-->
Cirminal Proceedings in Sessions Court- ಯುವ ವಕೀಲರಿಗೆ ಅಗತ್ಯ ಮಾಹಿತಿ: ಸೆಷನ್ಸ್ ಕೋರ್ಟ್ ಕಲಾಪ, ಪ್ರಕರಣ ವಿಚಾರಣೆ ಹೇಗಿರುತ್ತದೆ?

Cirminal Proceedings in Sessions Court- ಯುವ ವಕೀಲರಿಗೆ ಅಗತ್ಯ ಮಾಹಿತಿ: ಸೆಷನ್ಸ್ ಕೋರ್ಟ್ ಕಲಾಪ, ಪ್ರಕರಣ ವಿಚಾರಣೆ ಹೇಗಿರುತ್ತದೆ?

Cirminal Proceedings in Sessions Court- ಯುವ ವಕೀಲರಿಗೆ ಅಗತ್ಯ ಮಾಹಿತಿ: ಸೆಷನ್ಸ್ ಕೋರ್ಟ್ ಕಲಾಪ, ಪ್ರಕರಣ ವಿಚಾರಣೆ ಹೇಗಿರುತ್ತದೆ?


ಸೆಷನ್ಸ್ ನ್ಯಾಯಾಲಯದ ಕಲಾಪಗಳು ಮತ್ತು ಪ್ರಕರಣಗಳ ವಿಚಾರಣೆಯ ಕುರಿತು ಮಾಹಿತಿ


ಲೇಖನ: ಪ್ರಕಾಶ್ ನಾಯಕ್; ಶಿರಸ್ತೇದಾರರು; ಜ್ಯೂಡಿಷಿಯಲ್ ಸರ್ವೀಸ್ ಸೆಂಟರ್; ಮಂಗಳೂರು

ದಂಡಪ್ರಕ್ರಿಯಾ ಸಂಹಿತೆಯು ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ಎರಡು ವಿಧಗಳಲ್ಲಿ ವಿಂಗಡಿಸಿದೆ. ಒ೦ದು ಮ್ಯಾಜಿಸ್ಟ್ರೇಟ್ ನಡೆಸುವ ವಿಚಾರಣೆ. ಇನ್ನೊಂದು ಸೆಷನ್ಸ್ ವಿಚಾರಣೆ. ಅಪರಾಧಗಳು ಮ್ಯಾಜಿಸ್ಟ್ರೇಟ್ ವಿಚಾರಣೆಗೊಳಪಡಬೇಕೇ ಅಥವಾ ಸೆಷನ್ ವಿಚಾರಣೆಗೆ ಒಳಪಡಿಸ ಬೇಕೆ ಎಂಬುದನ್ನು ದಂಡಪ್ರಕ್ರಿಯಾ ಸಂಹಿತೆಯ ಮೊದಲನೆಯ ಶೆಡ್ಯೂಲ್ ನಲ್ಲಿ ಕಾಣಿಸಲಾಗಿದೆ.


ಸಾಮಾನ್ಯವಾಗಿ ಕೊಲೆ; ದರೋಡೆ; ಅತ್ಯಾಚಾರದಂತಹ ಘೋರ ಅಪರಾಧಗಳು ಮತ್ತು 7 ವರ್ಷಗಳಿಗೂ ಅಧಿಕ ಕಾಲದ ಶಿಕ್ಷಾರ್ಹ ಅಪರಾಧ ಗಳು ಸೆಷನ್ಸ್ ನ್ಯಾಯಾಲಯದ ವಿಚಾರಣೆಗೊಳಪಟ್ಟಿದೆ.


