-->
ವಾರ್ಷಿಕ ಗೌಪ್ಯ ವರದಿ ಅನುಪಸ್ಥಿತಿ: ಸೇವಾ ಸೌಲಭ್ಯ ನಿರಾಕರಣೆಯಾಧ ಉದ್ಯೋಗಿಗಳ ನೆರವಿಗೆ ಧಾವಿಸಿದ ಸುಪ್ರೀಂ ಕೋರ್ಟ್‌

ವಾರ್ಷಿಕ ಗೌಪ್ಯ ವರದಿ ಅನುಪಸ್ಥಿತಿ: ಸೇವಾ ಸೌಲಭ್ಯ ನಿರಾಕರಣೆಯಾಧ ಉದ್ಯೋಗಿಗಳ ನೆರವಿಗೆ ಧಾವಿಸಿದ ಸುಪ್ರೀಂ ಕೋರ್ಟ್‌

ವಾರ್ಷಿಕ ಗೌಪ್ಯ ವರದಿ ಅನುಪಸ್ಥಿತಿ: ಸೇವಾ ಸೌಲಭ್ಯ ನಿರಾಕರಣೆಯಾದ ಉದ್ಯೋಗಿಗಳ ನೆರವಿಗೆ ಧಾವಿಸಿದ ಸುಪ್ರೀಂ ಕೋರ್ಟ್‌





ಉದ್ಯೋಗಿಯ ತಪ್ಪಿನಿಂದಲ್ಲದ ವಾರ್ಷಿಕ ಗೌಪ್ಯ ವರದಿಗಳ (ಎಸಿಆರ್‌) ಅನುಪಸ್ಥಿತಿಯನ್ನು ನೆಪವಿಟ್ಟು ಸೇವಾ ಸೌಲಭ್ಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್


ಉದ್ಯೋಗಿಯ ವಾರ್ಷಿಕ ಗೌಪ್ಯ ವರದಿಗಳು (ಆನ್ಯುಲ್ ಕಾನ್ಫಿಡೆನ್ಸ್ಷಿಯಲ್ ರಿಪೋರ್ಟ್ - ಎಸಿಆರ್) ಲಭ್ಯವಿಲ್ಲದಿರುವುದು ಉದ್ಯೋಗಿಯ ತಪ್ಪಿನಿಂದಲ್ಲದೆ, ಉದ್ಯೋಗದಾತನ ಕ್ರಮದಿಂದ ಉಂಟಾಗಿದ್ದರೆ, ಆ ಕಾರಣವನ್ನು ನೆಪವಿಟ್ಟು ಬಡ್ತಿ ಅಥವಾ ವೇತನ ಶ್ರೇಣಿಯಂತಹ ಸೇವಾ ಸೌಲಭ್ಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಂತಹ ಸಂದರ್ಭಗಳಲ್ಲಿ, ಲಭ್ಯವಿರುವ ಎಸಿಆರ್‌ಗಳನ್ನೇ ಆಧಾರವಾಗಿ ತೆಗೆದುಕೊಂಡು ಸೇವಾ ಸೌಲಭ್ಯಗಳ ಅರ್ಹತೆಯನ್ನು ನಿರ್ಧರಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.


ಹೈಕೋರ್ಟ್ ಆಫ್ ಜುಡಿಕೇಚರ್ ರಾಜಸ್ಥಾನ ವಿರುದ್ಧ ಅಭಯ್ ಜೈನ್ ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ವಿಭಾಗೀಯ ಪೀಠವು ಈ ತೀರ್ಪು ನೀಡಿದ್ದು, ತಪ್ಪಾಗಿ ಸೇವೆಯಿಂದ ವಜಾಗೊಂಡಿದ್ದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅಭಯ್ ಜೈನ್ ಅವರ ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್ ಸಲ್ಲಿಸಿದ್ದ ಸ್ಪಷ್ಟೀಕರಣ ಅರ್ಜಿಯನ್ನು ವಿಲೇವಾರಿ ಮಾಡುವ ವೇಳೆ ಈ ಮಹತ್ವದ ಕಾನೂನು ತತ್ವವನ್ನು ಪುನರುಚ್ಚರಿಸಿತು.


ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ

ಶ್ರೀ ಅಭಯ್ ಜೈನ್ ಎಂಬವರು ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿ ರಾಜಸ್ತಾನ ನ್ಯಾಯಾಂಗ ಸೇವೆಗೆ 2013ರಲ್ಲಿ ಸೇರಿದರು. ಅವರನ್ನು 27.01.2016 ರಂದು ಸೇವೆಯಿಂದ ವಜಾಗೊಳಿಸಲಾಯಿತು. ಸದರಿ ಆದೇಶವನ್ನು ಪ್ರಶ್ನಿಸಿ ರಾಜಸ್ಥಾನ ಹೈಕೋರ್ಟ್ ನಲ್ಲಿ ರಿಟ್ ಪಿಟಿಷನ್ ದಾಖಲಿಸಿದರು.


ದಿನಾಂಕ 21.10.2019 ರಂದು ಅವರ ರಿಟ್ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ವಜಾ ಗೊಳಿಸಿದ್ದು ಸದರಿ ಆದೇಶದಿಂದ ಬಾಧಿತರಾದ ಶ್ರೀ ಅಭಯ್ ಜೈನ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಿವಿಲ್ ಮೇಲ್ಮನವಿ ಸಂಖ್ಯೆ 2029/2022 ಅನ್ನು ದಾಖಲಿಸಿದರು. ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ 15‌.3.2022 ರಂದು ಮೇಲ್ಮನವಿಯನ್ನು ಪುರಸ್ಕರಿಸಿ ರಾಜಸ್ಥಾನ್ ಹೈಕೋರ್ಟ್ ನೀಡಿದ ಆದೇಶವನ್ನು ರದ್ದುಪಡಿಸಿ, ಸೇವಾ ನಿರಂತರತೆ, ಹಿರಿತನ, ಎಲ್ಲಾ ಪರಿಣಾಮಾನುಸಾರ ಸೇವಾ ಸೌಲಭ್ಯಗಳು ಹಾಗೂ 50% ಹಿಂಬಾಕಿ ವೇತನದೊಂದಿಗೆ ಮರುನೇಮಕ ಮಾಡಬೇಕು ಎಂದು ಆದೇಶಿಸಿತ್ತು.


ನಂತರ, 2016ರಿಂದ 2022ರವರೆಗೆ ಅವರು ಸೇವೆಯಿಂದ ಹೊರಗಿದ್ದ ಕಾರಣ, ಆಯ್ಕೆ ಶ್ರೇಣಿ (ಸೆಲೆಕ್ಷನ್ ಸ್ಕೇಲ್) ಮತ್ತು ಸೂಪರ್ ಟೈಮ್ ಸ್ಕೇಲ್ ನೀಡಲು ಅಗತ್ಯವಿರುವ ಏಳು ವರ್ಷಗಳ ಪೈಕಿ ಆರು ವರ್ಷಗಳ ವಾರ್ಷಿಕ ಗೌಪ್ಯ ವರದಿಗಳು (ಎಸಿಆರ್‌ಗಳು) ಲಭ್ಯವಿಲ್ಲ ಎಂಬ ಕಾರಣದಿಂದ ಆ ಸೌಲಭ್ಯಗಳು ದೊರೆಯುತ್ತವೆಯೇ ಎಂಬ ಕುರಿತು ರಾಜಸ್ಥಾನ ಹೈಕೋರ್ಟ್ ಸ್ಪಷ್ಟೀಕರಣ ಕೋರಿತ್ತು.


ರಾಜಸ್ಥಾನ ಹೈಕೋರ್ಟ್‌ನ ಈ ವಾದವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್, ಉದ್ಯೋಗದಾತನು ತಾನೇ ಸೃಷ್ಟಿಸಿದ ಪರಿಸ್ಥಿತಿಯನ್ನು ನೆಪವಿಟ್ಟು ಉದ್ಯೋಗಿಯ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.


