Allahabad HC Landmark Judgement- ಸರ್ಕಾರಿ ನೌಕರರ ಬಗ್ಗೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು
ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದು ರೈಲ್ವೆ ಇಲಾಖೆಯಲ್ಲಿ ನೂತನ ಹುದ್ದೆಗೆ ನೇಮಕಾತಿ ಹೊಂದಿದ ನ್ಯಾಯಾಂಗ ನೌಕರನ ರಾಜಿನಾಮೆಯನ್ನು ತಿರಸ್ಕರಿಸಿದ ಜಿಲ್ಲಾ ನ್ಯಾಯಾಧೀಶರ ಆದೇಶ ರದ್ದುಪಡಿಸಿದ ಅಲಹಾಬಾದ್ ಹೈಕೋರ್ಟ್
ಸೇವೆಯಲ್ಲಿರುವ ಸರ್ಕಾರಿ ನೌಕರನು ತನ್ನ ಉತ್ತಮ ಭವಿಷ್ಯಕ್ಕಾಗಿ ಸಾರ್ವಜನಿಕ ವಲಯದ ಇತರ ಸಂಸ್ಥೆಗಳಲ್ಲಿ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದಾಗ ಯಾವುದೇ ಕಾರಣಕ್ಕೂ ಆತನನ್ನು ಅರ್ಜಿ ಸಲ್ಲಿಸದಂತೆ ನಿರ್ಬಂಧಿಸುವುದು;
ಒ೦ದು ವೇಳೆ ನೂತನ ಹುದ್ದೆಗೆ ಆಯ್ಕೆಯಾದಲ್ಲಿ ಆತನ ರಾಜಿನಾಮೆಯನ್ನು ಸ್ವೀಕರಿಸದೇ ಇರುವುದು ನಿಯಮ ಬಾಹಿರವಾಗಿದೆ ಎಂಬುದಾಗಿ ಅಲಹಾಬಾದ್ ಹೈಕೋರ್ಟ್ ಖೂಬಾ ಸಿಂಗ್ ವಿರುದ್ಧ ಹೈಕೋರ್ಟ್ ಆಫ್ ಜುಡಿಕೇಚರ್ ಮತ್ತಿತರರು - ಈ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ವಿವರ:
ಕೂಬಾ ಸಿಂಗ್ ಎಂಬವರು ಉತ್ತರಪ್ರದೇಶ ರಾಜ್ಯದ ಜಲೌನ್ ಜಿಲ್ಲಾ ನ್ಯಾಯಾಲಯದಲ್ಲಿ ಕಿರಿಯ ಸಹಾಯಕರಾಗಿ 2015 ರಲ್ಲಿ ಸೇವೆಗೆ ಸೇರಿದರು. ಸೇವೆಯಲ್ಲಿರುವಾಗ ರೈಲ್ವೆ ನೇಮಕಾತಿ ಮಂಡಳಿಯು ನಡೆಸಿದ ಶೀಘ್ರ ಲಿಪಿಗಾರರ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ನೇಮಕಾತಿ ಪ್ರಾಧಿಕಾರವಾಗಿರುವ ಜಿಲ್ಲಾ ನ್ಯಾಯಾಧೀಶರಿಂದ ನಿರಾಕ್ಷೇಪಣಾ ಪತ್ರ ಪಡೆದು ಪರೀಕ್ಷೆಗೆ ಹಾಜರಾಗಿ ಶೀಘ್ರಲಿಪಿಗಾರ ಹುದ್ದೆಗೆ ಆಯ್ಕೆಯಾದರು.
ದಿನಾಂಕ 17.7.2020 ರಂದು ಕಿರಿಯ ಸಹಾಯಕನ ಹುದ್ದೆಗೆ ರಾಜಿನಾಮೆ ನೀಡಿ ರೈಲ್ವೆ ಇಲಾಖೆಯ ಶೀಘ್ರಲಿಪಿಗಾರ (ಹಿಂದಿ) ಹುದ್ದೆಗೆ ಸೇರಲು ತನ್ನನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಿದರು. ದಿನಾಂಕ 13.8.2020 ರಂದು ತನ್ನ ರಾಜೀನಾಮೆ ಅಂಗೀಕಾರವಾಗಬಹುದೆಂಬ ನಿರೀಕ್ಷೆಯಲ್ಲಿ ದಿನಾಂಕ 14.8.2020 ರಂದು ರೈಲ್ವೆ ಇಲಾಖೆಯಯಲ್ಲಿ ನೂತನ ಹುದ್ದೆಗೆ ಸೇರಿದರು.
