-->
ಸರ್ಕಾರಿ ನೌಕರರ ವಿರುದ್ಧ ಕ್ರಿಮಿನಲ್ ಪ್ರಕರಣ: ಇಲಾಖಾ ವಿಚಾರಣೆಯೇ ನಿರ್ಣಾಯಕ!- ಮಹತ್ವದ ಕೋರ್ಟ್ ತೀರ್ಪು

ಸರ್ಕಾರಿ ನೌಕರರ ವಿರುದ್ಧ ಕ್ರಿಮಿನಲ್ ಪ್ರಕರಣ: ಇಲಾಖಾ ವಿಚಾರಣೆಯೇ ನಿರ್ಣಾಯಕ!- ಮಹತ್ವದ ಕೋರ್ಟ್ ತೀರ್ಪು

ಸರ್ಕಾರಿ ನೌಕರರ ವಿರುದ್ಧ ಕ್ರಿಮಿನಲ್ ಪ್ರಕರಣ: ಇಲಾಖಾ ವಿಚಾರಣೆಯೇ ನಿರ್ಣಾಯಕ! ಮಹತ್ವದ ಕೋರ್ಟ್ ತೀರ್ಪು






ಸುಪ್ರೀಂ ಕೋರ್ಟ್‌ ತೀರ್ಪಿನ ಬೆಳಕಲ್ಲಿ ಒರಿಸ್ಸಾ ಹೈಕೋರ್ಟ್ ನೀಡಿದ ಮಹತ್ವದ ತೀರ್ಪು- "ಇಲಾಖಾ ವಿಚಾರಣೆಯಲ್ಲಿ ಸರಕಾರಿ ನೌಕರನು ಗೌರವಯುತವಾಗಿ ದೋಷ ಮುಕ್ತನಾದಲ್ಲಿ ಅದೇ ಆರೋಪದ ಕುರಿತು ಪ್ರತ್ಯೇಕವಾಗಿ ದಾಖಲಾದ ಕ್ರಿಮಿನಲ್ ಪ್ರಕರಣವನ್ನು ಮುಂದುವರಿಸುವಂತಿಲ್ಲ"


ಸರಕಾರಿ ನೌಕರನ ವಿರುದ್ಧ ಹೊರಿಸಲಾದ ಆರೋಪಗಳ ಕುರಿತು ಇಲಾಖಾ ವಿಚಾರಣೆ ಮತ್ತು ಪ್ರತ್ಯೇಕ ಕ್ರಿಮಿನಲ್ ಪ್ರಕರಣ ದಾಖಲಾಗಿ ಇಲಾಖೆ ವಿಚಾರಣೆಯಲ್ಲಿ ಆಪಾದಿತ ನೌಕರನು ಗೌರವಯುತವಾಗಿ ದೋಷಮುಕ್ತನಾದಲ್ಲಿ ಅದೇ ಆರೋಪಗಳ ವಿಚಾರಣೆಗೆ ಪ್ರತ್ಯೇಕವಾಗಿ ದಾಖಲಾದ ಕ್ರಿಮಿನಲ್ ಪ್ರಕರಣವನ್ನು ಮುಂದುವರಿಸುವಂತಿಲ್ಲ ಎಂಬುದಾಗಿ ಡಾ.ಮೀನಾಕೇತನ್ ಪಾಣಿ ವಿರುದ್ಧ ಒರಿಸ್ಸಾ ಸರಕಾರ ಈ ಪ್ರಕರಣದಲ್ಲಿ ಒರಿಸ್ಸಾ ಹೈಕೋರ್ಟಿನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಡಾ. ಎಸ್. ಮುರಳೀಧರ್ ಅವರ ಏಕಸದಸ್ಯ ನ್ಯಾಯಪೀಠವು ದಿನಾಂಕ 20.5.2022 ರಂದು ಮಹತ್ವದ ತೀರ್ಪು ನೀಡಿದೆ.


ರಿಟ್ ಅರ್ಜಿದಾರರಾದ ಡಾ. ಮೀನಾಕೇತನ್ ಪಾಣಿ ಅವರು ಒರಿಸ್ಸಾ ಪ್ರೌಢ ಶಿಕ್ಷಣ ಮಂಡಳಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಒರಿಸ್ಸಾ ಪ್ರೌಢ ಶಿಕ್ಷಣ ಮಂಡಳಿಯವರು ನಡೆಸಿದ ವಾರ್ಷಿಕ ಪ್ರೌಢ ಶಿಕ್ಷಣ ಸರ್ಟಿಫಿಕೇಟ್ ಪರೀಕ್ಷೆಗೆ ಹಾಜರಾದ ಶ್ರೀ ಬಿಜಯ ಶಂಕರ ದಾಸ್ ಎಂಬವರ ಅಂಕಗಳನ್ನು ತಿದ್ದುಪಡಿ ಮಾಡಲಾಗಿದ್ದು ದಿನಾಂಕ 29.5.2007 ರಂದು ಪ್ರಕಟಗೊಂಡ ಫಲಿತಾಂಶ ಪ್ರಕಾರ ಸದರಿ ಅಭ್ಯರ್ಥಿಯು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ವಿಷಯದ ಬಗ್ಗೆ ತನಗೆ ಬಂದ ಅನಾಮಧೇಯ ದೂರಿನ ವಿಚಾರಣೆಯನ್ನು ನಡೆಸಿದ ಒರಿಸ್ಸಾ ಪ್ರೌಢ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಡಾ.ದೇಬೇಂದ್ರ ಚಂದ್ರ ಮಿಶ್ರಾ ಅವರು ಮಂಡಳಿಯ ಕಾರ್ಯದರ್ಶಿ ಮತ್ತು ಪರೀಕ್ಷಾ ನಿಯಂತ್ರಕರಿಂದ ಸ್ಪಷ್ಟೀಕರಣ ಕೋರಿದಾಗ ಯಾವುದೇ ಪ್ರತಿಸ್ಪಂದನೆ ದೊರಕಲಿಲ್ಲ. ಹಾಗಾಗಿ ಈ ಪ್ರಕರಣದಲ್ಲಿ ವಿಸ್ತೃತ ತನಿಖೆ ನಡೆಸಲು ಇಲಾಖಾ ವಿಚಾರಣೆ ಕೈಗೊಂಡು ಪ್ರತ್ಯೇಕ ಕ್ರಿಮಿನಲ್ ದೂರು ದಾಖಲಿಸಿದರು.


ಪರೀಕ್ಷಾ ನಿಯಂತ್ರಕರು ಸದರಿ ಅಭ್ಯರ್ಥಿಯ ಅಂಕಗಳನ್ನು ತಿದ್ದಿ ಹೆಚ್ಚು ಅಂಕಗಳನ್ನು ನೀಡಿದ್ದು ಈ ವಿಷಯವು ಮಂಡಳಿಯ ಕಾರ್ಯದರ್ಶಿಯಾಗಿದ್ದ ರಿಟ್ ಅರ್ಜಿದಾರ ಡಾ.ಮೀನಾಕೇತನ್ ಪಾಣಿಯವರ ಅವಗಾಹನೆಗೆ ಬಂದಿತ್ತು ಎಂಬುದಾಗಿ ತನಿಖೆ ಕೈಗೊಂಡ ತನಿಖಾಧಿಕಾರಿಗಳು ಅಭಿಪ್ರಾಯಪಟ್ಟು ರಿಟ್ ಅರ್ಜಿದಾರರಾದ ಡಾ. ಮೀನಾ ಕೇತನ್ ಪಾಣಿ ಹಾಗೂ ಇತರರ ವಿರುದ್ಧ ಕಟಕ್ ನ ಸಬ್ ಡಿವಿಜನಲ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದರು.


ಆರೋಪಗಳನ್ನು ಅವಗಾಹನಿಸಿದ ನ್ಯಾಯಾಧೀಶರು ಆರೋಪಿತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿದರು.


ಈತನ್ಮಧ್ಯೆ ಅರ್ಜಿದಾರರಾದ ಡಾ. ಮೀನಾಕೇತನ್ ಪಾಣಿ ಅವರ ವಿರುದ್ಧದ ಆರೋಪಗಳ ಬಗ್ಗೆ ಪ್ರತ್ಯೇಕವಾಗಿ ಇಲಾಖಾ ವಿಚಾರಣೆ ನಡೆದು ಅವರು ಆರೋಪಗಳಿಂದ ದೋಷಮುಕ್ತ ರಾಗಿ ಎಲ್ಲಾ ಸೇವಾ ಸೌಲಭ್ಯಗಳನ್ನು ಪಡೆದು ಸೇವೆಯಿಂದ ನಿವೃತ್ತರಾದರು. ಇಲಾಖಾ ವಿಚಾರಣೆಯಲ್ಲಿ ತಾನು ನಿರ್ದೋಷಿ ಎಂದು ತೀರ್ಮಾನಿಸಲ್ಪಟ್ಟು ದೋಷ ಮುಕ್ತನಾದುದರಿಂದ ತನ್ನ ವಿರುದ್ಧ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆ ಯಲ್ಲಿರುವ ಪ್ರಕರಣವನ್ನು ರದ್ದುಪಡಿಸಬೇಕೆಂದು ಕೋರಿ ಒರಿಸ್ಸಾ ಹೈಕೋರ್ಟಿನಲ್ಲಿ ರಿಟ್ ದಾಖಲಿಸಿದರು.


