ಮೋಟಾರು ವಾಹನ ಕಾಯ್ದೆಯಡಿ ಪರಿಹಾರದಿಂದ ಗುಂಪು ವಿಮಾ ಯೋಜನೆ ಮೊತ್ತ ಕಡಿತ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಮೋಟಾರು ವಾಹನ ಕಾಯ್ದೆಯಡಿ ಪರಿಹಾರದಿಂದ ಗುಂಪು ವಿಮಾ ಯೋಜನೆ ಮೊತ್ತ ಕಡಿತ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಉದ್ಯೋಗದಾತರು ಒದಗಿಸುವ ಗುಂಪು ವಿಮಾ ಯೋಜನೆಗಳು ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಉದ್ಯೋಗಿಗಳ ಕುಟುಂಬದವರು ಪಡೆದ ಮೊತ್ತವನ್ನು 1988ರ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ನೀಡಲಾಗುವ ಪರಿಹಾರದಿಂದ ಕಡಿತಗೊಳಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.
ಮೃತರ ಮರಣದ ನಂತರ ಗುಂಪುವಿಮಾ ಯೋಜನೆಗಳ ಅಡಿಯಲ್ಲಿ ಕುಟುಂಬದವರು ಪಡೆದ ಮೊತ್ತವನ್ನು ಮೋಟಾರು ವಾಹನ ಕಾಯ್ದೆಯ ಪರಿಹಾರದಿಂದ ಕಡಿತಗೊಳಿಸಲು ಅನುಮತಿಸದ ಕರ್ನಾಟಕ ಹೈಕೋರ್ಟ್‌ಗಳ ತೀರ್ಪಿನ ವಿರುದ್ಧ ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಪ್ರಸನ್ನ ಬಿ. ವರಾಳೆ ಅವರ ಪೀಠ ವಜಾಗೊಳಿಸಿದೆ.
ಮೃತರ ಕುಟುಂಬದವರು ಎರಡೂ ಕಡೆಗಳಿಂದ ಪ್ರಯೋಜನ ಪಡೆಯುತ್ತಾರೆ ಎಂಬ ಕೆಎಸ್‌ಆರ್‌ಟಿಸಿಯ ವಾದವನ್ನು ತಿರಸ್ಕರಿಸಿದ ಪೀಠವು, 'ಉದ್ಯೋಗದಾತರು ಒದಗಿಸುವ ವಿಮೆಯು ಸ್ವತಂತ್ರ ಒಪ್ಪಂದದಿಂದ ರೂಪುಗೊಂಡಿರುತ್ತದೆ. ಇದು ಮೋಟಾರು ವಾಹನ ಕಾಯ್ದೆಯ ಶಾಸನಬದ್ಧ ಪರಿಹಾರದೊಂದಿಗೆ ಸಂಬಂಧ ಹೊಂದಿರುವುದಿಲ್ಲ' ಎಂದು ಅಭಿಪ್ರಾಯಪಟ್ಟಿದೆ.
ಮೃತರ ಕುಟುಂಬವು ಪಡೆದ ಗುಂಪು ವಿಮಾ ಮೊತ್ತವನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಕಡಿಮೆ ಮಾಡಿ ಬೆಂಗಳೂರಿನ ಮೋಟಾರು ಅಪಘಾತ ಕ್ಷೇಮುಗಳ ನ್ಯಾಯಮಂಡಳಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು.
ಚಿತ್ತೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಪಿ.ವಿಶ್ವೇಶ್ವರ್ ಎಂಬವರು 2018ರಲ್ಲಿ ಮೃತಪಟ್ಟಿದ್ದರು. 34 ವರ್ಷದ ಅವರು ಬೆಂಗಳೂರಿನ ಆಕ್ಸೆಂಚರ್‌ನಲ್ಲಿ ಉದ್ಯೋಗಿಯಾಗಿದ್ದರು. ಆಗ ಅವರ ವೇತನ *70 ಸಾವಿರ ಇತ್ತು. ಕೆಎಸ್‌ಆರ್‌ಟಿಸಿ ₹1 ಕೋಟಿ ಪರಿಹಾರ ನೀಡಬೇಕು ಎಂದು ಕೋರಿ ಕುಟುಂಬದವರು ನ್ಯಾಯಮಂಡಳಿ ಮೆಟ್ಟಿಲೇರಿದ್ದರು. ನ್ಯಾಯಮಂಡಳಿಯು ₹69 ಲಕ್ಷ ಪರಿಹಾರ ನಿಗದಿಪಡಿಸಿತ್ತು. ಆದರೆ, ಕುಟುಂಬದವರು ಪಡೆದ ಗುಂಪು ವಿಮಾ ಮೊತ್ತ ₹35.48 ಲಕ್ಷವನ್ನು ಕಡಿತಗೊಳಿಸಿ ₹33.59 ಲಕ್ಷವನ್ನು ವಾರ್ಷಿಕ ಶೇ 6 ಬಡ್ಡಿಯೊಂದಿಗೆ ನೀಡಲು ಆದೇಶಿಸಿತ್ತು.
ಮತ್ತೊಂದು ಪ್ರಕರಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಖಾಸಗಿ ಕಂಪನಿ ಉದ್ಯೋಗಿ ಸೆಲೆಸ್ಟಿನ್ ಡಿಸೋಜ ಮೃತಪಟ್ಟಿದ್ದರು. ಆಗ ಅವರಿಗೆ ತಿಂಗಳಿಗೆ ₹47 ಸಾವಿರ ವೇತನ ಇತ್ತು. ನ್ಯಾಯಮಂಡಳಿಯು ₹63.04 ಲಕ್ಷ ಪರಿಹಾರ ನಿಗದಿಪಡಿಸಿತ್ತು. ಆದರೆ, ಉದ್ಯೋಗದಾತರ ಗುಂಪು ವಿಮಾ ಯೋಜನೆಯಲ್ಲಿ ಕುಟುಂಬದವರು ಪಡೆದ ₹10 ಲಕ್ಷವನ್ನು ಕಡಿತಗೊಳಿಸಿತ್ತು.