ನ್ಯಾಯಾಲಯದ ಅಭಿಪ್ರಾಯ ಹೀಗಿದೆ:

"ಅಗತ್ಯ ವಾರ್ಷಿಕ ಗೌಪ್ಯ ವರದಿಗಳು (ಎಸಿಆರ್‌ಗಳು) ಲಭ್ಯವಿಲ್ಲದಿರುವುದು ಉದ್ಯೋಗದಾತನ ತಪ್ಪಿನಿಂದ ಉಂಟಾಗಿದ್ದರೆ, ಉದ್ಯೋಗಿಯ ಬಡ್ತಿ ಅಥವಾ ವೇತನ ಶ್ರೇಣಿಯ ಅರ್ಹತೆಯನ್ನು ಉಳಿದಿರುವ ಮಾನ್ಯ ಎಸಿಆರ್‌ಗಳ ಆಧಾರದ ಮೇಲೆ ನಿರ್ಧರಿಸಬೇಕು."


ಅಭಯ್ ಜೈನ್ ಅವರು ವಾರ್ಷಿಕ ಗೌಪ್ಯ ವರದಿಗಳನ್ನು (ಎಸಿಆರ್‌ಗಳನ್ನು) ಗಳಿಸಲು ಸಾಧ್ಯವಾಗದಿರುವುದು ಅವರ ನಿರ್ಲಕ್ಷ್ಯದಿಂದಲ್ಲ, ಬದಲಾಗಿ ಕಾನೂನುಬಾಹಿರವಾಗಿ ಸೇವೆಯಿಂದ ದೂರವಿರಿಸಲ್ಪಟ್ಟಿದ್ದರಿಂದ ಎಂಬುದನ್ನು ನ್ಯಾಯಾಲಯ ಒತ್ತಿಹೇಳಿತು.


"ತಾನೇ ಸೃಷ್ಟಿಸಿದ ಕೊರತೆಯನ್ನು ಆಧಾರವಾಗಿಸಿಕೊಂಡು ಉದ್ಯೋಗಿಯ ಸೇವಾ ಸೌಲಭ್ಯಗಳನ್ನು ನಿರಾಕರಿಸುವುದು ಸ್ಪಷ್ಟ ಅನ್ಯಾಯ. ತನ್ನದೇ ತಪ್ಪಿನಿಂದ ಯಾವುದೇ ಪಕ್ಷವೂ ಲಾಭ ಪಡೆಯಲು ಕಾನೂನು ಅವಕಾಶ ನೀಡುವುದಿಲ್ಲ" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.


ಈ ಸಂಬಂಧ, ಸುಪ್ರೀಂ ಕೋರ್ಟ್ ತನ್ನ ಹಿಂದಿನ ಹಲವು ತೀರ್ಪುಗಳಾದ:


1) ಭಾರತ ಸರಕಾರ ವಿರುದ್ಧ ಕೆ.ವಿ. ಜಾನಕಿ ರಾಮ್ (1991)

2) ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ದೃಗೇಂದ್ರ ಸಿಂಗ್ ಜಾಡೋನ್ (2022)

3) ಪ್ರಭು ದಾತಾರ್ ಖಂಡೇಲ್ವಾಲ್ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (ಯು.ಪಿ.ಎಸ್.ಸಿ)- 2015

4)ಆರ್.ಕೆ. ಜಿಬನ್ ಲತಾದೇವಿ ವಿರುದ್ಧ ಮಣಿಪುರ ಹೈಕೋರ್ಟ್ (2023)


ಇವುಗಳನ್ನು ಉಲ್ಲೇಖಿಸಿ, ಉದ್ಯೋಗದಾತನ ಕಾನೂನುಬಾಹಿರ ಕ್ರಮದಿಂದ ಉದ್ಯೋಗಿಯು ಸೇವೆಯಿಂದ ದೂರವಿರಬೇಕಾದ ಪರಿಸ್ಥಿತಿಯಲ್ಲಿ, ಬಡ್ತಿ ಅಥವಾ ಉನ್ನತ ವೇತನ ಶ್ರೇಣಿಯಂತಹ ಪರಿಣಾಮಾನುಸಾರ ಸೇವಾ ಸೌಲಭ್ಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂಬ ತತ್ವವನ್ನು ಪುನರುಚ್ಚರಿಸಿತು.