ಅರ್ಜಿದಾರರ ಪರ ಹಿರಿಯ ವಕೀಲರಾದ ಶ್ರೀ ದೇಬಿ ಪ್ರಸಾದ್ ದಾಲ್ ಅವರು ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಾಧೇಶ್ಯಾಮ್ ಕೇಜ್ರಿವಾಲ್ ವಿರುದ್ಧ ಪಶ್ಚಿಮ ಬಂಗಾಳ ರಾಜ್ಯ ಹಾಗೂ ಅಶೂ ಸುರೇಂದ್ರನಾಥ್ ತಿವಾರಿ ವಿರುದ್ಧ ಡೆಪ್ಯೂಟಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಸಿಬಿಐ ಈ ಎರಡು ಪ್ರಕರಣಗಳಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿ ಇಲಾಖಾ ವಿಚಾರಣೆಯಲ್ಲಿ ಗೌರವಯುತವಾಗಿ ದೋಷ ಮುಕ್ತನಾದ ಬಳಿಕ ಅದೇ ಆರೋಪಕ್ಕೆ ಪ್ರತ್ಯೇಕವಾಗಿ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದು ಊರ್ಜಿತವಲ್ಲ. ಆದುದರಿಂದ ಕ್ರಿಮಿನಲ್ ನ್ಯಾಯಾಲಯದಲ್ಲಿ ಅರ್ಜಿದಾರರ ವಿರುದ್ಧ ವಿಚಾರಣೆಯಲ್ಲಿರುವ ಪ್ರಕರಣವನ್ನು ರದ್ದುಪಡಿಸಬೇಕೆಂದು ಪ್ರಾರ್ಥಿಸಿದರು.


ಸರಕಾರದ ಪರ ವಾದ ಮಂಡಿಸಿದ ಸರಕಾರಿ ವಕೀಲರಾದ ಶ್ರೀ ಶೈಲಜಾ ನಂದನ್ ದಾಸ್ ಅವರು ಇಲಾಖಾ ವಿಚಾರಣೆ ಮತ್ತು ಕ್ರಿಮಿನಲ್ ಪ್ರಕರಣಗಳು ಪ್ರತ್ಯೇಕ ಪ್ರಕರಣಗಳಾಗಿದ್ದು ಇಲಾಖಾ ವಿಚಾರಣೆಯಲ್ಲಿ ದೋಷ ಮುಕ್ತನಾದ ಕಾರಣಕ್ಕೆ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂಬುದಾಗಿ ದೆಹಲಿ ರಾಜ್ಯ ವಿರುದ್ಧ ಅಜಯ್ ಕುಮಾರ್ ತ್ಯಾಗಿ ಈ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠವು ಸರ್ವಸಮ್ಮತ ಅಭಿಪ್ರಾಯವನ್ನು ವ್ಯಕ್ತಪಡಿಸಿ ನೀಡಿದ ತೀರ್ಪಿನ ಬೆಳಕಿನಲ್ಲಿ ರಿಟ್ ಅರ್ಜಿಯನ್ನು ವಜಾಗೊಳಿಸುವಂತೆ ಪ್ರಾರ್ಥಿಸಿದರು.


ಉಭಯ ಪಕ್ಷಕಾರರ ಪರವಾಗಿ ಮಂಡಿಸಿದ ವಾದವನ್ನು ಆಲಿಸಿದ ನ್ಯಾಯಪೀಠವು ಸಾಂವಿಧಾನಿಕ ನ್ಯಾಯಾಲಯದ ತೀರ್ಪುಗಳಲ್ಲಿ ವೈರುಧ್ಯ ಕಂಡುಬಂದಲ್ಲಿ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪು ಅನ್ವಯಿಸತಕ್ಕದ್ದಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿತು.


ಸರ್ವೋಚ್ಚನ್ಯಾಯಾಲಯವು ಪಿ.ಎಸ್. ರಜ್ಯಾ ವಿರುದ್ಧ ಬಿಹಾರ ರಾಜ್ಯ ಈ ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ ಆಪಾದಿತ ನೌಕರರನು ತನ್ನ ಘೋಷಿತ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಹೊಂದಿದ ಆರೋಪಕ್ಕೆ ಇಲಾಖಾ ವಿಚಾರಣೆ ಹಾಗೂ ಪ್ರತ್ಯೇಕ ಕ್ರಿಮಿನಲ್ ವಿಚಾರಣೆಯನ್ನು ಎದುರಿಸುತ್ತಿದ್ದು, ಇಲಾಖಾ ವಿಚಾರಣೆಯಲ್ಲಿ ದೋಷ ಮುಕ್ತನಾದ ಕಾರಣಕ್ಕೆ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲಾದ ಕ್ರಮ ಸಮರ್ಥಿಸಲ್ಪಟ್ಟಿತ್ತು.