ಆದರೆ ಉತ್ತರ ಪ್ರದೇಶ ಸರಕಾರಿ ಸೇವಾ ನಿಯಮ 2000 ದ ನಿಯಮ 4 ರ ಪ್ರಕಾರ ಅರ್ಜಿದಾರನು 3 ತಿಂಗಳು ಮುಂಚಿತವಾಗಿ ರಾಜಿನಾಮೆ ಕುರಿತು ನೋಟೀಸು ನೀಡದೆ ಇರುವ ಕಾರಣ ನೀಡಿ ಆತನ ರಾಜೀನಾಮೆಯನ್ನು ತಿರಸ್ಕರಿಸಿದ ಜಿಲ್ಲಾ ನ್ಯಾಯಾಧೀಶರು ಕೂಬಾಸಿಂಗ್ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಇಲಾಖಾ ವಿಚಾರಣೆ ನಡೆಸುವಂತೆ ಆದೇಶ ನೀಡಿದರು.
ಸದರಿ ಆದೇಶದಿಂದ ಬಾಧಿತರಾದ ಕೂಬಾ ಸಿಂಗ್ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ರಿಟ್ ಹೂಡಿದರು. ಅರ್ಜಿದಾರರ ಪರವಾಗಿ ಮಂಡಿಸಿದ ವಾದದ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವುದಕ್ಕೂ ಮುಂಚಿತವಾಗಿ ನೇಮಕಾತಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯಲಾಗಿದೆ. ರಾಜೀನಾಮೆಯ ಕುರಿತು ಮುಂಗಡ ನೋಟಿಸು ನೀಡದೇ ಇದ್ದರೂ ಅಥವಾ ನಿಗದಿಪಡಿಸಿದ 3 ತಿಂಗಳ ಅವಧಿಗೆ ಮುಂಚಿತವಾಗಿ ಕೂಡಾ ರಾಜಿನಾಮೆಯನ್ನು ಸ್ವೀಕರಿಸಲು ನಿಯಮ 4 (II) ರಡಿ ನೇಮಕಾತಿ ಪ್ರಾಧಿಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದುದರಿಂದ ನೇಮಕಾತಿ ಪ್ರಾಧಿಕಾರಿಯಾಗಿರುವ ಜಿಲ್ಲಾ ನ್ಯಾಯಾಧೀಶರ ಆದೇಶ ನಿಯಮ ಬಾಹಿರವಾಗಿದ್ದು ಅರ್ಜಿದಾರರಿಗೆ ತುಂಬಲಾರದ ಕಷ್ಟನಷ್ಟಗಳನ್ನುಂಟು ಮಾಡಿದೆ.
ಸೇವಾ ನಿರತ ಸರಕಾರಿ ನೌಕರನು ತನ್ನ ಉತ್ತಮ ಭವಿಷ್ಯಕ್ಕಾಗಿ ಇತರ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸಿದಾಗ ಯಾವುದೇ ಕಾರಣಕ್ಕೂ ಆತನನ್ನು ಅರ್ಜಿ ಸಲ್ಲಿಸದಂತೆ ನಿರ್ಬಂಧಿಸುವಂತಿಲ್ಲ. ಅರ್ಜಿದಾರನ ರಾಜಿನಾಮೆಯನ್ನು ಸ್ವೀಕರಿಸದೆ ಆತನ ವಿರುದ್ಧ ಶಿಸ್ತುಕ್ರಮಕ್ಕೆ ಆದೇಶಿಸಿರುವುದು ಸೇವಾ ನಿಯಮಾವಳಿಗಳಡಿ ಯಾವುದೇ ದುರ್ವರ್ತನೆ ತೋರದ ಸರಕಾರಿ ನೌಕರನಿಗೆ ಮಾನಸಿಕ ಹಿಂಸೆ ನೀಡಿದಂತಾಗಿದೆ ಎಂಬುದಾಗಿ ಅಭಿಪ್ರಾಯಪಟ್ಟ ಹೈಕೋರ್ಟ್ ಜಿಲ್ಲಾ ನ್ಯಾಯಾಧೀಶರ ಆದೇಶವನ್ನು ರದ್ದುಪಡಿಸಿ ಅರ್ಜಿದಾರ ಕೂಬಾಸಿಂಗ್ ಸಲ್ಲಿಸಿದ ರಾಜೀನಾಮೆಯನ್ನು ಅಂಗೀಕರಿಸುವಂತೆ ಜಿಲ್ಲಾ ನ್ಯಾಯಾಧೀಶರಿಗೆ ನಿರ್ದೇಶನ ನೀಡಿತು.