ಪ್ರಕರಣದಲ್ಲಿ, 2013 ಮತ್ತು 2014ರ ವಾರ್ಷಿಕ ಗೌಪ್ಯ ವರದಿಗಳಲ್ಲಿ ಅಭಯ್ ಜೈನ್ ಅವರಿಗೆ ಕ್ರಮವಾಗಿ "ಅತ್ಯುತ್ತಮ" ಮತ್ತು "ಉತ್ತಮ" ಶ್ರೇಣೀಕರಣ ಹಾಗೂ ನೈತಿಕತೆಯ ಪ್ರಮಾಣಪತ್ರ (ಇಂಟಿಗ್ರಿಟಿ ಸರ್ಟಿಫಿಕೇಟ್) ಇದ್ದುದನ್ನು ಪರಿಗಣಿಸಿ, ಅವುಗಳ ಆಧಾರದ ಮೇಲೆಯೇ ಅವರ ಅರ್ಹತೆಯನ್ನು ಮೌಲ್ಯಮಾಪನ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿತು.


ಅದರಂತೆ, ಅವರಿಗೆ:

16 ಜುಲೈ 2018ರಿಂದ ಆಯ್ಕೆ ಶ್ರೇಣಿ (ಸೆಲೆಕ್ಷನ್ ಸ್ಕೇಲ್) ಮತ್ತು

16 ಜುಲೈ 2021ರಿಂದ ಸೂಪರ್ ಟೈಮ್ ಸ್ಕೇಲ್ ನೀಡಲು ಅವರು ಅರ್ಹರು ಎಂದು ಘೋಷಿಸಲಾಯಿತು. ಇದೇ ಅವಧಿಯಲ್ಲಿ ಅವರೊಂದಿಗೆ ನೇಮಕಗೊಂಡ ಹಾಗೂ ಅವರಿಗಿಂತ ಕಿರಿಯ ಅಧಿಕಾರಿಗಳಿಗೂ ಈ ಸೌಲಭ್ಯಗಳು ಈಗಾಗಲೇ ನೀಡಲಾಗಿದ್ದವು ಎಂಬುದನ್ನೂ ನ್ಯಾಯಾಲಯ ಗಮನಿಸಿತು.


ರಾಜಸ್ಥಾನ ಹೈಕೋರ್ಟ್‌ಗೆ ಮೂರು ತಿಂಗಳೊಳಗೆ ಈ ಆದೇಶವನ್ನು ಜಾರಿಗೆ ತಂದು, ಅವರ ವೇತನವನ್ನು ಮರುನಿಗದಿಪಡಿಸಿ, ಎಲ್ಲಾ ಪರಿಣಾಮಾನುಸಾರ ಸೇವಾ ಸೌಲಭ್ಯಗಳನ್ನು ಪರಿಷ್ಕರಿಸಿ, 2022ರ ತೀರ್ಪಿನಂತೆ 50% ಹಿಂಬಾಕಿ ವೇತನದ ಆಧಾರದ ಮೇಲೆ ಬಾಕಿ ಮೊತ್ತವನ್ನು ಪಾವತಿಸಬೇಕು ಎಂದು ನಿರ್ದೇಶಿಸಲಾಯಿತು.


ಈ ತೀರ್ಪಿನ ಪ್ರತಿಯನ್ನು ದೇಶದ ಎಲ್ಲಾ ಹೈಕೋರ್ಟ್‌ಗಳಿಗೆ ಕಳುಹಿಸುವಂತೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ.


✍️ ಪ್ರಕಾಶ್ ನಾಯಕ್, ಹಿರಿಯ ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ

Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu