-->
A1 died before framing charge- ಭ್ರಷ್ಟಾಚಾರ ಆರೋಪ: ಪತಿ ಮೃತಪಟ್ಟರೆ ಸಹ ಆರೋಪಿ ಪತ್ನಿ ವಿರುದ್ಧ ಪ್ರಕರಣ ಮುಂದುವರಿಯುತ್ತದೆ- ಕರ್ನಾಟಕ ಹೈಕೋರ್ಟ್

A1 died before framing charge- ಭ್ರಷ್ಟಾಚಾರ ಆರೋಪ: ಪತಿ ಮೃತಪಟ್ಟರೆ ಸಹ ಆರೋಪಿ ಪತ್ನಿ ವಿರುದ್ಧ ಪ್ರಕರಣ ಮುಂದುವರಿಯುತ್ತದೆ- ಕರ್ನಾಟಕ ಹೈಕೋರ್ಟ್

ಭ್ರಷ್ಟಾಚಾರ ಆರೋಪ: ಪತಿ ಮೃತಪಟ್ಟರೆ ಸಹ ಆರೋಪಿ ಪತ್ನಿ ವಿರುದ್ಧ ಪ್ರಕರಣ ಮುಂದುವರಿಯುತ್ತದೆ- ಕರ್ನಾಟಕ ಹೈಕೋರ್ಟ್





ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದ್ದ ಪತಿ ಮೃತರಾದರು ಎಂಬ ಕಾರಣಕ್ಕೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದ ಆರೋಪಕ್ಕೆ ಸಿಲುಕಿರುವ ಪತ್ನಿ ವಿರುದ್ಧದ ಪ್ರಕರಣ ರದ್ದುಪಡಿಸಲು ಆಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.




ಭ್ರಷ್ಟಾಚಾರ ಆರೋಪದಲ್ಲಿ ಸಿಬಿಐ ತಮ್ಮ ವಿರುದ್ಧ ದಾಖಲಿಸಿರುವ FIR ಹಾಗೂ ದೋಷಾರೋಪ ಪಟ್ಟಿಯನ್ನು ರದ್ದುಪಡಿಸಿವಂತೆ ಕೋರಿ ಪ್ರಕರಣದ ಎರಡನೇ ಆರೋಪಿಯಾಗಿರುವ ವಿ.ಎಂ ಸರಸ್ವತಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.



ಘಟನೆಯ ವಿವರ

ಚಿಕ್ಕಮಗಳೂರಿನ ಬಾಳೆಹೊನ್ನೂರು 'ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ತರಬೇತಿ ಕೇಂದ್ರದ ಉಪ ನಿರ್ದೇಶಕ'ರಾಗಿದ್ದ ಎಂ. ಸೆಲ್ವಕುಮಾರ್ ಹಾಗೂ ಪತ್ನಿ ವಿ.ಎಂ ಸರಸ್ವತಿ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) 2014 ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಸೆಕ್ಷನ್ 13(1)ಇ, 13(2) ಹಾಗೂ ಐಪಿಸಿ ಸೆಕ್ಷನ್ 109ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿತ್ತು.




ಪತಿಯ ಭ್ರಷ್ಟಾಚಾರಕ್ಕೆ ಪತ್ನಿ ಕುಮ್ಮಕ್ಕು ನೀಡಿದ್ದಾರೆಂಬ ಆರೋಪ ಹೊರಿಸಿದ್ದ ಸಿಬಿಐ, ಪತಿಯ ಅಕ್ರಮ ಸಂಪಾದನೆಯಿಂದಲೇ ಪತ್ನಿ ಸರಸ್ವತಿ ಹೆಸರಲ್ಲಿ ಸಾಕಷ್ಟು ಚರ ಮತ್ತು ಸ್ಥಿರಾಸ್ತಿಗಳನ್ನು ಖರೀದಿಸಲಾಗಿದೆ ಎಂದು ಮಾಹಿತಿ ಕಲೆ ಹಾಕಿತ್ತು.



ಈ ಬಗ್ಗೆ ವಿಶೇಷ ನ್ಯಾಯಾಲಯಕ್ಕೆ CBI ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆದರೆ, ಮಾನ್ಯ ನ್ಯಾಯಾಲಯ ಆರೋಪಗಳನ್ನು ರೂಪಿಸುವ (ಚಾರ್ಜ್ ಫ್ರೇಮ್ ಮಾಡುವ) ಮುನ್ನವೇ ಪತಿ ಸೆಲ್ವಕುಮಾರ್ 2017ರ ಮಾರ್ಚ್ ನಲ್ಲಿ ಮೃತಪಟ್ಟಿದ್ದರು. ಹಾಗಾಗಿ, ಅವರ ವಿರುದ್ಧದ ಆರೋಪಗಳು ರದ್ದಾಗಿದ್ದವು.



