-->
Customer should be informed about revised bank rates- ಬಡ್ಡಿ ದರ ಕಡಿತ ಮಾಡಿದಾಗ ಗ್ರಾಹಕರಿಗೂ ತಿಳಿಸಬೇಕು: ಬ್ಯಾಂಕುಗಳಿಗೆ ಹೈಕೋರ್ಟ್ ಸೂಚನೆ

Customer should be informed about revised bank rates- ಬಡ್ಡಿ ದರ ಕಡಿತ ಮಾಡಿದಾಗ ಗ್ರಾಹಕರಿಗೂ ತಿಳಿಸಬೇಕು: ಬ್ಯಾಂಕುಗಳಿಗೆ ಹೈಕೋರ್ಟ್ ಸೂಚನೆ

ಬಡ್ಡಿ ದರ ಕಡಿತ ಮಾಡಿದಾಗ ಗ್ರಾಹಕರಿಗೂ ತಿಳಿಸಬೇಕು: ಬ್ಯಾಂಕುಗಳಿಗೆ ಹೈಕೋರ್ಟ್ ಸೂಚನೆ





ಸಾಲದ ಬಡ್ಡಿ ದರ ಕಡಿತ ಮಾಡಿದಾಗ ಬ್ಯಾಂಕ್ ತನ್ನ ಗ್ರಾಹಕರಿಗೆ ಮಾಹಿತಿ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಬ್ಯಾಂಕುಗಳಿಗೆ ಸೂಚನೆ ನೀಡಿದೆ.


ಸಾಲದ ಮೇಲಿನ ಬಡ್ಡಿ ದರ ಪರಿಷ್ಕರಣೆ ಮಾಹಿತಿ ಕೇವಲ ನೋಟಿಸ್ ಬೋರ್ಡ್‌ಗೆ ಸೀಮಿತ ಮಾಡಬಾರದು. ಈ ಮಾಹಿತಿಯನ್ನು ಗ್ರಾಹಕರಿಗೆ ತಲುಪಿಸಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.


ಬಡ್ಡಿ ದರ ಕಡಿತದ ಪ್ರಯೋಜನ ನೀಡಿಲ್ಲವೆಂದು ಆಕ್ಷೇಪಿಸಿ ಗ್ರಾಹಕರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಮಾನ್ಯ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಕೆನರಾ ಬ್ಯಾಂಕ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.



ಘಟನೆಯ ವಿವರ

ಬೆಂಗಳೂರಿನ ಗ್ರಾಹಕರೊಬ್ಬರು 2007ರಲ್ಲಿ ಕೆನರಾ ಬ್ಯಾಂಕ್ ನಿಂದ ಶೇ 11.75ರ ಬಡ್ಡಿ ದರದಲ್ಲಿ ಗೃಹ ಸಾಲ ಪಡೆದುಕೊಂಡಿದ್ದರು. 2010ರ ಜುಲೈ 1ರಿಂದ ಅನ್ವಯವಾಗುವಂತೆ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರವನ್ನು ಶೇ 8.25ಕ್ಕೆ ಇಳಿಸಿತ್ತು. 



ಅರ್ಜಿದಾರರಿಗೆ ಈ ಮಾಹಿತಿ ತಡವಾಗಿ ದೊರೆಯಿತು. 2017ರ ಜನವರಿ 24ರಂದು ಬ್ಯಾಂಕ್ ಗೆ ಲಿಖಿತ ಮನವಿ ಸಲ್ಲಿಸಿ ಬಡ್ಡಿ ದರ ಕಡಿತದ ಪ್ರಯೋಜನ ನೀಡುವಂತೆ ಕೋರಿದ್ದರು.


