ವಿದ್ಯುತ್ ಕನಿಷ್ಟ ಶುಲ್ಕದ ಮೇಲೆ ತೆರಿಗೆ ವಿಧಿಸುವಂತಿಲ್ಲ: ಎಸ್ಕಾಂಗಳಿಗೆ ಹೈಕೋರ್ಟ್ ಬರೆ- ಸಂಗ್ರಹಿತ ಶುಲ್ಕ ಗ್ರಾಹಕರಿಗೆ ಮರುಪಾವತಿಸಲು ನಿರ್ದೇಶನ- ವಿದ್ಯುತ್ ಕಂಪೆನಿಗಳಿಗೆ ಸಂಕಷ್ಟ
ವಿದ್ಯುತ್ ಕನಿಷ್ಟ ಶುಲ್ಕದ ಮೇಲೆ ತೆರಿಗೆ ವಿಧಿಸುವಂತಿಲ್ಲ: ಎಸ್ಕಾಂಗಳಿಗೆ ಹೈಕೋರ್ಟ್ ಬರೆ
ಸಂಗ್ರಹಿತ ಶುಲ್ಕ ಗ್ರಾಹಕರಿಗೆ ಮರುಪಾವತಿಸಲು ನಿರ್ದೇಶನ- ವಿದ್ಯುತ್ ಕಂಪೆನಿಗಳಿಗೆ ಸಂಕಷ್ಟ
ವಿದ್ಯುತ್ ಬಳಕೆದಾರರಿಗೆ ಕನಿಷ್ಟ ಶುಲ್ಕದ ಮೇಲೆ ತೆರಿಗೆ ವಿಧಿಸುವುದು ಅಸಂವಿಧಾನಿಕ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ಹೊರಡಿಸಿದೆ.
2009ರಿಂದ 2018ರ ವರೆಗೆ ರಾಜ್ಯದ ವಿವಿಧ ವಿದ್ಯುತ್ ಕಂಪೆನಿ(ಎಸ್ಕಾಂ)ಗಳು ಸಂಗ್ರಹ ಮಾಡಿರುವ ಶುಲ್ಕವನ್ನು ಮರುಪಾವತಿ ಮಾಡುವಂತೆ ಆದೇಶ ನೀಡಿದೆ.
ನ್ಯಾಯಾಲಯದ ಆದೇಶದಿಂದ ವಿದ್ಯುತ್ ಸರಬರಾಜು ಕಂಪೆನಿಗಳು ಗ್ರಾಹಕರಿಗೆ ಕೋಟ್ಯಂತರ ರೂ. ಮರುಪಾವತಿ ಮಾಡಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಸರ್ಕಾರ 2004ರಲ್ಲಿ ಕರ್ನಾಟಕ ವಿದ್ಯುತ್ (ಬಳಕೆ ಮೇಲಿನ ತೆರಿಗೆ) ಕಾಯ್ದೆ 1959ರ ಸೆಕ್ಷನ್ 3(1) ಗೆ ತಿದ್ದುಪಡಿ ಮಾಡಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ಕೃಷಿ ಪಂಪ್ ಸೆಟ್‌ಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ವರ್ಗದ ಗ್ರಾಹಕರಿಗೆ ಕನಿಷ್ಟ ಶೇಕಡಾ 5ರಷ್ಟು ತೆರಿಗೆ ವಿಧಿಸುವ ನಿಯಮ ಜಾರಿಗೊಳಿಸಿತ್ತು.
ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಬೆಂಗಳೂರಿನ ಮೆಸರ್ಸ್ ಸೋನಾ ಸಿಂಥೆಟಿಕ್ಸ್ ಕಂಪೆನಿ, ಶ್ರೀ ಕೃಷ್ಣ ಸ್ಪಿನ್ನಿಂಗ್ ಮತ್ತು ವೀವಿಂಗ್ ಮಿಲ್ಸ್ ಪ್ರೈ. ಲಿ. ಸೇರಿದಂತೆ ಹಲವು ಕಂಪೆನಿಗಳು 2008-09ರಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾಯಾಲಯ, ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮಾಡುವುದು ಅದು ಅವರ ಬಳಕೆಗೆ ಲಭ್ಯವಿದೆ ಎಂಬುದನ್ನು ಖಾತಿಪಡಿಸಲು. ಆದರೆ, ಅದು ಬಳಕೆ ಅಥವಾ ಮಾರಾಟ ಆಗುವುದಿಲ್ಲ. ಗ್ರಾಹಕರು ವಿದ್ಯುತ್‌ನ್ನು ಬಳಕೆ ಮಾಡದೇ ಇದ್ದರೆ ಅವರ ಮೇಲಿನ ಸಂವಿಧಾನದ ಏಳನೇ ಶೆಡ್ಯೂಲ್ ಲಿಸ್ಟ್ 2 ಎಂಟ್ರಿ 53ರ ಪ್ರಕಾರ ರಾಜ್ಯ ಸರ್ಕಾರಕ್ಕೆ ಕನಿಷ್ಟ ಶುಲ್ಕದ ಮೇಲೆ ಯಾವುದೇ ತೆರಿಗೆ ವಿಧಿಸುವ ಯಾವುದೇ ಶಾಸನಾತ್ಮಕ ಅಧಿಕಾರ ಇಲ್ಲ ಎಂದು ಹೇಳಿದೆ.
ಆದರೆ, ಏಳನೇ ಶೆಡ್ಯೂಲ್ ಲಿಸ್ಟ್ 2 ಎಂಟ್ರಿ 53ರ ಪ್ರಕಾರ ರಾಜ್ಯ ಸರ್ಕಾರಕ್ಕೆ ವಿದ್ಯುತ್ ಬಳಕೆ ಮೇಲೆ ತೆರಿಗೆ ವಿಧಿಸುವ ಅಧಿಕಾರವಿದೆಯೇ ಹೊರತು ಕನಿಷ್ಟ ಶುಲ್ಕದ ಮೇಲೆ ಅಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.