ವಿಚಾರಣೆಯ ಮೊದಲ ಹಂತ


ಅಪರಾಧ ಪ್ರಕರಣಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ತನಿಖಾಧಿಕಾರಿಯು ದೋಷಾರೋಪಣಾ ಪತ್ರವನ್ನು ಮ್ಯಾಜಿಸ್ಟ್ರೇಟರ ಸಮಕ್ಷಮ ಸಲ್ಲಿಸತಕ್ಕದ್ದು. ದಂಡಪ್ರಕ್ರಿಯಾ ಸಂಹಿತೆ ಕಲ೦ 190 ರಡಿ ಮ್ಯಾಜಿಸ್ಟ್ರೇಟರು ಪ್ರಕರಣದ ಅವಗಾಹನೆ (Cognizance) ಪಡೆದು 7 ವರ್ಷಗಳಿಗೂ ಅಧಿಕ ಕಾಲದ ಶಿಕ್ಷಾರ್ಹ ಅಪರಾಧವಾಗಿದ್ದಲ್ಲಿ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 209 ರ ಪ್ರಕಾರ ಸೆಷನ್ಸ್ ನ್ಯಾಯಾಲಯಕ್ಕೆ ಪ್ರಕರಣವನ್ನು ಒಪ್ಪಿಸತಕ್ಕದ್ದು. (Committment) ಕಲಂ 193 ರ ಪ್ರಕಾರ ಸೆಷನ್ಸ್ ನ್ಯಾಯಾಲಯವು ನೇರವಾಗಿ ಅಪರಾಧದ ಬಗ್ಗೆ ಅವಗಾಹನೆ (Cognizance) ತೆಗೆದುಕೊಳ್ಳಲು ಅವಕಾಶವಿಲ್ಲ. 


ಮ್ಯಾಜಿಸ್ಟ್ರೇಟರಿಂದ ಪ್ರಕರಣವು ಕಮಿಟಲ್ ಆಗಿ ಬಂದರೆ ಮಾತ್ರ ಸೆಷನ್ಸ್ ನ್ಯಾಯಾಲಯಕ್ಕೆ ವಿಚಾರಣೆ ನಡೆಸುವ ಅಧಿಕಾರವ್ಯಾಪ್ತಿ ಇದೆ.ಆರೋಪಿಗಳಿಗೆ ಜಾಮೀನು ದೊರೆತಿದೆಯೇ ಅಥವಾ ನ್ಯಾಯಾಂಗ ಬಂಧನದಲ್ಲಿದ್ದಾರೆಯೇ ಎಂಬುದನ್ನು ಕಮಿಟಲ ಆದೇಶದಲ್ಲಿ ಕಾಣಿಸಬೇಕು. ಕಲ೦ 225 ರ ಪ್ರಕಾರ ಸೆಷನ್ಸ್ ವಿಚಾರಣೆಯನ್ನು ಸಾರ್ವಜನಿಕ ಅಭಿಯೋಜಕರು (ಪಬ್ಲಿಕ್ ಪ್ರಾಸಿಕ್ಯೂಟರ್) ನಡೆಸಬೇಕಾಗಿರುವುದರಿಂದ ಕಮಿಟಲ್ ಕುರಿತು ಸಾರ್ವಜನಿಕ ಅಭಿಯೋಜಕರಿಗೆ ಸೂಚನೆ ನೀಡಬೇಕು. ಸೆಷನ್ಸ್ ನ್ಯಾಯಾಲಯದ ವಿಚಾರಣೆಯ ಕುರಿತು ದಂಡ ಪ್ರಕ್ರಿಯಾ ಸಂಹಿತೆಯ ಕಲಂ 225 ರಿಂದ 237 ರಲ್ಲಿ ವಿವರಿಸಲಾಗಿದೆ.


ಸೆಷನ್ಸ್ ವಿಚಾರಣೆಯ ಮೊದಲ ಹಂತ


ಪ್ರಕರಣವು ಮ್ಯಾಜಿಸ್ಟ್ರೇಟರಿಂದ ಸೆಷನ್ಸ್ ನ್ಯಾಯಾಲಯಕ್ಕೆ ಒಪ್ಪಿಸಲ್ಪಟ್ಟ ಬಳಿಕ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೆಷನ್ಸ್ ನ್ಯಾಯಾಲಯದಿಂದ ಆರೋಪಿಗೆ ಸಮನ್ಸ್ ಕಳುಹಿಸತಕ್ಕದ್ದು. ಆರೋಪಿಯು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾದಾಗ ಅಥವಾ ಆತನನ್ನು ಹಾಜರು ಪಡಿಸಿದಾಗ ಕಲಂ 226 ರ ಪ್ರಕಾರ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಆರೋಪಿಯ ವಿರುದ್ಧದ ದೋಷಾರೋಪಣೆ ಹಾಗೂ ಸಾಕ್ಷ್ಯಾಧಾರಗಳ ಕುರಿತು ಆರೋಪಿಗೆ ಮಾಹಿತಿ ನೀಡತಕ್ಕದ್ದು. ಕಲಂ 207;208 ರ ಪ್ರಕಾರ ದೋಷಾರೋಪಣಾ ಪತ್ರದ ಪ್ರತಿಯನ್ನು ಆರೋಪಿಗೆ ಉಚಿತವಾಗಿ ನೀಡತಕ್ಕದ್ದು. ಆರೋಪಿಯು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಪಡೆಯದೇ ಇದ್ದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿ ಜಾಮೀನು ಪಡೆಯತಕ್ಕದ್ದು.


