
ಧರ್ಮಸ್ಥಳ ಶವ ಹೂತ ಪ್ರಕರಣ: "Kudla Rampage" ವಿರುದ್ಧದ ಏಕಪಕ್ಷೀಯ ಪ್ರತಿಬಂಧಕಾದೇಶ ರದ್ದು- ಹೆಗ್ಗಡೆ ಸಹೋದರ ಹರ್ಷೇಂದ್ರರಿಗೆ ಹಿನ್ನಡೆ
ಧರ್ಮಸ್ಥಳ ಶವ ಹೂತ ಪ್ರಕರಣ: "Kudla Rampage" ವಿರುದ್ಧದ ಏಕಪಕ್ಷೀಯ ಪ್ರತಿಬಂಧಕಾದೇಶ ರದ್ದು- ಹೆಗ್ಗಡೆ ಸಹೋದರ ಹರ್ಷೇಂದ್ರರಿಗೆ ಹಿನ್ನಡೆ
ಧರ್ಮಸ್ಥಳದಲ್ಲಿ ಕೊಲೆಯಾದ ನೂರಾರು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಅವರ ವಿರುದ್ಧ ಯಾವುದೇ ಮಾನಹಾನಿಯಾಗುವ ವಿಷಯ ಪ್ರಕಟಿಸದಂತೆ Kudla Rampage ಮಾಧ್ಯಮದ ವಿರುದ್ಧ ಹೊರಡಿಸಲಾಗಿದ್ದ ಏಕಪಕ್ಷೀಯ ಪ್ರತಿಬಂಧಕಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು Kudla Rampage ಮಾಧ್ಯಮದ ಸಂಪಾದಕ ಅಜಯ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದು, ಇದರಿಂದ ಡಾ. ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಅವರಿಗೆ ಹಿನ್ನಡೆಯಾಗಿದೆ ಎನ್ನಲಾಗಿದೆ.
ಈ ಆದೇಶಲದಲ್ಲಿ ಉಲ್ಲೇಖಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಅರ್ಜಿದಾರರು ಮತ್ತು ಇತರ ಎಲ್ಲ ಪಕ್ಷಕಾರರು ಸಕ್ಷಮ ನ್ಯಾಯಾಲಯಕ್ಕೆ ಆದೇಶ ಹೊರಡಿಸಲು ಎಲ್ಲ ರೀತಿಯ ಸಹಕಾರ ಮಾಡಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.
ಇದೇ ವೇಳೆ, ಸಿವಿಲ್ ದಾವೆ, ಕ್ರಿಮಿನಲ್ ಪ್ರಕ್ರಿಯೆ, ಆರೋಪ-ಪ್ರತ್ಯಾರೋಪದ ಮೇಲೆ ನ್ಯಾಯಪೀಠವು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಲಿಲ್ಲ. ಆದೇಶದಲ್ಲಿ ಪರಿಗಣಿಸಿರುವ ಒಂದು ಅಂಶವನ್ನು ಹೊರತುಪಡಿಸಿ ಪಕ್ಷಕಾರರ ನಡುವೆ ಎಲ್ಲ ವಾದಗಳನ್ನು ಮುಕ್ತವಾಗಿಡಲಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಧರ್ಮಸ್ಥಳ ಠಾಣೆಯಲ್ಲಿ ಸ್ವಚ್ಚತಾ ಕಾರ್ಮಿಕ ನೀಡಿರುವ ದೂರಿನ ಆಧಾರದಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ತಮ್ಮ ವಿರುದ್ಧದ ಆರೋಪಗಳು ಇಲ್ಲದಿದ್ದರೂ ತಮ್ಮ ಕುಟುಂಬ, ದೇವಾಲಯ ಹಾಗೂ ಕ್ಷೇತ್ರದ ಸಂಸ್ಥೆಗಳ ವಿರುದ್ಧ ಆನ್‌ಲೈನ್‌ನಲ್ಲಿ ಮತ್ತು ಮಾಧ್ಯಮಗಳಲ್ಲಿ ಸುಳ್ಳು ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಹರ್ಷೇಂದ್ರ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ, 4140 ಯೂಟ್ಯೂಬ್ ವೀಡಿಯೋಗಳು, 932 ಫೇಸ್ ಬುಕ್ ಪೋಸ್ಟ್‌ಗಳು, 3584 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, 108 ಸುದ್ದಿ ಲೇಖನಗಳು, 41 ಟ್ವೀಟ್‌ಗಳು ಸೇರಿದಂತೆ 8842 ಲಿಂಕ್‌ಗಳ ಪಟ್ಟಿಯನ್ನು ನಿರ್ಬಂಧಿಸುವಂತೆ ಕೋರಿ ನ್ಯಾಯಾಲಯದಲ್ಲಿ ಹರ್ಷೇಂದ್ರ ಕುಮಾರ್ ಅವರು ದಾವೆ ಹೂಡಿದ್ದರು.