
ನ್ಯಾಯಾಲಯ ಕಕ್ಷಿದಾರರಿಗೆ, ವಕೀಲರಿಗಾಗಿ ಅಲ್ಲ: ಕೋರ್ಟ್ ಸ್ಥಳಾಂತರ ಪ್ರಶ್ನಿಸಿದ್ದ ವಕೀಲರಿಗೆ ಪಾಠ ಮಾಡಿದ ಸುಪ್ರೀಂ ಕೋರ್ಟ್
ನ್ಯಾಯಾಲಯ ಕಕ್ಷಿದಾರರಿಗೆ, ವಕೀಲರಿಗಾಗಿ ಅಲ್ಲ: ಕೋರ್ಟ್ ಸ್ಥಳಾಂತರ ಪ್ರಶ್ನಿಸಿದ್ದ ವಕೀಲರಿಗೆ ಪಾಠ ಮಾಡಿದ ಸುಪ್ರೀಂ ಕೋರ್ಟ್
ನ್ಯಾಯಾಲಯಗಳು ಇರುವುದು ಕಕ್ಷಿದಾರರ ಅನುಕೂಲಕ್ಕಾಗಿ. ಬದಲಿಗೆ ವಕೀಲರಿಗಾಗಿ ಅಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದು, ಹೆಚ್ಚುವರಿ ಸೆಷನ್ಸ್ ಕೋರ್ಟ್ ಸ್ಥಳಾಂತರ ಪ್ರಶ್ನಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಆಂಧ್ರ ಪ್ರದೇಶದ ಜಿಲ್ಲಾ ನ್ಯಾಯಾಲಯದ ಸ್ಥಳಾಂತರ ಮಾಡಿದ ಆದೇಶವನ್ನು ಪ್ರಶ್ನಿಸಿ ವಕೀಲರೊಬ್ಬರು ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದ ನ್ಯಾಯಪೀಠ, ವಕೀಲರಿಗೆ ಕಿವಿಮಾತು ಹೇಳಿತು.
ಕೋರ್ಟ್ ಸ್ಥಾಪನೆಯಾಗುವುದು, ಸ್ಥಳಾಂತರ ಮಾಡುವುದು ಕಕ್ಷಿದಾರರ ಅನುಕೂಲಕ್ಕೆ. ಅದರ ಪ್ರಯೋಜನ ಅವರಿಗೆ ಸಿಗಬೇಕು. ನ್ಯಾಯಾಲಯ ಇರುವುದು ವಕೀಲರಿಗಾಗಿ ಅಲ್ಲ, ಕಕ್ಷಿದಾರರಿಗೆ. ಇಲ್ಲಿ ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗುತ್ತದೆ. ಮನೆ ಬಾಗಿಲಿಗೆ ನ್ಯಾಯ ತಲುಪಬೇಕು ಎಂದು ನಾವು ಹೇಳುತ್ತೇವೆ ಎಂದು ನ್ಯಾಯಪೀಠ ಪಾಠ ಮಾಡಿತು.
ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವನ್ನು ಮಚಲೀಪಟ್ಟಣದಿಂದ ಅವನೀಗಡ್ಡಕ್ಕೆ ಸ್ಥಳಾಂತರಿಸಲು ಅನುಮತಿ ನೀಡಿದ್ದ ಆಂಧ್ರ ಪ್ರದೇಶ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ವಕೀಲರೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಈ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್‌ನ ಟೀಕೆಯ ಹಿನ್ನೆಲೆಯಲ್ಲಿ ಅರ್ಜಿದಾರರು ತಮ್ಮ ಅರ್ಜಿಯನ್ನು ಹಿಂಪಡೆದರು.