-->
2021 Major decisions of Karnataka HC- ಹೈಕೋರ್ಟ್ ಮಹತ್ವದ ತೀರ್ಪುಗಳು: 2021ರ ಒಂದು ಹಿನ್ನೋಟ

2021 Major decisions of Karnataka HC- ಹೈಕೋರ್ಟ್ ಮಹತ್ವದ ತೀರ್ಪುಗಳು: 2021ರ ಒಂದು ಹಿನ್ನೋಟ

ಹೈಕೋರ್ಟ್ ಮಹತ್ವದ ತೀರ್ಪುಗಳು: 2021ರ ಒಂದು ಹಿನ್ನೋಟ


ಕೋವಿಡ್ ಸಂಕಷ್ಟ ಮತ್ತು ಇತ್ಯರ್ಥಗೊಳ್ಳದೆ ಬಾಕಿ ಉಳಿದಿರುವ ಲಕ್ಷಾಂತರ ಪ್ರಕರಣಗಳ ಮಧ್ಯೆ, ಕರ್ನಾಟಕ ಹೈಕೋರ್ಟ್ 2021ನೇ ವರ್ಷದಲ್ಲಿ ದೇಶದಲ್ಲೇ ಮಾದರಿಯಾಗಿ ಕಾರ್ಯ ನಿರ್ವಹಿಸಿದೆ. ವರ್ಚುಯಲ್ ಕಲಾಪ ನಡೆಸಿ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಪಡಿಸಿರುವ ಹೈಕೋರ್ಟ್ 2021ರಲ್ಲಿ ಹಲವು ಮಹತ್ವದ, ಐತಿಹಾಸಿಕ ತೀರ್ಪುಗಳನ್ನು ಪ್ರಕಟಿಸಿದೆ.


ಅವುಗಳ ಸಂಕ್ಷಿಪ್ತ ವರದಿ ಇಲ್ಲಿದೆ.


ಯತಿ ನೇಮಕ ವಿವಾದ: 'ಬಾಲ ಸನ್ಯಾಸ'ಕ್ಕೆ ಕಾನೂನು ನಿರ್ಬಂಧವಿಲ್ಲ

ಕೃಷ್ಣನಗರಿ ಉಡುಪಿಯ ಅಷ್ಟ ಮಠಗಳಲ್ಲೊಂದಾದ ಶಿರೂರು ಮಠದ ಉತ್ತರಾಧಿಕಾರಿ ನೇಮಕ ಪ್ರಕರಣ. 16 ವರ್ಷದ ಬಾಲಕ ಅನಿರುದ್ಧ ಸರಳತ್ತಾಯ (ವೇದವರ್ಧನ ತೀರ್ಥ) ಅವರ ಪೀಠಾಧಿಪತಿ ನೇಮಕ ಪ್ರಶ್ನಿಸಿ ಮಠದ ಭಕ್ತಸಮಿತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.


ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರಶರ್ಮಾ ನೇತೃತ್ವದ ವಿಭಾಗೀಯ ಪೀಠ ಈ ಅರ್ಜಿ ವಿಚಾರಣೆ ನಡೆಸಿತು.


ಬೌದ್ಧ ಮತ್ತು ಜೈನ ಧರ್ಮಗಳಲ್ಲೂ ಬಾಲಕರನ್ನು ಭಿಕ್ಕುಗಳಾಗಿ, ಸನ್ಯಾಸಿಗಳಾಗಿ ನೇಮಕ ಮಾಡುವ ರೂಢಿ/ಪದ್ಧತಿ ಇದೆ. ಬಾಲ ಸನ್ಯಾಸ ಪದ್ಧತಿಗೆ ಹಿಂದೂ ಧರ್ಮದಲ್ಲೂ ಸಮ್ಮತಿಯಿದೆ. ಬಾಲಕರನ್ನು ಸನ್ಯಾಸಿಯಾಗಿ ನೇಮಕ ಮಾಡದಂತೆ ನಿರ್ಬಂಧಿಸುವ ಯಾವುದೇ ಕಾನೂನು ಸದ್ಯ ಅಸ್ತಿತ್ವದಲ್ಲಿ ಇಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿತು.ಸರ್ಕಾರಿ ಕೆಲಸದಲ್ಲಿ ತೃತೀಯ ಲಿಂಗಿಗಳಿಗೆ ಮೀಸಲು

