-->
Karnataka HC Judgement- ನೌಕರರ ಸಂಘದ ಪದಾಧಿಕಾರಿಗಳು, ನೌಕರರು ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸಾರ್ವಜನಿಕ ಸೇವಕರಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

Karnataka HC Judgement- ನೌಕರರ ಸಂಘದ ಪದಾಧಿಕಾರಿಗಳು, ನೌಕರರು ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸಾರ್ವಜನಿಕ ಸೇವಕರಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ನೌಕರರ ಸಂಘದ ಪದಾಧಿಕಾರಿಗಳು, ನೌಕರರು ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸಾರ್ವಜನಿಕ ಸೇವಕರಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪುಕರ್ನಾಟಕ ಸಂಘ ಸಂಸ್ಥೆಗಳ ನೋಂದಣಿ ಕಾಯಿದೆ 1960ರಡಿ ನೋಂದಾಯಿಸಲ್ಪಟ್ಟ ಸಂಘದಲ್ಲಿ ಸೇವೆ ಸಲ್ಲಿಸುವ ವ್ಯಕ್ತಿಗಳ ವಿರುದ್ಧ ಕರ್ತವ್ಯ ನಿರ್ಲಕ್ಷ; ಆಥಿ೯ಕ ಅವ್ಯವಹಾರದ ಆರೋಪ ಹೊರಿಸಿ ನೀಡಿದ ದೂರಿನ ತನಿಖೆ ನಡೆಸಲು ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರಿಗೆ ಅಧಿಕಾರವಿಲ್ಲ ಎಂಬುದಾಗಿ ಮಾನ್ಯ ಕರ್ನಾಟಕ ಹೈಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ನ್ಯಾ। ಶ್ರೀ ಅರವಿಂದ ಕುಮಾರ್ ಮತ್ತು ನ್ಯಾ। ಶ್ರೀ ಹೇಮಂತ್ ಚಂದನಗೌಡರ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ವಿ. ಎಂ. ನಾರಾಯಣಸ್ವಾಮಿ Vs ಕರ್ನಾಟಕ ರಾಜ್ಯ ಈ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ.


ನಮ್ಮ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ರಾಜ್ಯದ ಸಮಸ್ತ ಸರಕಾರಿ ನೌಕರ ವರ್ಗವನ್ನು ಪ್ರತಿನಿಧಿಸುವ ಏಕೈಕ ಸಂಘಟನೆಯಾಗಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ರಾಜ್ಯದ ಸಮಸ್ತ ಶಿಕ್ಷಕರನ್ನು ಪ್ರತಿನಿಧಿಸುವ ಎರಡನೆಯ ಬೃಹತ್ ಸಂಘಟನೆಯಾಗಿದೆ. ಹಾಗೆಯೇ ವಿವಿಧ ಇಲಾಖೆಗಳ ನೌಕರರನ್ನು ಪ್ರತಿನಿಧಿಸುವ ನೌಕರರ ಬೃಹತ್ ಇಲಾಖಾ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ.


ಪದವೃಂದ ನೌಕರರ ನೂರಾರು ಸಂಘಟನೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಸಂಘಟನೆಗಳ ಕಾರ್ಯ ವೈಖರಿ ಪಾರದರ್ಶಕವಾಗಿಲ್ಲ. ಆರ್ಥಿಕ ಅವ್ಯವಹಾರಗಳು ಹಾಗೂ ಹಣ ದುರುಪಯೋಗದ ಆಪಾದನೆಗಳನ್ನು ಹೊರಿಸಿ ಸಂಘದ ಪದಾಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿರುವ ನಿದರ್ಶನಗಳೂ ಇವೆ.


ಇಂತಹ ಒಂದು ದೂರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ವಿರುದ್ಧ ದಾಖಲಾಗಿದ್ದು ಸದರಿ ದೂರಿನನ್ವಯ ಪದಾಧಿಕಾರಿಗಳ ವಿರುದ್ಧ ಕನಾ೯ಟಕ ಉಪಲೋಕಾಯುಕ್ತರಿಂದ ವಿಚಾರಣೆ ಕೂಡ ನಡೆದಿತ್ತು. ಸದ್ರಿ ಪ್ರಕರಣದ ವಿಚಾರಣೆ ನಡೆಸಲು 'ಕರ್ನಾಟಕ ಲೋಕಾಯುಕ್ತ'ಕ್ಕೆ ಅಧಿಕಾರ ವ್ಯಾಪ್ತಿ ಇಲ್ಲ. ಹಾಗಾಗಿ ವಿಚಾರಣೆಯನ್ನು ರದ್ದುಪಡಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದ ಶ್ರೀ ವಿ. ಎಂ. ನಾರಾಯಣಸ್ವಾಮಿ ಯವರು ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.


ಈ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ನೌಕರರ ಸಂಘದಲ್ಲಿ ಸೇವೆ ಸಲ್ಲಿಸುವ ಪದಾಧಿಕಾರಿಗಳು ಮತ್ತು ನೌಕರರು ಕನಾ೯ಟಕ ಲೋಕಾಯುಕ್ತ ಕಾಯಿದೆಯಡಿ ಸಾರ್ವಜನಿಕ ನೌಕರರಲ್ಲ. ಹಾಗಾಗಿ ಅವರ ವಿರುದ್ಧ ವಿಚಾರಣೆ ನಡೆಸಲು ಲೋಕಾಯುಕ್ತರಿಗೆ ಅಧಿಕಾರ ವ್ಯಾಪ್ತಿ ಇಲ್ಲ ಎಂಬುದಾಗಿ ದಿನಾಂಕ 26.3.2020 ರಂದು ಮಹತ್ವದ ತೀರ್ಪನ್ನು ನೀಡಿ ಪದಾಧಿಕಾರಿಗಳ ವಿರುದ್ಧ ನಡೆಯುತ್ತಿದ್ದ ಲೋಕಾಯುಕ್ತ ವಿಚಾರಣೆಯನ್ನು ರದ್ದುಪಡಿಸಿತು.


ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ನಿವೇಶನಗಳ ಹಂಚಿಕೆಯಲ್ಲಿ ಹಣಕಾಸು ದುರುಪಯೋಗವಾಗಿದೆ. ಸಮಾವೇಶದ ಲೆಕ್ಕ ಪತ್ರಗಳನ್ನು ನೀಡಿಲ್ಲ ಎಂದು ಆರೋಪಿಸಿ ಧಾರವಾಡದ ಶಿಕ್ಷಕರಾದ ಶ್ರೀ ಶಂಕರ ಗೌಡ ಬಿ. ಪಾಟೀಲ್ ಎಂಬವರು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಾರ್ಯದರ್ಶಿ ಮತ್ತು ಖಜಾಂಚಿ ಅವರ ವಿರುದ್ಧ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಸದರಿ ಆರೋಪಗಳ ಬಗ್ಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳ (ಸಿಸಿಎ) ನಿಯಮ 14ಎ ಅನ್ವಯ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಉಪಲೋಕಾಯುಕ್ತ ಅವರಿಗೆ ವಹಿಸಿ ಶಿಕ್ಷಣ ಇಲಾಖೆಯ (ಪ್ರಾಥಮಿಕ) ಅಧೀನ ಕಾರ್ಯದರ್ಶಿಯವರು ಆದೇಶ ಹೊರಡಿಸಿದ್ದರು.


ತತ್ಪರಿಣಾಮವಾಗಿ ಶಿಕ್ಷಕರ ಸಂಘದ ಪದಾಧಿಕಾರಿಗಳ ವಿರುದ್ಧ ದೋಷಾರೋಪಣ ಪಟ್ಟಿಯನ್ನು ತಯಾರಿಸಿ ಉಪಲೋಕಾಯುಕ್ತರು ವಿಚಾರಣೆಯನ್ನು ಪ್ರಾರಂಭಿಸಿದರು. ಸದರಿ ವಿಚಾರಣೆಯನ್ನು ನಡೆಸಲು ಲೋಕಾಯುಕ್ತರಿಗೆ ಅಧಿಕಾರ ವ್ಯಾಪ್ತಿ ಇಲ್ಲದಿರುವುದರಿಂದ ವಿಚಾರಣೆ ಹಾಗೂ ದೋಷಾರೋಪಣ ಪಟ್ಟಿಯನ್ನು ರದ್ದು ಪಡಿಸಬೇಕೆ೦ದು ಕೋರಿ ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿಯನ್ನು ದಾಖಲಿಸಲಾಗಿತ್ತು.


ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಕಲಂ 7 ರಲ್ಲಿ ಕೇವಲ ಸಾರ್ವಜನಿಕ ಸೇವಕರ ವಿರುದ್ಧ ಮಾತ್ರ ಸಲ್ಲಿಸಲಾದ ದೂರಿನ ವಿಚಾರಣೆ ನಡೆಸಲು ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರು ಅಧಿಕಾರ ವ್ಯಾಪ್ತಿ ಹೊಂದಿದ್ದಾರೆ ಎಂದು ತಿಳಿಸಲಾಗಿದೆ. ಆದುದರಿಂದ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳ ವಿರುದ್ಧ ಸಲ್ಲಿಸಲಾದ ದೂರಿನ ವಿಚಾರಣೆ ನಡೆಸಲು ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಅಧಿಕಾರ ವ್ಯಾಪ್ತಿ ಇರುವುದಿಲ್ಲ. ಸದರಿ ಕಾಯಿದೆಯ ಕಲಂ 9 ರಲ್ಲಿ ಲೋಕಾಯುಕ್ತರಿಗೆ ದೂರು ನೀಡುವ ವ್ಯಕ್ತಿಯು ದೂರಿನ ಜತೆ ಪ್ರಮಾಣಪತ್ರವನ್ನು ಸಲ್ಲಿಸಬೇಕೆಂದು ತಿಳಿಸಲಾಗಿದೆ. ಸದರಿ ದೂರಿನ ಪ್ರಾಥಮಿಕ ತನಿಖೆ ನಡೆಸಿದ ಬಳಿಕ ವಿಚಾರಣೆಗೆ ಅರ್ಹವಾಗಿದೆ ಎಂಬ ನಿಷ್ಕರ್ಷೆಗೆ ಬಂದಲ್ಲಿ ಮಾತ್ರ ದೂರಿನ ಪ್ರತಿಯನ್ನು ಯಾವ ಸಾರ್ವಜನಿಕ ಸೇವಕರ ವಿರುದ್ಧ ದೂರು ದಾಖಲಿಸಲಾಗಿದೆ ಆತನಿಗೆ ಹಾಗೂ ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು ಎಂದು ತಿಳಿಸಲಾಗಿದೆ.ಸದರಿ ಕಾಯ್ದೆಯ ಕಲಂ 2 (12) ರಲ್ಲಿ ಸಾರ್ವಜನಿಕ ಸೇವಕ ಎಂಬ ಶಬ್ದದ ಪರಿಭಾಷೆ ಯನ್ನು ನೀಡಲಾಗಿದೆ. ಕಾಯ್ದೆಯ ಕಲಂ 2 (12) ಜಿ (iv) ರಲ್ಲಿ ರಾಜ್ಯ ಸರಕಾರದ ನಿಯಂತ್ರಣಕ್ಕೊಳಪಟ್ಟಿರುವ ಮತ್ತು ಸರಕಾರಿ ರಾಜ್ಯಪತ್ರದಲ್ಲಿ ಅಧಿಸೂಚಿತವಾಗಿರುವ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರ ಮೇರೆಗೆ ನೋಂದಾಯಿಸಲ್ಪಟ್ಟ ಸಂಘದಲ್ಲಿ ಸೇವೆ ಸಲ್ಲಿಸುವ ವ್ಯಕ್ತಿಗಳು ಸಾರ್ವಜನಿಕ ಸೇವಕ ಎಂಬ ಶಬ್ದದ ಪರಿಭಾಷೆ ಯಡಿ ಬರುತ್ತಾರೆ. ಆದರೆ ಕರ್ನಾಟಕ ರಾಜ್ಯದಲ್ಲಿ ಸರಕಾರಿ ನೌಕರರನ್ನು ಪ್ರತಿನಿಧಿಸುವ ಯಾವುದೇ ನೌಕರರ ಸಂಘವು ರಾಜ್ಯ ಸರಕಾರದ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಹಾಗೂ ಸರಕಾರದ ರಾಜ್ಯಪತ್ರದಲ್ಲಿ ಅಧಿಸೂಚಿತ ವಾಗಿಲ್ಲ. ಆದುದರಿಂದ ನಮ್ಮ ರಾಜ್ಯದ ನೋಂದಾಯಿತ ಅಥವಾ ನೋಂದಾಯಿಸಲ್ಪಡದ ನೂರಾರು ನೌಕರರ ಸಂಘಗಳಲ್ಲಿ ಸೇವೆ ಸಲ್ಲಿಸುವ ವ್ಯಕ್ತಿಗಳು ಸಾರ್ವಜನಿಕ ಸೇವಕ ಎಂಬ ಶಬ್ದದ ಪರಿಭಾಷೆಯಡಿ ಬರುವುದಿಲ್ಲ. ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ನಮ್ಮ ರಾಜ್ಯದ ಸರಕಾರಿ ನೌಕರರ ವಿವಿಧ ಸಂಘಗಳು ಸರಕಾರಿ ಸಂಸ್ಥೆಗಳಲ್ಲ; ಬದಲಿಗೆ ಖಾಸಗಿ ಸಂಸ್ಥೆಗಳಾಗಿದ್ದು ಸದರಿ ಸ೦ಘಗಳಲ್ಲಿ ಸೇವೆ ಸಲ್ಲಿಸುವ ವ್ಯಕ್ತಿಗಳು ಸಾರ್ವಜನಿಕ ಸೇವಕರಲ್ಲ.


