-->
Karnataka Civil Service Rules- ಪ್ರೊಬೇಷನರಿ ಅವಧಿಯ ದುರ್ನಡತೆ; ಸೇವೆಯಿಂದ ವಜಾ ಮಾಡಬಹುದೇ...? ಲೇಟೆಸ್ಟ್ ಹೈಕೋರ್ಟ್ ತೀರ್ಪು

Karnataka Civil Service Rules- ಪ್ರೊಬೇಷನರಿ ಅವಧಿಯ ದುರ್ನಡತೆ; ಸೇವೆಯಿಂದ ವಜಾ ಮಾಡಬಹುದೇ...? ಲೇಟೆಸ್ಟ್ ಹೈಕೋರ್ಟ್ ತೀರ್ಪು

ಪ್ರೊಬೇಷನರಿ ಅವಧಿಯ ದುರ್ನಡತೆ; ಸೇವೆಯಿಂದ ವಜಾ ಮಾಡಬಹುದೇ...? ಲೇಟೆಸ್ಟ್ ಹೈಕೋರ್ಟ್ ತೀರ್ಪು

ಪ್ರೊಬೇಷನರಿ ಅವಧಿಯಲ್ಲಿ ದುರ್ನಡತೆ ಎಸಗಿದ ಸರಕಾರಿ ನೌಕರನನ್ನು ನಿಯಮಾನುಸಾರ ವಿಚಾರಣೆ ನಡೆಸದೆ ಸೇವೆಯಿಂದ ಬಿಡುಗಡೆಗೊಳಿಸಿದ ಆದೇಶವನ್ನು ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್


ಕರ್ನಾಟಕ ನಾಗರಿಕ ಸೇವಾ (ಕೆ.ಸಿ.ಎಸ್. ಪ್ರೊಬೇಶನ್) ನಿಯಮಗಳು 1977 ರ ನಿಯಮ 7 ರಡಿ ವಿಚಾರಣೆ ನಡೆಸದೆ ಪ್ರೊಬೇಷನರಿ ಅವಧಿಯಲ್ಲಿರುವ ಸರಕಾರಿ ನೌಕರನ ವಿರುದ್ಧ ದುರ್ನಡತೆಯ ಆಪಾದನೆ ಹೊರಿಸಿ ಸೇವೆಯಿಂದ ಬಿಡುಗಡೆಗೊಳಿಸುವಂತಿಲ್ಲ ಎಂಬುದಾಗಿ ಮಾನ್ಯ ಕರ್ನಾಟಕ ಹೈಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಎಸ್. ಜಿ. ಪಂಡಿತ್ ಮತ್ತು ಶ್ರೀ ಅನ೦ತ ರಮಾನಾಥ ಹೆಗ್ಡೆ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ದಿನಾಂಕ 28.1.2022 ರಂದು ರಮೇಶ ಮಳ್ಳಿ ವಿರುದ್ಧ ಡಿಐಜಿ (ವೈರ್ ಲೆಸ್) ಈ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ.


ಪ್ರೊಬೇಷನರಿ ಅವಧಿಯಲ್ಲಿರುವ ಸರಕಾರಿ ನೌಕರನನ್ನು ಸಾಮಾನ್ಯ ಅನಹ೯ತೆಗಳ ಕಾರಣಕ್ಕಾಗಿ ಯಾವ ಸಂದರ್ಭದಲ್ಲಿಯೂ ಸೇವೆಯಿಂದ ಬಿಡುಗಡೆಗೊಳಿಸಬಹುದಾಗಿದೆ. ಆದರೆ ಆತನ ವಿರುದ್ಧ ದುರ್ನಡತೆಯ ಆಪಾದನೆಗಳಿದ್ದಾಗ ಕೆ.ಸಿ.ಎಸ್. (ಪ್ರೊಬೆಷನ್) ನಿಯಮ 1977 ರ ನಿಯಮ 7 ರ ಪ್ರಕಾರ ವಿಚಾರಣೆಯನ್ನು ನಡೆಸದೆ ಸೇವೆಯಿಂದ ಬಿಡುಗಡೆಗೊಳಿಸುವುದು ನಿಯಮಗಳಡಿ ಊರ್ಜಿತವಲ್ಲ ಎಂಬುದಾಗಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ


ಶ್ರೀ ರಮೇಶ್ ಮಳ್ಳಿ ಎಂಬವರು 2017 ರಲ್ಲಿ ಪೊಲೀಸ್ ಕಾನ್ಸ್ ಟೇಬಲ್ (ವೈರ್ ಲೆಸ್) ಹುದ್ದೆಗೆ ನೇಮಕಾತಿ ಹೊಂದಿದರು. 2018 ರಲ್ಲಿ ಪೋಲಿಸ್ ಇಲಾಖೆಯು ಸಿವಿಲ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು ಪೊಲೀಸ್ ಇಲಾಖೆಯಲ್ಲಿ ಸೇವಾ ನಿರತ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗಿತ್ತು.


ಪೊಲೀಸ್ ಕಾನ್ಸ್ ಟೇಬಲ್ ರಮೇಶ್ ಮಳ್ಳಿ ಕೂಡಾ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದು ಅರ್ಜಿ ಸಲ್ಲಿಸಿದ್ದರು. ಸಬ್ ಇನ್ಸ್ ಪೆಕ್ಟರ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವ ಪ್ರಕರಣದಲ್ಲಿ ವಿಚಾರಣೆ ಕೈಗೆತ್ತಿಕೊಂಡ ಬೆಂಗಳೂರಿನ ಸಿ.ಸಿ.ಬಿ. ಪೊಲೀಸರು ಅಪರಾಧ ಕ್ರಮಾಂಕ 291/2019 ರಡಿ ಎಫ್.ಐ.ಆರ್. ದಾಖಲಿಸಿ ರಮೇಶ್ ಮಳ್ಳಿಯವರನ್ನು ಇತರ ಆರೋಪಿಗಳೊಂದಿಗೆ ಸದರಿ ಪ್ರಕರಣದಲ್ಲಿ ಬಂಧಿಸಿದರು.


ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ರಮೇಶ್ ಮಳ್ಳಿಯವರು ನಂತರ ಜಾಮೀನಿನ ಮೇಲೆ ಬಿಡುಗಡೆಗೊ೦ಡರೂ ಪೊಲೀಸ್ ಇಲಾಖೆಯು ಅವರನ್ನು ಸೇವೆಗೆ ಸೇರಿಸಿಕೊಂಡಿರಲಿಲ್ಲ.


ಪೊಲೀಸ್ ಇಲಾಖೆಯು ಪೊಲೀಸ್ ಇನ್ಸ್ಪೆಕ್ಟರ್ (ವೈರ್ ಲೆಸ್) ಜಿಲ್ಲಾ ನಿಯಂತ್ರಣ ಕೊಠಡಿ ; ಬೆಂಗಳೂರು ಇವರಿಂದ ಪ್ರಕರಣದ ಕುರಿತು ವರದಿಯನ್ನು ತರಿಸಿ ಸದರಿ ವರದಿಯ ಆಧಾರದಲ್ಲಿ ಕೆ.ಸಿ.ಎಸ್. (ಪ್ರೊಬೆಷನರಿ) ನಿಯಮ 1977 ರ ನಿಯಮ 6 ರಡಿ ಪ್ರದತ್ತ ಅಧಿಕಾರವನ್ನು ಬಳಸಿ ಪೊಲೀಸ್ ಕಾನ್ಸ್ ಟೇಬಲ್ ರಮೇಶ್ ಮಳ್ಳಿಯವರನ್ನು ನೇಮಕಾತಿ ಪ್ರಾಧಿಕಾರವು ಸೇವೆಯಿಂದ ಬಿಡುಗಡೆಗೊಳಿಸಿತು.


ಸೇವೆಯಿಂದ ಬಿಡುಗಡೆಗೊಳಿಸಿದ ಆದೇಶದಿ೦ದ ಬಾಧಿತರಾದ ರಮೇಶ್ ಮಳ್ಳಿ ಯವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆ.ಎ.ಟಿ.) ಸದರಿ ಆದೇಶವನ್ನು ಪ್ರಶ್ನಿಸಿದರು. ಅರ್ಜಿದಾರರ ಮೇಲ್ಮನವಿಯನ್ನು ಕೆ.ಎ.ಟಿ. ವಜಾಗೊಳಿಸಿತು.