ಪ್ರಕರಣದ ಪ್ರಮುಖ ಆರೋಪಿ ಆಗಿರುವ ತಮ್ಮ ಪತಿ ನಿಧನರಾದ ಕಾರಣ ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ ಕೋರಿ ಸರಸ್ವತಿ ಸಿಬಿಐ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸಿದ್ದ ಸಿಬಿಐ ಕೋರ್ಟ್ 2018ರ ಜೂನ್ 6ರಂದು ಆರೋಪಿತ ಪತ್ನಿ ವಿರುದ್ಧ ಐಪಿಸಿ ಸೆಕ್ಷನ್ 109 (ಕುಮ್ಮಕ್ಕು ನೀಡಿದ ಆರೋಪ) ಬದಲಿಗೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)ಎ ಹಾಗೂ 13(2) ಅಡಿಯಲ್ಲಿ ಪ್ರಕರಣ ದಾಖಲಿಸಿ ವರದಿ ಸಲ್ಲಿಸುವಂತೆ ಸಿಬಿಐಗೆ ಆದೇಶಿಸಿತ್ತು.



ತೀರ್ಪನ್ನು ಪ್ರಶ್ನಿಸಿ ಆರೋಪಿ ಸರಸ್ವತಿ ಹಾಗೂ ಸಿಬಿಐ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ ಕೈಬಿಟ್ಟಿರುವುದಕ್ಕೆ ಸಿಬಿಐ ಆಕ್ಷೇಪಿಸಿತು. ತಮ್ಮ ವಿರುದ್ಧ ವಿಚಾರಣೆ ನಡೆಸುವುದೇ ಸೂಕ್ತವಲ್ಲ. ಪ್ರಕರಣದ ಪ್ರಮುಖ ಆರೋಪಿ ಪತಿ ತೀರಿಕೊಂಡಿದ್ದಾರೆ. ಇನ್ನು ತನ್ನ ವಿರುದ್ಧ ಕುಮ್ಮಕ್ಕು ನೀಡಿದ ಆರೋಪದ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದು ಸರಸ್ವತಿ ವಾದಿಸಿದ್ದರು.



ಹೈಕೋರ್ಟ್ ಅಂತಿಮ ತೀರ್ಪು

ಎರಡು ಪಕ್ಷಕಾರರ ವಾದ-ಪ್ರತಿವಾದಗಳನ್ನು ಆಲಿಸಿದ ಪೀಠ, ಭ್ರಷ್ಟಾಚಾರ ಪ್ರಕರಣದ ವಿಚಾರಣೆ ವೇಳೆ ಅಥವಾ ಆರೋಪ ರೂಪಿಸುವ ಮಾಡುವ ಮುನ್ನ ಆರೋಪಿ ಸಾವನ್ನಪ್ಪಿದರೆ, ಸಹ ಆರೋಪಿಯಾಗಿರುವ ಪತ್ನಿ ವಿರುದ್ಧದ ವಿಚಾರಣೆಯನ್ನು ಕೈಬಿಡಲಾಗದು ಎಂದು ಹೇಳಿತು.


ಅದೇ ರೀತಿ, ಪತಿ ಮೃತಪಟ್ಟಾಕ್ಷಣ ಆರೋಪಿ ಪತ್ನಿ ವಿರುದ್ಧ ಐಪಿಸಿ ಸೆಕ್ಷನ್ 109 ರ ಅಡಿಯಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ವಿರುದ್ಧದ ವಿಚಾರಣೆ ಮುಕ್ತಾಯವಾಗುವುದಿಲ್ಲ. ಆದ್ದರಿಂದ ಐಪಿಸಿ ಸೆಕ್ಷನ್ 109ರ ಅಡಿಯಲ್ಲಿ ಪ್ರಕರಣದ ವಿಚಾರಣೆ ಮುನ್ನಡೆಸಬಹುದು ಎಂದು ಹೈಕೋರ್ಟ್ ಆದೇಶಿಸಿದೆ. ಇದರ ಜೊತೆಗೆ, ಆರೋಪಿ ಮಹಿಳೆ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 13(1)ಇ ಹಾಗೂ 13(2) ರ ಅಡಿ ಪ್ರಕರಣ ದಾಖಲಿಸುವಂತೆ ನಿರ್ದೇಶಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.

Ads on article

Advertise in articles 1

advertising articles 2

Advertise under the article