-->
ಸರ್ಕಾರಿ ನೌಕರರ ವರ್ಗಾವಣೆಯ ಮಾರ್ಗಸೂಚಿ ಶಾಸನಬದ್ಧ ಸ್ವರೂಪಿ: ಕರ್ನಾಟಕ ಹೈಕೋರ್ಟ್ ತೀರ್ಪುಗಳ ಮಹತ್ವದ ವಿಶ್ಲೇಷಣೆ

ಸರ್ಕಾರಿ ನೌಕರರ ವರ್ಗಾವಣೆಯ ಮಾರ್ಗಸೂಚಿ ಶಾಸನಬದ್ಧ ಸ್ವರೂಪಿ: ಕರ್ನಾಟಕ ಹೈಕೋರ್ಟ್ ತೀರ್ಪುಗಳ ಮಹತ್ವದ ವಿಶ್ಲೇಷಣೆ

ಸರ್ಕಾರಿ ನೌಕರರ ವರ್ಗಾವಣೆಯ ಮಾರ್ಗಸೂಚಿ ಶಾಸನಬದ್ಧ ಸ್ವರೂಪಿ: ಕರ್ನಾಟಕ ಹೈಕೋರ್ಟ್ ತೀರ್ಪುಗಳ ಮಹತ್ವದ ವಿಶ್ಲೇಷಣೆ







ಕರ್ನಾಟಕ ರಾಜ್ಯ ಸರಕಾರಿ ನೌಕರರ ವರ್ಗಾವಣೆಗೆ ಮಾರ್ಗಸೂಚಿಗಳನ್ನು ನಿಗದಿಪಡಿಸುವ ಸರಕಾರಿ ಆದೇಶವು ಶಾಸನಬದ್ಧ ಸ್ವರೂಪದ್ದಾಗಿದೆ ಎಂಬುದಾಗಿ ಕರ್ನಾಟಕ ಹೈಕೋರ್ಟ್ ನೀಡಿದ ಮಹತ್ವದ ತೀರ್ಪುಗಳ ವಿಶ್ಲೇಷಣೆ


ಸರಕಾರಿ ಸೇವೆಯಲ್ಲಿ ವರ್ಗಾವಣೆಯು ಸೇವೆಯ ಒಂದು ಸಾಮಾನ್ಯ ಹಾಗೂ ಅಂತರ್ಗತ ಸಂಗತಿಯಾಗಿದೆ. ಸಾಮಾನ್ಯವಾಗಿ ನೌಕರರ ವರ್ಗಾವಣೆಯ ಅಧಿಕಾರವನ್ನು ನೇಮಕಾತಿ ಪ್ರಾಧಿಕಾರಕ್ಕೆ ನೀಡಲಾಗಿದೆ‌. ಆದರೆ ಅಂತಹ ಅಧಿಕಾರವನ್ನು ನೇಮಕಾತಿ ಪ್ರಾಧಿಕಾರವು ಕಾನೂನಿನಡಿ ಪ್ರದತ್ತವಾದ ಅಧಿಕಾರದ ಅನ್ವಯ ಚಲಾಯಿಸಬೇಕಾಗುತ್ತದೆ. ಕರ್ನಾಟಕ ರಾಜ್ಯ ಸರಕಾರ ವರ್ಗಾವಣೆಗಳನ್ನು ನಿಯಂತ್ರಿಸುವ ಸಲುವಾಗಿ ಹೊರಡಿಸಿದ ಮಾರ್ಗಸೂಚಿಗಳು ಹಾಗೂ ಅದರಲ್ಲಿನ ನಿರ್ದೇಶನಗಳು ಕೇವಲ ನಿರ್ದೇಶನಗಳಲ್ಲ, ಬದಲಿಗೆ ಕಡ್ಡಾಯವಾಗಿ ಪಾಲಿಸಲೇಬೇಕಾದ ಕಾನೂನು ಆಗಿದ್ದು ಶಾಸನಾತ್ಮಕ ಬಲ ಹೊಂದಿವೆ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠವು ದಿನಾಂಕ 20.02.2025 ರಂದು ಮಲ್ಲಿಕಾರ್ಜುನ ಗೌಡ ಜಿ.ಎನ್. ವಿರುದ್ಧ ಆಡಳಿತ ವ್ಯವಸ್ಥಾಪಕರು, ಕೆಪಿಟಿಸಿಎಲ್ ಈ ಪ್ರಕರಣದಲ್ಲಿ ಮಹತ್ವದ ತೀರ್ಪನ್ನು ನೀಡಿದೆ.