ನೇಮಕಾತಿ ಸಂದರ್ಭದಲ್ಲಿ ಮೀಸಲು ಪೊಲೀಸ್ ಪಡೆ ತಮಗೆ ಅವಕಾಶ ನೀಡಿಲ್ಲ ಎಂದು ತೃತೀಯ ಲಿಂಗಿಗಳ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಸಂಘ-ಸಂಸ್ಥೆ ಸಲ್ಲಿಸಿದ್ದ ಹೈಕೋರ್ಟಿಗೆ ಅರ್ಜಿ ಸಲ್ಲಿಸಿತು.


ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾ. ಎ.ಎಸ್. ಓಕ್ ಅವರನ್ನೊಳಗೊಂಡ ಪೀಠ, ಈ ವಿಚಾರದಲ್ಲಿ ಸೂಕ್ತ ಕ್ರಮ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.


ರಾಜ್ಯ ಸರ್ಕಾರವು ನಾಗರಿಕ ಸೇವೆಗಳ ಸಾಮಾನ್ಯ ನೇಮಕಾತಿ ನಿಯಮಗಳು-1977ಕ್ಕೆ ನ್ಯಾಯಾಲಯದ ನಿರ್ದೇಶನದ ಮೇರೆಗೆ ತಿದ್ದುಪಡಿ ತಂದಿತು. ಈ ತಿದ್ದುಪಡಿಯಲ್ಲಿ 'ತೃತೀಯ ಲಿಂಗಿ'ಗಳಿಗೆ ಎಲ್ಲಾ ಪ್ರವರ್ಗಗಳಲ್ಲೂ ಶೇ 1ರಷ್ಟು ಸಮತಲ ಮೀಸಲಾತಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿತು. ಇದು ಐತಿಹಾಸಿಕ ತೀರ್ಪು.
ಕೋವಿಡ್ ಸಂದರ್ಭದಲ್ಲಿ ನ್ಯಾಯಪೀಠದ ಮಹತ್ವದ ನಿರ್ದೇಶನಗಳು

ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮಾನ್ಯ ಹೈಕೋರ್ಟ್ 100ಕ್ಕೂ ಹೆಚ್ಚು ನಿರ್ದೇಶನಗಳು ನೀಡಿತು. ಹೈಕೋರ್ಟ್ ಮಧ್ಯಪ್ರವೇಶ ಮಾಡಿರುವುದು ಸೋಂಕು ನಿಯಂತ್ರಣದಲ್ಲಿ ಪರಿಣಾಮಕಾರಿ ಪಾತ್ರ ವಹಿಸಿತು.


ಮಾಸ್ಕ್ ಬಳಕೆ ಕಡ್ಡಾಯ,


ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ,


ಮುಂಚೂಣಿ ಕೋವಿಡ್ ವಾರಿಯರ್ಸ್ ಗೆ ಲಸಿಕೆ ನೀಡುವುದು,


ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳು ಮೃತಪಟ್ಟ ದುರ್ಘಟನೆಯ ತನಿಖೆಗೆ ವಿಶ್ರಾಂತ ನ್ಯಾ. ವೇಣುಗೋಪಾಲ ಗೌಡ ಸಮಿತಿ ರಚನೆ


