Consumer Case - ಬಿಪಿ, ಶುಗರ್ ಇದ್ದರೂ ವಿಮೆ ನೀಡಬೇಕು: ಗ್ರಾಹಕರ ನ್ಯಾಯಾಲಯದ ಮಹತ್ವದ ಆದೇಶ
ಬಿಪಿ, ಶುಗರ್ ಇದ್ದರೂ ವಿಮೆ ನೀಡಬೇಕು: ಗ್ರಾಹಕರ ನ್ಯಾಯಾಲಯದ ಮಹತ್ವದ ಆದೇಶ
- ಕ್ಯಾನ್ಸರ್ ಚಿಕಿತ್ಸೆಗೆ ಹಣ ಪಾವತಿ ಮಾಡಲು ನಿರಾಕರಿಸಿದ್ದ ಇನ್ಶೂರೆನ್ಸ್ ಕಂಪೆನಿ
- ಬಿಪಿ, ಶುಗರ್ ಇತ್ತು ಎಂಬ ಕಾರಣ ನೀಡಿದ್ದ ಕಂಪೆನಿ
- ಬಿಪಿ, ಶುಗರ್ ಇದ್ದರೂ ವಿಮೆ ಪರಿಹಾರದ ಬಾಧ್ಯತೆ ಎಂದ ಕೋರ್ಟ್
- ಶೇ.12ರ ವಾರ್ಷಿಕ ಬಡ್ಡಿ ಜೊತೆ 5 ಲಕ್ಷ ರೂ. ನೀಡಲು ಆದೇಶ
- ಬೆಂಗಳೂರು ಗ್ರಾಹಕರ ನ್ಯಾಯಾಲಯ ಮಹತ್ವದ ಆದೇಶ
- ಸುಪ್ರೀಂ ಕೋರ್ಟ್, ರಾಷ್ಟ್ರೀಯ ಗ್ರಾಹಕರ ಅಯೋಗದ ತೀರ್ಪು ಆಧರಿಸಿದ ಕೋರ್ಟ್
ಮೆಡಿಕಲ್ ಇನ್ಶೂರೆನ್ಸ್ (ಆರೋಗ್ಯ ವಿಮೆ) ಮಾಡಿಸುವ ವೇಳೆ ಅಧಿಕ ರಕ್ತದೊತ್ತಡ (ಬಿಪಿ) ಮತ್ತು ಮಧುಮೇಹ(ಶುಗರ್) ಬಗ್ಗೆ ಮಾಹಿತಿ ತಿಳಿಸಿಲ್ಲ ಎಂಬ ಕಾರಣಕ್ಕೆ ಕ್ಯಾನ್ಸರ್ ಚಿಕಿತ್ಸೆಗೆ ವಿಮಾ ಹಣ ಪಾವತಿಸಲು ನಿರಾಕರಿಸಿದ್ದ ಖಾಸಗಿ ವಿಮಾ ಕಂಪನಿಗೆ ಒಂದು ಲಕ್ಷ ರು. ದಂಡ ಹಾಗೂ ಶೇ.12ರ ವಾರ್ಷಿಕ ಬಡ್ಡಿ ಜೊತೆ ವಿಮಾ ಮಾಡಿಸಿದ್ದ 5 ಲಕ್ಷ ರೂ. ನೀಡಲು ಬೆಂಗಳೂರು ಗ್ರಾಹಕರ ನ್ಯಾಯಾಲಯ ಆದೇಶ ಹೊರಡಿಸಿದೆ.
'ಅಧಿಕ ರಕ್ತದೊತ್ತಡ' ಮತ್ತು 'ಮಧುಮೇಹ' ರೋಗವಲ್ಲ. ಈ ಎರಡು ಸಮಸ್ಯೆ ಇದೆ ಎಂಬ ಕಾರಣಕ್ಕೆ ವಿಮಾ ಕಂಪೆನಿ ಹಣ ಪಾವತಿಸಲು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ದೂರುದಾರರಾಗಿರುವ ಬೆಂಗಳೂರಿನ ವ್ಯಕ್ತಿಯೊಬ್ಬರು ತಮಗೆ, ಪತ್ನಿ ಹಾಗೂ ಇಬ್ಬರು ಪುತ್ರರಿಗೆ ಖಾಸಗಿ ವಿಮಾ ಕಂಪನಿಯಲ್ಲಿ 2011ರಲ್ಲಿ ಮೆಡಿಕಲ್ ಇನ್ಶೂರೆನ್ಸ್ ಮಾಡಿಸಿದ್ದರು. ಪ್ರತಿ ವರ್ಷ ಅದನ್ನು ರಿನೀವಲ್ ಮಾಡಿದ್ದರು. 4-11-2019ರ ವರೆಗೆ ಈ ವಿಮೆ ಚಾಲ್ತಿಯಲ್ಲಿತ್ತು.
ಈ ಮಧ್ಯೆ, 2018ರ ಮೇ ನಲ್ಲಿ ದೂರುದಾರರು ಅನಾರೋಗ್ಯದಿಂದ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ‘ಬೆವರು ಗ್ರಂಥಿಯ ಕ್ಯಾನ್ಸರ್’ ಪತ್ತೆಯಾಗಿತ್ತು. ಹೀಗಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು, ಅದಕ್ಕಾಗಿ .11 ಲಕ್ಷ ಖರ್ಚಾಗಿತ್ತು. ನಂತರ ವಿಮಾ ಕಂಪನಿಗೆ ಚಿಕಿತ್ಸೆಗೆ ಖರ್ಚಾಗಿರುವ ಹಣವನ್ನು ಪಾವತಿಸುವಂತೆ ಕೋರಿದ್ದರು.
ದೂರುದಾರರಿಗೆ 10 ವರ್ಷಗಳಿಂದ ಅಧಿಕ ರಕ್ತದೊತ್ತಡ ಹಾಗೂ ಎರಡು ಮೂರು ವರ್ಷಗಳಿಂದ ಮಧುಮೇಹ ಸಮಸ್ಯೆ ಇರುವುದು ಮೆಡಿಕಲ್ ಟೆಸ್ಟ್ ವರದಿಯಿಂದ ತಿಳಿದು ಬಂದಿದೆ. ಪಾಲಿಸಿ ನಿಯಮ ಪ್ರಕಾರ ಈ ಎರಡು ಆರೋಗ್ಯ ಸಮಸ್ಯೆ ಇದ್ದರೆ ವಿಮಾ ಹಣ ಕೊಡಲು ಬರುವುದಿಲ್ಲ ಜೊತೆಗೆ ಕ್ಯಾನ್ಸರ್ ಚಿಕಿತ್ಸೆಗೆ ಖರ್ಚಾದ ಹಣ ಪಾವತಿ ಮಾಡುವುದಿಲ್ಲ ಎಂದು ಖಾಸಗಿ ವಿಮಾ ಕಂಪನಿ ಈ ಮನವಿ ನಿರಾಕರಿಸಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ, ಬಿಪಿ ಮತ್ತು ಶುಗರ್ ಎನ್ನುವುದು ರೋಗಲ್ಲ. ಇದೊಂದು ಮಾನವನ ದೈಹಿಕ ಸ್ಥಿತಿಯಲ್ಲಿ ಆಗುವ ಬದಲಾವಣೆ ಅಷ್ಟೇ. ಕ್ಯಾನ್ಸರ್ ಬರಲು ಅದು ಕಾರಣವಲ್ಲ ಎಂದು ತೀರ್ಪು ನೀಡಿತು.
ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ಮತ್ತು ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ತೀರ್ಪನ್ನು ಉಲ್ಲೇಖಿಸಿತ್ತು. ಆದುದರಿಂದ, ವಿಮಾದಾರರ ಕ್ಯಾನ್ಸರ್ ಚಿಕಿತ್ಸೆಯ ಹಣ ಪಾವತಿಸಲು ನಿರಾಕರಿಸಿರುವುದು ನ್ಯಾಯಸಮ್ಮತವಲ್ಲ ಎಂಬ ತೀರ್ಪು ನೀಡಿತು.