HC directed SP to take action against Police Officer- FIR ದಾಖಲಿಸದ ಪೊಲೀಸ್ ಅಧಿಕಾರಿ: 8 ವಾರದಲ್ಲಿ ಅವರ ವಿರುದ್ಧ ಕ್ರಮ ಕೈಗೊಂಡು ವರದಿ ನೀಡಿ- ಎಸ್‌ಪಿಗೆ ಹೈಕೋರ್ಟ್ ನಿರ್ದೇಶನ
FIR ದಾಖಲಿಸದ ಪೊಲೀಸ್ ಅಧಿಕಾರಿ: 8 ವಾರದಲ್ಲಿ ಅವರ ವಿರುದ್ಧ ಕ್ರಮ ಕೈಗೊಂಡು ವರದಿ ನೀಡಿ- ಎಸ್‌ಪಿಗೆ ಹೈಕೋರ್ಟ್ ನಿರ್ದೇಶನ
ಸಂಜ್ಞೇಯ ಅಪರಾಧ ಪ್ರಕರಣವೊಂದಲ್ಲಿ FIR ದಾಖಲಿಸದ ಪೊಲೀಸ್ ಅಧಿಕಾರಿ(ಇನ್‌ಸ್ಪೆಕ್ಟರ್) ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕ(SP)ರಿಗೆ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ಸೂಚನೆ ನೀಡಿದೆ.
ಪ್ರಕರಣ: ಗಣೇಶ್ ಎಸ್ ಹೆಗಡೆ Vs ಕರ್ನಾಟಕ ಸರ್ಕಾರ ಮತ್ತಿತರರು
"ಲಲಿತಾ ಕುಮಾರಿ ಪ್ರಕರಣ"ದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನಗಳನ್ನು ಪೊಲೀಸ್ ಇನ್‌ಸ್ಪೆಕ್ಟರ್ ಗಾಳಿಗೆ ತೂರಿದ್ದಾರೆ. ಸಂಜ್ಞೇಯ ಅಪರಾಧದ ನಡೆದಿದೆ ಎಂಬ ಮಾಹಿತಿ ಸಿಕ್ಕಿದಾಗ ಅನುಮತಿಸಬೇಕಾದ ಯಾವುದೇ ಪ್ರಾಥಮಿಕ ವಿಚಾರಣೆ ಇರುವುದಿಲ್ಲ ಮತ್ತು ಮಾಹಿತಿ ಸ್ವೀಕರಿಸುವ ವ್ಯಕ್ತಿ FIR ನೋಂದಾಯಿಸುವ ಅಗತ್ಯವಿದೆ ಎಂದು ನ್ಯಾಯಪೀಠ ಹೇಳಿತು.
ಸ್ವೀಕೃತ ಮಾಹಿತಿ ಸಂಜ್ಞೇಯ ಅಪರಾಧದ ವಿಚಾರವನ್ನು ಬಹಿರಂಗಪಡಸದೇ ಇದ್ದಾಗ ಮಾತ್ರ ಸಂಜ್ಞೇಯ ಅಪರಾಧ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಾಥಮಿಕ ತನಿಖೆ ನಡೆಸಬಹುದು. ವಿಚಾರಣೆ ವೇಳೆ ಸಂಜ್ಞೇಯ ಅಪರಾಧ ನಡೆದಿರುವುದು ತಿಳಿದುಬಂದರೆ FIR ದಾಖಲಿಸಬೇಕು" ಎಂದು ನ್ಯಾಯಪೀಠ ಹೇಳಿದೆ.
ಘಟನೆಯ ವಿವರ:
ಸಂತ್ರಸ್ತ ದೂರುದಾರರ ಸಹೋದರಿ ಮತ್ತು ಅವರ ಗಂಡ 30 ಗೂಂಡಾಗಳ ಜೊತೆ ದೂರುದಾರರ ಜಮೀನಿಗೆ ನುಗ್ಗಿ ಅವರು ಬೆಳೆದಿದ್ದ ಅಡಿಕೆ ಬೆಳೆ ನಾಶಪಡಿಸಿದ್ದರು. ಅಲ್ಲದೆ, ಅವರಿಗೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಅವರು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೂ ಇನ್‌ಸ್ಪೆಕ್ಟರ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದರೂ ಉಪಯೋಗವಾಗಲಿಲ್ಲ. ಆಗ ದೂರುದಾರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು. ಅವರ ನಿರ್ದೇಶನದಂತೆ ಅರ್ಜಿದಾರನನ್ನೂ ಆತನ ಸಹೋದರಿಯನ್ನೂ ಇನ್‌ಸ್ಪೆಕ್ಟರ್ ಠಾಣೆಗೆ ಕರೆಸಿಕೊಂಡಿದ್ದರು. ಆದರೆ ಆಗಲೂ FIR ದಾಖಲಿಸಲಿಲ್ಲ. ಇದರಿಂದ ಅರ್ಜಿದಾರ ಹೈಕೋರ್ಟ್ ಮೆಟ್ಟಿಲೇರಿದ್ದರು.
ಘಟನೆಗೆ ಸಂಬಂಧಿಸಿದಂತೆ FIR ದಾಖಲಿಸಲು ಸಂಬಂಧಿತ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿರುವ ಹೈಕೋರ್ಟ್ ಇನ್ಸ್‌ಪೆಕ್ಟರ್ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡು 8 ವಾರದೊಳಗೆ ವರದಿ ಸಲ್ಲಿಸಬೇಕು ಎಂದು SP ಅವರಿಗೆ ನಿರ್ದೇಶನ ನೀಡಿದೆ.