ಅರ್ಜಿದಾರನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ಆದೇಶವನ್ನು ರದ್ದುಪಡಿಸಿತು. ಆತನಿಗೆ ಮಾನಸಿಕ ಹಿಂಸೆ ನೀಡಿದ ಕಾರಣಕ್ಕಾಗಿ ನ್ಯಾಯಾಲಯದ ಖರ್ಚಿನ ಬಾಬ್ತು ₹21000 ಮೊತ್ತವನ್ನು ಜಿಲ್ಲಾ ನ್ಯಾಯಾಧೀಶರು ಅರ್ಜಿದಾರ ಕೂಬಾಸಿಂಗ್ ಗೆ ನೀಡುವಂತೆ ಆದೇಶಿಸಿತು.
ಪ್ರಸ್ತುತ ಸೇವೆಯಲ್ಲಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರರು ತಮ್ಮ ಉತ್ತಮ ಭವಿಷ್ಯಕ್ಕಾಗಿ ಸಾರ್ವಜನಿಕ ವಲಯದ ಇತರ ಸಂಸ್ಥೆಗಳಲ್ಲಿ ನೂತನ ಹುದ್ದೆಗೆ ನೇಮಕಾತಿ ಕೋರಿ ಅರ್ಜಿ ಸಲ್ಲಿಸುವಾಗ ಪಾಲಿಸಬೇಕಾದ ನಿಯಮಗಳು:
ಈ ಕುರಿತು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ಕ್ಕೆ ತಿದ್ದುಪಡಿ ಮಾಡಿದ ಸರಕಾರವು ಆದೇಶ ಸಂಖ್ಯೆ ಸಿಆಸು19 ಸೆನೆನಿ 2020 ರ ಪ್ರಕಾರ ದಿನಾಂಕ12.10.2020 ರಂದು ಅಧಿಸೂಚನೆಯನ್ನು ಹೊರಡಿಸಿದೆ.
ಕನಾ೯ಟಕ ರಾಜ್ಯ ಸರ್ಕಾರದ ಸೇವೆಯಲ್ಲಿರುವ ನೌಕರನು ಇತರ ಸಾರ್ವಜನಿಕ ವಲಯದ ಯಾವುದೇ ಸೇವೆ ಅಥವಾ ಹುದ್ದೆಗೆ ಆಯ್ಕೆಯಾಗಲು ತನ್ನ ಅರ್ಜಿಯನ್ನು ನೇರವಾಗಿ ಆಯ್ಕೆ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
ಆತನ ಆಯ್ಕೆಯನ್ನು ಅಧಿಸೂಚಿತ ಗೊಳಿಸಿದ ಕೂಡಲೇ ಆತನು ಆಯ್ಕೆಯಾದ ವಾಸ್ತವಾಂಶವನ್ನು ತಾನು ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯ ಮುಖ್ಯಸ್ಥರಿಗೆ ತಿಳಿಸತಕ್ಕದ್ದು ಹಾಗೂ ಆಯ್ಕೆಯಾದ ಹುದ್ದೆಯ ನೇಮಕಾತಿಯನ್ನು ಒಪ್ಪಿಕೊಳ್ಳಲು ಅನುವಾಗುವಂತೆ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ನೀಡುವಂತೆ ಕೋರತಕ್ಕದ್ದು.