ಮೃತರ ಕುಟುಂಬಕ್ಕೆ 5 ಲಕ್ಷ ರೂ. ವರೆಗೆ ಪರಿಹಾರಕ್ಕೆ ನಿರ್ದೇಶನ


ರಾಜ್ಯಕ್ಕೆ ಕೇಂದ್ರ ಸರ್ಕಾರ ತುರ್ತಾಗಿ ಅಗತ್ಯ ಪ್ರಮಾಣದಷ್ಟು ಆಮ್ಲಜನಕ , ಲಸಿಕೆ, ಪೂರೈಸಲೇಬೇಕು ಎಂಬ ಕಟ್ಟುನಿಟ್ಟಿನ ನಿರ್ದೇಶನ ಸೇರಿದಂತೆ ಕೋವಿಡ್ ನಿರ್ವಹಣೆಯಲ್ಲಿ ಹೈಕೋರ್ಟ್ ನೀಡಿದ ಗಮನಾರ್ಹ ಆದೇಶಗಳು.


ಬಾಬಾಬುಡನ್ ಗಿರಿ ವಿವಾದ ಇತ್ಯರ್ಥ

ಚಿಕ್ಕಮಗಳೂರು ಜಿಲ್ಲೆ ಬಾಬಾಬುಡನ್ ಗಿರಿ ಪೀಠದಲ್ಲಿ ಪೂಜೆ ನೆರವೇರಿಸುವ ಕುರಿತು ಉದ್ಬವಿಸಿದ್ದ ವಿವಾದವನ್ನು ನ್ಯಾ. ಪಿ. ಎಸ್. ದಿನೇಶ್ ಕುಮಾರ್ ಅವರಿದ್ಧ ಪೀಠ ಇತ್ಯರ್ಥಪಡಿಸಿತು. ಬಾಬಾ ಬುಡನ್ ಗಿರಿಯ ದತ್ತಪೀಠದಲ್ಲಿ ಪೂಜೆ ಮಾಡಲು ಮುಸ್ಲಿಂ ಧರ್ಮ ಗುರು ನೇಮಕ ಮಾಡಿದ್ದ ಸರ್ಕಾರಿ ಆದೇಶವನ್ನು ರದ್ದು ಮಾಡಿ ಪೀಠ ತೀರ್ಪು ನೀಡಿತು.

ಕೋಮು ಸೌಹಾರ್ದಕ್ಕೆ ಅಡ್ಡಿ ಎಂಬಂತಿದ್ದ ಸರ್ಕಾರದ ಆದೇಶ ರದ್ದುಪಡಿಸುವುದರ ಜತೆಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿತು. ಈ ತೀರ್ಪಿನಿಂದ ಹಿಂದೂಗಳಿಗೆ ಸಂಪ್ರದಾಯಬದ್ಧ ಪೂಜೆಯ ಹಕ್ಕು ದೊರೆಯಿತು.
ಕೊಡವರಿಗೆ ಬಂದೂಕು ಲೈಸೆನ್ಸ್ ವಿನಾಯಿತಿ

ಪಿಸ್ತೂಲ್, ಬಂದೂಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಶಸ್ತ್ರಾಸ್ತ್ರ ಕಾಯ್ದೆ - 1959ರ ಅಡಿ ಇಟ್ಟುಕೊಳ್ಳಲು ಕಡ್ಡಾಯವಾಗಿ ಲೈಸೆನ್ಸ್ ಪಡೆದುಕೊಳ್ಳುವುದರಿಂದ ಕೊಡವರಿಗೆ ವಿನಾಯಿತಿ ನೀಡಿದ್ದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ಈ ಮೂಲಕ ಕೊಡವರಿಗೆ ನೀಡಲಾಗಿದ್ದ ವಿಶೇಷ ವಿನಾಯಿತಿಯನ್ನು ಎತ್ತಿ ಹಿಡಿಯಿತು.
ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಮ್ಮತಿ