ಭಾರತದ ಸಂವಿಧಾನದ 162 ನೇ ವಿಧಿಯಡಿಯಲ್ಲಿ ನೀಡಲಾದ ರಾಜ್ಯದ ಕಾರ್ಯನಿರ್ವಾಹಕ ಅಧಿಕಾರವನ್ನು ಚಲಾಯಿಸಿ ರಚಿಸಲಾದ ಮಾರ್ಗಸೂಚಿಗಳು ಶಾಸನಬದ್ಧ ಬಲವನ್ನು ಹೊಂದಿವೆ ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.


ಪ್ರಸ್ತುತ ನಮ್ಮ ರಾಜ್ಯದಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಮುಂತಾದ ಕೆಲವು ಇಲಾಖೆಗಳನ್ನು ಹೊರತುಪಡಿಸಿ ಬಹುತೇಕ ಇಲಾಖೆಗಳಿಗೆ ಸಂಬಂಧಿಸಿದಂತೆ ಅಲ್ಲಿನ ನೌಕರರ ವರ್ಗಾವಣೆಯ ಕುರಿತು ಪ್ರತ್ಯೇಕ ಕಾಯ್ದೆ ಹಾಗೂ ನಿಯಮಗಳನ್ನು ರಚಿಸಲಾಗಿಲ್ಲ. ಪ್ರತ್ಯೇಕ ಕಾಯ್ದೆ ರಚಿಸದ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಸರಕಾರವು ಆದೇಶವನ್ನು ಹೊರಡಿಸಿದ್ದು ವರ್ಗಾವಣೆಯ ಸಂದರ್ಭದಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ರಚಿಸಿದೆ.


ಸರಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಪ್ರಕಾರ ದಿನಾಂಕ 22.11.2001 ರ ಆದೇಶ ಸಂಖ್ಯೆ ಡಿಪಿಆಆರ್ 4 ಎಸ್ ಟಿ ಆರ್ 2001 ರಡಿ ಹೊರಡಿಸಲಾದ ಮಾರ್ಗಸೂಚಿಗಳು ದಿನಾಂಕ 22.11.2001ರಂದು ಜಾರಿಗೆ ಬಂದಿದ್ದು ಅವು ಶಾಸನಬದ್ಧ ಬಲವನ್ನು ಹೊಂದಿವೆಯೇ ಇಲ್ಲವೇ ಎಂಬ ಪ್ರಶ್ನೆಯು ಚಂದ್ರು ಹೆಚ್. ಎನ್. ವಿರುದ್ಧ ಕರ್ನಾಟಕ ರಾಜ್ಯ ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟಿನ ಪೂರ್ಣ ಪೀಠದ ಮುಂದೆ ಪರಿಗಣನೆಗೆ ಬಂದಿತ್ತು. ಭಾರತದ ಸಂವಿಧಾನ ದ 309 ಮತ್ತು 162ನೇ ವಿಧಿಗಳ ನಿಬಂಧನೆಗಳು ಮತ್ತು ಕರ್ನಾಟಕ ರಾಜ್ಯ ನಾಗರೀಕ ಸೇವೆಗಳ ಕಾಯ್ದೆ 1978 ರಡಿ ಕಾಯಿದೆಯ ನಿಬಂಧನೆಗಳನ್ನು ಅನುಷ್ಠಾನಗೊಳಿಸಲು ನಿಯಮಗಳನ್ನು ರೂಪಿಸಲು ರಾಜ್ಯ ಸರಕಾರವು ವರ್ಗಾವಣೆಯ ಮಾರ್ಗ ಸೂಚಿಗಳನ್ನು ಹೊರಡಿಸುವ ಮೂಲಕ ವರ್ಗಾವಣೆಯ ಪ್ರಕ್ರಿಯೆಗಳನ್ನು ನಿಯಂತ್ರಿಸಬಹುದು ಹಾಗೂ ಸದರಿ ಮಾರ್ಗಸೂಚಿಗಳು ಶಾಸನಾತ್ಮಕ ಬಲ ಹೊಂದಿವೆ ಎಂಬುದಾಗಿ ಪೂರ್ಣಪೀಠ ಅಭಿಪ್ರಾಯಪಟ್ಟಿತ್ತು.