ನೌಕರರ ಸಂಘದ ದಲ್ಲಿ ಅವ್ಯವಹಾರ ನಡೆದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲು ಅವಕಾಶ ಇಲ್ಲದೇ ಇದ್ದಲ್ಲಿ ವಿಚಾರಣೆ ನಡೆಸುವ ಸಕ್ಷಮ ಪ್ರಾಧಿಕಾರ ಯಾವುದು ಎಂಬ ಪ್ರಶ್ನೆ ಮೂಡುವುದು ಸಹಜ. ಕರ್ನಾಟಕ ಸಂಘ ಸಂಸ್ಥೆಗಳ ನೋಂದಣಿ ಕಾಯಿದೆ 1960 ರಡಿ ನೋಂದಾಯಿಸಲ್ಪಟ್ಟ ನೌಕರರ ಸ೦ಘದಲ್ಲಿ ದುರಾಡಳಿತ; ಹಣ ದುರುಪಯೋಗದ ಆಪಾದನೆಗಳ ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ಸದರಿ ಕಾಯ್ದೆಯ ಕಲಂ 25 ರಡಿ ಕರ್ನಾಟಕ ಸಂಘಗಳ ನೋಂದಣಾಧಿಕಾರಿ ಯವರಿಗೆ ಪ್ರದತ್ತವಾಗಿದೆ. ಸಂಘದ ಸದಸ್ಯರು ಸಂಘದ ವಿರುದ್ಧ ಕರ್ನಾಟಕ ಲೋಕಾಯುಕ್ತರಿಗೆ ದೂರು ನೀಡಲು ಕಾನೂನಿನಡಿ ಅವಕಾಶವಿಲ್ಲ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿರುದ್ಧ ಕಾಯಿದೆಯ ಕಲಂ 25 ರಡಿ ನೊಂದಾಣಾಧಿಕಾರಿಯವರಿಗೆ ದೂರು ನೀಡುವ ಬದಲು ನೇರವಾಗಿ ಲೋಕಾಯುಕ್ತರಿಗೆ ದೂರು ನೀಡಿರುವುದು ಕಾನೂನಿನಡಿ ಉರ್ಜಿತವಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ ಇಂಥ ಪ್ರಕರಣಗಳ ವಿಚಾರಣೆಗಳನ್ನು ನಡೆಸಲು ಲೋಕಾಯುಕ್ತ ಕಾಯಿದೆಯ ಕಲಂ 8(1)(ಬಿ) ಅಡಿ ನಿಷೇಧವಿದೆ ಆದುದರಿಂದ ನೌಕರರು ಸಂಘದ ಯಾವುದೇ ದೂರನ್ನು ಸಂಘಗಳ ರಿಜಿಸ್ಟ್ರಾರ್ ರವರಿಗೆ ನೀಡತಕ್ಕದ್ದಾಗಿದೆ.


ಯಾವುದೇ ಸಂಘ ಸಂಸ್ಥೆಯು ಸುಸೂತ್ರವಾಗಿ ಕಾರ್ಯ ನಿರ್ವಹಿಸಲು ಮುಖ್ಯವಾಗಿ ಬೇಕಾಗಿರುವುದು ಆರ್ಥಿಕ ಶಿಸ್ತು. ಸಂಘದ ಬೈಲಾ ನಿಯಮಾನುಸಾರ ಕ್ಲಪ್ತಕಾಲದಲ್ಲಿ ಕಾರ್ಯಕಾರಿ ಸಮಿತಿಯ ಸಭೆಗಳನ್ನು ಕರೆಯಬೇಕು. ವಾರ್ಷಿಕ ಮಹಾಸಭೆಯನ್ನು ಕ್ಲಪ್ತಕಾಲದಲ್ಲಿ ನಡೆಸಬೇಕು. ಸಂಘದ ಯಾವುದೇ ವ್ಯವಹಾರಗಳು ಪಾರದರ್ಶಕವಾಗಿರಬೇಕು. ಆಗ ಸಂಘದ ಸದಸ್ಯರಿಗೆ ಆಡಳಿತ ಮಂಡಳಿಯ ಮೇಲೆ ವಿಶ್ವಾಸ ಮೂಡುವುದು. ಸಂಘದ ವಿರುದ್ಧ ಕೋರ್ಟು ಕಚೇರಿಗಳಲ್ಲಿ ದೂರು ದಾಖಲಾಗುವುದು ತಪ್ಪುತ್ತದೆ. ಕೋರ್ಟು ಕಚೇರಿಗಳಲ್ಲಿ ದೂರು ದಾಖಲಾಗುವುದೆಂದರೆ ಸ೦ಘದ ಅಭಿವೃದ್ಧಿ ಕುಂಠಿತವಾಗುವುದು ಎಂದೇ ಅರ್ಥ.
ಪ್ರಕಾಶ್ ನಾಯಕ್, ಕಾನೂನು ತಜ್ಞರು, ಮಂಗಳೂರು

Ads on article

Advertise in articles 1

advertising articles 2

Advertise under the article