-->
ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು

ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು

ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು






ಸುಪ್ರೀಂ ಕೋರ್ಟ್ ತೀರ್ಪು ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಸರಕಾರಿ ನೌಕರರಿಗೆ ಪದೋನ್ನತಿಯ ಭಾಗ್ಯದ ಬಾಗಿಲು ತೆರೆದ ಸರಕಾರದ ಮಹತ್ವದ ಆದೇಶ


ಕರ್ನಾಟಕ ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಾಗ ರಿಕ್ತ ಸ್ಥಾನ ಆಧಾರಿತ ವರ್ಗೀಕರಣದ ಬದಲಾಗಿ ಹುದ್ದೆ ಆಧಾರಿತ ವರ್ಗೀಕರಣವನ್ನು ಅನುಸರಿಸುವಂತೆ ಕರ್ನಾಟಕ ಸರಕಾರವು ದಿನಾಂಕ 10.12.2021 ರಂದು ಅಧಿಕೃತ ಜ್ಞಾಪನ ಹೊರಡಿಸಿದೆ. ಈ ಆದೇಶವನ್ನು ಹೊರಡಿಸಲು ಕಾರಣವಾದ ಅಂಶಗಳು ಯಾವುದು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ.


ಮಾನ್ಯ ಸರ್ವೋಚ್ಚ ನ್ಯಾಯಾಲಯವು ಈ ಕೆಳಗಿನ ಪ್ರಕರಣಗಳಲ್ಲಿ ನೀಡಿದ ತೀರ್ಪುಗಳನ್ನು ಅನುಷ್ಠಾನಗೊಳಿಸಲು ರಾಜ್ಯದ ನಾಗರಿಕ ಸೇವೆಗೆ ನಡೆಯುವ ನೇಮಕ, ಮುಂಬಡ್ತಿಗಳಿಗೆ ಹುದ್ದೆ ಆಧಾರಿತ ನೀತಿ ಅನುಸರಿಸಲು ಸರಕಾರವು ಆದೇಶಿಸಿದೆ.


1. ವಿ.ಬಿ.ಬಾದಾಮಿ ವಿರುದ್ಧ ಮೈಸೂರು ರಾಜ್ಯ


2. ಗೋನಾಳ್ ಭೀಮಪ್ಪ ವಿರುದ್ಧ ಕರ್ನಾಟಕ ರಾಜ್ಯ, ದಿನಾಂಕ 11.8.1987


3. ಆರ್. ಕೆ. ಸಬರವಾಲ್ ವಿರುದ್ಧ ಪಂಜಾಬ್ ರಾಜ್ಯ


ರಾಜ್ಯ ಸಿವಿಲ್ ಸೇವೆಗಳಿಗೆ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಯಾವುದೇ ಒಂದು ವೃಂದಕ್ಕೆ ಸಂಬಂಧಿಸಿದಂತೆ ನೇರ ನೇಮಕಾತಿ ಮತ್ತು ಮುಂಬಡ್ತಿ ಮುಖಾಂತರ ಭರ್ತಿ ಮಾಡಲು ಅನುಪಾತ (ಕೋಟಾ) ನಿಗದಿಪಡಿಸಿದ್ದಲ್ಲಿ ಆ ಅನುಪಾತದ ಪ್ರಕಾರ ಹುದ್ದೆಗಳನ್ನು ಭರ್ತಿ ಮಾಡಿದ ಪ್ರಕರಣಗಳಲ್ಲಿ ನೇರ ನೇಮಕಾತಿ ಹೊಂದಿದ ಮತ್ತು ಮುಂಭಡ್ತಿ ಹೊಂದಿದ ನೌಕರರ ಅಂತರ್ ಸೇವಾ ಜ್ಯೇಷ್ಠತೆಯನ್ನು ನಿಗದಿಪಡಿಸುವ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ವಿ. ಬಿ. ಬಾದಾಮಿ ಮತ್ತು ಇತರರು ವಿರುದ್ಧ ಕರ್ನಾಟಕ ರಾಜ್ಯ ಈ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಅನುಸರಿಸಿ ರಾಜ್ಯ ಸರಕಾರವು ದಿನಾಂಕ 5.7.1976 ರ ಅಧಿಕೃತ ಜ್ಞಾಪನದಲ್ಲಿ ಮಾರ್ಗಸೂಚಿಗಳನ್ನು ನೀಡಿರುತ್ತದೆ.



ತದನಂತರ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಗೋನಾಳ್ ಭೀಮಪ್ಪ ವಿರುದ್ಧ ಕರ್ನಾಟಕ ರಾಜ್ಯ ಈ ಪ್ರಕರಣದಲ್ಲಿ ದಿನಾಂಕ 11.8.1987 ರಂದು ನೀಡಿರುವ ತೀರ್ಪಿನಲ್ಲಿ ಬಿ.ವಿ. ಬಾದಾಮಿ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿರುತ್ತದೆ.



ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸದರಿ ತೀರ್ಪುಗಳ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ದಿನಾಂಕ 14.12.1987 ರ ಅಧಿಕೃತ ಜ್ಞಾಪನದಲ್ಲಿ ಮುಂದುವರಿದ ಮಾರ್ಗಸೂಚಿಗಳನ್ನು ನೀಡಿರುತ್ತದೆ.



ಪ್ರಸ್ತುತ ಜಾರಿಯಲ್ಲಿರುವ ರಿಕ್ತ ಸ್ಥಾನ ಆಧಾರಿತ ಪದ್ಧತಿಯನ್ನು ಅನುಸರಿಸಿದ್ದಲ್ಲಿ ಯಾವುದೇ ಒಂದು ಬ್ಲಾಕ್ ಅವಧಿಯಲ್ಲಿ ನೇರ ನೇಮಕಾತಿ ಅಥವಾ ಮುಂಭಡ್ತಿಗಾಗಿ ವರ್ಗಿಕರಣ ಮಾಡಲಾದ ರಿಕ್ತ ಸ್ಥಾನಗಳನ್ನು ಆ ಅವಧಿಯಲ್ಲಿ ಭರ್ತಿ ಮಾಡಲು ಸಾಧ್ಯವಾಗದಿದ್ದಲ್ಲಿ ಅಂತಹ ರಿಕ್ತ ಸ್ಥಾನಗಳನ್ನು ಮುಂದಿನ ಬ್ಲಾಕ್ ಅವಧಿಗೆ ಕೊಂಡೊಯ್ಯಬೇಕಾಗುತ್ತದೆ. ಹಾಗೂ ಹೆಚ್ಚುವರಿಯಾಗಿ ಮುಂಬಡ್ತಿ ನೀಡಿದ್ದಲ್ಲಿ ಅಂತಹ ಮುಂಭಡ್ತಿಗಳನ್ನು ಮುಂದಿನ ಬ್ಲಾಕ್ ಅವಧಿಗಳಲ್ಲಿ ಸರಿದೂಗಿಸಬೇಕಾಗುತ್ತದೆ.


ನೇರ ನೇಮಕಾತಿ ಪ್ರಕ್ರಿಯೆಗಳು ಕಾಲಕಾಲಕ್ಕೆ ನಡೆಯದ ಪ್ರಯುಕ್ತ ನಿಗದಿತ ಕೆಲವು ಸಂದರ್ಭಗಳಲ್ಲಿ ಅವುಗಳ ಸಂಖ್ಯೆಯು ವೃಂದ ಬಲಕ್ಕಿಂತ ಹೆಚ್ಚಾಗುವ ಸಂಭವವಿರುತ್ತದೆ. ಈ ರೀತಿ ರಿಕ್ತ ಸ್ಥಾನ ಆಧಾರಿತ ಪದ್ಧತಿಯನ್ನು ಅನುಸರಿಸಿದ್ದಲ್ಲಿ ನೇರ ನೇಮಕಾತಿಗಾಗಿ ಹಾಗೂ ಮುಂಬಡ್ತಿಗಾಗಿ ನಿಗದಿತ ಅನುಪಾತದ ಅನ್ವಯ ವರ್ಗೀಕರಣ ಮಾಡಿದಾಗ ಅಸಮತೋಲನ ಉಂಟಾಗುವುದು ಮತ್ತು ಈ ಅಸಮತೋಲನದ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ಪ್ರಕರಣಗಳು ದಾಖಲಾಗಿರುವುದನ್ನು ಸರಕಾರವು ಗಮನಿಸಿರುತ್ತದೆ.



ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠವು ಆರ್. ಕೆ. ಸಬರ್ವಾಲ್ ವಿರುದ್ಧ ಪಂಜಾಬ್ ರಾಜ್ಯ ಈ ಪ್ರಕರಣದಲ್ಲಿ ಮೀಸಲಾತಿಯನ್ನು ರಿಕ್ತ ಸ್ಥಾನ ಆಧಾರಿತವಾಗಿ ಜಾರಿಗೊಳಿಸುವ ಬದಲು ಹುದ್ದೆಯಾಧಾರಿತವಾಗಿ ಜಾರಿಗೊಳಿಸತಕ್ಕದ್ದು ಎಂಬ ಸಿದ್ಧಾಂತವನ್ನು ಪ್ರತಿಪಾದಿಸುತ್ತಿರುತ್ತದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯವು ಪ್ರತಿಪಾದಿಸಿದ ಸದರಿ ತತ್ವವನ್ನು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನೇಮಕಾತಿ ಮತ್ತು ಮುಂಬಡ್ತಿಗಾಗಿ ನಿಗದಿಪಡಿಸಿದ ಅನುಪಾತದ ಅನ್ವಯ ನೇರ ನೇಮಕಾತಿ ಮತ್ತು ಮುಂಬಡ್ತಿಗೆ ರಿಕ್ತ ಸ್ಥಾನ ಆಧಾರಿತ ವರ್ಗೀಕರಣ ಮಾಡುವ ಬದಲಾಗಿ ಹುದ್ದೆ ಆಧಾರಿತ ವರ್ಗೀಕರಣ ಮಾಡುವುದು ಯುಕ್ತವೆಂದು ಸರಕಾರ ಮನಗಂಡು ಆ ತತ್ವವನ್ನು ಅನುಸರಿಸಿ ದಿನಾಂಕ 23.3.2016 ರ ಅಧಿಕೃತ ಜ್ಞಾಪನದಲ್ಲಿ ಕೆ.ಎ.ಎಸ್. ಕಿರಿಯ ಶ್ರೇಣಿ ವೃಂದದ ಹುದ್ದೆಗಳನ್ನು ನಿಗದಿತ ಅನುಪಾತದ ಅನ್ವಯ ನೇರ ನೇಮಕಾತಿ ಮತ್ತು ಮುಂಬಡ್ತಿಗಾಗಿ ಹುದ್ದೆ ಆಧಾರಿತ ವರ್ಗೀಕರಣ ಮಾಡಲು ಸರಕಾರ ಮಾರ್ಗಸೂಚನೆಗಳನ್ನು ನೀಡಿತ್ತು.



ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿದ ಅನುಪಾತದ ಅನ್ವಯ ನೇರ ನೇಮಕಾತಿ ಮತ್ತು ಮುಂಬಡ್ತಿಗಾಗಿ ರಿಕ್ತ ಸ್ಥಾನ ಆಧಾರಿತ ವರ್ಗೀಕರಣ ಮಾಡುವ ಪದ್ಧತಿಯನ್ನು ಸರಕಾರ ರದ್ದುಪಡಿಸಿದ್ದು ಮೇಲೆ ಹೇಳಲಾದ ಅಧಿಕೃತ ಜ್ಞಾಪನಗಳನ್ನು ಮಾರ್ಪಡಿಸಿ ದಿನಾಂಕ 10.12.2021 ರಂದು ಹೊರಡಿಸಿದ ಅಧಿಕೃತ ಜ್ಞಾಪನದಲ್ಲಿ ಪರಿಷ್ಕೃತ ಮಾರ್ಗ ಸೂಚನೆಗಳನ್ನು ನೀಡಿದೆ. ಇದರಿಂದ ಸರಕಾರಿ ನೌಕರರಿಗೆ ಬಡ್ತಿ ನೀಡುವಲ್ಲಿ ಇದ್ದ ಕಾನೂನಾತ್ಮಕ ತೊಡಕುಗಳು ನಿವಾರಣೆಗೊಂಡು ಪದೋನ್ನತಿಯ ಉಜ್ವಲ ಅವಕಾಶದ ಬಾಗಿಲು ತೆರೆದಂತಾಗಿದೆ.


ನೂತನ ಆದೇಶದಿಂದ ಸರಕಾರಿ ನೌಕರರಿಗೆ ಯಾವ ರೀತಿ ಲಾಭವಾಗಿದೆ?


ನೂತನ ಆದೇಶದಿಂದ ಪ್ರತಿ ಇಲಾಖೆಯಲ್ಲಿ ಶೇಕಡ 25 ರಿಂದ 30 ರಷ್ಟು ನೌಕರರಿಗೆ ಮುಂಭಡ್ತಿಯ ಅವಕಾಶಗಳು ಸಿಗಲಿವೆ. ನೂತನ ಆದೇಶಕ್ಕೂ ಪೂರ್ವದಲ್ಲಿ ಯಾವುದೇ ಪದವೃಂದದ ನೌಕರರು ಮುಂಬಡ್ತಿ ಪಡೆದರೆ ಭಡ್ತಿ ಪಡೆದ ನೌಕರರು ಹೊಂದಿರುವ ಹುದ್ದೆ ಖಾಲಿಯಾಗುತ್ತಿತ್ತು. ಆ ಎಲ್ಲಾ ಹುದ್ದೆಗಳನ್ನು ಮುಂಬಡ್ತಿ ಮೂಲಕ ಭರ್ತಿ ಮಾಡುವಂತಿರಲಿಲ್ಲ. ಖಾಲಿಯಾದ ಹುದ್ದೆಗಳ ಪೈಕಿ ಶೇಕಡ 50 ರಷ್ಟು ನೇರ ನೇಮಕಾತಿ ಹಾಗೂ ಶೇಕಡ 50 ರಷ್ಟು ಮುಂಭಡ್ತಿಯಿಂದ ಭರ್ತಿ ಮಾಡಲು ಅವಕಾಶ ಇತ್ತು. ಇದರಿಂದ ಕೆಳಹಂತದ ನೌಕರರು ಭಡ್ತಿ ಪಡೆಯಲು ಅನೇಕ ವರ್ಷ ಕಾಯಬೇಕಿತ್ತು. ವರ್ಷಾನುಗಟ್ಟಲೆ ನೇರ ನೇಮಕಾತಿ ನಡೆಯದೇ ಇದ್ದರೆ ಆ ಹುದ್ದೆಗಳು ಖಾಲಿ ಉಳಿದು ಅಸಮತೋಲನ ಆಗುತ್ತಿತ್ತು. ಸರಕಾರದ ನೂತನ ಆದೇಶದಿಂದ ಇನ್ನು ಮುಂದೆ ಅದು ತಪ್ಪಲಿದೆ.


ಉದಾಹರಣೆಗೆ ಒಂದು ಇಲಾಖೆಯಲ್ಲಿ 100 ಪ್ರಥಮ ದರ್ಜೆ ಹುದ್ದೆಗಳು ಖಾಲಿ ಇದ್ದರೆ ಆ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮದ ಅನ್ವಯ 50:50 ಅನುಪಾತ ನಿಗದಿಪಡಿಸಿದ್ದಲ್ಲಿ ಈ ಅವಕಾಶದಡಿ 50 ಮಂದಿ ದ್ವಿತೀಯ ದರ್ಜೆ ಸಹಾಯಕ/ ತತ್ಸಮಾನ ಹುದ್ದೆಯಿಂದ ಭಡ್ತಿ ಪಡೆಯುತ್ತಿದ್ದರು. ದ್ವಿತೀಯ ದರ್ಜೆ ಸಹಾಯಕರಿಂದ ಖಾಲಿಯಾದ 50 ಹುದ್ದೆಗಳಿಗೆ ಗ್ರೂಪ್ ಡಿ ನೌಕರರು ಅರ್ಹತೆ ಪಡೆಯುತ್ತಿರಲಿಲ್ಲ. ದ್ವಿತೀಯ ದರ್ಜೆ ಸಹಾಯಕರ 50 ಹುದ್ದೆಗಳಲ್ಲಿ ನೇರ ನೇಮಕಾತಿಯ ಅನುಪಾತವನ್ನು ಬಿಟ್ಟು ಉಳಿದ ಮುಂಬಡ್ತಿ ಅನುಪಾತವನ್ನು ತುಂಬಲಾಗುತ್ತಿತ್ತು. ಹೊಸ ಆದೇಶದ ಅನ್ವಯ ಈ ಎಲ್ಲಾ 50 ಹುದ್ದೆಗಳನ್ನು ಮುಂಬಡ್ತಿ ಮೂಲಕವೇ ತುಂಬಲು ಅವಕಾಶ ಸಿಗಲಿದೆ.


ಹಿಂದಿನ ವರ್ಗೀಕರಣದ ನಿಯಮಗಳೇನು?


1976 ರ ಅಧಿಕೃತ ಜ್ಞಾಪನ ಪ್ರಕಾರ ನೇರ ನೇಮಕಾತಿ ಹಾಗೂ ಮುಂಬಡ್ತಿ ಪಾಲಿನ ಖಾಲಿ ಸ್ಥಾನಗಳನ್ನು ವರ್ಗೀಕರಣ ಮಾಡಿ ಲೆಕ್ಕ ಹಾಕಲು ಬ್ಲಾಕ್ ಅವಧಿಯನ್ನು ಗುರುತಿಸಬೇಕಾಗಿತ್ತು. ಅದರಂತೆ ಆಯಾಯ ಇಲಾಖೆಗಳು ರಚಿಸಿಕೊಂಡಿರುವ ವೃಂದ ಮತ್ತು ನೇಮಕಾತಿ ನಿಯಮಗಳು ಜಾರಿಗೆ ಬಂದ ದಿನಾಂಕದಿಂದ ನೇರ ನೇಮಕಾತಿ ಆಗುವ ವರೆಗೆ ಬ್ಲಾಕ್ ಅವಧಿಯನ್ನು ಗುರುತಿಸಬೇಕಾಗಿತ್ತು. ವೃಂದ ಮತ್ತು ನೇಮಕಾತಿ ನಿಯಮಗಳು ಈ ಮಧ್ಯೆ ತಿದ್ದುಪಡಿಯಾದಲ್ಲಿ ತಿದ್ದುಪಡಿ ಆದ ದಿನಾಂಕದ ವರೆಗೆ ಈ ನಿಯಮ ಅನ್ವಯಿಸಬೇಕಾಗಿತ್ತು.


ಹೀಗೆ ಒಂದು ಬ್ಲಾಕ್ ಅವಧಿಯಲ್ಲಿ ಸರಕಾರಿ ನೌಕರರ ನಿಧನ, ನಿವೃತ್ತಿ, ರಾಜಿನಾಮೆ, ವಜಾ ಮುಂತಾದ ಕಾರಣದಿಂದ ಸೃಷ್ಟಿಯಾದ ಖಾಲಿ ಹುದ್ದೆಗಳನ್ನು ನಿಗದಿತ ಅನುಪಾತದ ಅನ್ವಯ ನೇರ ನೇಮಕಾತಿ ಯ ಖಾಲಿ ಸ್ಥಾನಗಳು ಮತ್ತು ಮುಂಬಡ್ತಿಯ ಖಾಲಿ ಸ್ಥಾನಗಳೆಂದು ವರ್ಗಾಯಿಸಬೇಕಾಗಿತ್ತು. ಇದರಲ್ಲಿ ನೇರ ನೇಮಕಾತಿ ಹಾಗೂ ಮುಂಬಡ್ತಿಯ ತೆರವಾಗಿರುವ ಸ್ಥಾನಗಳ ಮೀಸಲಾತಿಯನ್ನು ಬದಲಾವಣೆ ಮಾಡಲು ಯಾವುದೇ ಅವಕಾಶ ಇರಲಿಲ್ಲ.


ಈ ಮೇಲಿನ ಕಾರಣದಿಂದ ಇಲಾಖೆಯಲ್ಲಿ ನೂರಾರು ಖಾಲಿ ಹುದ್ದೆಗಳಿದ್ದರೂ ಮುಂಬಡ್ತಿ ಯಿಂದ ತುಂಬುವ ಅವಕಾಶ ಇಲ್ಲದ ಕಾರಣ ಅವೆಲ್ಲವೂ ಖಾಲಿಯಾಗಿಯೇ ಉಳಿಯುತ್ತಿದ್ದವು. ಭಡ್ತಿ ಪಡೆಯುವ ಅರ್ಹತೆ ಇದ್ದ ಸಾವಿರಾರು ನೌಕರರು ಪದೋನ್ನತಿಯಿಂದ ವಂಚಿತರಾಗಿದ್ದರು. ಈ ನಿಯಮವನ್ನು ಬದಲಾವಣೆ ಮಾಡುವಂತೆ ರಾಜ್ಯ ಸರಕಾರಿ ನೌಕರರ ಸಂಘ ಅನೇಕ ಬಾರಿ ಮನವಿ ಮಾಡಿದ್ದು ಸರಕಾರದ ಹೊಸ ಆದೇಶದಿಂದ ಭಡ್ತಿಗಾಗಿ ಕಾಯುತ್ತಿದ್ದ ಅನೇಕರಿಗೆ ಪದೋನ್ನತಿಯ ಬಾಗಿಲು ತೆರೆದಂತಾಗಿದೆ.


ಜೇಷ್ಠತಾ ಪಟ್ಟಿಯನ್ನು ಪ್ರತಿ ವರ್ಷ ಮಾರ್ಚ್ 31ರೊಳಗೆ ಅಂತಿಮಗೊಳಿಸತಕ್ಕದ್ದು


ಹೊಸ ಆದೇಶದ ಪ್ರಕಾರ ಸರಕಾರಿ ನೌಕರರ ಜೇಷ್ಠತಾ ಪಟ್ಟಿ ಸಿದ್ಧಪಡಿಸುವಾಗ ಡಿಸೆಂಬರ್ 31ರ ಮೊದಲು ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಬೇಕು. ಆಕ್ಷೇಪಣೆಗಳನ್ನು ಆಹ್ವಾನಿಸಿ ನಿಯಮದಂತೆ ಪರಿಶೀಲಿಸಿ ಮಾರ್ಚ್ 31 ದೊಳಗೆ ಅಂತಿಮ ಪಟ್ಟಿ ಪ್ರಕಟಿಸತಕ್ಕದ್ದು.


ನೇರ ನೇಮಕಾತಿ ಮುಖಾಂತರ ನೇಮಕಾತಿಯಾದ ನೌಕರರು ಮುಂಬಡ್ತಿ, ನಿವೃತ್ತಿ, ರಾಜೀನಾಮೆ ನೀಡಿದಾಗ ಆ ಹುದ್ದೆ ಖಾಲಿಯಾದಲ್ಲಿ ಅದನ್ನು ನೇರ ನೇಮಕಾತಿಯಿಂದಲೇ ಭರ್ತಿ ಮಾಡಬೇಕು. ಅದೇ ರೀತಿ ಮುಂಬಡ್ತಿ ಮುಖಾಂತರ ನೇಮಕಾತಿ ಹೊಂದಿದ ನೌಕರರಿಂದ ತೆರವಾಗುವ ಹುದ್ದೆಗಳನ್ನು ಮುಂಬಡ್ತಿಯಿಂದಲೇ ಭರ್ತಿ ಮಾಡತಕ್ಕದ್ದು. ಪರಿಶಿಷ್ಟ ಜಾತಿ, ಪಂಗಡ, ಇತರೆ ಹಿಂದುಳಿದ ಜಾತಿಗೆ ಸೇರಿದ ಬ್ಯಾಕ್ ಲಾಗ್ ಹುದ್ದೆಗಳನ್ನು ಈ ಹಿಂದೆ ಇರುವ ನಿಯಮದಂತೆ ಭರ್ತಿ ಮಾಡತಕ್ಕದ್ದು ಎಂದು ನೂತನ ಆದೇಶದಲ್ಲಿ ಸೂಚಿಸಿದೆ.


ನೂತನ ಆದೇಶ ಅನುಷ್ಠಾನಗೊಂಡಿದೆಯೇ ?


ಸರಕಾರವು ನೂತನ ಆದೇಶ ಹೊರಡಿಸಿ ಹಲವಾರು ತಿಂಗಳುಗಳು ಕಳೆದರೂ ಬಹುತೇಕ ಇಲಾಖೆಗಳಲ್ಲಿ ನೂತನ ಆದೇಶ ಅನುಷ್ಠಾನವಾಗದೇ ಇರುವುದು ವಿಷಾದನೀಯ ಸಂಗತಿಯಾಗಿದೆ. ಇನ್ನಾದರೂ ರಾಜ್ಯದ ಸಮಸ್ತ ಇಲಾಖೆಗಳ ನೇಮಕಾತಿ ಪ್ರಾಧಿಕಾರ ಹುದ್ದೆ ಆಧಾರಿತ ವರ್ಗೀಕರಣ ನೀತಿಯನ್ನು ಆದಷ್ಟು ಶೀಘ್ರ ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಸಮಸ್ತ ಸರಕಾರಿ ನೌಕರರು ನೂತನ ಆದೇಶದ ಲಾಭ ಪಡೆಯುವಂತಾಗಲಿ ಎಂದು ಆಶಿಸೋಣವೇ?


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ


Author: Sri Prakash Nayak, Shirasthedar, Mangaluru Judiciary


ಇದನ್ನೂ ಓದಿ:

10 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸಿಬ್ಬಂದಿ ಖಾಯಂಗೊಳಿಸಲು ಹೈಕೋರ್ಟ್ ಸೂಚನೆ


ಪದೋನ್ನತಿ ನಿರಾಕರಿಸಿದ ನೌಕರರು ಕಾಲಬದ್ಧ ವೇತನ ಬಡ್ತಿ ಪಡೆಯಲು ಅರ್ಹರಲ್ಲ: ಸುಪ್ರೀಂ ಕೋರ್ಟ್‌


20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಹೈಕೋರ್ಟ್ ಮಹತ್ವದ ಆದೇಶ


Ads on article

Advertise in articles 1

advertising articles 2

Advertise under the article