ಆರೋಪಿ ಪರ ವಕೀಲರ ನೇಮಕ


ದಂಡ ಪ್ರಕ್ರಿಯಾ ಸಂಹಿತೆಯಲ್ಲಿ ಆರೋಪಿಯ ವಿರುದ್ಧ ನ್ಯಾಯಯುತ ವಿಚಾರಣೆಯನ್ನು ನಡೆಸಬೇಕು ಹಾಗೂ ಆರೋಪಿಗೆ ತನ್ನನ್ನು ಸಮರ್ಥಿಸಿಕೊಳ್ಳಲು ಸಾಕಷ್ಟು ಅವಕಾಶ ನೀಡಿ ಆತನ ವಾದವನ್ನು ಆಲಿಸಿ ಪ್ರಕರಣವನ್ನು ಇತ್ಯರ್ಥ ಗೊಳಿಸತಕ್ಕದ್ದೆಂದು ಹೇಳಲಾಗಿದೆ. ಕಲಂ 304 ರಡಿ ಆರ್ಥಿಕವಾಗಿ ಅಶಕ್ತರಾಗಿರುವ ಆರೋಪಿಗಳಿಗೆ ಸರಕಾರದ ವತಿಯಿಂದ ಉಚಿತವಾಗಿ ವಕೀಲರ ಸೇವೆಯನ್ನು ಒದಗಿಸ ಬೇಕೆಂದು ತಿಳಿಸಲಾಗಿದೆ. ಈಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಅಲ್ಲಿನ ಆಯಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ(DLSA)ದಿಂದ ಆರೋಪಿಗೆ ಉಚಿತವಾಗಿ ವಕೀಲರ ಸೇವೆಯನ್ನು ನೀಡಲಾಗುತ್ತದೆ.


ದೋಷಾರೋಪಣೆ ರಚನೆಗೆ ಮೊದಲು ವಾದ ಆಲಿಸುವುದು (Hearing Before Charge)