ಗ್ರಾಹಕರ ಮನವಿ ಪರಿಗಣಿಸಲು ಬ್ಯಾಂಕ್ ನಿರಾಕರಿಸಿತು. ಗ್ರಾಹಕರು ಅರ್ಜಿ ಸಲ್ಲಿಸಿದ ದಿನದಿಂದ ಬಡ್ಡಿ ದರ ಕಡಿತದ ಪ್ರಯೋಜನ ನೀಡುವುದಾಗಿ ತಿಳಿಸಿತ್ತು. ಬ್ಯಾಂಕ್ ನಿರ್ಧಾರ ಪ್ರಶ್ನಿಸಿ ಅವರು ಓಂಬುಡ್ಸ್ ಮನ್ ಗೆ ದೂರು ನೀಡಿದ್ದರು. ದೂರು ಪರಿಶೀಲಿಸಿದ ಓಂಬುಡ್ಸ್ ಮನ್ ಅರ್ಜಿದಾರರ ದೂರಿನಲ್ಲಿ ಹುರುಳಿಲ್ಲ ಎಂದು ವಜಾ ಮಾಡಿತ್ತು.



ಕೆನರಾ ಬ್ಯಾಂಕ್ ಮತ್ತು ಓಂಬುಡ್ಸ್ ಮನ್ ಆದೇಶ ಪ್ರಶ್ನಿಸಿ ಗ್ರಾಹಕರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, 2010ರಿಂದ ಅನ್ವಯವಾಗುವಂತೆ ಬಡ್ಡಿ ದರ ಕಡಿತದ ಪ್ರಯೋಜನ ನೀಡುವಂತೆ ಬ್ಯಾಂಕ್ ಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಬ್ಯಾಂಕ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.



ನ್ಯಾಯಪೀಠದ ತೀರ್ಪು

ಕರಣದಲ್ಲಿ ಬ್ಯಾಂಕ್ ನ ನಿಲುವು ತೃಪ್ತಿಕರವಾಗಿಲ್ಲ ಎಂದು ವಿಭಾಗೀಯ ಪೀಠ ಕೆನರಾ ಬ್ಯಾಂಕ್ ಮೇಲ್ಮನವಿ ವಜಾಗೊಳಿಸಿತು.





ಬಡ್ಡಿ ದರ ಕಡಿತ ಮಾಡಿದ ಮಾಹಿತಿಯನ್ನು ಬ್ಯಾಂಕ್ ನೋಟಿಸ್ ಬೋರ್ಡ್ ನಲ್ಲಿ ಹಾಕಿದರೆ ಸಾಲದು. ಅದರಿಂದ ಬಹುತೇಕ ಗ್ರಾಹಕರಿಗೆ ಆ ಕುರಿತು ಮಾಹಿತಿಯೇ ತಲುಪುವುದಿಲ್ಲ. ಸುತ್ತೋಲೆ ಹೊರಡಿಸಿದಾಗ ಅದರ ಪ್ರತಿಯನ್ನು ಗ್ರಾಹಕರಿಗೆ ಖುದ್ದಾಗಿ ಕಳುಹಿಸಿದಾಗ ಮಾತ್ರ ಅದು ಮಾಹಿತಿ ನೀಡಿದಂತಾಗುತ್ತದೆ ಎಂದು ಅದು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.


ಕೆನರಾ ಬ್ಯಾಂಕ್ 2010ರ ಯಾವ ದಿನಾಂಕದಿಂದ ಬಡ್ಡಿ ದರ ಕಡಿತದ ಪ್ರಯೋಜನ ನೀಡಿ ಸುತ್ತೋಲೆ ಹೊರಡಿಸಿತ್ತೋ ಅಂದಿನಿಂದ ಅನ್ವಯವಾಗುವಂತೆ ಅರ್ಜಿದಾರರಿಗೆ ಬಡ್ಡಿದರ ಕಡಿತದ ಪ್ರಯೋಜನವನ್ನು ವರ್ಗಾಯಿಸಬೇಕು ಎಂದು ಆದೇಶಿಸಿದೆ.

Ads on article

Advertise in articles 1

advertising articles 2

Advertise under the article