-->
ಗಂಭೀರ ಪ್ರಕರಣ: ದೂರು ನೀಡಿದ ತಕ್ಷಣ FIR ದಾಖಲಿಸಿ- ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ

ಗಂಭೀರ ಪ್ರಕರಣ: ದೂರು ನೀಡಿದ ತಕ್ಷಣ FIR ದಾಖಲಿಸಿ- ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ

ಗಂಭೀರ ಪ್ರಕರಣ: ದೂರು ನೀಡಿದ ತಕ್ಷಣ FIR ದಾಖಲಿಸಿ- ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ

ಲಲಿತಾಕುಮಾರಿ Vs ಉತ್ತರ ಪ್ರದೇಶ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪನ್ನು ರಾಜ್ಯದ ಪ್ರತಿ ಪೊಲೀಸ್ ಠಾಣೆಗೂ ಕಳಿಸಿಕೊಡಬೇಕು. ಗಂಭೀರ ಪ್ರಕರಣದಲ್ಲಿ ದೂರು ದಾಖಲಾದ ಕೂಡಲೇ ಪೊಲೀಸರು FIR ದಾಖಲಿಸಬೇಕು. ಹಾಗೆ ಮಾಡದಿದ್ದರೆ ಅದು ಕರ್ತವ್ಯ ಲೋಪಕ್ಕೆ ಸಮನಾದದ್ದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ವಿಜಯಪುರದ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ರೈತ ವಿಠಲ್ ನೀಡಿದ್ದ ದೂರನ್ನು ದಾಖಲಿಸಿಕೊಳ್ಳದ ಬಗ್ಗೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ


2022ರ ನವೆಂಬರ್‌ 18ರಂದು ಈ ಘಟನೆ ನಡೆದಿದೆ. ಪ್ರಕರಣ ಹೈಕೋರ್ಟ್ ಮೆಟ್ಟಿಲೇರುವ ವರೆಗೂ ಎಫ್‌ಐಆರ್ ದಾಖಲಿಸದಿರುವುದು ಪೊಲೀಸರ ಗಂಭೀರ ಕರ್ತವ್ಯ ಲೋಪವಾಗಿದೆ. ಈ ಕೂಡಲೇ ಎಫ್‌ಐಆರ್ ದಾಖಲಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿತು. ಜೊತೆಗೆ, ಆಗಸ್ಟ್ 26ರಂದು ಈ ಪ್ರಕರಣದ ತನಿಖೆಯ ಸಮಗ್ರ ವರದಿ ಮತ್ತು ಆದೇಶದ ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.


ಗಂಭೀರ ಸ್ವರೂಪದ ಅಪರಾಧದ ದೂರುಗಳು ಬಂದಾಗ ಪ್ರಾಥಮಿಕ ತನಿಖೆ ನಡೆಸುವ ಅಗತ್ಯವಿಲ್ಲ. ಏಳು ದಿನಗಳ ಒಳಗಾಗಿ ಪ್ರಾಥಮಿಕ ತನಿಖೆ ಮುಕ್ತಾಯಗೊಳಿಸಬೇಕು ಮತ್ತು ಈ ಸಂಬಂಧ ಪೊಲೀಸ್ ಠಾಣೆಯ ಡೈರಿಯಲ್ಲಿ ಸಂಪೂರ್ಣ ಮಾಹಿತಿಯನ್ನು ಉಲ್ಲೇಖಿಸಬೇಕು ಎಂದು ನ್ಯಾಯಪೀಠ ಮಾರ್ಗಸೂಚಿ ನೀಡಿದೆ.ಗಂಭೀರ ಸ್ವರೂಪದ ಅರೋಪಗಳಿಗೆ ಸಂಬಂಧಿಸಿದ ದೂರುಗಳು ಬಂದಾಗ ಪೊಲೀಸರು ಎಫ್‌ಐಆರ್ ದಾಖಲಿಸದೇ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ನೊಂದುಕೊಂಡು ಬಾಧಿತರು ನ್ಯಾಯಾಲಯಕ್ಕೆ ಬರುವ ಪ್ರಸಂಗಗಳು ಹೆಚ್ಚುತ್ತಿದೆ. ಈ ಬಗ್ಗೆ ಪೊಲೀಸರಿಗೆ ಸುಪ್ರೀಂ ಕೋರ್ಟ್ ಲಲಿತಾಕುಮಾರಿ Vs ಉತ್ತರ ಪ್ರದೇಶ ಪ್ರಕರಣದಲ್ಲಿ ನೀಡಿದ ತೀರ್ಪಿನ ಪ್ಯಾರ ನಂ. 120ರಲ್ಲಿ ನೀಡಿದ ಮಾರ್ಗಸೂಚಿಯನ್ನು ಪ್ರತಿ ಠಾಣೆಗೆ ತಲುಪುವಂತೆ ಮಾಡಬೇಕು ಎಂದು ಡಿಜಿಪಿಗೆ ಆದೇಶ ನೀಡಿದೆ. ಇದನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಒದಗಿಸುವಂತೆ ಸ್ಪಷ್ಟಪಡಿಸಲಾಗಿದೆ.ಲಲಿತಾ ಕುಮಾರ್ ಪ್ರಕರಣದ ತೀರ್ಪಿನ ಸಾರಾಂಶ

ಪ್ರಕರಣ ಸಂಜ್ಞೇಯ ಅಪರಾಧ ಎಂದು ತಿಳಿಯುತ್ತಿದ್ದಂತೆಯೇ ಯಾವುದೇ ಪ್ರಾಥಮಿಕ ತನಿಖೆ ನಡೆಸದೆ ತಕ್ಷಣ ಎಫ್‌ಐಆರ್ ದಾಖಲಿಸಬೇಕು.

ಸ್ವೀಕರಿಸಿದ ದೂರಿನ ಮಾಹಿತಿಯ ಪ್ರಕಾರ ಸಂಜ್ಞೇಯವಲ್ಲ ಎಂದು ತಿಳಿದುಬಂದಲ್ಲಿ ಅದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಮಾತ್ರ ಪ್ರಾಥಮಿಕ ತನಿಖೆ ನಡೆಸಬೇಕು.

ಪ್ರಕರಣ ಸಂಜ್ಞೇಯ ಎಂದು ಗೊತ್ತಾದರೆ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು.

ಒಂದು ವೇಳೆ, ಪ್ರಾಥಮಿಕ ವಿಚಾರಣೆಯ ಬಳಿಕ ದೂರನ್ನು ಮುಕ್ತಾಯ ಮಾಡುವಂತಿದ್ದರೆ ದೂರುದಾರರಿಗೆ ಒಂದು ವಾರದ ಒಳಗೆ ಮಾಹಿತಿ ನೀಡಬೇಕು. ಅಲ್ಲದೆ ದೂರನ್ನು ಮುಕ್ತಾಯಗೊಳಿಸುತ್ತಿರುವ ಬಗ್ಗೆ ಸಂಕ್ಷಿಪ್ತ ಕಾರಣಗಳನ್ನು ಒದಗಿಸಬೇಕು.

ಸಂಜ್ಞೇಯ ಅಪರಾಧದ ಪ್ರಕರಣ ಎಂದು ತಿಳಿದ ತಕ್ಷಣವೇ ಎಫ್‌ಐಆರ್ ದಾಖಲಿಸುವುದು ಠಾಣಾ ಮುಖ್ಯಸ್ಥರ ಕರ್ತವ್ಯ.


ಒಂದು ವೇಳೆ, ಸಂಜ್ಞೇಯ ಅಪರಾಧ ಎಂದು ಗೊತ್ತಿದ್ದರೂ ದೂರು ದಾಖಲಿಸದಿದ್ದರೆ ಅಂತಹ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.


ಪ್ರಾಥಮಿಕ ತನಿಖೆ ನಡೆಸುವುದಾದಲ್ಲಿ ಕೇವಲ ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಲ್ಲ. ಬದಲಿಗೆ ಸಲ್ಲಿಸಿರುವ ದೂರಿನಲ್ಲಿ ಸಂಜ್ಞೇಯ ಅಪರಾಧ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಮಾತ್ರ ತನಿಖೆ ನಡಸಬೇಕು.


ಯಾವೆಲ್ಲ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ನಡೆಸಬೇಕು...:

# ಕೌಟುಂಬಿಕ ವ್ಯಾಜ್ಯಗಳು

# ವಾಣಿಜ್ಯ ಅಪರಾಧಗಳು

# ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಗಳು

# ಭ್ರಷ್ಟಾಚಾರದ ಆರೋಪದ ಪ್ರಕರಣಗಳು

# ಮೂರು ತಿಂಗಳು ವಿಳಂಬವಾಗಿರುವ ಕ್ರಿಮಿನಲ್ ಪ್ರಕರಣಗಳು


ಆರೋಪಿ ಹಾಗೂ ದೂರುದಾರರ ಹಕ್ಕುಗಳ ರಕ್ಷಣೆ ಖಾತ್ರಿಪಡಿಸುವ ಸಂದರ್ಭದಲ್ಲಿ ಮಾತ್ರ ಪ್ರಾಥಮಿಕ ವಿಚಾರಣೆ ನಡೆಸಬಹುದು. ಅದು ಏಳು ದಿನಗಳನ್ನು ಮೀರಬಾರದು.


ವಿಳಂಬವಾದಲ್ಲಿ ಅದಕ್ಕೆ ಸೂಕ್ತ ಕಾರಣಗಳನ್ನು ಠಾಣಾ ಡೈರಿಯಲ್ಲಿ ನಮೂದಿಸಬೇಕು.


ಠಾಣಾ ಡೈರಿಯು ದೂರು ಸ್ವೀಕಾರದ ಮಾಹಿತಿಯ ದಾಖಲೆಯಾಗಿದ್ದು, ಎಫ್‌ಐಆರ್ ನೋಂದಣಿ, ತನಿಖೆಗೆ ಅಗತ್ಯವಿರುವ ಸಂಜ್ಞೇಯ ಅಪರಾಧಗಳ ಕುರಿತ ಸಂಪೂರ್ಣ ಮಾಹಿತಿ ಒದಗಿಸಬೇಕು. ಜೊತೆಗೆ ಪ್ರಾಥಮಿಕ ವಿಚಾರಣೆ ನಡೆಸುವ ಪೊಲೀಸರ ನಿರ್ಧಾರವನ್ನೂ ಸಹ ದಾಖಲಿಸಿರಬೇಕು...Ads on article

Advertise in articles 1

advertising articles 2

Advertise under the article