ಆರೋಪಿಗಳ ವಿರುದ್ಧ ದೋಷಾರೋಪಣೆ (Charge) ರಚಿಸುವ ಮೊದಲು ಸರಕಾರದ ಪರ ಅಭಿಯೋಜಕರ ಹಾಗೂ ಆರೋಪಿ ಪರ ವಕೀಲರ ವಾದವನ್ನು ಆಲಿಸಬೇಕು. ದೋಷಾರೋಪಣೆ ರಚಿಸಲು ಆರೋಪಿ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲವೆಂದು ಸೆಷನ್ಸ್ ನ್ಯಾಯಾಲಯಕ್ಕೆ ಮನವರಿಕೆಯಾದಲ್ಲಿ ಕಲಂ 227 ರ ಪ್ರಕಾರ ಸೂಕ್ತ ಕಾರಣಗಳನ್ನು ನೀಡಿ ಲಿಖಿತ ಆದೇಶ ಹೊರಡಿಸಿ ಆರೋಪಿಯನ್ನು ದೋಷಮುಕ್ತಗೊಳಿಸಬಹುದು. ಆರೋಪಿಗಳ ವಿರುದ್ಧ ದೋಷಾರೋಪಣೆ ರಚಿಸಲು ಸಾಕ್ಷ್ಯಾಧಾರಗಳು ಇದೆಯೆಂದು ಮನವರಿಕೆಯಾದಲ್ಲಿ ಕಲಂ 228 ರ ಪ್ರಕಾರ ಸೆಷನ್ಸ್ ನ್ಯಾಯಾಲಯವು ಆರೋಪಿಯ ವಿರುದ್ಧ ದೋಷಾರೋಪಣೆ ರಚಿಸತಕ್ಕದ್ದು.
ಆರೋಪಿಯ ವಿರುದ್ಧದ ದೋಷಾರೋಪಣೆಯನ್ನು ಆತನಿಗೆ ತಿಳಿಯುವ ಭಾಷೆಯಲ್ಲಿ ಓದಿ ಹೇಳತಕ್ಕದ್ದು. ತನ್ನ ವಿರುದ್ಧ ಮಾಡಲಾದ ಆರೋಪಗಳನ್ನು ಒಪ್ಪಿಕೊಂಡಲ್ಲಿ ಆರೋಪಿಗೆ ಕಲಂ 229 ರಡಿ ಶಿಕ್ಷೆ ವಿಧಿಸಲಾಗುವುದು. ಸಾಮಾನ್ಯವಾಗಿ ಯಾವ ಆರೋಪಿಯೂ ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಳ್ಳುವುದಿಲ್ಲ. ತಾನು ಯಾವುದೇ ತಪ್ಪು ಮಾಡಿಲ್ಲ ಹಾಗಾಗಿ ವಿಚಾರಣೆಯನ್ನು ಎದುರಿಸುತ್ತೇನೆಂದು ನ್ಯಾಯಾಲಯಕ್ಕೆ ತಿಳಿಸುತ್ತಾನೆ.ಕಲ೦ 230 ರಡಿ ಸೆಷನ್ಸ್ ನ್ಯಾಯಾಲಯವು ಸಾಕ್ಷಿಗಳು ವಿಚಾರಣೆಗೆ ದಿನ ನಿಗದಿ ಪಡಿಸ ತಕ್ಕದ್ದು. ಅಭಿಯೋಜಕರ ಮನವಿಯ ಮೇರೆಗೆ ನ್ಯಾಯಾಲಯವು ಸಾಕ್ಷಿ ನುಡಿಯಲು ಸಾಕ್ಷ್ಯದಾರರಿಗೆ ಸಮನ್ಸ್ ಕಳುಹಿಸಬೇಕು. ಕಲ೦ 273 ರಡಿ ವಿಚಾರಣೆಯು ಆರೋಪಿಯ ಸಮಕ್ಷಮ ನಡೆಯತಕ್ಕದ್ದು. ಆರೋಪಿಯ ಗೈರುಹಾಜರಿಯಲ್ಲಿ ಆತನ ವಕೀಲರ ಸಮಕ್ಷಮ ನಡೆಯತಕ್ಕದ್ದು. ಒಬ್ಬ ಸಾಕ್ಷಿದಾರ ನ್ಯಾಯಾಲಯದಲ್ಲಿ ಸಾಕ್ಷಿ ನಡೆಯುತ್ತಿರುವಾಗ ಪ್ರಕರಣದ ಇತರ ಸಾಕ್ಷಿದಾರರು ನ್ಯಾಯಾಂಗಣದಲ್ಲಿ ಉಪಸ್ಥಿತರಿರಬಾರದು. ಕಲಂ 231 ರ ಪ್ರಕಾರ ಮುಖ್ಯ ವಿಚಾರಣೆಯ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಸಾಕ್ಷ್ಯ ಗಳನ್ನು ಹಾಜರುಪಡಿಸಲು ನ್ಯಾಯಾಲಯವು ಅಭಿಯೋಜಕರಿಗೆ ಅನುಮತಿ ನೀಡತಕ್ಕದ್ದು. ಸಾಕ್ಷಿದಾರರ ಪಾಟಿಸವಾಲಿಗೆ ಆರೋಪಿ ಪರ ವಕೀಲರಿಗೆ ಅವಕಾಶ ನೀಡತಕ್ಕದ್ದು. ಕಲಂ 276 ರ ಪ್ರಕಾರ ಸಾಕ್ಷಿಗಳ ವಿಚಾರಣೆಯನ್ನು ಲಿಖಿತ ರೂಪದಲ್ಲಿ ನ್ಯಾಯಾಧೀಶರು ದಾಖಲಿಸತಕ್ಕದ್ದು. ಕಲಂ 278(1) ರ ಪ್ರಕಾರ ಸಾಕ್ಷಿದಾರರನು ನೀಡಿದ ಸಾಕ್ಷವನ್ನು ಆತನಿಗೆ ಓದಿ ಹೇಳಿ ಒಪ್ಪಿಗೆ ಬಳಿಕ ಆತನ ಸಹಿಯನ್ನು ಪಡೆಯತಕ್ಕದ್ದು. ಕಲಂ 311 ರಡಿ ನ್ಯಾಯಾಲಯವು ಪ್ರಕರಣಕ್ಕೆ ಅಗತ್ಯವೆನಿಸುವ ವ್ಯಕ್ತಿಯ ವಿಚಾರಣೆಗೆ ಸಮನ್ಸ್ ಹೊರಡಿಸಬಹುದು.


ಕಲಂ 313ರಡಿ ಆರೋಪಿಯ ಹೇಳಿಕೆ


ಸಾಕ್ಷಿಗಳು ನೀಡಿದ ಸಾಕ್ಷ್ಯಗಳ ಆಧಾರದಲ್ಲಿ ಕಲಂ 313 ರಡಿ ಆರೋಪಿಯ ಹೇಳಿಕೆಯನ್ನು ನ್ಯಾಯಾಲಯವು ದಾಖಲಿಸತಕ್ಕದ್ದು. ಸಾಕ್ಷಿ ವಿಚಾರಣೆಯಲ್ಲಿ ವೈಯಕ್ತಿಕವಾಗಿ ತನ್ನ ವಿರುದ್ಧ ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡಬಹುದು. ಕಲಂ 232ರಡಿ ಆರೋಪಿಯು ತಮ್ಮ ಪರವಾಗಿ ರಕ್ಷಣಾ ಸಾಕ್ಷಿಗಳ ವಿಚಾರಣೆ ನಡೆಸಲು ಅವಕಾಶವಿದೆ.


ವಾದ - ಪ್ರತಿವಾದ


ಸಾಕ್ಷಿ ವಿಚಾರಣೆ ಪೂರ್ಣಗೊಂಡ ಬಳಿಕ ಕಲಂ 234 ರಡಿ ಅಭಿಯೋಜಕರು ನ್ಯಾಯಾಲಯದ ಸಮಕ್ಷಮ ಪ್ರಕರಣದ ಸಾರಾಂಶದ ಬಗ್ಗೆ ಮೌಖಿಕ ವಾದ ಮಂಡಿಸುತ್ತಾರೆ. ಆರೋಪಿ ಅಥವಾ ಆತನ ಪರ ವಕೀಲರು ಸದರಿ ವಾದಕ್ಕೆ ಪ್ರತಿವಾದ ಮಂಡಿಸಲು ಹಕ್ಕುಳ್ಳವರಾಗಿರುತ್ತಾರೆ. ಕಲಂ 314 ರಡಿ ಕೂಡಾ ವಾದ ಮಂಡಿಸಲು ಅವಕಾಶವಿದೆ.


ತೀರ್ಪು


ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಬಳಿಕ ಕಲಂ 236 ರಡಿ ಸೆಷನ್ಸ್ ನ್ಯಾಯಾಲಯವು ತನ್ನ ತೀರ್ಪನ್ನು ಉದ್ಘೋಷಿಸುವುದು. ಆರೋಪಿಯನ್ನು ನ್ಯಾಯಾಲಯವು ಬಿಡುಗಡೆಗೊಳಿಸಬಹುದು. ಅಥವಾ ಆತನಿಗೆ ಶಿಕ್ಷೆಯನ್ನು ವಿಧಿಸಬಹುದು.


ಶಿಕ್ಷೆಯ ಪ್ರಮಾಣದ ಬಗ್ಗೆ ಅಹವಾಲು ಮಂಡಿಸಲು ಆರೋಪಿಗೆ ಅವಕಾಶ ನೀಡುವುದು


ತೀರ್ಪು ಉದ್ಘೋಷಿಸಿ ಆರೋಪಿಗೆ ಶಿಕ್ಷೆ ಘೋಷಿಸಿದ ಬಳಿಕ ಶಿಕ್ಷೆಯ ಪ್ರಮಾಣವನ್ನು ನಿಗದಿ ಪಡಿಸುವ ಮೊದಲು ಶಿಕ್ಷೆಯ ಕುರಿತು ತನ್ನ ಅಹವಾಲನ್ನು ಮಂಡಿಸಲು ಕಲಂ 235 (2) ರಡಿ ಆರೋಪಿಗೆ ಅವಕಾಶವನ್ನು ನ್ಯಾಯಾಲಯವು ನೀಡತಕ್ಕದ್ದು.


ಆದೇಶಿಕೆ (Process)


ಮೊದಲಿಗೆ ಆರೋಪಿಗೆ ಸಮನ್ಸ್ ಅನ್ನು ಕಳುಹಿಸಲಾಗುವುದು. ಸಮನ್ಸ್ ಜಾರಿಯಾದರೂ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದಿದ್ದಲ್ಲಿ ಜಾಮೀನು ರಹಿತ ವಾರಂಟನ್ನು ಕಳುಹಿಸಲಾಗುವುದು ಪ್ರಕರಣದಲ್ಲಿ ಹಲವಾರು ಆರೋಪಿಗಳಿದ್ದು ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದರೆ ಆತನನ್ನು ಪ್ರಕರಣದಿಂದ ಬೇರ್ಪಡಿಸಿ ಆತನ ವಿರುದ್ಧ ಪ್ರತ್ಯೇಕ ಪ್ರಕರಣವನ್ನು ದಾಖಲಿಸತಕ್ಕದ್ದು. ಸಾಕ್ಷಿದಾರರಿಗೆ ನೀಡಿರುವ ಸಮನ್ಸ್ ಗೆ ಮುಖ್ಯ ಲಿಪಿಕ ಅಧಿಕಾರಿ ಸಹಿ ಮಾಡಬಹುದು. ಆದರೆ ಸಾಕ್ಷಿದಾರರ ಸಮನ್ಸ್ ಅನ್ನು ಹೊರತುಪಡಿಸಿ ಉಳಿದ ಎಲ್ಲಾ ಆದೇಶಿಕೆಗಳಿಗೆ ಪೀಠಾಸೀನಾಧಿಕಾರಿಗಳಾದ ನ್ಯಾಯಾಧೀಶರೇ ಸಹಿ ಮಾಡತಕ್ಕದ್ದು. ಆರೋಪಿಯು ಬೇರೊಂದು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರೆ ಆತನನ್ನು ಹಾಜರು ಪಡಿಸಲು ಜೈಲು ಅಧಿಕಾರಿಗಳಿಗೆ ಬಾಡಿ ವಾರಂಟ್ ಹೊರಡಿಸತಕ್ಕದ್ದು. ಶಿಕ್ಷೆಗೊಳಪಟ್ಟ ಆರೋಪಿಗೆ ಶಿಕ್ಷಾ ಅಧಿಪತ್ರ (Conviction warrant) ಹೊರಡಿಸಿ ಶಿಕ್ಷೆಯ ಪ್ರಮಾಣವನ್ನು ಸದರಿ ಅಧಿಪತ್ರದಲ್ಲಿ ನಮೂದಿಸತಕ್ಕದ್ದು. ಆರೋಪಿಯು ವಿಚಾರಣೆಯ ಅವಧಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರೆ ಸದರಿ ಅವಧಿಯನ್ನು ಶಿಕ್ಷೆಯ ಪ್ರಮಾಣದಲ್ಲಿ ಕಡಿತಗೊಳಿಸಬೇಕೆಂಬ ಆದೇಶವಿದ್ದಲ್ಲಿ ಸದರಿ ಅವಧಿಯನ್ನು ಕಡಿತಗೊಳಿಸಬೇಕೆಂದು ಅಧಿಪತ್ರದಲ್ಲಿ ನಮೂದಿಸಬೇಕು.


ಘೋಷಿತ ಅಪರಾಧಿ (Proclaimed Offender)


ಕೆಲವು ಪ್ರಕರಣಗಳಲ್ಲಿ ಆರೋಪಿಯು ತಲೆಮರೆಸಿಕೊಂಡಿರುತ್ತಾರೆ. ಮೊದಲ ಹಂತದಲ್ಲಿ ಆತನ ಹಾಗೂ ಆತನ ಜಾಮೀನುದಾರನ ಜಾಮೀನು ಮುಚ್ಚಳಿಕೆಯನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಬೇಕು. ಬಳಿಕ ಕಲ೦ 82; 83 ಪ್ರಕಾರ ಆತನ ಚರ ಹಾಗೂ ಸ್ಥಿರ ಸ್ವತ್ತುಗಳನ್ನು ಜಪ್ತಿ ಪಡಿಸಬೇಕು. ಆದರೂ ನ್ಯಾಯಾಲಯಕ್ಕೆ ಹಾಜರಾಗದಿದ್ದಲ್ಲಿ ಆತನ ವಿರುದ್ಧ ಇಸ್ತಿ ಹಾರ್ನಾಮೆ (proclamation) ಹೊರಡಿಸಿ ಘೋಷಿತ ಅಪರಾಧಿ ಎಂದು ಘೋಷಿಸಬೇಕು. ಬಳಿಕ ಪ್ರಕರಣವನ್ನು ಬೇರ್ಪಡಿಸಿ ಲಾಂಗ್ ಪೆಂಡಿಂಗ್ ರಿಜಿಸ್ಟರ್ ಗೆ ವರ್ಗಾಯಿಸಬೇಕು.


ಜಾಮೀನುದಾರನ ಜವಾಬ್ದಾರಿಗಳು


ಆರೋಪಿಗೆ ನ್ಯಾಯಾಲಯವು ಜಾಮೀನು ನೀಡಿದಾಗ ಒ೦ದು ನಿರ್ದಿಷ್ಟ ಮೊತ್ತವನ್ನು ನಿಗದಿ ಪಡಿಸಿ ಒಬ್ಬರು ಅಥವಾ ಇಬ್ಬರು ಜಾಮೀನುದಾರೊ೦ದಿಗೆ ಜಾಮೀನು ಮುಚ್ಚಳಿಕೆ ಬರೆದುಕೊಡಬೇಕೆಂದು ಆದೇಶವಾಗುತ್ತದೆ. ಒ೦ದು ವೇಳೆ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಲ್ಲಿ ಜಾಮೀನುದಾರನು ಜಾಮೀನು ಮುಚ್ಚಳಿಕೆ ಯಲ್ಲಿ ಬರೆದ ಮೊತ್ತವನ್ನು ನ್ಯಾಯಾಲಯಕ್ಕೆ ಪಾವತಿಸತಕ್ಕದ್ದು. ತಪ್ಪಿದ್ದಲ್ಲಿ ಆತನ ವಿರುದ್ಧ ಸಂಕೀರ್ಣ ಪ್ರಕರಣವನ್ನು (Crl.Misc.Case) ಕಲ೦ 446 ರಡಿ ದಾಖಲಿಸಿ ಜಾಮೀನು ಮುಚ್ಚಳಿಕೆ ಮೊತ್ತವನ್ನು ಆತನ ಆಸ್ತಿ ಜಪ್ತಿ ಮಾಡುವುದರ ಮೂಲಕ ವಸೂಲು ಮಾಡಲಾಗುವುದು.


ದಂಡ ವಸೂಲಾತಿ (Recovery of fine)


ಆರೋಪಿಗೆ ಶಿಕ್ಷೆಯ ಜತೆಗೆ ದಂಡವನ್ನೂ ವಿಧಿಸಿದಲ್ಲಿ ಸದರಿ ದಂಡದ ಹಣವನ್ನು ವಸೂಲು ಮಾಡಿ ಸರಕಾರಕ್ಕೆ ಪಾವತಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳತಕ್ಕದ್ದು. ಒ೦ದು ವೇಳೆ ದಂಡದ ಹಣವನ್ನು ನೊಂದ/ ಬಾಧಿತ ವ್ಯಕ್ತಿಗೆ ಪರಿಹಾರವಾಗಿ ನೀಡಬೇಕೆಂಬ ಆದೇಶ ಇದ್ದಲ್ಲಿ ಅ೦ಥವರನ್ನು ನ್ಯಾಯಾಲಯಕ್ಕೆ ಕರೆಸಿ ಪರಿಹಾರದ ಮೊತ್ತವನ್ನು ಅವರಿಗೆ ನೀಡತಕ್ಕದ್ದು.


ಮುದ್ದೆಮಾಲುಗಳ ವಿಲೇವಾರಿ


ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಹಾಜರು ಪಡಿಸಿದ ಮುದ್ದೆಮಾಲುಗಳನ್ನು ಪ್ರಸ್ತುತ ಸೆಷನ್ಸ್ ನ್ಯಾಯಾಧೀಶರು ವಿಲೇವಾರಿ ಮಾಡಲು ಆದೇಶ ಹೊರಡಿಸುತ್ತಾರೆ. ಈ ಹಿಂದೆ ತೊಂಬತ್ತರ ದಶಕದ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಷನ್ಸ್ ನ್ಯಾಯಾಧೀಶರು ಸೆಷನ್ಸ್ ಕೇಸುಗಳಲ್ಲಿ ಮುದ್ದೆ ಮಾಲು ಗಳ ವಿಲೇವಾರಿ ಕುರಿತು ಆದೇಶ ಹೊರಡಿಸಿ ತೀರ್ಪಿನ ಪ್ರತಿಯೊಂದಿಗೆ ಮುದ್ದೆಮಾಲುಗಳನ್ನು ವಿಲೇವಾರಿಗಾಗಿ ಸಂಬಂಧಪಟ್ಟ ಕಮಿಟಲ ಕೋರ್ಟಿಗೆ ಕಳುಹಿಸುತ್ತಿದ್ದರು. ಮ್ಯಾಜಿಸ್ಟ್ರೇಟರು ಸೆಷನ್ಸ್ ನ್ಯಾಯಾಧೀಶರ ತೀರ್ಪಿನ ಪ್ರಕಾರ ಮುದ್ದೆ ಮಾಲುಗಳ ವಿಲೇವಾರಿ ಮಾಡುತ್ತಿದ್ದರು.


1988; 1989ರಲ್ಲಿ ನೂತನ ಕಾಯ್ದೆಗಳಾದ NDPS Act; P.C.Act; SCST (P.A.) Act ಗಳಡಿ ಸೆಷನ್ಸ್ ನ್ಯಾಯಾಧೀಶರು ಪೀಠಾಸೀನಾಧಿಕಾರಿ ಗಳಾಗಿರುವ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಯಾಯಿತು. ಸದರಿ ವಿಶೇಷ ನ್ಯಾಯಾಲಯಗಳು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪ್ರಥಮ ವರ್ತಮಾನ ವರದಿ ಸ್ವೀಕರಿಸುವುದರಿಂದ ಹಿಡಿದು ಪ್ರಕರಣದ ತೀರ್ಪು ಘೋಷಿಸುವ ವರಗೆ ಮೂಲ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಕಾರಣ ಮುದ್ದೆ ಮಾಲು ಗಳ ವಿಲೇವಾರಿ ಕೂಡ ಮಾಡಬೇಕಾಯಿತು.


ಪ್ರಸ್ತುತ ಸ್ಪೆಷಲ್ ಕೇಸುಗಳ ವಿಶೇಷ ಪ್ರಕರಣಗಳ ಜತೆಗೆ ಸೆಷನ್ಸ್ ಪ್ರಕರಣಗಳಿಗೆ ಸಂಬಂಧಪಟ್ಟ ಮುದ್ದೆ ಮಾಲುಗಳ ವಿಲೇವಾರಿಯನ್ನು ಕೂಡ ಸೆಷನ್ಸ್ ನ್ಯಾಯಾಧೀಶರು ಮಾಡುತ್ತಿದ್ದಾರೆ. ಮುದ್ದೆಮಾಲುಗಳನ್ನು ಹಿಂಪಡೆಯಲು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಹಕ್ಕೊತ್ತಾಯ ಮಂಡಿಸಿದಲ್ಲಿ ಕಲಂ 452 ರಡಿ ಜಿಲ್ಲೆಯ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಿಗೆ (CJM) ಮುದ್ದೆಮಾಲುಗಳಿಗೆ ಸಂಬಂಧಪಟ್ಟ೦ತೆ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸುವಂತೆ ಮುದ್ದೆಮಾಲುಗಳನ್ನು ಹಾಗೂ ಕಡತವನ್ನು ಸಿಜೆಎಂ ಕೋರ್ಟಿಗೆ ಕಳುಹಿಸಲು ಸೆಷನ್ಸ್ ನ್ಯಾಯಾಧೀಶರು ಅಧಿಕಾರ ಹೊಂದಿರುತ್ತಾರೆ.

ಲೇಖನ: ಪ್ರಕಾಶ್ ನಾಯಕ್; ಶಿರಸ್ತೇದಾರರು; ಜ್ಯೂಡಿಷಿಯಲ್ ಸರ್ವೀಸ್ ಸೆಂಟರ್; ಮಂಗಳೂರು

Ads on article

Advertise in articles 1

advertising articles 2

Advertise under the article