ಸರಕಾರಿ ನೌಕರನು ಶಿಸ್ತುಕ್ರಮಕ್ಕೆ ಒಳಪಟ್ಟಲ್ಲಿ ಅಥವಾ ಆತ ಇಲಾಖಾ ವಿಚಾರಣೆ ಅಥವಾ ಕ್ರಿಮಿನಲ್ ನಡವಳಿಗಳನ್ನು ಎದುರಿಸುತ್ತಿದ್ದಲ್ಲಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾರಣ ಅಥವಾ ಸರಕಾರಿ ನೌಕರ ಮತ್ತು ಸರಕಾರದ ನಡುವೆ ಮಾಡಿಕೊಳ್ಳಲಾದ ಯಾವುದೇ ನಿರ್ದಿಷ್ಟ ಒಪ್ಪಂದಕ್ಕೆ ಅಸಂಗತವಾದ೦ತಹ ಸಂದರ್ಭದಲ್ಲಿ ಲಿಖಿತ ರೂಪದಲ್ಲಿ ಕಾರಣಗಳನ್ನು ದಾಖಲಿಸಿ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಬಾರದೆಂದು ಇಲಾಖಾ ಮುಖ್ಯಸ್ಥರು ಪರಿಗಣಿಸಿದ ಹೊರತು ಸಾಮಾನ್ಯವಾಗಿ ಇಲಾಖಾ ಮುಖ್ಯಸ್ಥರು ನಿರಾಕ್ಷೇಪಣಾ ಪ್ರಮಾಣಪತ್ರ ನೀಡತಕ್ಕದ್ದು.
ಸಾಧ್ಯವಾದಷ್ಟು ಬೇಗನೆ ಆದರೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸಿದ ಅರ್ಜಿಯ ದಿನಾಂಕದ ಮೂವತ್ತು ದಿನಗಳ ಅವಧಿಯ ಒಳಗಾಗಿ ಇಲಾಖಾ ಮುಖ್ಯಸ್ಥರು ಈ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳತಕ್ಕದ್ದು.
ಹಾಗೂ ಅದನ್ನು ಸಂಬಂಧಿತ ಸರಕಾರಿ ನೌಕರ ಮತ್ತು ಆಯ್ಕೆ ಪ್ರಾಧಿಕಾರ ಮತ್ತು ಉಪನಿಯಮ ಒಂದರಲ್ಲಿ ಉಲ್ಲೇಖಿಸಲಾದ ಹುದ್ದೆಗೆ ನೇಮಕಾತಿ ಮಾಡುವ ಸಕ್ಷಮ ಪ್ರಾಧಿಕಾರಕ್ಕೆ ತಿಳಿಸತಕ್ಕದ್ದು. ಹಾಗೂ ಈ ರೀತಿ ಮಾಡಲು ವಿಫಲವಾದಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಲಾಗಿದೆ ಎಂದು ಪರಿಗಣಿ ತಕ್ಕದ್ದು.
ಆದರೆ ನಿರ್ದಿಷ್ಟ ಒಪ್ಪಂದವನ್ನು ಮಾಡಿಕೊಂಡಂತಹ ಸರಕಾರಿ ನೌಕರರ ಪ್ರಕರಣದಲ್ಲಿ ಪರಿಗಣಿತ ನಿರಾಕ್ಷೇಪಣಾ ಪ್ರಮಾಣ ಪತ್ರಕ್ಕೆ ಸಂಬಂಧಿತ ಉಪಬಂಧಗಳು ಅನ್ವಯವಾಗತಕ್ಕದ್ದಲ್ಲ
ನಿರಾಕ್ಷೇಪಣಾ ಪ್ರಮಾಣ ಪತ್ರಕ್ಕಾಗಿ ತನಗೆ ಕೋರಿಕೆ ಸಲ್ಲಿಸುವ ಉಪಕ್ರಮದ ಜವಾಬ್ದಾರಿಯು ಸರಕಾರಿ ನೌಕರನದ್ದಾಗಿದ್ದು ಆಯ್ಕೆಗೊಂಡ ಹುದ್ದೆಗೆ ನೇಮಕಾತಿ ಆದೇಶ ಹೊರಡಿಸುವ ಮುನ್ನ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದು ಆಯ್ಕೆಗೊಂಡ ಹುದ್ದೆಗೆ ನೇಮಕಾತಿ ಮಾಡಲು ಸಕ್ಷಮ ಪ್ರಾಧಿಕಾರಕ್ಕೆ ಅದನ್ನು ಸಲ್ಲಿಸುವುದಕ್ಕೆ ಅವನು ಹೊಣೆಗಾರನಾಗಿರುತ್ತಾನೆ.