ಅಲ್ಲಾ ಸಾಹೇಬ್ ವಿರುದ್ಧ ಕರ್ನಾಟಕ ರಾಜ್ಯ ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನ ಪೂರ್ಣ ಪೀಠವು ಚಂದ್ರು ಹೆಚ್ ಎನ್ ವಿರುದ್ಧ ಕರ್ನಾಟಕ ರಾಜ್ಯ ಮತ್ತು ಗಂಗಾಧರಯ್ಯ ಎಸ್ ಎನ್ ವಿರುದ್ಧ ಕರ್ನಾಟಕ ರಾಜ್ಯ ಈ ಎರಡು ಪ್ರಕರಣಗಳಲ್ಲಿ ನೀಡಿದ ತೀರ್ಪುಗಳನ್ನು ಅನು ಸಮರ್ಥಿಸಿತು. ಸರಕಾರಿ ನೌಕರರ ವರ್ಗಾವಣೆಯ ಕುರಿತು ಸರಕಾರಿ ಆದೇಶ ಸಂಖ್ಯೆ ಡಿಪಿಎಆರ್ 22 ಎಸ್.ಆರ್.ಟಿ 2013 ದಿನಾಂಕ 7.6.2013 ರ ಮಾರ್ಗಸೂಚಿಗಳು ಶಾಸನಬದ್ಧ ಸ್ವರೂಪದ್ದಾಗಿದೆ ಎಂದು ಈ ಪ್ರಕರಣದಲ್ಲಿ ಹೈಕೋರ್ಟ್ ಪುನರುಚ್ಚರಿಸಿತು. ಕನಿಷ್ಠ ಹುದ್ದೆಯ ಅವಧಿಯನ್ನು ಒದಗಿಸಲು ಮತ್ತು ಹೆಚ್ಚು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು 2001ರ ವರ್ಗಾವಣೆ ಮಾರ್ಗ ಸೂಚಿಗಳನ್ನು ಪರಿಷ್ಕರಿಸಿ ದಿನಾಂಕ 7-6-2013ರ ಸರಕಾರಿ ಆದೇಶ ಹೊರಡಿಸಲಾಯಿತು. ಸದರಿ ಆದೇಶದಲ್ಲಿ ನೀಡಲಾದ ವರ್ಗಾವಣೆಯ ಪರಿಭಾಷೆ ಈ ಕೆಳಗಿನಂತಿದೆ.


*ವರ್ಗಾವಣೆ ಎಂದರೆ ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಯ ಕರ್ತವ್ಯಗಳನ್ನು ವಹಿಸಿಕೊಳ್ಳಲು ಒಂದು ಕೇಂದ್ರ ಸ್ಥಾನದಲ್ಲಿರುವ ಕಚೇರಿಯಿಂದ ಮತ್ತೊಂದು ಕೇಂದ್ರ ಸ್ಥಾನದಲ್ಲಿರುವ ಕಚೇರಿಗೆ ಅಥವಾ ಒಂದೇ ಕೇಂದ್ರ ಸ್ಥಾನದಲ್ಲಿರುವ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಮಾಡುವ ಬದಲಾವಣೆ*


ದಿನಾಂಕ 7-6-2013ರ ಸರಕಾರಿ ಆದೇಶವನ್ನು ಪರಿಷ್ಕರಿಸಿ ದಿನಾಂಕ 25.06.2024ರಂದು ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಲಾಯಿತು. ಸದರಿ ಆದೇಶವನ್ನು ದಿನಾಂಕ 12.5.2025 ರಂದು ಪುನಃ ಪರಿಷ್ಕರಿಸಿ ಹೊಸ ಆದೇಶ ಸಿಆಸುಇ 14 ಸೇನೌವ 2025 ದಿನಾಂಕ 12.5.2025 ಅನ್ನು ಹೊರಡಿಸಲಾಗಿದ್ದು ಪ್ರಸ್ತುತ ವರ್ಗಾವಣೆ ಮಾರ್ಗಸೂಚಿಗಳು 2025 ರ ಅನ್ವಯ ವರ್ಗಾವಣೆ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ.


*ನೂತನ ಪರಿಷ್ಕೃತ ಆದೇಶ ದಿನಾಂಕ 12-5-2025 ರ ಮುಖ್ಯಾಂಶಗಳು*


ಒಂದು ಸ್ಥಳದಲ್ಲಿ ಸರಕಾರಿ ನೌಕರರ ಕನಿಷ್ಠ ವಾಸ್ತವ್ಯದ ಅವಧಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.


1. ಎಲ್ಲಾ ಗುಂಪು ಎ ಹುದ್ದೆಗಳು - ಎರಡು ವರ್ಷಗಳು


2. ಎಲ್ಲಾ ಗುಂಪು ಬಿ ಹುದ್ದೆಗಳು- ಎರಡು ವರ್ಷಗಳು


3. ಎಲ್ಲಾ ಗುಂಪು ಸಿ ಹುದ್ದೆಗಳು- ನಾಲ್ಕು ವರ್ಷಗಳು


4. ಎಲ್ಲಾ ಗುಂಪು ಡಿ ಹುದ್ದೆಗಳು - ಏಳು ವರ್ಷಗಳು


ವರ್ಗಾವಣೆ ಪ್ರಕ್ರಿಯೆಗಳನ್ನು ಸಕ್ಷಮ ಪ್ರಾಧಿಕಾರವು ಪಾರದರ್ಶಕವಾಗಿ ಮಾಡಬೇಕು. ಎಲ್ಲಾ ವರ್ಗಾವಣೆಗಳ ಸಂಖ್ಯೆಯು ಆಯಾ ವೃಂದಗಳ ಕಾರ್ಯನಿರತ ವೃಂದ ಬಲದ ಶೇಕಡ ಆರನ್ನು ಮೀರದಂತೆ ದಿನಾಂಕ 15.5.2025ರಿಂದ 14.6.2025 ರ ವರೆಗೆ ಗ್ರೂಪ್ ಎ ಮತ್ತು ಬಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಸಚಿವರಿಗೆ ಹಾಗೂ ಗ್ರೂಪ್ ಸಿ ಮತ್ತು ಡಿ ವೃಂದದ ನೌಕರರಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ. ವರ್ಗಾವಣೆಯಾದ ಸಂದರ್ಭದಲ್ಲಿ ಯಾವುದೇ ನೌಕರರು ಸ್ಥಳ ನಿಯುಕ್ತಿಗಾಗಿ ಕಾಯದಂತೆ ಕಡ್ಡಾಯವಾಗಿ ಸ್ಥಳ ನಿಯುಕ್ತಿ ನೀಡತಕ್ಕದ್ದು. ಇಲಾಖಾ ವಿಚಾರಣೆಗೊಳಪಟ್ಟ ನೌಕರರನ್ನು ಅವರು ಕೋರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸದೆ ಕಾರ್ಯಕಾರಿಯೇತರ ಹುದ್ದೆಗೆ ನೇಮಿಸಬೇಕು.


ಈ ಕೆಳಕಂಡ ಸಂದರ್ಭದಲ್ಲಿ ಲಿಖಿತವಾಗಿ ಕಾರಣಗಳನ್ನು ದಾಖಲಿಸಿ, ಸರಕಾರಿ ನೌಕರರನ್ನು ಒಂದು ಸ್ಥಳದಲ್ಲಿರಬಹುದಾದ ಕನಿಷ್ಠ ಸೇವಾ ಅವಧಿಯನ್ನು ವಿಸ್ತರಿಸಬಹುದು ಅಥವಾ ಕಡಿತಗೊಳಿಸಬಹುದು.


1.ಒಂದು ಸ್ಥಳದಲ್ಲಿರಬಹುದಾದ ಕನಿಷ್ಠ ಅವಧಿಯನ್ನು ಪೂರ್ಣಗೊಳಿಸಿ ವರ್ಗಾವಣೆಗೆ ಅರ್ಹನಿರುವ ಸರಕಾರಿ ನೌಕರನಿಗೆ ನಿವೃತ್ತನಾಗಲು ಎರಡು ವರ್ಷಕ್ಕಿಂತ ಕಡಿಮೆ ಸೇವಾ ಅವಧಿ ಇದ್ದಲ್ಲಿ


2. ಒಬ್ಬ ಸರಕಾರಿ ನೌಕರನು ವಿಶೇಷ ತಾಂತ್ರಿಕ ವಿದ್ಯಾರ್ಹತೆ ಅಥವಾ ಅನುಭವ ಹೊಂದಿದ್ದು ಅಂತಹ ನಿರ್ದಿಷ್ಟವಾದ ಹುದ್ದೆಗೆ ತಕ್ಷಣಕ್ಕೆ ನೇಮಿಸಲು ಸೂಕ್ತವಾದ ಬದಲಿ ನೌಕರರು ಲಭ್ಯವಿಲ್ಲದಿದ್ದಲ್ಲಿ ಕೇಂದ್ರ ಸರಕಾರದ ಯೋಜನೆ ಅಥವಾ ಫ್ಲಾಗ್ ಶಿಪ್ ಯೋಜನೆಗಳಲ್ಲಿ ಒಬ್ಬ ಸರಕಾರಿ ನೌಕರರು ಕೆಲಸ ಮಾಡುತ್ತಿದ್ದು ಆ ಯೋಜನೆಯ ಅನುಷ್ಠಾನಗೊಳಿಸುವಿಕೆ ಪ್ರಮುಖ ಹಂತದಲ್ಲಿರುವಾಗ ಆತನ ಸೇವೆಯನ್ನು ಹಿಂಪಡೆದಲ್ಲಿ ಸಕಾಲದಲ್ಲಿ ಆ ಯೋಜನೆಯ ಪೂರ್ಣಗೊಳ್ಳುವಿಕೆಯು ಗಂಭೀರವಾಗಿ ನಿಲ್ಲುವ ಸಂಭವವಿದ್ದಲ್ಲಿ


3. ಪತಿ-ಪತ್ನಿಯರಿಬ್ಬರೂ ಸರಕಾರಿ ನೌಕರರಾಗಿದ್ದು ಇವರಲ್ಲಿ ಒಬ್ಬರು ವರ್ಗಾವಣೆಗೊಂಡಲ್ಲಿ ಆಗ ಇನ್ನೊಬ್ಬರು ಹಾಲಿ ಇರುವ ಸ್ಥಳದಲ್ಲಿ ಕನಿಷ್ಠ ಸೇವಾ ಅವಧಿಯನ್ನು ಪೂರೈಸದಿದ್ದರೂ ಖಾಲಿ ಹುದ್ದೆಯ ಲಭ್ಯತೆಗೊಳಪಟ್ಟು ಆ ಸ್ಥಳಕ್ಕೆ ಅಥವಾ ಹತ್ತಿರ ಇರುವ ಸ್ಥಳಕ್ಕೆ ವರ್ಗಾಯಿಸಲು


4. ಒಂದು ವೇಳೆ ಸರಕಾರಿ ನೌಕರರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಯಾಗಿದ್ದಲ್ಲಿ ಆ ಪದಾಧಿಕಾರದ ಅವಧಿ ಮುಗಿಯುವವರೆಗೆ ವರ್ಗಾಯಿಸಬಾರದು. ಒಂದು ವೇಳೆ ಪದಾಧಿಕಾರದ ಅವಧಿ ಮುಗಿದ ನಂತರ ಮೂರು ತಿಂಗಳಲ್ಲಿ ಚುನಾವಣೆಗಳು ನಡೆಯದಿದ್ದಲ್ಲಿ ಅಂತಹವರನ್ನು ವರ್ಗಾಯಿಸಬಹುದು. ಒಂದು ವೇಳೆ ಅವನು ಮರು ಚುನಾಯಿತನಾದಲ್ಲಿ ಎರಡನೇ ಅವಧಿಗೆ ಮಾತ್ರ ಆತನನ್ನು ಮುಂದುವರಿಸಬಹುದು.


