-->
Karnataka HC trial on Hijab Controversy - ಸಂವಿಧಾನವೇ ನಮಗೆ ಭಗವದ್ಗೀತೆ: ಕರ್ನಾಟಕ ಹೈಕೋರ್ಟ್ (ಹಿಜಬ್ ವಿವಾದ ಪ್ರಕರಣದ ವಿಚಾರಣೆ)

Karnataka HC trial on Hijab Controversy - ಸಂವಿಧಾನವೇ ನಮಗೆ ಭಗವದ್ಗೀತೆ: ಕರ್ನಾಟಕ ಹೈಕೋರ್ಟ್ (ಹಿಜಬ್ ವಿವಾದ ಪ್ರಕರಣದ ವಿಚಾರಣೆ)

ಸಂವಿಧಾನವೇ ನಮಗೆ ಭಗವದ್ಗೀತೆ: ಕರ್ನಾಟಕ ಹೈಕೋರ್ಟ್ (ಹಿಜಬ್ ವಿವಾದ ಪ್ರಕರಣದ ವಿಚಾರಣೆ)






ಉಡುಪಿಯ ಜೂನಿಯರ್ ಕಾಲೇಜುಗಳಲ್ಲಿ ಹಿಜಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಬಳಿಕ ಉಂಟಾಗಿರುವ ವಿವಾದ ಕುರಿತು ಕರ್ನಾಟಕ ಹೈಕೋರ್ಟ್ ನ್ಯಾಯತಿರ್ಮಾನದ ವಿಚಾರಣೆ ನಡೆಸಿತು.




ಭಾವೋದ್ರೇಕ ಅಥವಾ ಭಾವನಾತ್ಮಕವಾಗಿ ನಾವು ಈ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ಕಾನೂನಿನ ರೀತಿಯಲ್ಲಿಯೇ ಹೋಗುತ್ತೇವೆ ಎಂದು ನ್ಯಾಯಪೀಠ ಹೇಳಿತು.


ಸಂವಿಧಾನವು ನಮಗೆ ಏನು ಹೇಳುತ್ತದೆಯೋ ಅದರಂತೆಯೇ ನಾವು ಹೋಗುತ್ತೇವೆ. ಸಂವಿಧಾನವೇ ನನಗೆ ಭಗವದ್ಗೀತೆ ಎಂದು ಹೈಕೋರ್ಟ್ ಹೇಳಿದೆ.


"ಎಷ್ಟೇ ಅರ್ಜಿಗಳನ್ನು ಸಲ್ಲಿಸಿದರೂ ಪ್ರಕರಣ ಒಂದೇ. ಅದರ ತೀರ್ಪು ಕೂಡ ಒಂದೇ ಆಗಿರುತ್ತದೆ. ನಾವು ಈ ಪ್ರಕರಣವನ್ನು ಕಾನೂನಿನ ಕಣ್ಣಲ್ಲಿ ನೋಡುತ್ತೇವೆ.. ಭಾವನೆಗಳ ದೃಷ್ಟಿಗಳಿಂದಲ್ಲ. ಸಂವಿಧಾನ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತೇವೆ. ಸಂವಿಧಾನವು ನ್ಯಾಯಾಲಯಕ್ಕೆ ಭಗವದ್ಗೀತೆ ಇದ್ದಂತೆ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹೇಳಿದರು.



ಪ್ರತಿನಿತ್ಯ ವಿದ್ಯಾರ್ಥಿಗಳು ರಸ್ತೆಗೆ ಹೋಗುವುದನ್ನು ನಾವು ನೋಡಲಾಗುವುದಿಲ್ಲ. ಇದು ಖುಷಿಯ ವಿಚಾರವಲ್ಲ. ಅಂತರಾಷ್ಟ್ರೀಯ ಸಮುದಾಯವೂ ನೋಡುತ್ತಿದೆ. ನಾನು ಇನ್ನೊಂದು ವಿಷಯವನ್ನೂ ಹೇಳಬೇಕಾಗಿದೆ. ನನ್ನ ವಾಟ್ಸಾಪ್ ತೆರೆದಾಗ, ನೂರಾರು ಸಂದೇಶಗಳು ಅಪರಿಚಿತ ಸಂಖ್ಯೆಗಳಿಂದ ಇದೇ ವಿಚಾರದ ಕುರಿತು ಬರುತ್ತಿವೆ ಎಂದು ವಿಚಾರಣೆ ವೇಳೆ ನ್ಯಾಯಪೀಠ ಹೇಳಿತು.



ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಮವಸ್ತ್ರ ನಿರ್ಧರಿಸಲು ಸ್ವಾಯತ್ತತೆ ನೀಡಲಾಗಿದೆ ಎಂದು ಅಡ್ವೊಕೇಟ್ ಜನರಲ್ ನ್ಯಾಯಪೀಠಕ್ಕೆ ತಿಳಿಸಿದರು. ಹಾಗೇನಾದರೂ ಹಿಜಬ್ ಧರಿಸಲೇಬೇಕು ಎಂದು ಬಯಸುವ ವಿದ್ಯಾರ್ಥಿಗಳು ಕಾಲೇಜು ಅಭಿವೃದ್ಧಿ ಸಮಿತಿಯನ್ನು ಸಂಪರ್ಕಿಸಬೇಕು ಎಂದು ಅಡ್ವೊಕೇಟ್ ಜನರಲ್ ವಿವರಿಸಿದರು.




ಡ್ರೆಸ್ ಕೋಡ್ ವಿಚಾರವನ್ನು ರಾಜ್ಯ ಸರ್ಕಾರ ನಿರ್ಧರಿಸಲಾಗದು: ಅರ್ಜಿದಾರರ ಪರ ವಕೀಲರು


ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್, "ಹಿಜಾಬ್ ಮೇಲಿನ ನಿರ್ಬಂಧ ಸಂವಿಧಾನದ ಕಲಂ 21ರ ಉಲ್ಲಂಘನೆ ಹಾಗೂ ಖಾಸಗಿ ಹಕ್ಕಿನ ಉಲ್ಲಂಘನೆಯಾಗಿದೆ. ಡ್ರೆಸ್ ಕೋಡ್ ವಿಚಾರವನ್ನು ರಾಜ್ಯ ಸರ್ಕಾರ ನಿರ್ಧರಿಸಲಾಗದು. ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ಕಲಂ 7 ಹಾಗೂ 133ರ ಪ್ರಕಾರ ರಾಜ್ಯ ಸರ್ಕಾರಕ್ಕೆ ಶಿಕ್ಷಣ ಸಂಸ್ಥೆಗಳ ಡ್ರೆಸ್ ಕೋಡ್ ನಿರ್ಧರಿಸುವ ಅಧಿಕಾರವಿಲ್ಲ. ದೇಶದ ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಲಾಗಿದೆ. ಕಾನೂನು ಸುವ್ಯವಸ್ಥೆ, ಆರೋಗ್ಯ ಹಾಗೂ ನೈತಿಕತೆ ವಿಚಾರ ಹೊರತುಪಡಿಸಿ ಧಾರ್ಮಿಕ ಆಚರಣೆ ಹಕ್ಕನ್ನು ಸರ್ಕಾರ ನಿರ್ಬಂಧಿಸಲಾಗದು ಎಂದು ಹೇಳಿದರು.



ಪ್ರೈವೇಟ್ ಸ್ಕೂಲ್‌ನಲ್ಲಿ ಹೆಡ್ ಸ್ಕಾರ್ಫ್‌ಗೆ ಅವಕಾಶ ನೀಡದ ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಮುಹಮ್ಮದ್ ಮುಸ್ತಾಕ್ ಅವರು 2018 ರಲ್ಲಿ ನೀಡಿದ ತೀರ್ಪಿನ ಉಲ್ಲೇಖ ಮಾಡಿದ ದೇವದತ್ ಕಾಮತ್, ಇದು ಕ್ರಿಶ್ಚಿಯನ್ ಮ್ಯಾನೇಜ್ಮೆಂಟ್ ಸ್ಕೂಲ್. ಆದ್ದರಿಂದ ಇಲ್ಲಿನ ಪರಿಗಣನೆಗಳು ವಿಭಿನ್ನ. ಸಂವಿಧಾನದ ವಿಧಿ 30 ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಕೆಲ ಹಕ್ಕುಗಳನ್ನು ನೀಡಿವೆ. ಹೀಗಾಗಿ ಅಲ್ಲಿ ಪರಿಗಣಿಸಲಿಲ್ಲ. ಅದನ್ನೇ ಇಲ್ಲಿಯೂ ಸರ್ಕಾರಿ ಶಾಲೆಗಳಿಗೂ ಅನ್ವಯಿಸಲಾಗದು ಎಂದು ಕಾಮತ್ ಹೇಳಿದರು.




ನಾವು ಬ್ರಾಹ್ಮಣರು. ನಮ್ಮ ಮಕ್ಕಳು ಹಣೆಗೆ ನಾಮ ಹಚ್ಚಿಕೊಂಡು ಶಾಲೆಗೆ ಹೋಗುತ್ತಾರೆ. ಸಾರ್ವಜನಿಕ ಸುವ್ಯವಸ್ಥೆ ಹೆಸರಲ್ಲಿ ಅವರನ್ನು ನಿರ್ಬಂಧಿಸಹುದೇ? ಟರ್ಬಾನ್ ಧರಿಸಿದ ಸಿಖ್ಖರನ್ನು ಈ ಆಧಾರದಲ್ಲಿ ನಿರ್ಬಂಧಿಸಬಹುದೇ? ಇವೆಲ್ಲವೂ ಧಾರ್ಮಿಕ ಆಚರಣೆಯ ಭಾಗಗಳು. ಧಾರ್ಮಿಕ ಆಚರಣೆಯ ಭಾಗವಾಗಿ ಮಹಿಳೆಯರು ಹೊರಗೆ ಹಿಜಾಬ್ ಧರಿಸಿದಾಗ ಅದು ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆ ಎಂದರೆ ಹೇಗೆ? ಕಾನೂನು ಸುವ್ಯವಸ್ಥೆಗೆ ಹಿಜಾಬ್ ಎಂದೂ ಅಡ್ಡಿಯಾಗಿಲ್ಲ. ಆದರೆ, ಸರ್ಕಾರ ಸಾರ್ವಜನಿಕ ಸುವ್ಯವಸ್ಥೆ ಹೆಸರಲ್ಲಿ ಧಾರ್ಮಿಕ ಆಚರಣೆಗೆ ಅಡ್ಡಿ ಉಂಟು ಮಾಡುತ್ತಿದೆ ಎಂದು ಪ್ರಶ್ನಿಸಿದರು.



ಮಕ್ಕಳು ಶಿರವಸ್ತ್ರ ಧರಿಸಿ ಶಾಲೆಗೆ ಹೋದರೆ ಯಾರಿಗೂ ಸಮಸ್ಯೆಯಲ್ಲ. ಶಾಲೆಗೆ ಸೇರಿದಾಗ ಸಮಸ್ಯೆಯಾಗಿಲ್ಲ. ಈಗಲೂ ಆಗುತ್ತಿಲ್ಲ. ಆದರೂ ತೊಂದರೆ ಮಾಡಲಾಗುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ಆರೋಪಿಸಿದರು.




ನಮ್ಮ ದೇಶ ಜಾತ್ಯಾತೀತ ರಾಷ್ಟ್ರ. ಬೇರೆ ಧರ್ಮಗಳಿಗೆ ಗೌರವ ನೀಡುವುದು ಜಾತ್ಯಾತೀತತೆ. ನಾಮ, ಕ್ರಾಸ್, ಹಿಜಾಬ್ ಗಳೆಲ್ಲವೂ ಧಾರ್ಮಿಕ ಆಚರಣೆಗಳು. ಆದರೆ, ಸರ್ಕಾರ ಧಾರ್ಮಿಕ ಆಚರಣೆಯಲ್ಲಿ ಅಸ್ಪೃಶ್ಯತೆ ಸೃಷ್ಟಿಸುತ್ತಿದೆ. ನಿನ್ನೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕೂರಿಸಲಾಗಿದೆ ಎಂದು ಕಾಮತ್ ವಾದಿಸಿದರು.



ಶಾಂತಿ ಸುವ್ಯವಸ್ಥೆ ಕಾಪಾಡಿ ಎಂದ ನ್ಯಾಯಪೀಠ

ಹಿಜಬ್ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಬೇಡಿ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿ ಎಂದು ಕರ್ನಾಟಕ ಹೈಕೋರ್ಟ್ ಮನವಿ ಮಾಡಿತು.



ಪ್ರತಿಭಟನೆ ಮಾಡುವುದು, ಬೀದಿಗಿಳಿಯುವುದು, ಘೋಷಣೆ ಕೂಗುವುದು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವುದು, ವಿದ್ಯಾರ್ಥಿಗಳು ಇತರರ ಮೇಲೆ ಹಲ್ಲೆ ನಡೆಸುವುದು ಒಳ್ಳೆಯದಲ್ಲ ಎಂದು ನ್ಯಾಯಪೀಠ ಹೇಳಿತು.


ಟಿವಿಯಲ್ಲಿ ಬೆಂಕಿ, ರಕ್ತ ಕಂಡರೆ ನ್ಯಾಯಧೀಶರುಗಳೇ ಗಲಿಬಿಲಿಗೊಳ್ಳುತ್ತಾರೆ. ಮನಸ್ಸಿಗೆ ತೊಂದರೆ ಆದಲ್ಲಿ ಬುದ್ಧಿ ಕೆಲಸ ಮಾಡುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

Ads on article

Advertise in articles 1

advertising articles 2

Advertise under the article