Covid 19 ಹಿನ್ನೆಲೆಯಲ್ಲಿ SSLC ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ನ್ಯಾಯಮೂರ್ತಿ ಬಿ.ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಪರೀಕ್ಷೆಗಳನ್ನು ನಡೆಸುವಂತೆ ಸರ್ಕಾರಕ್ಕೆ ಆದೇಶಿಸಿತು.ಪಿಯು ವಿದ್ಯಾರ್ಥಿಗಳನ್ನು ಪಾಸು ಮಾಡಿದಂತೆಯೇ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನೂ ಪಾಸ್ ಮಾಡುವಂತೆ ಅರ್ಜಿ ಸಲ್ಲಿಸಿತ್ತು.ಕೋವಿಡ್ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ವಿದ್ಯಾರ್ಥಿಗಳ ಸಹಿತ ಪೋಷಕರು, ಶಿಕ್ಷಕರು ಆರೋಗ್ಯ ಸಮಸ್ಯೆಗೆ ತುತ್ತಾಗಲಿದ್ದಾರೆ ಎಂದು ಟ್ರಸ್ಟ್ ವಾದಿಸಿತ್ತು. ಪಿಯು ವಿದ್ಯಾರ್ಥಿಗಳು ಕನಿಷ್ಠ ಒಂದಾದರೂ ಬೋರ್ಡ್ ಪರೀಕ್ಷೆ ಎದುರಿಸಿದ್ದಾರೆ. ಆದರೆ, SSLC ವಿದ್ಯಾರ್ಥಿಗಳು ಒಂದೂ ಬೋರ್ಡ್ ಪರೀಕ್ಷೆ ಎದುರಿಸಿಲ್ಲ ಹಾಗಾಗಿ, ಅವರನ್ನು ಪಾಸು ಮಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿತು.
ಫ್ಲಿಪ್ ಕಾರ್ಟ್-ಅಮೆಜಾನ್ ವಿರುದ್ಧ ತನಿಖೆಗೆ ಸಮ್ಮತಿ

ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಇ-ಕಾಮರ್ಸ್ ದೈತ್ಯ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ವಿರುದ್ಧ ತನಿಖೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾ. ಪಿ.ಎಸ್ ದಿನೇಶ್ ಕುಮಾರ್ ಅವರಿದ್ಧ ಪೀಠ ವಜಾಗೊಳಿಸಿತು.


ಆನ್‌ಲೈನ್ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಸರಕುಗಳನ್ನು ಮಾರುವ ಮೂಲಕ ಸ್ಪರ್ಧಾ ಕಾಯ್ಗೆಯ ನಿಯಮಗಳನ್ನು ಈ ಸಂಸ್ಥೆಗಳು ಗಾಳಿಗೆ ತೂರಿವೆ ಎಂದು ಆರೋಪಿಸಿ ದೆಹಲಿ ವ್ಯಾಪಾರಸ್ಥರ ಸಂಘ ಸಲ್ಲಿಸಿದ್ದ ದೂರಿನ ಮೇರೆಗೆ ಸಿಸಿಐ ಅಮೆಜಾನ್-ಫ್ಲಿಪ್ ಕಾರ್ಟ್ ವಿರುದ್ಧ ತನಿಖೆಗೆ ಆದೇಶಿಸಿತ್ತು.


ಇದನ್ನು ಪ್ರಶ್ನಿಸಿ ಸಂಸ್ಥೆಗಳು ಅರ್ಜಿ ಸಲ್ಲಿಸಿದಾಗ, ಲೋಪ ಎಸಗಿಲ್ಲ ಎಂದಾದರೆ ತನಿಖೆಗೆ ಹೆದರಿಕೆ ಏಕೆ ಎಂದು ಪ್ರಶ್ನಿಸಿದ ಪೀಠ, ತನಿಖೆ ಎದುರಿಸುವಂತೆ ಸೂಚಿಸಿತ್ತು.ಮಲತಾಯಿ ಮಡಿಲಿಗೆ ಮಗು ಒಪ್ಪಿಸಲಾಗದು

ಮುಸ್ಲಿಂ ದಂಪತಿಗಳು ಬೇರೆಯಾದಾಗ ಮಲತಾಯಿ ಮಡಿಲಿಗೆ ಮಗು ಒಪ್ಪಿಸುವುದು ಸರ್ವತಾ ಸರಿಯಲ್ಲ ಎಂದು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ಧ ಪೀಠ ತೀರ್ಪು ನೀಡಿತು.