5. ಸರಕಾರಿ ನೌಕರ ಅಥವಾ ಆಕೆಯ/ಆತನ ಅಥವಾ ಮಕ್ಕಳು ಯಾವುದೇ ಗಂಭೀರ ಅಥವಾ ಮಾರಕ ಕಾಯಿಲೆಗಳಿಂದ ಬಳಲುತ್ತಿದ್ದಲ್ಲಿ ಒಂದು ಸ್ಥಳದಲ್ಲಿ ಆ ವೈದ್ಯಕೀಯ ಚಿಕಿತ್ಸಾ ಸೌಲಭ್ಯವು ಲಭ್ಯವಿದ್ದು ಆ ಬಗ್ಗೆ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಲ್ಲಿ


6. ಮಹಿಳಾ ಸರಕಾರಿ ನೌಕರರು ವಿಧವೆ, ಅವಿವಾಹಿತೆ ಅಥವಾ ವಿಚ್ಛೇದನ ಪಡೆದ ಅವಿವಾಹಿತೆಯಾದ್ದಲ್ಲಿ ಖಾಲಿ ಹುದ್ದೆಯ ಲಭ್ಯತೆಗೊಳಪಟ್ಟು ಆಕೆಯು ಕೋರಿದ ಅಥವಾ ಹತ್ತಿರದ ಯಾವುದಾದರೂ ಸ್ಥಳಕ್ಕೆ ವರ್ಗಾಯಿಸಬಹುದು.


ಸಾಮಾನ್ಯವಾಗಿ ಅವಧಿ ಪೂರ್ವ ಹಾಗೂ ಸಾಮಾನ್ಯ ವರ್ಗಾವಣೆಯ ಅವಧಿ ಮುಗಿದ ನಂತರ ಯಾವುದೇ ವರ್ಗಾವಣೆಗಳನ್ನು ಮಾಡತಕ್ಕದ್ದಲ್ಲ.


ವಿಶೇಷ ಚೇತನ ನೌಕರರಿಗೆ ನಿಯತಕಾಲಿಕ ಮತ್ತು ಪುನರಾವರ್ತಿತ ವರ್ಗಾವಣೆಗಳಿಂದ ವಿನಾಯಿತಿ ಇದೆ.


ಸರಕಾರಿ ನೌಕರರ ಅವಲಂಬಿತ ಮಕ್ಕಳು, ಪತಿ, ಪತ್ನಿ, ತಂದೆ ತಾಯಿ ಇವರುಗಳು ತೀವ್ರವಾದ ಅಂಗವೈಕಲ್ಲ್ಯ ವನ್ನು ಹೊಂದಿದ್ದಲ್ಲಿ ಹಾಗೂ ಸರಕಾರಿ ನೌಕರರನು ಅವರ ನಿರ್ವಹಣೆ ಹಾಗೂ ಪುನರ್ವಸತಿಯ ಜವಾಬ್ದಾರಿ ಹೊತ್ತು ಅಂಗವಿಕಲರ ಹಕ್ಕುಗಳನ್ನು ಸಂರಕ್ಷಣೆ ಮಾಡುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಿದ್ದಲ್ಲಿ ಅಂತಹ ನೌಕರರುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವ ಶರತ್ತಿಗೊಳ ಪಟ್ಟು ಅಂತಹ ದಾಖಲೆಗಳನ್ನು ಪರಿಶೀಲಿಸಿ, ನಿಯತಕಾಲಿಕ ವರ್ಗಾವಣೆಗಳಿಂದ ವಿನಾಯಿತಿ ನೀಡಬಹುದು ಮತ್ತು ಸಾಧ್ಯವಾದಷ್ಟು ಹತ್ತಿರದ ಸ್ಥಳಕ್ಕೆ ನೇಮಿಸುವುದು


ಸೇವಾ ನಿರತ ಸರಕಾರಿ ನೌಕರರು ತಮ್ಮ ಸೇವೆಯ ಅವಧಿಯಲ್ಲಿ ಅಂಗವಿಕಲರಾದಲ್ಲಿ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರವನ್ನು ಹಾಜರುಪಡಿಸುವ ಶರತ್ತಿಗೊಳಪಟ್ಟು ಅವರನ್ನು ಹತ್ತಿರದ ಸ್ಥಳಕ್ಕೆ ವರ್ಗಾಯಿಸುವುದು.


