ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಮಾಫಿ ಸಾಕ್ಷಿ ದಾಖಲು- ದರ್ಶನ್‌ಗೆ ಎದುರಾಗಲಿದೆ ಸಂಕಷ್ಟ?
ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಮಾಫಿ ಸಾಕ್ಷಿ ದಾಖಲು- ದರ್ಶನ್‌ಗೆ ಎದುರಾಗಲಿದೆ ಸಂಕಷ್ಟ?
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ಕೋರ್ಟ್ ಮಾಫಿ ಸಾಕ್ಷಿ ದಾಖಲಿಸಿಕೊಂಡಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಕೋರ್ಟ್‌ಗೆ ಹಾಜರಾಗಿ ಸಾಕ್ಷ್ಯವನ್ನು ನೀಡಿದ್ದಾರೆ. ಈ ಪ್ರಕರಣದಲ್ಲಿ ನಟ ದರ್ಶನ್ ಆರೋಪಿಯಾಗಿದ್ದಾರೆ.
ಪ್ರಕರಣದ ತ್ವರಿತ ವಿಚಾರಣೆಗೆ ನಿರ್ದೇಶಿಸಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿದ ನ್ಯಾಯಾಧೀಶರಾದ ಸುಜಾತಾ ಸಾಂಬ್ರಾಣಿ ಅವರು ದರ್ಶನ್ ಮೊಮೊವನ್ನು ತಿರಸ್ಕರಿಸಿ ವಿಚಾರಣೆಯನ್ನು ಮುಂದುವರಿಸಿದರು.
ಕಾಮಾಕ್ಷಿಪಾಳ್ಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳು ಜೈಲಿನಿಂದ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಅನ್ನು ನಗರ ಸಶಸ್ತ್ರ ಮೀಸಲು ಪಡೆ ಅಧಿಕಾರಿಗಳ ಮತ್ತು ಸಿಬ್ಬಂದಿಯ ಬೆಂಗಾವಲು ಹಾಗೂ ಭದ್ರತೆಯೊಂದಿಗೆ ಕರೆತಂದು ಸೋಮವಾರ ಬೆಳಗ್ಗೆ ಸುಮಾರು 11.10ರ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಈ ವೇಳೆ ದರ್ಶನ್ ಪರ ವಕೀಲರು ಹಾಜರಾಗಿ, ಪ್ರದೋಷ್ ಅನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವ ಈ ನ್ಯಾಯಾಲಯದ ಆದೇಶವನ್ನು ಸುಪ್ರಿಂ ಕೋರ್ಟ್ ಮುಂದೆ ಪ್ರಶ್ನಿಸಲಾಗುವುದು. ಅದಕ್ಕಾಗಿ ಎರಡು ದಿನಗಳ ಕಾಲ ಪ್ರದೋಷ್ ಸಾಕ್ಷ್ಯ ದಾಖಲು ಪ್ರಕ್ರಿಯೆ ಮುಂದೂಡುವಂತೆ ಕೋರಿ ಮತ್ತೆ ಮೊಮೊ ಸಲ್ಲಿಸಿದರು. ಆ ಮೂಲಕ ಪ್ರದೋಷ್ ಸಾಕ್ಷ್ಯ ದಾಖಲು ಪ್ರಕ್ರಿಯೆನ್ನು ತಡೆಯುವುದಕ್ಕೆ ಕೊನೆ ಪ್ರಯತ್ನ ನಡೆಸಿದರು.
ಆದರೆ, ಈ ಮನವಿಗೆ ತೀವ್ರವಾಗಿ ಆಕ್ಷೇಪಿಸಿದ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್ ಅವರು ದರ್ಶನ್ ಮೊಮೊ ತಿರಸ್ಕರಿಸಲು ಕೋರಿದರು.
ಅದರಂತೆ ಪ್ರಕರಣದ ತ್ವರಿತ ವಿಚಾರಣೆಗೆ ಸುಪ್ರಿಂ ಕೋರ್ಟ್ ನೀಡಿರುವ ಆದೇಶವನ್ನು ಉಲ್ಲೇಖಿಸಿ ದರ್ಶನ್ ಮೊಮೊವನ್ನು ನ್ಯಾಯಾಲಯವು ತಿರಸ್ಕರಿಸಿತು.
ಪ್ರಕರಣ ಸೂಕ್ಷ್ಮತೆ ಮತ್ತು ಜನಸಂದಣಿ ನಿಯಂತ್ರಿಸುವ ನಿಟ್ಟಿನಲ್ಲಿ ಗೌಪ್ಯವಾಗಿ ಪ್ರದೋಷ್ ಮಾಫಿ ಸಾಕ್ಷ್ಯವನ್ನು ನ್ಯಾಯಾಲಯವು ದಾಖಲಿಸಿಕೊಂಡಿತು. ಕಟೆಕಟೆಯಲ್ಲಿ ನಿಂತು ಪ್ರಮಾಣ ಮಾಡಿ ಪ್ರದೋಷ್ ತನ್ನ ಸಾಕ್ಷ್ಯ ದಾಖಲಾತಿ ಆರಂಭಿಸಿದರು. ಸಂಜೆಯ ವೇಳೆಗೆ ಪ್ರದೋಷ್ ಸಾಕ್ಷ್ಯ ದಾಖಲು ಪ್ರಕ್ರಿಯೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು. ಹಾಗೆಯೇ, ಮಂಗಳವಾರವು ಪ್ರದೋಷ್ ಅನ್ನು ಖುದ್ದಾಗಿ ವಿಚಾರಣೆಗೆ ಹಾಜರುಪಡಿಸಬೇಕು ಎಂದು ಕಾಮಾಕ್ಷಿಪಾಳ್ಯ ಪೊಲಿಸ್ ಇನ್ಸ್‌ಪೆಕ್ಟರ್ ಮತ್ತು ಜೈಲು ಅಧಿಕಾರಿಗಳಿಗೆ ಸೂಚಿಸಿದೆ.
ಇದೇ ವೇಳೆ, ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ ಮತ್ತು ದರ್ಶನ್ ಸೇರಿ ಪ್ರಕರಣದ ಒಟ್ಟು 6 ಆರೋಪಿಗಳನ್ನು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಹೈಕೋರ್ಟ್ ನಿರ್ದೇಶನದಂತೆ ಈ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಪಡಿಸಲು ನ್ಯಾಯಾಲಯ ನಿರ್ದೇಶಿಸಲಾಗಿತ್ತು.
ಈ ಮಧ್ಯೆ, ಮಾಫಿ ಸಾಕ್ಷಿಯನ್ನು ದಾಖಲಿಸಿಕೊಳ್ಳುವುದನ್ನು ತಡೆಯಲು ಆರೋಪಿ ದರ್ಶನ್ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಪ್ರಕರಣದ ವಿಚಾರಣೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲಿದ್ದು, ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪ್ರಕರಣದ ವಿಚಾರಣೆಯನ್ನು ತಡೆಯಬೇಕು ಎಂದು ಕೋರಿದರು. ಆದರೆ, ಆ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತು.