-->
ಭೂಸ್ವಾಧೀನ ಪ್ರಕರಣ: ಆರ್ಬಿಟ್ರೇಷನ್ ಅವಾರ್ಡ್‌ ಮೇಲೆ ಸ್ಟ್ಯಾಂಪ್ ಡ್ಯೂಟಿ ಪಾವತಿಸಬೇಕೆ..?- ಹೈಕೋರ್ಟ್ ತೀರ್ಪು

ಭೂಸ್ವಾಧೀನ ಪ್ರಕರಣ: ಆರ್ಬಿಟ್ರೇಷನ್ ಅವಾರ್ಡ್‌ ಮೇಲೆ ಸ್ಟ್ಯಾಂಪ್ ಡ್ಯೂಟಿ ಪಾವತಿಸಬೇಕೆ..?- ಹೈಕೋರ್ಟ್ ತೀರ್ಪು

ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ಹೊರಡಿಸಲಾದ ಆರ್ಬಿಟ್ರೇಷನ್ ಅವಾರ್ಡ್ ಮೇಲೆ ಕರ್ನಾಟಕ ಸ್ಟ್ಯಾಂಪ್ ಆಕ್ಟ್ ಪ್ರಕಾರ ಸ್ಟ್ಯಾಂಪ್ ಡ್ಯೂಟಿ ಪಾವತಿಸಬೇಕಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಕರ್ನಾಟಕ ಸ್ಟ್ಯಾಂಪ್ ಆಕ್ಟ್ ನ ಆರ್ಟಿಕಲ್ 11ನೇ ಪ್ರಕಾರ ಯಾವುದೇ ಆರ್ಬಿಟ್ರೇಷನ್ ಅವಾರ್ಡ್ ನ ಮೊತ್ತದ ಮೇಲೆ 0.75% ಮುದ್ರಾಂಕ ಶುಲ್ಕ ಪಾವತಿಸತಕ್ಕದ್ದು. ಆದರೆ ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ಹೊರಡಿಸಲಾದ ಆರ್ಬಿಟ್ರೇಷನ್ ಅವಾರ್ಡ್ ಗೆ ಸದರಿ ನಿಯಮವನ್ನು ಅನ್ವಯಿಸುವಂತಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಶಾಲಿನಿ ಮತ್ತೊಬ್ಬರು ವಿರುದ್ಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತಿತರರು ಈ ಪ್ರಕರಣದಲ್ಲಿ ದಿನಾಂಕ 28.2.2022 ರಂದು ಮಹತ್ವದ ತೀರ್ಪು ನೀಡಿದೆ.


ಕರ್ನಾಟಕ ಹೈಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ನ್ಯಾಯ ಪೀಠವು ರಾಷ್ಟ್ರೀಯ ಹೆದ್ದಾರಿ ಕಾಯಿದೆ ಸೆಕ್ಷನ್ 3 (G) ಅಡಿಯಲ್ಲಿ ಹೊರಡಿಸಲಾದ ಮಧ್ಯಸ್ಥಿಕೆ ಐತೀರ್ಪನ್ನು (Arbitration Award) ಕರ್ನಾಟಕ ಮುದ್ರಾಂಕ ಶುಲ್ಕ ಕಾಯ್ದೆಯ ವಿಧಿ 11 ರಡಿ ಮುದ್ರಾಂಕ ಶುಲ್ಕ ಅನ್ವಯವಾಗುವ ಮದ್ಯಸ್ತಿಕೆ ತೀರ್ಪು ಎಂಬುದಾಗಿ ಪರಿಗಣಿಸಲಾಗುವುದಿಲ್ಲ ಹಾಗೂ ಸದರಿ ಅವಾರ್ಡ್ ಮೇಲೆ ಮುದ್ರಾಂಕ ಶುಲ್ಕ ಪಾವತಿಸುವ ಬದ್ಧತೆ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.


ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.


ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಅಡಿ ಸ್ವಾಧೀನ ಪಡಿಸಿಕೊಂಡ ತಮ್ಮ ಜಮೀನಿಗೆ ಭೂ ಸ್ವಾಧೀನ ಅಧಿಕಾರಿಯವರು ನೀಡಿದ ಪರಿಹಾರ ಮೊತ್ತದ ಬಗ್ಗೆ ಅಸಮಾಧಾನಗೊಂಡ ಭೂ ಮಾಲೀಕರು ಹೆಚ್ಚುವರಿ ಪರಿಹಾರ ಕೋರಿ ರಾಷ್ಟ್ರೀಯ ಹೆದ್ದಾರಿ ಕಾಯಿದೆ 1956 ರ ಸೆಕ್ಷನ್ 3(ಜಿ) ಪ್ರಕಾರ ಮಧ್ಯಸ್ಥಿಕೆ ಐತೀರ್ಪು ಕೋರಿ ಮಧ್ಯಸ್ಥಿಕೆಗಾಗಿ ಧಾರವಾಡದ ಜಿಲ್ಲಾಧಿಕಾರಿಗಳು ಹಾಗೂ ಮದ್ಯಸ್ತಿಕೆದಾರರ ಸಮಕ್ಷಮ ಹಕ್ಕೊತ್ತಾಯ (claim) ಸಲ್ಲಿಸಿದರು. ವಿಚಾರಣೆ ನಡೆಸಿದ ಮಧ್ಯಸ್ಥಿಕೆದಾರರು (Arbitrator) ಪ್ರತಿ ಚದರ ಮೀಟರ್ ಗೆ 14,186 ಪರಿಹಾರವನ್ನು 9 ಶೇಕಡ ಬಡ್ಡಿಯೊಂದಿಗೆ ಪಾವತಿಸುವಂತೆ ಐತೀರ್ಪನ್ನು ಹೊರಡಿಸಿದ್ದರು.


ಆರ್ಬಿಟೇಶನ್ ಅವಾರ್ಡ್ ನಲ್ಲಿ ಘೋಷಿಸಲಾದ ಪರಿಹಾರ ಮೊತ್ತವನ್ನು ಪಾವತಿಸದ ಕಾರಣ ಭೂಮಾಲೀಕರು ಧಾರವಾಡದ ಪ್ರಧಾನ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಅಮಲ್ಜಾರಿ ಅರ್ಜಿ ಸಂಖ್ಯೆ 302/2015 ದಾಖಲಿಸಿದರು. ಸದರಿ ಪ್ರಕರಣದಲ್ಲಿ ತೀರ್ಪುಋಣಿಯಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರವಾಗಿ ಆರ್ಬಿಟ್ರೇಷನ್ ಅವಾರ್ಡ್ ಮೇಲೆ ನಿಯಮಾನುಸಾರ ಪಾವತಿಸತಕ್ಕ ಮುದ್ರಾಂಕ ಶುಲ್ಕ ಪಾವತಿಸಿಲ್ಲ ಎಂಬ ಅಕ್ಷೇಪಣೆ ಎತ್ತಲಾಯಿತು. ಕರ್ನಾಟಕ ಸ್ಟ್ಯಾಂಪ್ ಆಕ್ಟ್ ನ ಆರ್ಟಿಕಲ್ 11ರಡಿ ಆರ್ಬಿಟೇಶನ್ ಅವಾರ್ಡ್ ಮೇಲೆ 0.75 ಶೇಕಡಾ ಸ್ಟ್ಯಾಂಪ್ ಡ್ಯೂಟಿ ಪಾವತಿಸತಕ್ಕದ್ದಾಗಿದೆ. ಆದರೆ ಅಮಲ್ಜಾರಿ ಅರ್ಜಿಯ ಜೊತೆ ಹಾಜರುಪಡಿಸಲಾದ ಆರ್ಬಿಟ್ರೇಷನ್ ಅವಾರ್ಡ್ ಮೇಲೆ ಸ್ಟ್ಯಾಂಪ್ ಡ್ಯೂಟಿ ಪಾವತಿಸಿರುವುದು ಕಂಡುಬರುವುದಿಲ್ಲ. ಆದುದರಿಂದ ಅಮಲ್ಜಾರಿ ಅರ್ಜಿ ಕಾನೂನಿನಡಿ ಊರ್ಜಿತವಲ್ಲ ಎಂಬ ತೀರ್ಪು ಋಣಿ (Judgement Debtor) ಪರ ಮಂಡಿಸಿದ ವಾದವನ್ನು ಆಲಿಸಿದ ಧಾರವಾಡದ ಪ್ರಧಾನ ಜಿಲ್ಲಾ ನ್ಯಾಯಾಲಯವು ಕರ್ನಾಟಕ ಸ್ಟ್ಯಾಂಪ್ ಆಕ್ಟ್ ನ ವಿಧಿ 11ರಡಿ ನಿಗದಿತ ಮುದ್ರಾಂಕ ಶುಲ್ಕವನ್ನು ಒಂದು ತಿಂಗಳೊಳಗೆ ಪಾವತಿಸುವಂತೆ ಡಿಕ್ರಿದಾರರಿಗೆ ನಿರ್ದೇಶಿಸಿ ದಿನಾಂಕ 22.12.2020 ರಂದು ಆದೇಶ ಹೊರಡಿಸಿತು.


ಧಾರವಾಡ ಜಿಲ್ಲಾ ನ್ಯಾಯಾಲಯದ ಆದೇಶದಿಂದ ಭಾದಿತರಾದ ಡಿಕ್ರಿದಾರರು ಮಾನ್ಯ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಂಖ್ಯೆ 100591/2021 ಅನ್ನು ದಾಖಲಿಸಿದರು.


ರಿಟ್ ಅರ್ಜಿದಾರರ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು.


ಭೂಸ್ವಾಧೀನ ಪರಿಹಾರದ ಮೊತ್ತ ಕಡಿಮೆಯಾಗಿದೆ ಎಂಬ ಕಾರಣಕ್ಕಾಗಿ ಅರ್ಜಿದಾರರು ರಾಷ್ಟ್ರೀಯ ಹೆದ್ದಾರಿ ಕಾಯಿದೆ 1956 ರ ಸೆಕ್ಷನ್ 3(G)(5) ಪ್ರಕಾರ ಶಾಸನಾತ್ಮಕ ಆದೇಶದಡಿ ಸ್ಥಾಪನೆಗೊಂಡ ಮಧ್ಯಸ್ಥಿಕೆದಾರರ ಮೊರೆ ಹೋಗಿದ್ದು ಸದರಿ ಮಧ್ಯಸ್ಥಿಕೆ ಯಾವುದೇ ಖಾಸಗಿ ಮಧ್ಯಸ್ಥಿಕೆ ಆಗಿರುವುದಿಲ್ಲ. ಮಧ್ಯಸ್ಥಿಕೆದಾರರ ನೇಮಕಾತಿ ಶಾಸನಾತ್ಮಕವಾಗಿದ್ದು ಅರ್ಜಿದಾರರ ಒಪ್ಪಿಗೆಗೆ ಒಳಪಟ್ಟಿಲ್ಲ. ಆದುದರಿಂದ ಆರ್ಬಿಟೇಶನ್ ಮತ್ತು ಕನ್ಸಿಲಿಯೇಶನ್ ಕಾಯ್ದೆ 1996ರ ನಿಯಮ 7ನ್ನು ಈ ಮಧ್ಯಸ್ಥಿಕೆಗೆ ಅನ್ವಯಿಸುವಂತಿಲ್ಲ. ಕರ್ನಾಟಕ ಮುದ್ರಾಂಕ ಕಾಯ್ದೆ ವಿಧಿ 11 ರಡಿ ಇದು ಮಧ್ಯಸ್ಥಿಕೆ ಐತೀರ್ಪು ಎಂದೆನಿಸಿಕೊಳ್ಳುವುದಿಲ್ಲ. ಮಧ್ಯಸ್ಥಿಕೆದಾರರು ಶಾಸನ ವಿಧಿಸಿದ ಕರ್ತವ್ಯವನ್ನು ನಿರ್ವಹಿಸುವುದರಿಂದ ಮುದ್ರಾಂಕ ಶುಲ್ಕ ಪಾವತಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಆದುದರಿಂದ ಮುದ್ರಾಂಕ ಶುಲ್ಕ ಪಾವತಿಸುವಂತೆ ಅರ್ಜಿದಾರರಿಗೆ ಅಮಲ್ಜಾರಿ ನ್ಯಾಯಾಲಯವು ನಿರ್ದೇಶಿಸಿರುವುದು ಕಾನೂನಿನಡಿ ಊರ್ಜಿತವಲ್ಲ.


ಪ್ರತ್ಯರ್ಜಿದಾರಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ಈ ಕೆಳಗಿನ ವಾದ ಮಂಡಿಸಲಾಯಿತು.


ಯಾವುದೇ ಮಧ್ಯಸ್ಥಿಕೆ ಐತೀರ್ಪಿನ ಮೇಲೆ ಮುದ್ರಾಂಕ ಶುಲ್ಕ ಪಾವತಿಸದಿದ್ದರೆ ಸದರಿ ಅವಾರ್ಡನ್ನು ಅಮಲ್ಜಾರಿಗೊಳಿಸುವಂತಿಲ್ಲ. ಅಮಲ್ಜಾರಿ ನ್ಯಾಯಾಲಯವು ಸದರಿ ಅವಾರ್ಡಿನ ಮೇಲೆ ಕೊರತೆ ಮುದ್ರಾಂಕ ಶುಲ್ಕ ಪಾವತಿಗಾಗಿ ನಿಯಮಾನಸಾರ ಕ್ರಮ ಕೈಗೊಳ್ಳತಕ್ಕದ್ದು. ಕೇವಲ ಮುದ್ರಾಂಕ ಶುಲ್ಕ ಪಾವತಿಸುವಂತೆ ನೀಡಿರುವ ಆದೇಶ ನಿಯಮಾನುಸಾರ ಸರಿಯಲ್ಲ. ಜುಲ್ಮಾನೆ (penalty) ಕೂಡ ವಸೂಲಿ ಮಾಡತಕ್ಕದ್ದಾಗಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರವಾಗಿ ಪ್ರತ್ಯೇಕವಾಗಿ ರಿಟ್ ಅರ್ಜಿ ಸಂಖ್ಯೆ 104799/2021 ಅನ್ನು ದಾಖಲಿಸಲಾಗಿದೆ.


ಕೇಂದ್ರ ಸರಕಾರದ ಪರವಾಗಿ ಹಾಜರಾದ ಪ್ರಾಜ್ಞ ವಕೀಲರು ಪ್ರಕರಣವು ರಿಟ್ ಅರ್ಜಿದಾರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಪಟ್ಟಿರುವುದರಿಂದ ಕೇಂದ್ರ ಸರ್ಕಾರದ ಪರವಾಗಿ ತಮ್ಮ ವಾದ ಮಂಡನೆ ಇಲ್ಲ ಎಂಬುದಾಗಿ ನ್ಯಾಯಾಲಯಕ್ಕೆ ನಿವೇದಿಸಿದರು.


ಉಭಯ ಪಕ್ಷಕಾರ ವಾದವನ್ನು ಆಲಿಸಿದ ಹೈಕೋರ್ಟ್ ಈ ಕೆಳಗಿನ ಅಭಿಪ್ರಾಯವನ್ನು ವ್ಯಕ್ತಪಡಿಸಿತು.


ಈ ಪ್ರಕರಣದಲ್ಲಿ ಇತ್ಯರ್ಥಪಡಿಸಬೇಕಾದ ಮುಖ್ಯ ಅಂಶವೇನೆಂದರೆ, ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956ರ ಸೆಕ್ಷನ್ 3 (ಜಿ) ಅಡಿ ಹೊರಡಿಸಲಾದ ಮಧ್ಯಸ್ಥಿಕೆ ಐತೀರ್ಪುಗಳನ್ನು ಕರ್ನಾಟಕ ಮುದ್ರಾಂಕ ಶುಲ್ಕ ಕಾಯ್ದೆಯ ವಿಧಿ 11 ರಡಿ ಮುದ್ರಾಂಕ ಶುಲ್ಕ ಪಾವತಿಸತಕ್ಕ ಮಧ್ಯಸ್ಥಿಕೆ ಐತೀರ್ಪು ಎಂಬುದಾಗಿ ಪರಿಗಣಿಸಬಹುದೇ?


ರಾಷ್ಟ್ರೀಯ ಹೆದ್ದಾರಿ ಕಾಯಿದೆ 1956ರ ಸೆಕ್ಷನ್ 3(ಜಿ)(5) ರಡಿ ಕೇಂದ್ರ ಸರಕಾರವು ಮಧ್ಯಸ್ಥಿಕೆ ದಾರರನ್ನು ನೇಮಿಸಿದ್ದು ಸದರಿ ಮಧ್ಯಸ್ಥಿಕೆದಾರರನ್ನು ಆಯ್ಕೆ ಮಾಡುವಲ್ಲಿ ಅರ್ಜಿದಾರರ ಯಾವುದೇ ಪಾತ್ರ ಇಲ್ಲ. ರಾಜ್ಯ ಸರಕಾರವು ಭೂಮಿಯನ್ನು ಕಳೆದುಕೊಂಡ ಸಂತ್ರಸ್ತರಿಗೆ ನೀಡುವ ಪರಿಹಾರ ಧನದ ಮೇಲೆ ಸ್ಟ್ಯಾಂಪ್ ಡ್ಯೂಟಿ ಪಾವತಿ ಮಾಡುವಂತೆ ಆದೇಶಿಸುವುದು ಪರಿಹಾರ ಧನವನ್ನು ಕಡಿತಗೊಳಿಸಿ ಭೂ ಸಂತ್ರಸ್ತರಿಗೆ ಹೆಚ್ಚುವರಿ ಹೊರೆ ಹೊರೆಸಿದಂತೆ ಆಗುವುದು. 


ರಾಷ್ಟ್ರೀಯ ಹೆದ್ದಾರಿ ಕಾಯಿದೆ ಸೆಕ್ಷನ್ 3G(5)(6)(7) ಪರಿಹಾರ ಮೊತ್ತವನ್ನು ಶೀಘ್ರವಾಗಿ ನಿರ್ಧರಿಸಿ ಭೂಸಂತ್ರಸ್ತರಿಗೆ ವಿತರಿಸುವ ಪ್ರಕ್ರಿಯೆಗಳಿಗೆ ಸಂಬಂಧಪಟ್ಟದ್ದಾಗಿದೆ. ಆದುದರಿಂದ ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956 ರ ಸೆಕ್ಷನ್ 3(ಜಿ) ಅಡಿ ಹೊರಡಿಸಲಾದ ಮಧ್ಯಸ್ಥಿಕೆ ತೀರ್ಪುಗಳನ್ನು ಕರ್ನಾಟಕ ಸ್ಟ್ಯಾಂಪ್ ಕಾಯ್ದೆಯ ವಿಧಿ 11 ರಡಿ ಮುದ್ರಾಂಕ ಶುಲ್ಕ ಅನ್ವಯವಾಗುವ ಮಧ್ಯಸ್ತಿಕೆ ಐತೀರ್ಪು ಎಂಬುದಾಗಿ ಪರಿಗಣಿಸಲಾಗುವುದಿಲ್ಲ ಎಂಬ ಅಭಿಪ್ರಾಯದೊಂದಿಗೆ ರಿಟ್ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿತು. ಧಾರವಾಡದ ಪ್ರಧಾನ ಜಿಲ್ಲಾ ನ್ಯಾಯಾಲಯವು ಅಮಲ್ಜಾರಿ ಅರ್ಜಿಯಲ್ಲಿ ಆರ್ಬಿಟೇಶನ್ ಅವಾರ್ಡ್ ಮೇಲೆ ಸ್ಟ್ಯಾಂಪ್ ಡ್ಯೂಟಿ ಪಾವತಿಸುವಂತೆ ಡಿಕ್ರಿದಾರರಿಗೆ/ರಿಟ್ ಅರ್ಜಿದಾರಿಗೆ ನಿರ್ದೇಶಿಸಿದ ಆದೇಶವನ್ನು ರದ್ದುಪಡಿಸಿತು.


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ
Ads on article

Advertise in articles 1

advertising articles 2

Advertise under the article