
ರಾಜ್ಯದಲ್ಲಿ ಶೀಘ್ರದಲ್ಲೇ ಸಂಜೆ ನ್ಯಾಯಾಲಯ: ವಕೀಲರ ಸಂಘಗಳ ಅಭಿಪ್ರಾಯ ಸಂಗ್ರಹಕ್ಕೆ ಹೈಕೋರ್ಟ್ ಸೂಚನೆ
ರಾಜ್ಯದಲ್ಲಿ ಶೀಘ್ರದಲ್ಲೇ ಸಂಜೆ ನ್ಯಾಯಾಲಯ: ವಕೀಲರ ಸಂಘಗಳ ಅಭಿಪ್ರಾಯ ಸಂಗ್ರಹಕ್ಕೆ ಹೈಕೋರ್ಟ್ ಸೂಚನೆ
ರಾಜ್ಯದಲ್ಲಿ ಶೀಘ್ರದಲ್ಲೇ ಸಂಜೆ ನ್ಯಾಯಾಲಯ ಸ್ಥಾಪನೆಯಾಗುವ ಸ್ಪಷ್ಟ ಲಕ್ಷಣಗಳು ಕಂಡುಬರುತ್ತಿದೆ. ರಾಜ್ಯದಲ್ಲಿ ಸಂಜೆ ಕೋರ್ಟ್ಗಳನ್ನು ನಡೆಸುವ ಬಗ್ಗೆ ವಕೀಲರ ಸಂಘಗಳ ಅಭಿಪ್ರಾಯ ಸಂಗ್ರಹ ಮಾಡುವಂತೆ ಕೋರಿ ಜಿಲ್ಲಾ ನ್ಯಾಯಾಧೀಶರು, ಬೆಂಗಳೂರು ಸಿಟಿ ಸಿವಿಲ್ ಜಡ್ಜ್ಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಬೆಂಗಳೂರು ನಗರ ಜಿಲ್ಲೆಯ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಸೇರಿ ರಾಜ್ಯದ 30 ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ಈ ಬಗ್ಗೆ ಕರ್ನಾಟಕ ಹೈಕೋರ್ಟ್ ಪತ್ರ ಬರೆದಿದೆ.
ಜುಲೈ 17ರಂದು ಈ ಪತ್ರ ರವಾನಿಸಿರುವ ಕರ್ನಾಟಕ ಉಚ್ಚ ನ್ಯಾಯಾಲಯವು, ರಾಜ್ಯದಲ್ಲಿ ಸಂಜೆ ನ್ಯಾಯಾಲಯಗಳನ್ನು ಆರಂಭಿಸುವ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಸಲುವಾಗಿ ಆಯಾ ಜಿಲ್ಲೆಗಳ ವಕೀಲರ ಸಂಘಗಳ ಅಭಿಪ್ರಾಯ ಸಂಗ್ರಹಿಸುವಂತೆ ಸೂಚನೆ ನೀಡಿದೆ.
ವಕೀಲರ ಸಂಘಗಳ ಅಭಿಪ್ರಾಯ ಹಾಗೂ ಕಾರ್ಯಯೋಜನೆಯ ಸಾಧ್ಯತೆಗಳ ಬಗ್ಗೆ ಕ್ರೋಢೀಕೃತ ವರದಿಯನ್ನು ಮೂರು ತಿಂಗಳ ಒಳಗೆ ಸಲ್ಲಿಸುವಂತೆ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಲಾಗಿದೆ.
ಸಂಧ್ಯಾ ನ್ಯಾಯಾಲಯಗಳ ಸ್ಥಾಪನೆಗಾಗಿ ಕೇಂದ್ರ ಪ್ರಾಯೋಜಿತ ಯೋಜನೆ ಕುರಿತ ಪರಿಕಲ್ಪನಾ ಟಿಪ್ಪಣಿಯನ್ನು ಕಾನೂನು ಮತ್ತು ನ್ಯಾಯ ಸಚಿವಾಲಯದ ಅಧೀನ ಕಾರ್ಯದರ್ಶಿಗಳು 2025ರ ಮಾರ್ಚ್ 4ರಂದು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ವಕೀಲರ ಸಂಘಗಳ ಅಭಿಪ್ರಾಯ ಸಂಗ್ರಹಿಸಲು ಉಚ್ಚ ನ್ಯಾಯಾಲಯವು ಮುಂದಾಗಿದೆ.