
ವೀರಶೈವರಿಗೆ 'ಜಂಗಮ' ಜಾತಿ ಸರ್ಟಿಫಿಕೇಟ್ ನೀಡಿಕೆ ವಿವಾದ: ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ಮಹತ್ವದ ತೀರ್ಪು
ವೀರಶೈವರಿಗೆ 'ಜಂಗಮ' ಜಾತಿ ಸರ್ಟಿಫಿಕೇಟ್ ನೀಡಿಕೆ ವಿವಾದ: ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ಮಹತ್ವದ ತೀರ್ಪು
ವೀರಶೈವರು ಯಾ ಲಿಂಗಾಯತ ಸಮುದಾಯದ ಸದಸ್ಯರಿಗೆ 'ಜಂಗಮ' ಜಾತಿ ಸರ್ಟಿಫಿಕೇಟ್ ನೀಡಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ಮಹತ್ವದ ತೀರ್ಪು ನೀಡಿದೆ.
ಲಿಂಗಾಯಿತ ಸಮುದಾಯದ ಜಂಗಮರೇ ಬೇರೆ... ಬುಡ್ಗ ಅಥವಾ ಬೇಡ ಜಂಗಮರೇ ಬೇರೆ... ಇದಕ್ಕೆ ಯಾವುದೇ ಸಾಮ್ಯತೆ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ವೀರಶೈವ ಜಂಗಮರು ಬೇಡ ಅಥವಾ ಬುಡ್ಗ ಜಂಗಮರಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಮಹತ್ವದ ತೀರ್ಪು ನೀಡಿದೆ
ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ ಉದ್ಧಾರ ಅವರಿಂದ ವಿಭಾಗಿಯ ನ್ಯಾಯಪೀಠ ಈ ತೀರ್ಪು ನೀಡಿದೆ
ರಾಜ್ಯ ಸಮಾಜ ಕಲ್ಯಾಣ ಇಲಾಖೆ, ಬೀದರ್ ನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ರಾಜ್ಯ ಸಂಚಾಲಕ ಮಾರುತಿ ಬೌದ್ಧ ಹಾಗೂ ಬೀದರ್ ನಿವಾಸಿ ರವೀಂದ್ರ ಸ್ವಾಮಿ ಸಲ್ಲಿಸಿದ ರಿಟ್ ಮೇಲ್ಮನವಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ
ವೀರಶೈವ ಸಮುದಾಯದ ಜಂಗಮರು ಪುರೋಹಿತ ವರ್ಗಕ್ಕೆ ಸೇರಿದವರು ಮತ್ತು ಶುದ್ಧ ಸಸ್ಯಹಾರಿಗಳು. ಆದರೆ, ಬೇಡ ಜಂಗಮರು ಸಮಾಜದ ಕೆಳ ಜಾತಿಗೆ ಸೇರಿದವರು ಮತ್ತು ಅವರನ್ನು ಅಸ್ಪೃಶ್ಯರೆಂದು ಪರಿಗಣಿಸಲಾಗುತ್ತಿದೆ ಎಂಬ ಅಂಶವನ್ನು ನ್ಯಾಯಪೀಠ ಸ್ಪಷ್ಟ ನುಡಿಗಳಲ್ಲಿ ದಾಖಲಿಸಿದೆ.
ಪ್ರಭುದೇವ ಮಲ್ಲಿಕಾರ್ಜುನಯ್ಯ ವಿರುದ್ಧ ರಾಮಚಂದ್ರ ವೀರಪ್ಪ ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಈ ಪ್ರಕರಣದಲ್ಲಿ ಜಾತಿಯ ಹೆಸರು ಒಂದೇ ರೀತಿ ಇದೆ ಎನ್ನುವ ಕಾರಣಕ್ಕಾಗಿ ಈ ಜಾತಿಗಳಿಗೆ ಪರಿಶಿಷ್ಟ ಜಾತಿಗಳ ಸ್ಥಾನಮಾನವನ್ನು ನೀಡಲಾಗದು ಎಂಬುದನ್ನು ಸುಪ್ರೀಂಕೋರ್ಟು ತೀರ್ಮಾನಿಸಿದೆ.
ಹಾಗಾಗಿ, ಲಿಂಗಾಯಿತ ವರ್ಗಕ್ಕೆ ಸೇರಿರುವ ಅರ್ಜಿದಾರ ರವೀಂದ್ರ ಸ್ವಾಮಿ ಅವರು 'ಬೇಡ ಜಂಗಮ' ಜಾತಿಗೆ ಸೇರಬೇಕಾದ ಪ್ರಯೋಜನ ಪಡೆಯಲು ಹಕ್ಕು ಮಂಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರ ಕುಟುಂಬದ ಒಬ್ಬ ಸದಸ್ಯರಿಗೆ 'ಬೇಡ ಜಂಗಮ' ಪ್ರಮಾಣ ಪತ್ರ ದೊರೆತಿದೆ ಎಂದ ಮಾತ್ರಕ್ಕೆ ಇತರ ಸದಸ್ಯರು ಕೂಡ ಈ ಪ್ರಮಾಣ ಪತ್ರ ಪಡೆಯಲು ಅನುಮತಿಯನ್ನು ನೀಡಲಾಗದು. ಏಕೆಂದರೆ ಅವರು ವೀರಶೈವ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ನ್ಯಾಯಪೀಠ ವಿವರಿಸಿದೆ