ಅದಾನಿ ಅಕ್ರಮಗಳ ತನಿಖೆಗೆ ಅರ್ಜಿ: ಕೇಂದ್ರದ ಮುಚ್ಚಿದ ಲಕೋಟೆ ಸಲಹೆಯನ್ನು ಧಿಕ್ಕರಿಸಿದ ಸುಪ್ರೀಂ ಕೋರ್ಟ್
ಅದಾನಿ ಅಕ್ರಮಗಳ ತನಿಖೆಗೆ ಅರ್ಜಿ: ಕೇಂದ್ರದ ಮುಚ್ಚಿದ ಲಕೋಟೆ ಸಲಹೆಯನ್ನು ಧಿಕ್ಕರಿಸಿದ ಸುಪ್ರೀಂ ಕೋರ್ಟ್\
ಅದಾನಿ ಸಮೂಹ ಸಂಸ್ಥೆಗಳ ಅಕ್ರಮ ಕುರಿತಂತೆ ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಬಗ್ಗೆ ಕೇಂದ್ರದ ಮುಚ್ಚಿದ ಲಕೋಟೆಯ ಸಲಹೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಒಂದು ವೇಳೆ, ಮುಚ್ಚಿದ ಲಕೋಟೆಯ ಮೂಲಕ ಕೇಂದ್ರ ಸರ್ಕಾರದ ಸಲಹೆಯನ್ನು ಸ್ವೀಕರಿಸಿದರೆ, ನಾವು ರಚಿಸುವ ಸಮಿತಿಯನ್ನು ಸರ್ಕಾರವೇ ನೇಮಿಸಿದ ಸಮಿತಿ ಎಂಬ ಅಭಿಪ್ರಾಯ ಮೂಡಬಹುದು. ಈ ಹಿನ್ನೆಲೆಯಲ್ಲಿ ಮುಚ್ಚಿದ ಲಕೋಟೆ ತಿರಸ್ಕರಿಸಿ ತಾನೇ ಸ್ವತಃ ಸಮಿತಿ ನೇಮಿಸುವುದಾಗಿ ಸುಪ್ರೀಂ ಕೋರ್ಟ್ ವಿಭಾಗೀಯ ನ್ಯಾಯಪೀಠ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಪಿಎಸ್ ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರ ನ್ಯಾಯಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಈ ಪ್ರಕರಣ ಗಂಭೀರತೆಯಿಂದ ಕೂಡಿದ್ದು, ಸಂಪೂರ್ಣ ಪಾರದರ್ಶಕತೆಯನ್ನು ನಿರೀಕ್ಷಿಸುತ್ತಿದೆ. ಈ ರೀತಿ ಸರ್ಕಾರದ ಸಲಹೆ ಸ್ವೀಕರಿಸಿದರೆ ಇನ್ನೊಂದು ಬದಿಯನ್ನು ಕತ್ತಲಲ್ಲಿ ಇಟ್ಟಂತೆ ಆಗುತ್ತದೆ. ನಾವು ಸ್ವೀಕರಿಸಿದ ಸಲಹೆ ಪಾರದರ್ಶಕವಾಗಿದೆ ಎಂಬುದು ಇನ್ನೊಂದು ಬದಿಗೆ ತಿಳಿಯಬೇಕು. ಹಾಗಾಗಿ, ನಾವೇ ಸಮಿತಿ ಮತ್ತು ಅದರ ಸದಸ್ಯರನ್ನು ನೇಮಿಸುತ್ತೇವೆ ಎಂದು ನ್ಯಾಯಪೀಠ ಹೇಳಿತು.
ಇದೇ ವೇಳೆ, ಪರಿಶೀಲನಾ ಸಮಿತಿಗೆ ಹಾಲಿ ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ಹಿಂಡೆನ್‌ಬರ್ಗ್ ವರದಿ ಪರಿಣಾಮ, 820 ಸಾವಿರ ಕೋಟಿ ರೂಪಾಯಿ (100 ಶತ ಕೋಟಿ ಡಾಲರ್) ಹಣವನ್ನು ಕಳೆದುಕೊಂಡಿದ್ದಕ್ಕೆ ಸಂಬಂಧಿಸಿದಂತೆ ನಾಲ್ಕು ಅರ್ಜಿ ವಿಚಾರಣೆಗಳನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠ ಕೈಗೆತ್ತಿಕೊಂಡಿತು.
ಬ್ಯಾಂಕ್‌ಗಳು ಉದ್ಯಮಿಗಳಿಗೆ ರೂ. 500 ಕೋಟಿ ರೂಪಾಯಿಗೂ ಹೆಚ್ಚಿನ ಸಾಲ ನೀಡುವುದರ ಮೇಲೆ ನಿಗಾ ಇಡಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ಸಮಿತಿ ರಚಿಸಬೇಕು ಎಂಬ ಅರ್ಜಿ, ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ಅದಾನಿ ಶೇರುಗಳನ್ನು SBI ಮತ್ತು LIC ಖರೀದಿ ಮಾಡಿದ್ದೇಕೆ? ಎಂಬ ಬಗ್ಗೆ ತನಿಖೆಗೆ ಕೋರಿ ಸಲ್ಲಿಸಿದ ಎರಡು ಪ್ರತ್ಯೇಕ ಅರ್ಜಿಗಳು, ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೋರಿ ಇನ್ನೊಂದು ಅರ್ಜಿಯನ್ನು ಸುಪ್ರೀಮ ಕೋರ್ಟ್ ಇತ್ಯರ್ಥಕ್ಕಾಗಿ ಕೈಗೆತ್ತಿಕೊಂಡಿದೆ.
...
Courtesy: Livelaw.in YouTube Channel