿ ಚೆಕ್ ಬೌನ್ಸ್ ದೂರನ್ನು ಕಾನೂನಿನ ದೃಷ್ಟಿಯಲ್ಲಿ ಮಾನ್ಯ ದೂರಾಗಿ ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಆದರೆ, ತಾಂತ್ರಿಕ ದೋಷದ ಕಾರಣಕ್ಕೆ ಆರೋಪಿ ತಪ್ಪಿಸಿಕೊಳ್ಳುವಂತಾಗುತ್ತದೆ. ಇದನ್ನು ತಪ್ಪಿಸಲು ಫಿರ್ಯಾದಿಗೆ ದೂರನ್ನು ಸಲ್ಲಿಸಲು ಮತ್ತೊಂದು ಅವಕಾಶ ನೀಡಬೇಕು ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿತು.
Yogendra Pratap Singh Vs Savitri Pandey ಪ್ರಕರಣದಲ್ಲಿ (2015) AIR (SC) 157 ಮಾನ್ಯ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ನ್ಯಾಯಪೀಠ ಉಲ್ಲೇಖಿಸಿತು. ಅದೇ ರೀತಿ, ಆ ಬಳಿಕ, 2022 LiveLaw (SC) 682 ರಲ್ಲಿ ವರದಿಯಾದಂತೆ Gajanand Burange Vs. Laxmi Chand Goyal ಪ್ರಕರಣದಲ್ಲೂ ಇದೇ ರೀತಿಯ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ್ದು, ಫಿರ್ಯಾದಿಗೆ ಮತ್ತೊಂದು ಅವಕಾಶ ನೀಡುವುದು ಸೂಕ್ತ ಎಂದು ಪರಿಗಣಿಸಿ ಮೇಲ್ಮನವಿಯನ್ನು ವಜಾಗೊಳಿಸಿದೆ.
ಒಂದು ತಿಂಗಳೊಳಗೆ ದೂರನ್ನು ಸಲ್ಲಿಸಲು ಎದುರುದಾರರಿಗೆ ಅವಕಾಶ ನೀಡಿದ್ದು, ಈ ಫಿರ್ಯಾದನ್ನು ದಾಖಲಿಸಿಕೊಂಡ ವಿಚಾರಣಾ ನ್ಯಾಯಾಲಯ ಯಾವುದೇ ಪ್ರಭಾವ ಅಥವಾ ಒತ್ತಡಕ್ಕೆ ಒಳಗಾಗದೆ ಆರು ತಿಂಗಳೊಳಗೆ ಸೂಕ್ತ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ನಿರ್ದೇಶನ ನೀಡಿದೆ.
ಅರುಮುಗಂ ವಿರುದ್ಧ ಆನಂದ
ಕರ್ನಾಟಕ ಹೈಕೋರ್ಟ್, Crl.R.P. 1021/2021 Dated 18-06-2025