-->
SC on Employees promation- ಪದೋನ್ನತಿ ನಿರಾಕರಿಸಿದ ನೌಕರರು ಕಾಲಬದ್ಧ ವೇತನ ಬಡ್ತಿ ಪಡೆಯಲು ಅರ್ಹರಲ್ಲ-- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

SC on Employees promation- ಪದೋನ್ನತಿ ನಿರಾಕರಿಸಿದ ನೌಕರರು ಕಾಲಬದ್ಧ ವೇತನ ಬಡ್ತಿ ಪಡೆಯಲು ಅರ್ಹರಲ್ಲ-- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಪದೋನ್ನತಿ ನಿರಾಕರಿಸಿದ ನೌಕರರು ಕಾಲಬದ್ಧ ವೇತನ ಬಡ್ತಿ ಪಡೆಯಲು ಅರ್ಹರಲ್ಲ-- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು✍ ಪ್ರಕಾಶ್ ನಾಯಕ್, ಶಿರಸ್ತೇದಾರರು, ಜುಡೀಷಿಯಲ್ ಸೆಂಟರ್, ಮಂಗಳೂರು ಕೋರ್ಟ್ ಕಾಂಪ್ಲೆಕ್ಸ್
ಪದೋನ್ನತಿಯನ್ನು ನಿರಾಕರಿಸಿದ ನೌಕರರು ಕಾಲಬದ್ಧ ವೇತನ ಬಡ್ತಿ ಪಡೆಯಲು ಅರ್ಹರಲ್ಲ ಎಂಬುದಾಗಿ ಭಾರತದ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ನ್ಯಾ। ಆರ್. ಸುಭಾಷ್ ರೆಡ್ಡಿ ಮತ್ತು ನ್ಯಾ। ಹೃಷಿಕೇಶ್ ರಾಯ್ ಅವರ ವಿಭಾಗೀಯ ನ್ಯಾಯಪೀಠವು ಭಾರತ ಸರಕಾರ ವಿರುದ್ಧ ಮಂಜು ಅರೋರಾ ಮತ್ತೊಬ್ಬರು - ಈ ಪ್ರಕರಣದಲ್ಲಿ ದಿನಾಂಕ 3.1.2022 ರಂದು ಮಹತ್ವದ ತೀರ್ಪನ್ನು ನೀಡಿದೆ.ಕೇ೦ದ್ರ ಸರಕಾರಿ ನೌಕರರು ಪದೋನ್ನತಿಗೆ ಅರ್ಹತೆ ಹೊಂದಿದ್ದರೂ ಯಾವುದೇ ಪದೋನ್ನತಿ ಇಲ್ಲದೆ ಒಂದೇ ಹುದ್ದೆಯಲ್ಲಿ ನಿರಂತರ 12 ವರ್ಷಗಳ ಸೇವೆ ಸಲ್ಲಿಸಿದಲ್ಲಿ ಅಂತಹ ನೌಕರರಿಗೆ ಮೇಲ್ದರ್ಜೆಗೇರಿಸಿದ ವೇತನ ಶ್ರೇಣಿಯಲ್ಲಿ ಎ.ಸಿ.ಪಿ. ಯೋಜನೆಯಡಿ (ಅಶ್ಯೂರ್ಡ್ ಕ್ಯಾರಿಯರ್ ಪ್ರೊಗ್ರೆಶನ್) ಕಾಲಬದ್ಧ ವೇತನ ಬಡ್ತಿ ನೀಡಲಾಗುವುದು.ಮೊದಲನೆಯ ಕಾಲಬದ್ಧ ವೇತನ ಬಡ್ತಿ ಪಡೆದು ಮತ್ತೆ 12 ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಲ್ಲಿ ಎರಡನೆಯ ಬಾರಿಗೆ ಎ.ಸಿ.ಪಿ.ಯೋಜನೆಯಡಿ ಮೇಲ್ದರ್ಜೆಗೇರಿಸಿದ ವೇತನ ಶ್ರೇಣಿಯಲ್ಲಿ ಎರಡನೆಯ ಕಾಲಬದ್ಧ ವೇತನ ಬಡ್ತಿಯನ್ನು ನೀಡಲಾಗುವುದು.ಶ್ರೀಮತಿ ಮಂಜು ಅರೋರಾ ಮತ್ತು ಶ್ರೀಮತಿ ಸುಮನ್ ಲತಾ ಭಾಟಿಯಾ ಎಂಬಿಬ್ಬರು ಕೇಂದ್ರ ಸರಕಾರದ ಸಂಪರ್ಕ ಇಲಾಖೆಯಲ್ಲಿ ಹಿರಿಯ ಭಾಷಾಂತರಕಾರರು (ಹಿಂದಿ) ಹುದ್ದೆಗೆ ನೇಮಕಾತಿ ಹೊಂದಿದ್ದರು. ಅವರಿಬ್ಬರೂ ಭಾಷಾಂತರ ಅಧಿಕಾರಿ (ಹಿಂದಿ) ಹುದ್ದೆಗೆ ನೀಡಿದ ಬಡ್ತಿಯನ್ನು ತಮ್ಮ ವೈಯಕ್ತಿಕ ಕಾರಣಗಳನ್ನು ನೀಡಿ ನಿರಾಕರಿಸಿದರು. ಆದರೆ ಎ.ಸಿ.ಪಿ ಕಾಲಬದ್ಧ ಬಡ್ತಿ ಯೋಜನೆಯ ಲಾಭವನ್ನು ಸದರಿ ನೌಕರರು ಪಡೆದರು. ಬಡ್ತಿಯನ್ನು ನಿರಾಕರಿಸಿದ ಕಾರಣಕ್ಕಾಗಿ ಅವರಿಗೆ ಸದರಿ ಎ.ಸಿ.ಪಿ. ಯೋಜನೆಯಡಿ ನೀಡಲಾದ ಕಾಲಬದ್ಧ ವೇತನ ಬಡ್ತಿಯ ಆದೇಶವನ್ನು ಹಿಂಪಡೆಯಲಾಯಿತು. ಹಾಗೂ ಆರ್ಥಿಕ ಸೌಲಭ್ಯಗಳನ್ನು ಕಡಿತಗೊಳಿಸಲಾಯಿತು.ಸದರಿ ಆದೇಶದಿ೦ದ ಬಾಧಿತರಾದ ನೌಕರರು ಕೇಂದ್ರೀಯ ಆಡಳಿತ ನ್ಯಾಯ ಮಂಡಳಿಯಲ್ಲಿ (ಸಿ.ಎ.ಟಿ.) ಪ್ರಶ್ನಿಸಿದರು. ಮು೦ಬಡ್ತಿಯನ್ನು ನಿರಾಕರಿಸಿದ ಕಾರಣದಿಂದ ಎ.ಸಿ.ಪಿ. ಯೋಜನೆಯ ಸವಲತ್ತುಗಳನ್ನು ಹಿಂಪಡೆದ ಕ್ರಮ ನಿಯಾಮಾನುಸಾರ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟ ಸಿ.ಎ.ಟಿ. ಅರ್ಜಿದಾರರ ಮೇಲ್ಮನವಿಯನ್ನು ತಿರಸ್ಕರಿಸಿತು .ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಆದೇಶದಿಂದ ಬಾಧಿತರಾದ ನೌಕರರು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ರಿಟ್ ದಾಖಲಿಸಿದರು. ಪ್ರಕರಣದ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ಎ.ಸಿ.ಪಿ. ಯೋಜನೆಯಡಿ ಸರಕಾರದ ಅಧಿಕೃತ ಜ್ಞಾಪನಾಪತ್ರದ ಶತ೯ 5(10) ಅನ್ನು ಉಲ್ಲೇಖಿಸಿ ಮೊದಲನೆಯ ಕಾಲಬದ್ಧ ವೇತನ ಬಡ್ತಿಯನ್ನು ನೀಡಲು ನಿಯಮಾನುಸಾರ ಯಾವುದೇ ತೊಡಕಿಲ್ಲ.ಆದರೆ ಮುಂಬಡ್ತಿ ನಿರಾಕರಿಸಿದ ನೌಕರರಿಗೆ ಎ.ಸಿ.ಪಿ. ಯೋಜನೆಯಡಿಯಲ್ಲಿ ಎರಡನೆಯ ಕಾಲಬದ್ಧ ವೇತನ ಬಡ್ತಿ ನೀಡುವಂತಿಲ್ಲ. ಹಾಗಾಗಿ ಎ.ಸಿ.ಪಿ. ಯೋಜನೆಯಡಿ ನೀಡಲಾಗಿರುವ ಮೊದಲನೆಯ ಕಾಲಬದ್ಧ ವೇತನ ಬಡ್ತಿಯನ್ನು ಹಿಂಪಡೆಯುವ ಆದೇಶ ನಿಯಮಗಳಿಗೆ ವಿರುದ್ಧವಾಗಿದೆ.ಆದರೆ ಎ.ಸಿ.ಪಿ. ಯೋಜನೆಯ ಅಡಿ ಎರಡನೆಯ ಬಾರಿ ಕಾಲಬದ್ಧ ವೇತನ ಬಡ್ತಿ ಪಡೆಯಲು ಸದರಿ ನೌಕರರು ಅರ್ಹರಲ್ಲ ಎಂಬುದಾಗಿ ಅಭಿಪ್ರಾಯಪಟ್ಟು ನೌಕರರಿಗೆ ಎ.ಸಿ.ಪಿ. ಯೋಜನೆಯಡಿ ನೀಡಿದ ವೇತನ ಬಡ್ತಿ ಸೌಲಭ್ಯವನ್ನು ಮರು ಸ್ಥಾಪಿಸಿ ಆರ್ಥಿಕ ಸೌಲಭ್ಯಗಳನ್ನು ಮರಳಿಸಬೇಕೆಂಬ ಆದೇಶ ನೀಡಿತು.ದೆಹಲಿ ಹೈಕೋರ್ಟಿನ ಆದೇಶದಿಂದ ಅಸಮಾಧಾನಗೊಂಡ ಇಲಾಖೆಯು ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತು. ಕಾಲಬದ್ಧ ವೇತನ ಬಡ್ತಿ ನೀಡುವ ಮುಖ್ಯ ಉದ್ದೇಶವೇನೆಂದರೆ ನೌಕರನು ಒಂದೇ ವೇತನ ಶ್ರೇಣಿಯಲ್ಲಿದ್ದರೆ ಆತನ ವೇತನ ಸ್ಥಗಿತಗೊಳ್ಳುವ ಸಾದ್ಯತೆಯಿದೆ. ಇದನ್ನು ತಪ್ಪಿಸಲು ವೇತನ ಶ್ರೇಣಿಯನ್ನು ಮೇಲ್ದರ್ಜೆಗೇರಿಸಿ ಒ೦ದು ವೇತನ ಬಡ್ತಿಯನ್ನು ನೀಡುವುದರ ಮೂಲಕ ಆರ್ಥಿಕ ಲಾಭ ಒದಗಿಸುವುದೇ ಎ.ಸಿ.ಪಿ. ಯೋಜನೆಯ ಉದ್ದೇಶವಾಗಿದೆ.ಆದರೆ ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಪದೋನ್ನತಿಯನ್ನು ನಿರಾಕರಿಸಿದ ನೌಕರರಿಗೆ ವೇತನ ಬಡ್ತಿ ನೀಡುವುದು ಸೇವಾ ನಿಯಮಗಳಡಿ ಊರ್ಜಿತವಲ್ಲ. ವೇತನ ಸ್ಥಗಿತಗೊಳ್ಳುವುದು ಎಂಬ ಕಾರಣಕ್ಕೆ ವೇತನ ಶ್ರೇಣಿಯನ್ನು ಮೇಲ್ದರ್ಜೆಗೇರಿಸಲು ಸೇವಾ ನಿಯಮಗಳಲ್ಲಿ ಅವಕಾಶವಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು ಸರಕಾರದ ಪರವಾಗಿ ಸಲ್ಲಿಸಲಾದ ಮೇಲ್ಮನವಿಯನ್ನು ಪುರಸ್ಕರಿಸಿ ದೆಹಲಿ ಹೈಕೋರ್ಟಿನ ಆದೇಶವನ್ನು ರದ್ದುಪಡಿಸಿತು.(✍ ಪ್ರಕಾಶ್ ನಾಯಕ್, ಶಿರಸ್ತೇದಾರರು, ಜುಡೀಷಿಯಲ್ ಸೆಂಟರ್, ಮಂಗಳೂರು ಕೋರ್ಟ್ ಕಾಂಪ್ಲೆಕ್ಸ್)


ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಕಾಲಬದ್ಧ ವೇತನ ಬಡ್ತಿ ಸೌಲಭ್ಯ ಗಳು


1) ಪದೋನ್ನತಿಗೆ ಅರ್ಹತೆ ಹೊಂದಿದ್ದು ಹತ್ತು ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ನಿರಂತರ ಸೇವೆ ಸಲ್ಲಿಸಿದ್ದರು ಕೂಡಾ ಪದೋನ್ನತಿ ದೊರಕದೇ ಇರುವ ರಾಜ್ಯದ ಸರಕಾರಿ ನೌಕರರಿಗೆ ಆಯ್ಕೆ ಕಾಲಿಕ ವೇತನ ಶ್ರೇಣಿಯಲ್ಲಿ ಕಾಲಬದ್ಧ ವೇತನ ಬಡ್ತಿಯನ್ನು ನೀಡಲಾಗುವುದು.


2) ಒಂದೇ ಹುದ್ದೆಯಲ್ಲಿ ಹದಿನೈದು ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದ್ದಲ್ಲಿ ಹಿರಿಯ ವೇತನ ಶ್ರೇಣಿಯಲ್ಲಿ ಸ್ವಯಂಚಾಲಿತ ವೇತನ ಬಡ್ತಿಯನ್ನು ನೀಡಲಾಗುವುದು.3) ತಮ್ಮ ಸೇವಾ ಜೀವನದಲ್ಲಿ ಯಾವುದೇ ಪದೋನ್ನತಿ ಪಡೆಯದೆ ಒಂದೇ ಹುದ್ದೆಯಲ್ಲಿ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಲ್ಲಿ ಹಿರಿಯ ವೇತನ ಶ್ರೇಣಿಯಲ್ಲಿ ವಿಶೇಷ ವೇತನ ಬಡ್ತಿಯನ್ನು ನೀಡಲಾಗುವುದು.4) ತಮ್ಮ ಸೇವಾ ಜೀವನದಲ್ಲಿ ಯಾವುದೇ ಪದೋನ್ನತಿಯನ್ನು ಪಡೆಯದೆ ಒಂದೇ ಹುದ್ದೆಯಲ್ಲಿ ಇಪ್ಪತ್ತೈದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನೌಕರರಿಗೆ ಹಿರಿಯ ವೇತನ ಶ್ರೇಣಿಯಲ್ಲಿ ವಿಶೇಷ ವೇತನ ಬಡ್ತಿಯನ್ನು ನೀಡಲಾಗುವುದು.5) ತಮ್ಮ ಸೇವಾ ಜೀವನದಲ್ಲಿ ಯಾವುದೇ ಪದೋನ್ನತಿಯನ್ನು ಪಡೆಯದೆ ಒಂದೇ ಹುದ್ದೆಯಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಲ್ಲಿ ಹಿರಿಯ ವೇತನ ಶ್ರೇಣಿಯಲ್ಲಿ ವಿಶೇಷ ವೇತನ ಬಡ್ತಿಯನ್ನು ನೀಡಲಾಗುವುದು.ಈ ಎಲ್ಲ ವೇತನ ಬಡ್ತಿಗಳನ್ನು ಸೇವಾ ಜೀವನದಲ್ಲಿ ಒ೦ದು ಬಾರಿ ಮಾತ್ರ ಪಡೆಯಬಹುದು. ಆದರೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದೆ ಮುಂಬಡ್ತಿಗೆ ಅನರ್ಹರಾದ ಅಥವಾ ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಅಥವಾ ಮುಂಬಡ್ತಿ ಹುದ್ದೆಯನ್ನು ನಿಭಾಯಿಸಲು ತಾನು ಅಸಮರ್ಥನೆಂದು ಭಯದಿಂದ ಮುಂಬಡ್ತಿಯನ್ನು ನಿರಾಕರಿಸಿದ ನೌಕರರಿಗೆ ಮೇಲ್ಕಾಣಿಸಿದ ಕಾಲಬದ್ಧ ವೇತನ ಬಡ್ತಿಯನ್ನು ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ. ಕೆಲವು ಹುದ್ದೆಗಳಲ್ಲಿ ಸೇವಾ ಜೇಷ್ಠತೆಯ ಆಧಾರದಲ್ಲಿ ಮುಂಬಡ್ತಿಯನ್ನು ನೀಡಲಾಗುತ್ತದೆ. ಕೆಲವು ಹುದ್ದೆಗಳಲ್ಲಿ ಅರ್ಹತಾ ಪರೀಕ್ಷೆಗಳನ್ನು ನಡೆಸಿ ಉತ್ತೀರ್ಣನಾದ ನೌಕರರಿಗೆ ಮಾತ್ರ ಪದೋನ್ನತಿಯನ್ನು ನೀಡಲಾಗುವುದು.ಸೇವಾ ಜೇಷ್ಠತೆ ಆಧಾರದಲ್ಲಿ ಪದೋನ್ನತಿ ನೀಡಿದಾಗ ಅದನ್ನು ನಿರಾಕರಿಸಿದವರಿಗೆ ಕಾಲಬದ್ಧ ವೇತನ ಬಡ್ತಿ ಲಭ್ಯವಾಗದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಪದೋನ್ನತಿ ಪಡೆಯಲು ಅರ್ಹತಾ ಪರೀಕ್ಷೆಗಳನ್ನು ಎದುರಿಸಬೇಕಾದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಅರ್ಹತಾ ಪರೀಕ್ಷೆಗೆ ಹಾಜರಾಗದಿದ್ದಲ್ಲಿ ಅಂತಹ ನೌಕರರು ಕಾಲಬದ್ಧ ವೇತನ ಬಡ್ತಿ ಸೌಲಭ್ಯಕ್ಕೆ ಅರ್ಹರೇ ಎಂಬ ಕುರಿತಾದ ವಿವಾದವನ್ನು ಸಾಂವಿಧಾನಿಕ ನ್ಯಾಯಾಲಯಗಳು ಇನ್ನಷ್ಟೇ ಇತ್ಯರ್ಥಪಡಿಸಬೇಕಾಗಿದೆ.
Ads on article

Advertise in articles 1

advertising articles 2

Advertise under the article