ಸಾರ್ವಜನಿಕ ವಲಯದ ಸಂಸ್ಥೆಗಳು ಯಾವುವು?
ನಿಯಮ 5 ರ ಉಪನಿಯಮ 4ರಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳು ಕುರಿತು ಈ ರೀತಿ ಹೇಳಲಾಗಿದೆ.
ಎ) ಶೇಕಡಾ ಐವತ್ತಕ್ಕಿಂತಲೂ ಹೆಚ್ಚು ಸರಕಾರದ ಶೇರು ಬಂಡವಾಳ ಹೊಂದಿದ್ದು ಕರ್ನಾಟಕ ಕೋ ಆಪರೇಟಿವ್ ಸೊಸೈಟಿಗಳ ಅಧಿನಿಯಮದಡಿ ನೋಂದಣಿಗೊಂಡ ಅಥವಾ ನೋಂದಣಿಗೊಂಡಂತೆ ಪರಿಣತ ಗೊಂಡ ಕೋ ಆಪರೇಟಿವ್ ಸೊಸೈಟಿ.
ಬಿ) ರಾಜ್ಯ ಸರಕಾರದಿಂದ ಸ್ಥಾಪನೆಗೊಂಡ ಅಥವಾ ನಿರ್ವಹಿಸಲ್ಪಡುತ್ತಿರುವ ಅಥವಾ ಅನುದಾನಿತ ಶಿಕ್ಷಣ ಸಂಸ್ಥೆ
ಸಿ) ಕಂಪೆನಿಗಳ ಅಧಿನಿಯಮ2013 ರ ( 2013 ರ ಕೇಂದ್ರ ಅಧಿನಿಯಮ 18)ಅರ್ಥ ವ್ಯಾಪ್ತಿಯೊಳಗಿನ ಸರಕಾರಿ ಕಂಪೆನಿ
ಡಿ) ಸ್ಥಳೀಯ ಪ್ರಾಧಿಕಾರ
ಇ) ರಾಜ್ಯ ಅಥವಾ ಕೇಂದ್ರ ಅಧಿನಿಯಮದಡಿ ಸ್ಥಾಪನೆಗೊಂಡು ರಾಜ್ಯ ಸರಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಶಾಸನಬದ್ಧ ಸಂಸ್ಥೆ ಅಥವಾ ನಿಗಮ
ಎಫ್) ಯಾವುದೇ ಕಾನೂನಿನ ಅಡಿ ಅಥವಾ ಮೂಲಕ ಸ್ಥಾಪನೆಗೊಂಡ ಅಥವಾ ಸ್ಥಾಪನೆಗೊಂಡಂತೆ ಪರಿಗಣಿತಗೊಂಡ ರಾಜ್ಯದಿಂದ ಧನ ಸಹಾಯ ಪಡೆಯುವ ವಿಶ್ವವಿದ್ಯಾಲಯ.
ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಸರಕಾರಿ ನೌಕರರು ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಹುದ್ದೆಗಳಲ್ಲಿ ಸೇವೆಗೆ ಸೇರಿರುತ್ತಾರೆ. ತಮ್ಮ ಉತ್ತಮ ಭವಿಷ್ಯದ ದೃಷ್ಟಿಯಿಂದ ಇತರ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಸದರಿ ಸರಕಾರಿ ನೌಕರನಿಗೆ ಯಾವುದೇ ರೀತಿಯ ತೊಂದರೆಯನ್ನು ಸಕ್ಷಮ ಪ್ರಾಧಿಕಾರ ನೀಡಬಾರದು ಎಂಬುದೇ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ಸಾರಾಂಶವಾಗಿದೆ.
✍ ಪ್ರಕಾಶ್ ನಾಯಕ್, ಶಿರಸ್ತೆದಾರರು, ಜ್ಯುಡೀಶಿಯಲ್ ಸೆಂಟರ್, ಮಂಗಳೂರು