ತಾಯಿ ಜೊತೆ ಮಗು ಬೆಳೆಯಬೇಕು ಮತ್ತು ಮಗು ಅಲ್ಲಿಯೇ ಹೆಚ್ಚು ಸುರಕ್ಷಿತ ಭಾವ ಹೊಂದಿರುತ್ತದೆ ಎಂದು ಪೀಠ ಆದೇಶ ನೀಡಿತು.


ಆರ್ಥಿಕವಾಗಿ ತಾನು ಶ್ರೀಮಂತನಾಗಿದ್ದ, ಮಗುವನ್ನು ತಾಯಿ ಬದಲಿಗೆ ನನ್ನೊಂದಿಗೆ ಇರಿಸಿಕೊಳ್ಳಲು ಆದೇಶ ನೀಡಬೇಕು ಎಂದು ಕೋರಿದ್ದ ತಂದೆಗೆ 50 ಸಾವಿರ ದಂಡ ವಿಧಿಸಲಾಯಿತು.
ವಿಚ್ಚೇದಿತ ಮಹಿಳೆಗೆ ಜೀವನಾಂಶ

ಮುಸ್ಲಿಂ ವಿಚ್ಚೇದಿತ ಮಹಿಳೆಗೆ ಜೀವನಾಂಶ ನೀಡುವುದು ಕಡ್ಡಾಯ ಎಂಬ ಮಹತ್ವದ ತೀರ್ಪು ಪ್ರಕಟಿಸಿದ್ದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ಕುರಾನ್ ವಿಶ್ಲೇಷಣೆ ಮಾಡಿತ್ತು. ಈ ತೀರ್ಪು ಜನಮನ್ನಣೆ ಗಳಿಸಿತ್ತು.
ಚುನಾವಣೆ ನಡೆಸಲು ಆದೇಶ

ಸ್ಥಳೀಯ ಆಡಳಿತ ಸಂಸ್ಥೆಗಳ ಅವಧಿ ಮುಗಿದರೂ ಎಲೆಕ್ಷನ್ ಗೆ ಮುಂದಾಗದ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಅಲ್ಲದೆ, ನಿಗದಿತ ಕಾಲಾವಧಿಯಲ್ಲೇ ಎಲೆಕ್ಷನ್ ನಡೆಸಲು ನಿರ್ದೇಶಿಸಿತು.


ಕೋವಿಡ್ ಕಾರಣವನ್ನೇ ಮುಂದಿಟ್ಟುಕೊಂಡು ಹುಬ್ಬಳ್ಳಿ-ಧಾರವಾಡ, ಕಲಬುರಗಿ, ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಆಡಳಿತಾವಧಿ ಪೂರ್ಣಗೊಂಡ ನಂತರವೂ ಚುನಾವಣೆ ನಡೆಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಹೈಕೋರ್ಟ್, ಶಾಸಕ-ಸಂಸದರ ಚುನಾವಣೆಗಳಿಗೆ ಇಲ್ಲದ ಕೋವಿಡ್ ಸಮಸ್ಯೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಡ್ಡಿ ಮಾಡುತ್ತಿದೆಯೇ ಎಂದು ಸರ್ಕಾರಕ್ಕೆ ಚಾಟಿ ಬೀಸಿತ್ತು.


 ಅಲ್ಲದೇ, ಸ್ಥಳೀಯ ಸಂಸ್ಥೆಗಳಿಗೆ ಇದೇ ಡಿ.30ರೊಳಗೆ ಚುನಾವಣೆ ನಡೆಸುವಂತೆ ಆದೇಶಿಸಿತು. ಅದೇ ರೀತಿ, ಒಕ್ಕಲಿಗರ ಸಂಘ ಸಹಿತ ವಿವಿಧ ಸಂಘ ಸಂಸ್ಥೆಗಳಿಗೆ ಚುನಾವಣೆ ನಸಲು ಸರ್ಕಾರಕ್ಕೆ ನಿರ್ದೇಶನ ನೀಡಿತು.
ಮಹಿಳೆಯ ಗರ್ಭಧಾರಣೆ ಹಕ್ಕು

ಸಂತಾನೋತ್ಪತ್ತಿ ಮತ್ತು ಗರ್ಭಧಾರಣೆ ಮಹಿಳೆಯ ಮೂಲಭೂತ ಹಕ್ಕು. ಅದೇ ರೀತಿ ಒಲ್ಲದ ಗರ್ಭವನ್ನು ಧರಿಸುವಂತೆ ಆಕೆ ಮೇಲೆ ಒತ್ತಡ ಹೇರಲಾಗದು. ಆದ್ದರಿಂದ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆಯ ಗರ್ಭಪಾತಕ್ಕೆ ಅನುಮತಿ ಇಲ್ಲ ಎನ್ನಲಾಗದು.


ಅತ್ಯಾಚಾರದಿಂದ ನಲುಗಿದ ಹೆಣ್ಣು ಜೀವಕ್ಕೆ ಗರ್ಭಪಾತದ ಅನುಮತಿ ನೀಡದಿದ್ದರೆ ಈಗಾಗಲೇ ನೊಂದಿರುವ ಆಕೆಗೆ ಮತ್ತಷ್ಟು ಶಿಕ್ಷೆ ನೀಡಿದಂತೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. 

ಹಾಗೂ ಭ್ರೂಣ ತೆಗೆಸಲು ಅನುಮತಿ ನೀಡುವ ಮೂಲಕ ಮಹತ್ವದ ತೀರ್ಪು ಪ್ರಕಟಿಸಿತು.


'ವೈದ್ಯಕೀಯ ಗರ್ಭಪಾತ ಕಾಯ್ದೆ-1971'ರ ಸೆಕ್ಷನ್ 3ರ ಅಡಿ ಗರ್ಭ ಧರಿಸಿ 24 ವಾರಗಳು ಪೂರ್ಣಗೊಂಡಿದ್ದರೆ ಗರ್ಭಪಾತ ಮಾಡಲಾಗದು ಎಂಬುದು ವೈದ್ಯಕೀಯ ಅಧಿಕಾರಿಗಳ ವಾದವಾಗಿತ್ತು.ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗೀಕರಣ


ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಹಾಗೂ ಅಭಿವೃದ್ಧಿಗೆ ಅದಾನಿ ಸಂಸ್ಥೆಗೆ ನೀಡಿದ್ದ ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು.


ವಿಮಾನ ನಿಲ್ದಾಣ ನೌಕರರ ಸಂಘ ಈ ಅರ್ಜಿ ಸಲ್ಲಿಸಿತ್ತು.

ವಿಮಾನ ನಿಲ್ದಾಣವನ್ನು ಅನ್ಯರಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ನಿರ್ಧಾರ ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ. ಇದರಲ್ಲಿ ನ್ಯಾಯಾಲಯ ಮಧ್ಯ ಪ್ರವೇಶದು ಎಂದ ನ್ಯಾಯಪೀಠ, ಕೇಂದ್ರದ ಏರ್‌ಪೊರ್ಟ್ ಖಾಸಗೀಕರಣ ನೀತಿಯನ್ನು ಎತ್ತಿ ಹಿಡಿಯಿತು.
Ads on article

Advertise in articles 1

advertising articles 2

Advertise under the article