ವರ್ಗಾವಣೆಯ ಮಾರ್ಗಸೂಚಿಗಳನ್ನು ಅನುಸರಿಸಬೇಕೆ ಅಥವಾ ಬೇಡವೇ ಎಂಬುದು ಸಕ್ಷಮ ಪ್ರಾಧಿಕಾರದ/ ಸರ್ಕಾರದ ವಿವೇಚನೆಗೆ ಒಳಪಟ್ಟಿದೆ ಎಂದ ಮಾತ್ರಕ್ಕೆ ಈ ಮಾರ್ಗಸೂಚಿಗಳು ಸಂಬಂಧಪಟ್ಟ ಸರ್ಕಾರಿ ನೌಕರರ ಪರವಾಗಿ ಯಾವುದೇ ಹಕ್ಕನ್ನು ನೀಡುವುದಿಲ್ಲ ಎಂದು ಅರ್ಥವಲ್ಲ. ಭಾರತದ ಸಂವಿಧಾನದ 162 ನೇ ವಿಧಿಯ ಅಡಿಯಲ್ಲಿ ನೀಡಲಾದ ರಾಜ್ಯದ ಕಾರ್ಯನಿರ್ವಾಹಕ ಅಧಿಕಾರವನ್ನು ಚಲಾಯಿಸಿ ರಚಿಸಲಾದ ಮಾರ್ಗಸೂಚಿಗಳು ಶಾಸನಬದ್ಧ ಬಲವನ್ನು ಹೊಂದಿವೆ ಎಂದು ಹೇಳಲಾಗಿದೆ. ಹೈಕೋರ್ಟ್ ನ ಎರಡು ಪೂರ್ಣ ಪೀಠಗಳು ಈ ಮಾರ್ಗಸೂಚಿಗಳನ್ನು ಜಾರಿಗೊಳಿಸಬಹುದು ಎಂದು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿವೆ. ಮಾರ್ಗಸೂಚಿಗಳನ್ನು ಉಲ್ಲಂಘಿಸಿದಾಗಲೆಲ್ಲಾ ಸರ್ಕಾರಿ ನೌಕರರ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತವೆ. ಆಗ ಅವುಗಳನ್ನು ಕಾನೂನಿನ ಪ್ರಕ್ರಿಯೆ ಪ್ರಕಾರ ಜಾರಿಗೊಳಿಸಬಹುದು. ಆದ್ದರಿಂದ ಸರ್ಕಾರಿ ನೌಕರರಿಗೆ ಮೇಲೆ ಹೇಳಲಾದ ನಿಯಮಗಳು/ಮಾರ್ಗಸೂಚಿಗಳ ಉಲ್ಲಂಘನೆಯ ವಿರುದ್ಧ ದೂರು ನೀಡಲು ಅಗತ್ಯವಾದ ಹಕ್ಕುಗಳು ಪ್ರಾಪ್ತವಾಗಿದೆ. ಆದ್ದರಿಂದ ಮಾರ್ಗಸೂಚಿಗಳು ನಿರ್ದೇಶನಗಳಲ್ಲ. ಸಕ್ಷಮ ಪ್ರಾಧಿಕಾರವು ಮಾರ್ಗ ಸೂಚಿಗಳನ್ನು ನಿರ್ಲಕ್ಷಿಸುವಂತಿಲ್ಲ‌. ಸರ್ಕಾರಿ ನೌಕರರ ವರ್ಗಾವಣೆಯ ಸಂಪೂರ್ಣ ಸಮಸ್ಯೆಯನ್ನು ನಿಯಂತ್ರಿಸಲು ಮತ್ತು ಆಗಾಗ್ಗೆ ಮತ್ತು ವಿವೇಚನಾರಹಿತ ವರ್ಗಾವಣೆಗೆ ಸಂಬಂಧಿಸಿದ ದುಷ್ಪರಿಣಾಮಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಉದ್ದೇಶಿಸಿರುವ ಆಡಳಿತ ಸುಧಾರಣಾ ಸಮಿತಿಯ ರಚನೆಯ ಹಿಂದಿನ ಉದ್ದೇಶವನ್ನು ಪೂರ್ಣ ಪೀಠ ಮನಸ್ಸಿನಲ್ಲಿಟ್ಟುಕೊಂಡಿದೆ. ಆಡಳಿತ ಸುಧಾರಣಾ ಸಮಿತಿಯು ಹಲವಾರು ಶಿಫಾರಸು ಕ್ರಮಗಳನ್ನು ಹೊರಡಿಸಿದ್ದು, ಅಂತಹ ಶಿಫಾರಸು ಕ್ರಮಗಳ ಅನುಸಾರವಾಗಿ, ವರ್ಗಾವಣೆಗಳನ್ನು ನಿಯಂತ್ರಿಸಲು ಕಾಲಕಾಲಕ್ಕೆ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ.


