-->
Release fund to KSLSA- Ktk HC directs Govt : ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹಣ ನೀಡಿ, ಇಲ್ಲವೇ ಖುದ್ದು ಹಾಜರಾಗಿ: ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು

Release fund to KSLSA- Ktk HC directs Govt : ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹಣ ನೀಡಿ, ಇಲ್ಲವೇ ಖುದ್ದು ಹಾಜರಾಗಿ: ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು

ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹಣ ಬಿಡುಗಡೆ ಮಾಡಿ, ಇಲ್ಲವೇ ವಿಚಾರಣೆಗೆ ಖುದ್ದು ಹಾಜರಾಗಿ: ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು



  • ಸಂತ್ರಸ್ತರ ಪರಿಹಾರ ಯೋಜನೆಯ ಸಮರ್ಪಕ ಅನುಷ್ಟಾನ
  • ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ರೂ. 5 ಕೋಟಿ ಬಿಡುಗಡೆ ಮಾಡಿ
  • ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಗಡುವು
  • 2 ವರ್ಷಗಳಿಂದ ರಾಜ್ಯ ಸರ್ಕಾರ ಯಾವುದೇ ಹಣ ಬಿಡುಗಡೆ ಮಾಡಿಲ್ಲ
  • ನ್ಯಾಯಪೀಠಕ್ಕೆ ತಿಳಿಸಿದ ವಕೀಲೆ ನಿಧಿಶ್ರೀ ವೇಣುಗೋಪಾಲ್‌




'ಸಂತ್ರಸ್ತರ ಪರಿಹಾರ ಯೋಜನೆ' ಜಾರಿಗಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (KSLSA) 2022ರ ಜನವರಿ 24ರೊಳಗೆ ಐದು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ. ಇಲ್ಲವಾದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮುಂದಿನ ವಿಚಾರಣೆಗೆ ಖುದ್ದು ಹಾಜರಿರಬೇಕು ಎಂದು ಆದೇಶಿಸಿದೆ.


ಅತ್ಯಾಚಾರ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಮಾರ್ಗಸೂಚಿ ರಚನೆ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ 'ಪೀಪಲ್ಸ್ ಮೂವ್‌ಮೆಂಟ್ ಅಗೈನ್ಸ್ಟ್ ಸೆಕ್ಷ್ಯುಯಲ್ ಅಸಾಲ್ಟ್' ಸಂಸ್ಥೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.




ಸಂತ್ರಸ್ತ ಪರಿಹಾರ ಯೋಜನೆಯ ಸಮರ್ಪಕ ಜಾರಿಗಾಗಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಹಣ ಬಿಡುಗಡೆ ಮಾಡುವಂತೆ ನ್ಯಾಯಾಲಯ 2020ರ ಫೆಬ್ರವರಿ 19ರಂದು ಆದೇಶ ನೀಡಿತ್ತು. ಈ ಆದೇಶ ಪಾಲನೆಯಾಗಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿತು.




'ಇದಕ್ಕೆ ಸರ್ಕಾರ ಈವರೆಗೂ ಹಣ ಬಿಡುಗಡೆ ಮಾಡಿಲ್ಲ” ಎಂದು ಆರೋಪಿಸಿದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಪರ ವಕೀಲೆ ನಿಧಿಶ್ರೀ ವೇಣುಗೋಪಾಲ್‌, ಈ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸಲು 2 ವಾರ ಕಾಲಾವಕಾಶ ನೀಡುವಂತೆ ಕೋರಿದರು.





ಇದನ್ನು ಆಲಿಸಿದ ಪೀಠ, 2020ರ ಫೆಬ್ರವರಿ 19ರ ಆದೇಶದಂತೆ ಹಣ ಬಿಡುಗಡೆ ಮಾಡಲು ಜನವರಿ 24ರವರಗೆ ಸರ್ಕಾರಕ್ಕೆ ಕಾಲಾವಕಾಶ ನೀಡಿತು. ಈ ಆದೇಶದಂತೆ ಹಣ ಬಿಡುಗಡೆ ಮಾಡದಿದ್ದರೆ ಮುಂದಿನ ವಿಚಾರಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗಬೇಕು ಎಂದು ತಾಕೀತು ಮಾಡಿ ವಿಚಾರಣೆ ಮುಂದೂಡಿತು.



ಸಂತ್ರಸ್ತ ಪರಿಹಾರ ಯೋಜನೆ ಅಡಿಯಲ್ಲಿ 2020-21ನೇ ಸಾಲಿನಲ್ಲಿ ಪರಿಹಾರ ವಿತರಿಸಲು ರೂ. 20 ಕೋಟಿ ಅಗತ್ಯವಿದೆ ಎಂದು ಕಾನೂನು ಸೇವಾ ಪ್ರಾಧಿಕಾರ ಹೈಕೋರ್ಟ್‌ಗೆ ತಿಳಿಸಿತ್ತು. ಇದನ್ನು ಆಲಿಸಿದ ನ್ಯಾಯಪೀಠ ಅಗತ್ಯ ನಿಧಿಯಲ್ಲಿ ಕಾಲಂಶದ ಹಣವನ್ನು ಅಂದರೆ, 5 ಕೋಟಿ ರೂ. ಮೊತ್ತವನ್ನು 2020ರ ಮಾರ್ಚ್‌ 31ರೊಳಗೆ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿತ್ತು.

Ads on article

Advertise in articles 1

advertising articles 2

Advertise under the article