ಜಡ್ಜ್‌ಗೆ ಪಂಗನಾಮ: ಪೆಟ್ರೋಲ್ ಗೋಲ್‌ಮಾಲ್‌ಗೆ ತಕ್ಕ ಪಾಠ ಕಲಿಸಿದ ನ್ಯಾಯಾಧೀಶರು- ಬಂಕ್‌ಗೆ ಸೀಲ್
ಜಡ್ಜ್‌ಗೆ ಪಂಗನಾಮ: ಪೆಟ್ರೋಲ್ ಗೋಲ್‌ಮಾಲ್‌ಗೆ ತಕ್ಕ ಪಾಠ ಕಲಿಸಿದ ನ್ಯಾಯಾಧೀಶರು- ಬಂಕ್‌ಗೆ ಸೀಲ್
# ಪೆಟ್ರೋಲ್ ಬಂಕ್‌ನಲ್ಲಿ ಗೋಲ್‌ಮಾಲ್
# 50 ಲೀಟರ್ ಸಾಮರ್ಥ್ಯದ ವಾಹನಕ್ಕೆ 57 ಲೀಟರ್ ಪೆಟ್ರೋಲ್
# ಗೋಲ್‌ಮಾಲ್ ಮಾಡಿದ ಪೆಟ್ರೋಲ್ ಬಂಕ್ ಸೀಲ್
ಪೆಟ್ರೋಲ್ ಬಂಕ್‌ನ ಅಕ್ರಮವೊಂದು ವಿಚಿತ್ರವಾಗಿ ಬಹಿರಂಗವಾಗಿದ್ದು, ಸ್ವತಃ ನ್ಯಾಯಾಧೀಶರಿಗೆ ವಂಚನೆ ಮಾಡಿದ ಪೆಟ್ರೋಲ್ ಬಂಕಿಗೆ ಬೀಗ ಜಡಿಯಲಾಗಿದೆ.
ಇಂತಹ ಒಂದು ಕುತೂಹಲಕಾರಿ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ. ಇಲ್ಲಿನ ಭೋಪಾಲ್‌ನಲ್ಲಿ ಜಡ್ಜ್ ಕಾರು ಎಂದಿನಂತೆ ಪೆಟ್ರೋಲ್ ತುಂಬಿಸಲು ಪೆಟ್ರೋಲ್ ಬಂಕ್‌ಗೆ ಕೊಂಡೊಯ್ಯಲಾಯಿತು. ಚಾಲಕರು ಕಾರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಲು ಹೇಳಿದರು.
ಪೆಟ್ರೋಲ್ ಬಂಕ್ ಸಿಬ್ಬಂದಿ ಕಾರಿನ ಟ್ಯಾಂಕಿಗೆ 57 ಲೀಟರ್ ಪೆಟ್ರೋಲ್ ತುಂಬಿಸಿದರು. ಆದರೆ, ವಾಸ್ತವವಾಗಿ ನ್ಯಾಯಾಧೀಶರ ಕಾರಿನ ಪೆಟ್ರೋಲ್ ಟ್ಯಾಂಕಿನ ಸಾಮರ್ಥ್ಯ 50 ಲೀಟರ್‌ಗಳಾಗಿತ್ತು.
ತಕ್ಷಣ ಬಂಕ್ ಸಿಬ್ಬಂದಿಯವರಿಂದ ಪೆಟ್ರೋಲ್ ಹಾಕಿದ ಬಗ್ಗೆ ಬಿಲ್ ತರಿಸಿಕೊಂಡ ನ್ಯಾಯಾಧೀಶರು, ಬಿಲ್ ಅನ್ನು ಸರಿಯಾಗಿ ಪರಿಶೀಲಿಸಿದ್ದಾರೆ. ಬಿಲ್‌ನಲ್ಲಿ 57 ಲೀಟರ್ ಇಂಧನ ತುಂಬಿರುವ ಅಂಶ ಸ್ಪಷ್ಟವಾಗಿ ನಮೂದಿಸಲಾಗಿತ್ತು. ಆ ಬಳಿಕ ಪೆಟ್ರೋಲ್ ಸಿಬ್ಬಂದಿ ಬಳಿ ತಮ್ಮ ಕಾರಿನ ಪೆಟ್ರೋಲ್ ಟ್ಯಾಂಕಿನ ಸಾಮರ್ಥ್ಯ 50 ಲೀಟರ್ ಆಗಿದ್ದು, ಹೆಚ್ಚುವರಿ ಏಳು ಲೀಟರ್ ಇಂಧನ ತುಂಬಲು ಹೇಗೆ ಸಾಧ್ಯ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ಅಷ್ಟೇ ಅಲ್ಲದೆ, ಸ್ವತಃ ತಾವೇ ಪ್ರಾಥಮಿಕ ತನಿಖೆಗಳನ್ನು ನಡೆಸಿದ ನಂತರ ಹೆಚ್ಚಿನ ತನಿಖೆಗಾಗಿ ಅಲ್ಲಿನ ಸ್ಥಳೀಯ ಪೋಲೀಸ್ ಸ್ಟೇಷನ್‌ನ ಅಧಿಕಾರಿಗಳನ್ನು ಕರೆಸಿ ವಿಷಯ ತಿಳಿಸಿದರು.
ಪೊಲೀಸ್ ಅಧಿಕಾರಿಗಳು ನ್ಯಾಯಾಧೀಶರ ಸೂಚನೆಯಂತೆ ತನಿಖೆ ನಡೆಸಿ ಆ ಪೆಟ್ರೋಲ್ ಬಂಕ್ ಗೋಲ್‌ಮಾಲ್ ಮಾಡಿರುವುದನ್ನು ಖಾತರಿ ಪಡಿಸಿಕೊಂಡು ಆ ಪೆಟ್ರೋಲ್ ಬಂಕನ್ನು ಸೀಲ್ ಮಾಡಿದ್ದಾರೆ.
ಅದೇ ರೀತಿ, ಈ ಪ್ರದೇಶದ ಎಲ್ಲಾ ಪೆಟ್ರೋಲ್ ಪಂಪ್‌ಗಳನ್ನು ಸ್ಥಳೀಯ ಜಿಲ್ಲಾಡಳಿತ ನಿಯೋಜಿಸಿದ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಿದೆ.