-->
HC issue Guidelines on POCSO Case- ಪೊಕ್ಸೊ ಪ್ರಕರಣ: ಆರೋಪಿಗೆ ಜಾಮೀನು ನೀಡುವ ಬಗ್ಗೆ ಹೈಕೋರ್ಟ್ ಮಹತ್ವದ ನಿರ್ದೇಶನ

HC issue Guidelines on POCSO Case- ಪೊಕ್ಸೊ ಪ್ರಕರಣ: ಆರೋಪಿಗೆ ಜಾಮೀನು ನೀಡುವ ಬಗ್ಗೆ ಹೈಕೋರ್ಟ್ ಮಹತ್ವದ ನಿರ್ದೇಶನ

ಪೊಕ್ಸೊ ಪ್ರಕರಣ: ಆರೋಪಿಗೆ ಜಾಮೀನು ನೀಡುವ ಬಗ್ಗೆ ಹೈಕೋರ್ಟ್ ಮಹತ್ವದ ನಿರ್ದೇಶನ


ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ-2012 ಅಡಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿಗೆ ಜಾಮೀನು ನೀಡುವ ಮುನ್ನ ಅನುಸರಿಸಬೇಕಾದ ಕ್ರಮಗಳ ಕುರಿತು ಹೈಕೋರ್ಟ್ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದೆ.ಈ ಕುರಿತಂತೆ ಬೆಂಗಳೂರಿನ ಮೂವರು ಸಂತ್ರಸ್ತ ಪೋಷಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ಧ ವಿಭಾಗೀಯ ಪೀಠ ಈ ನಿರ್ದೇಶನಗಳನ್ನು ಪ್ರಕಟಿಸಿದೆ.ಪ್ರಕರಣ: ಬೀಬಿ ಆಯೆಷಾ ಖಾನಂ ಮತ್ತಿತರರು Vs ಯೂನಿಯನ್ ಆಫ್ ಇಂಡಿಯಾ (ಕರ್ನಾಟಕ ಹೈಕೋರ್ಟ್ Dated 23/02/2022)ಪೋಕ್ಸೋ ಪ್ರಕರಣಗಳಲ್ಲಿ ಆರೋಪ ಸಾಬೀತು ಮಾಡುವುದು ಪ್ರಭುತ್ವದ ಹೊಣೆಗಾರಿಕೆಯಾಗಿದೆ. ಹಾಗೆಯೇ, ಸಂತ್ರಸ್ತ ಮಗು ಹಾಗೂ ದೂರುದಾರರು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಅಭಿಯೋಜಕರಿಗೆ ಅಗತ್ಯ ಮಾಹಿತಿಗಳನ್ನು ನೀಡಬೇಕಾಗುತ್ತದೆ.


ಅಭಿಯೋಜನಾ ವ್ಯವಸ್ಥೆ ಈಗಾಗಲೇ ಅಧಿಕ ಭಾರ(ಕೆಲಸದ ಒತ್ತಡ)ದಿಂದ ನಲುಗುತ್ತಿದೆ. ಪ್ರಕರಣದ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ಸಂತ್ರಸ್ತರಿಗೆ ಈ ಬಗ್ಗೆ ಮಾಹಿತಿಯೇ ಇರುವುದಿಲ್ಲ.ಆದ್ದರಿಂದ, ಪೋಕ್ಸೋ ಪ್ರಕರಣಗಳಲ್ಲಿ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ವಿಶೇಷ ನ್ಯಾಯಾಲಯಗಳು ಸಂತ್ರಸ್ತ ಕುಟುಂಬಕ್ಕೆ, ಪೋಷಕರಿಗೆ ಅಥವಾ ಅವರ ವಕೀಲರಿಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ನಿರ್ದೇಶಿಸಿದೆ.


ಹೈಕೋರ್ಟ್ ನಿರ್ದೇಶನಗಳು ಹೀಗಿವೆ:

1) ಪೋಕ್ಸೋ ಪ್ರಕರಣದ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ತನಿಖಾಧಿಕಾರಿ ಸಂತ್ರಸ್ತರ ಪೋಷಕರು, ಪಾಲಕರು ಹಾಗೂ ಅಭಿಯೋಜಕರಿಗೆ ಮಾಹಿತಿ ನೀಡಬೇಕು.


2) ಈ ಜಾಮೀನು ಅರ್ಜಿಗೆ ತಕ್ಷಣವೇ ಸರ್ಕಾರಿ ವಕೀಲರು ಸೂಕ್ತ ದಾಖಲೆಗಳ ಜೊತೆ ತಕರಾರು ಸಲ್ಲಿಸಬೇಕು. ಇದಕ್ಕಾಗಿ ಸರ್ಕಾರಿ ವಕೀಲರಿಗೆ ತನಿಖಾಧಿಕಾರಿ ಹಾಗೂ ಸಂತ್ರಸ್ತರ ಕುಟುಂಬ ಅಗತ್ಯ ಮಾಹಿತಿ ಮತ್ತು ಸಹಕಾರನೀಡಬೇಕು.