KAT ಆದೇಶದ ವಿರುದ್ಧ ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ದಾಖಲಿಸಿದ ಅರ್ಜಿದಾರ ರಮೇಶ್ ಮಳ್ಳಿಯವರ ಪರವಾಗಿ ಹೈಕೋರ್ಟ್ ನಲ್ಲಿ ಈ ಕೆಳಗಿನ ವಾದವನ್ನು ಮಂಡಿಸಲಾಯಿತು.


ನೇಮಕಾತಿ ಪ್ರಾಧಿಕಾರವು ಅರ್ಜಿದಾರರ ವಿರುದ್ಧ ದುರ್ನಡತೆಯ ಆಪಾದನೆಯನ್ನು ಹೊರಿಸಿರುವುದರಿಂದ ಕೆ.ಸಿ.ಯಸ್. (ಪ್ರೊಬೆಷನ್) ನಿಯಮ1977 ರ ನಿಯಮ 7 ರಡಿ ವಿಚಾರಣೆ ನಡೆಸ ತಕ್ಕದ್ದಾಗಿದೆ.ನಿಯಮಾನುಸಾರ ವಿಚಾರಣೆ ನಡೆಸದೆ ಅರ್ಜಿದಾರರ ಅಹವಾಲನ್ನು ಆಲಿಸದೆ ಆತನನ್ನು ಸೇವೆಯಿಂದ ಬಿಡುಗಡೆ ಗೊಳಿಸಿರುವುದು ಕಾನೂನಿನಡಿ ಊರ್ಜಿತವಲ್ಲ.


ನೇಮಕಾತಿ ಪ್ರಾಧಿಕಾರದ ಪರ ವಾದವನ್ನು ಮಂಡಿಸಿದ ವಕೀಲರ ವಾದ ಈ ಕೆಳಗಿನಂತಿದೆ.


ಅರ್ಜಿದಾರರು ಸಬ್ ಇನ್ಸ್ ಪೆಕ್ಟರ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿರುವ ಗಂಭೀರವಾದ ಆರೋಪದಡಿ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದು ಪೊಲೀಸ್ ಕಾನ್ ಸ್ಟೆಬಲ್ ಆಗಿ ಗೋಪ್ಯತೆಯನ್ನು ಕಾಪಾಡುವ ಗುರುತರ ಜವಾಬ್ದಾರಿ ಹೊಂದಿದ್ದರುಾ ಇಲಾಖೆಯ ಹಾಗೂ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿರುವುದರಿಂದ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿರುವುದು ಸೂಕ್ತ ಕ್ರಮವಾಗಿದೆ.


ಉಭಯ ಪಕ್ಷಕಾರರ ವಾದವನ್ನು ಆಲಿಸಿದ ನ್ಯಾಯಪೀಠವು ಈ ಕೆಳಗಿನ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿತು.ಅರ್ಜಿದಾರರ ವಿರುದ್ಧ ಗಂಭೀರ ಆಪಾದನೆಗಳ ಹಿನ್ನೆಲೆಯಲ್ಲಿ ದುರ್ನಡತೆಗಾಗಿ ಸೇವೆಯಿಂದ ಬಿಡುಗಡೆಗೊಳಿಸಿರುವ ಅಂಶ ಸ್ಪಷ್ಟವಾಗಿದೆ. ಆದರೆ ಕೆ.ಸಿ.ಎಸ್. (ಪ್ರೊಬೇಷನ್) ನಿಯಮ 7 ರಡಿ ದುರ್ನಡತೆ ಎಸಗಿದ ಸರಕಾರಿ ನೌಕರರ ವಿರುದ್ಧ ನಿಯಮಾನುಸಾರ ವಿಚಾರಣೆ ನಡೆಸದೆ ಇರುವುದರಿಂದ ಅಪಾದನೆಗಳು ಸಾಬೀತಾಗಿರುವುದಿಲ್ಲ. ಸಾಮಾನ್ಯ ಅನರ್ಹತೆಯ ಆಧಾರದಲ್ಲಿ ಅರ್ಜಿದಾರರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿಲ್ಲ. ದುರ್ವರ್ತನೆಗಾಗಿ ಅರ್ಜಿದಾರರನ್ನು ಸೇವೆಯಿಂದ ಬಿಡುಗಡೆಗೊಳಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.ಕಾಯಂ ಪೂರ್ವ ಪರೀಕ್ಷಾರ್ಥ ಅವಧಿಯಲ್ಲಿ ಹುದ್ದೆಗೆ ಸಂಬಂಧಪಟ್ಟ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ವಿಫಲತೆ; ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುವುದು; ದೈಹಿಕ ಅಸಮರ್ಥತೆಯಿಂದ ಕಚೇರಿ ಕರ್ತವ್ಯಕ್ಕೆ ಗೈರು ಹಾಜರಾಗುವುದು ಇತ್ಯಾದಿ ಸಾಮಾನ್ಯ ಅನರ್ಹತೆಗಳಾಗಿವೆ. ಆದರೆ ಕೆಸಿಎಸ್ (ನಡತೆ) ನಿಯಮಗಳಡಿ ವಿಧಿಸಲಾದ ನಿಯಮಗಳನ್ನು ಉಲ್ಲಂಘಿಸುವುದು ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನಕ್ಕೊಳಪಡುವುದು ದುರ್ನಡತೆಯ ವ್ಯಾಪ್ತಿಗೊಳಪಟ್ಟಿದೆ.ನೇಮಕಾತಿ ಪ್ರಾಧಿಕಾರವು ಈ ಪ್ರಕರಣದಲ್ಲಿ ಅರ್ಜಿದಾರನು ದುರ್ನಡತೆ ಎಸಗಿದ್ದರೂ ನಿಯಮಾನುಸಾರ ವಿಚಾರಣೆ ನಡೆಸದೇ ಸೇವೆಯಿಂದ ಬಿಡುಗಡೆಗೊಳಿಸಿದೆ. ಹಾಗಾಗಿ ನೇಮಕಾತಿ ಪ್ರಾಧಿಕಾರದ ಆದೇಶ ಹಾಗೂ ಸದರಿ ಆದೇಶವನ್ನು ಅನುಸಮರ್ಥಿಸಿದ ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಆದೇಶವನ್ನು ರದ್ದುಪಡಿಸಿ ರಿಟ್ ಅರ್ಜಿಯನ್ನು ಮಾನ್ಯ ಹೈಕೋರ್ಟ್ ಪುರಸ್ಕರಿಸಿತು. ಜೊತೆಗೆ ಕೆಸಿಎಸ್ (ಪ್ರೊಬೇಷನ್) ನಿಯಮ 7 ರಡಿ ದುರ್ನಡತೆ ಎಸಗಿದ ಅರ್ಜಿದಾರನ ವಿರುದ್ಧ ನಿಯಮಾನುಸಾರ ವಿಚಾರಣೆ ನಡೆಸುವ ಸ್ವಾತಂತ್ರ್ಯ ನೇಮಕಾತಿ ಪ್ರಾಧಿಕಾರಕ್ಕೆ ಇದೆ ಎಂಬ ಅಭಿಪ್ರಾಯವನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ವ್ಯಕ್ತಪಡಿಸಿದೆ.ಪ್ರೊಬೆಷನರಿ ಅವಧಿಯಲ್ಲಿ ದುರ್ನಡತೆಯ ಎಸಗಿದ ಸರಕಾರಿ ನೌಕರನನ್ನು ನಿಯಮಾನುಸಾರ ವಿಚಾರಣೆ ನಡೆಸದೆ ಸೇವೆಯಿಂದ ಬಿಡುಗಡೆಗೊಳಿಸುವದು ಕಾನೂನಿನಡಿ ಊರ್ಜಿತವಲ್ಲ ಎಂಬುದೇ ಹೈಕೋರ್ಟ್ ತೀರ್ಪಿನ ಸಾರಾಂಶವಾಗಿದೆ.
✍ ಪ್ರಕಾಶ್ ನಾಯಕ್, ಶಿರಸ್ತೇದಾರರು, ಜುಡೀಷಿಯಲ್ ಸೆಂಟರ್, ಮಂಗಳೂರು ನ್ಯಾಯಾಲಯ ಸಂಕೀರ್ಣ

Ads on article

Advertise in articles 1

advertising articles 2

Advertise under the article