ಮಾರ್ಗಸೂಚಿಗಳು ಹಲವಾರು ವಿನಾಯಿತಿಗಳನ್ನು ಒದಗಿಸಿದೆ. ಮತ್ತು ನಿರ್ದಿಷ್ಟ ಅವಧಿ ಮುಗಿಯುವ ಮೊದಲೇ ವರ್ಗಾವಣೆಯನ್ನು ಜಾರಿಗೆ ತರಲು ಅಥವಾ ನಿರ್ದಿಷ್ಟ ಸ್ಥಳದಲ್ಲಿ ನಿರ್ದಿಷ್ಟ ಅವಧಿ ಮುಗಿದ ನಂತರವೂ ವಾಸ್ತವ್ಯದ ಅವಧಿಯನ್ನು ವಿಸ್ತರಿಸಲು ಸಕ್ಷಮ ಅಧಿಕಾರಿಗಳಿಗೆ ವಿವೇಚನೆಯನ್ನು ನೀಡಿದೆ. ಆ ನಿಟ್ಟಿನಲ್ಲಿ ನಿಯಮದ ಅವಶ್ಯಕತೆಯೆಂದರೆ ಕಾರಣಗಳನ್ನು ದಾಖಲಿಸಬೇಕು ಮತ್ತು ನಿಗದಿತ ಕಾರ್ಯವಿಧಾನವನ್ನು ಅನುಸರಿಸಬೇಕು, ಇದರಲ್ಲಿ ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆಯಬೇಕು. ಅಂತಹ ನಿಬಂಧನೆಯ ಮುಖ್ಯ ಉದ್ದೇಶವೆಂದರೆ ಅನಿಯಂತ್ರಿತ ಮತ್ತು ನಿಯಮಬಾಹಿರವಾಗಿ ಅಧಿಕಾರ ಚಲಾಯಿಸದಂತೆ ಮತ್ತು ಸರ್ಕಾರಿ ನೌಕರರು ಪುನರಾವರ್ತಿತ ವರ್ಗಾವಣೆ ಮತ್ತು ಸ್ಥಳಾಂತರಗಳಿಂದ ಕಿರುಕುಳಕ್ಕೊಳಗಾಗದಂತೆ ನೋಡಿಕೊಳ್ಳುವುದು. ವಿವೇಚನೆಯನ್ನು ನಿಯಂತ್ರಿಸುವುದು ಇದರ ಉದ್ದೇಶವಾಗಿತ್ತು. ಸರ್ಕಾರಿ ನೌಕರನನ್ನು ನಿರ್ದಿಷ್ಟ ಸ್ಥಳದಲ್ಲಿ ನಿರ್ದಿಷ್ಟ ಅವಧಿಗೆ ಮುಂದುವರಿಸುವುದರಿಂದ ಉಂಟಾಗುವ ಅನುಕೂಲವು ನಿರ್ದಿಷ್ಟ ಸ್ಥಳದ ವಾಸ್ತವ ಪರಿಸ್ಥಿತಿಯ ಮೇಲೆ ಹಿಡಿತ ಸಾಧಿಸುವ ಮೂಲಕ ಅವರ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ ಎಂಬ ಅಂಶವನ್ನು ಸಹ ಪರಿಗಣಿಸಲಾಗಿದೆ.


ಒಟ್ಟಿನಲ್ಲಿ ಸರಕಾರವು ಹೊರಡಿಸಿದ ವರ್ಗಾವಣಾ ಮಾರ್ಗಸೂಚಿಗಳಿಗೆ ಶಾಸನಾತ್ಮಕ ಬಲವಿದೆ ಎಂಬ ಅಂಶವನ್ನು ಸಾಂವಿಧಾನಿಕ ನ್ಯಾಯಾಲಯಗಳು ಎತ್ತಿ ಹಿಡಿದಿವೆ.





ವಿಶ್ಲೇಷಣೆ/ಮಾಹಿತಿ: ಶ್ರೀ ಪ್ರಕಾಶ್ ನಾಯಕ್, ನ್ಯಾಯಾಂಗ ಇಲಾಖೆ, ದ.ಕ.


Ads on article

Advertise in articles 1

advertising articles 2

Advertise under the article