
ಬೆಂಗಳೂರು ವಕೀಲರ ಅಕಾಡೆಮಿ ಕಾರ್ಯಚಟುವಟಿಕೆಗೆ 10 ಎಕರೆ ಭೂಮಿ: ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಭರವಸೆ
ಬೆಂಗಳೂರು ವಕೀಲರ ಅಕಾಡೆಮಿ ಕಾರ್ಯಚಟುವಟಿಕೆಗೆ 10 ಎಕರೆ ಭೂಮಿ: ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಭರವಸೆ
ಬೆಂಗಳೂರು ವಕೀಲರ ಅಕಾಡೆಮಿಯ ಕಾರ್ಯಚಟುವಟಿಕೆಗೆ ಅನುಕೂಲವಾಗುವಂತೆ 10 ಎಕರೆ ಭೂಮಿಯನ್ನು ದೊರಕಿಸಿಕೊಡಲು ರಾಜ್ಯ ಸರ್ಕಾರದ ಮನವೊಲಿಸುವುದಾಗಿ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಭರವಸೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶ್ರೀ ಅಭಯ ಶ್ರೀನಿವಾಸ್ ಓಕಾ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಈ ವಿಷಯ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಓಕಾ ಅವರದ್ದು ರಾಷ್ಟ್ರವೇ ಹೆಮ್ಮೆಪಡುವ ವ್ಯಕ್ತಿತ್ವ ಎಂದು ಶಶಿಕಿರಣ್ ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ವಕೀಲರ ಅಕಾಡೆಮಿ ಹಮ್ಮಿಕೊಂಡಿದ್ದ 'ವೃತ್ತಿ ರೂಪಿಸಿಕೊಳ್ಳಲು ಯುವ ವಕೀಲರಿಗೆ ಬೇಕಾದ ನೈತಿಕತೆ, ಪ್ರತಿಭೆ ಮತ್ತು ಗುಣಗಳು' ಎಂಬ ವಿಚಾರದ ಬಗ್ಗೆ ಉಪನ್ಯಾಸ ನೀಡಿದ ಶ್ರೀ ಓಕಾ, ಸಾಂಪ್ರದಾಯಿಕ ಶೈಲಿಯಲ್ಲಿ ಪಾರದರ್ಶಕ ನಡವಳಿಕೆ ರೂಢಿಸಿಕೊಳ್ಳಬೇಕು ಮತ್ತು ಶಿಸ್ತುಬದ್ಧ ವಕೀಲಿಕೆಯಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು.
ಸಾಮಾಜಿಕ ನ್ಯಾಯ ಮತ್ತು ಸಾರ್ವಜನಿಕ ಹಿತಾಸಕ್ತಿ ಹೊಂದಿದ ಪ್ರಕರಣಗಳಲ್ಲಿ ಆಸಕ್ತರಾಗಿ ವೃತ್ತಿ ಕೌಶಲ್ಯ ರೂಢಿಸಿಕೊಳ್ಳಬೇಕು. ಕೋರ್ಟ್ ಹಾಲ್‌ನಲ್ಲಿ ಕ್ರೋಧಭರಿತರಾಗಿ ಆಕ್ರಮಣಕಾರಿ ಶೈಲಿಯಲ್ಲಿ ವಾದ ಮಂಡಿಸುವುದು ಬಹಳ ಸುಲಭ. ಆದರೆ, ಶಾಂತಚಿತ್ತರಾಗಿ ಸಹನೆಯಿಂದ ವಾದ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವುದು ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಕಿವಿಮಾತು ಹೇಳಿದರು.
ನ್ಯಾಯಮೂರ್ತಿ ಅನು ಶಿವರಾಮನ್, ಅಕಾಡಮಿ ಅಧ್ಯಕ್ಷ ಡಿ.ಎಲ್. ಜಗದೀಶ್ ಹಾಗೂ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.