ಸಾಮಾನ್ಯವಾಗಿ ಸರಕಾರಿ ನೌಕರನ ವಿರುದ್ದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾದಲ್ಲಿ ಆಪಾದಿತ ನೌಕರನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುತ್ತದೆ. ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ಸರಕಾರಿ ನೌಕರನನ್ನು ತಕ್ಷಣ ಅಮಾನತ್ತಿನಲ್ಲಿಟ್ಟು ನಿಯಮಾನುಸಾರ ಇಲಾಖಾ ವಿಚಾರಣೆಯನ್ನು ನಡೆಸತಕ್ಕದ್ದಾಗಿದೆ. ಇಂತಹ ಸಂದರ್ಭದಲ್ಲಿ ಸರಕಾರಿ ನೌಕರನು ಇಲಾಖಾ ವಿಚಾರಣೆಯ ಜೊತೆಗೆ ಕ್ರಿಮಿನಲ್ ಪ್ರಕರಣವನ್ನು ಕೂಡಾ ಎದುರಿಸಬೇಕಾಗುತ್ತದೆ.


ಡಾ. ಮೀನಾಕೇತನ್ ಪಾಣಿ ವಿರುದ್ಧ ಒರಿಸ್ಸಾ ಸರಕಾರ ಈ ಪ್ರಕರಣದ ಸಂಗತಿಗಳು ಮತ್ತು ಸನ್ನಿವೇಶಗಳಡಿ ಅರ್ಜಿದಾರರ ವಿರುದ್ಧ ಹೊರಿಸಲಾದ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆ ಮತ್ತು ಕ್ರಿಮಿನಲ್ ವಿಚಾರಣೆ ಪ್ರತ್ಯೇಕವಾಗಿ ನಡೆದಿದ್ದು ಇಲಾಖಾ ವಿಚಾರಣೆಯಲ್ಲಿ ಅರ್ಜಿದಾರರು ಗೌರವಯುತವಾಗಿ ದೋಷ ಮುಕ್ತರಾಗಿದ್ದರು ಎಂಬ ಅಂಶವನ್ನು ಹೈಕೋರ್ಟ್ ಪರಿಗಣಿಸಿತು.


ಇಲಾಖಾ ವಿಚಾರಣೆಯಲ್ಲಿ ದೋಷ ಮುಕ್ತಗೊಂಡ ಸರಕಾರಿ ನೌಕರನ ವಿರುದ್ಧ ಕ್ರಿಮಿನಲ್ ಪ್ರಕರಣ ಊರ್ಜಿತವಲ್ಲ ಎಂಬ ಬಗ್ಗೆ ಮಾನ್ಯ ಸರ್ವೋಚ್ಛ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠವು ರಾಧೇಶ್ಯಾಮ್ ಕೇಜ್ರಿವಾಲ್ ವಿರುದ್ಧ ಪಶ್ಚಿಮ ಬಂಗಾಳ ರಾಜ್ಯ ಈ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಹಾಗೂ ಸುರೇಂದ್ರನಾಥ ತಿವಾರಿ ವಿರುದ್ಧ ಸುಪರಿಂಟೆಂಡೆಂಟ್ ಆಫ್ ಪೊಲೀಸ್; ಸಿ. ಬಿ. ಐ. ಈ ಪ್ರಕರಣದಲ್ಲಿ ಇತ್ತೀಚೆಗೆ ನೀಡಿದ ತೀರ್ಪುಗಳನ್ನು ಅವಲೋಕಿಸಿದ ಒರಿಸ್ಸಾ ಹೈಕೋರ್ಟಿನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಏಕಸದಸ್ಯ ನ್ಯಾಯಪೀಠವು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬೆಳಕಿನಲ್ಲಿ ರಿಟ್ ಅರ್ಜಿದಾರ ಡಾ. ಮೀನಾಕೇತನ್ ಪಾಣಿ ವಿರುದ್ಧ ಕಟಕ್ ನ ಸಬ್ ಡಿವಿಜನಲ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣ ಜಿ.ಆರ್. ಸಂಖ್ಯೆ 1057/2007 ನ್ನು ರದ್ದುಪಡಿಸಿತು.




ಲೇಖನ: ಶ್ರೀ ಪ್ರಕಾಶ್ ನಾಯಕ್... ಶಿರಸ್ತೇದಾರರು, Judicial Center, Mangaluru Court Complex

Ads on article

Advertise in articles 1

advertising articles 2

Advertise under the article