3) ತನಿಖಾಧಿಕಾರಿ ಸರ್ಕಾರಿ ವಕೀಲರಿಗೆ ತಕರಾರು ಸಲ್ಲಿಸಲು ನೆರವು ನೀಡಬೇಕು. ಅದು ನೀಡಲಾಗದಿದ್ದರೆ ಆ ಬಗ್ಗೆ ಸೂಕ್ತ ಕಾರಣಗಳನ್ನು ಕೋರ್ಟ್‌ಗೆ ಲಿಖಿತವಾಗಿ ನೀಡಬೇಕು.


4) ಪೋಕ್ಸೋ ಪ್ರಕರಣದ ಆರೋಪಿ ಸಂತ್ರಸ್ತ ಕುಟುಂಬಕ್ಕೆ ಪರಿಚಯಸ್ಥ ಆಗಿದ್ದರೆ ಜಾಮೀನಿಗೆ ಸಲ್ಲಿಸಿರುವ ಆಕ್ಷೇಪಣೆ ದಾಖಲೆಗಳನ್ನು ಮಕ್ಕಳ ಕಲ್ಯಾಣ ಸಮಿತಿ (CWC)ಗೂ ಸಲ್ಲಿಸಬೇಕು.5) ಆರೋಪಿಯ ಜಾಮೀನು ಅರ್ಜಿ ವಿಚಾರಣೆಗೆ ಮುನ್ನ, ಸಂತ್ರಸ್ತರ ಕುಟುಂಬಕ್ಕೆ ನೋಟಿಸ್ ಜಾರಿಯಾಗಿದೆಯೇ, ಎಂಬುದನ್ನು ಖಚಿತಪಡಿಸಬೇಕು ಮತ್ತು ಸಂತ್ರಸ್ತರ ವಾದ ಆಲಿಸಬೇಕು.6) ನೋಟಿಸ್ ಜಾರಿಗೊಂಡ ಬಳಿಕವೂ ಸಂತ್ರಸ್ತರ ಕಡೆಯಿಂದ ಯಾರೂ ಹಾಜರಾಗದಿದ್ದರೆ ವಿಶೇಷ ನ್ಯಾಯಾಲಯ ತನ್ನ ವಿಚಾರಣಾ ಪ್ರಕ್ರಿಯೆ ಮುಂದುವರಿಸಬಹುದು.


7) ಸಂತ್ರಸ್ತರು ಯಾ ದೂರುದಾರರು ಯಾ ಮಾಹಿತಿದಾರರು ಸ್ವಂತ ವಕೀಲರು ಅಥವಾ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಪ್ಯಾನೆಲ್ ವಕೀಲರಿಂದ ಪ್ರತಿನಿಧಿಸಬಹುದು. ಹೀಗೆ ನೇಮಕಗೊಂಡ ವಕೀಲರಿಗೆ ಸೇವಾ ಶುಲ್ಕ ಪಾವತಿಸಲು ಸರ್ಕಾರ ಅಗತ್ಯ ಹಣಕಾಸು ಸೌಲಭ್ಯ ನೀಡಬೇಕು.8) ಸಾಕ್ಷ್ಯ ಸಂರಕ್ಷಣೆ ಯೋಜನೆ-2018 ರ ಅಡಿಯಲ್ಲಿ ಲಭ್ಯವಿರುವ ರಕ್ಷಣೆ ಬಗ್ಗೆ ತಿಳಿಸಬೇಕು. ಒಂದು ವೇಳೆ ರಕ್ಷಣೆ ಅಗತ್ಯವಿದ್ದಲ್ಲಿ ಸೂಕ್ತ ಭದ್ರತೆ ಒದಗಿಸಬೇಕು. ವಿಸಿಲ್ ಬ್ಲೋವರ್‌ನಿಂದ ಮಾಹಿತಿ ಪಡೆದ ಸಂದರ್ಭದಲ್ಲಿ ವಿಸಿಲ್ ಬ್ಲೋವರ್ಸ್ ಪ್ರೊಟೆಕ್ಷನ್ ಆಕ್ಟ್-2014 ರ ಪ್ರಕಾರ ಅಗತ್ಯ ರಕ್ಷಣೆ ಒದಗಿಸಬೇಕು.


9) ಹೈಕೋರ್ಟ್ ಆದೇಶದ ಪ್ರತಿಯನ್ನು ಎಲ್ಲ ಜಿಲ್ಲಾ ನ್ಯಾಯಾಲಯಗಳಿಗೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ತಲುಪಿಸಬೇಕು. ರಾಜ್ಯ ಪೊಲೀಸ್ ಮಹಾನಿರ್ದೇಶಕರು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಈ ಕುರಿತಂತೆ ಅಗತ್ಯ ಸೂಚನೆಗಳನ್ನು ನೀಡಬೇಕು.Ads on article

Advertise in articles 1

advertising articles 2

Advertise under the article