-->
ಜಡ್ಜ್ ಅಂಕಣ: ಪ್ರಜಾಪ್ರಭುತ್ವ ತಳಹದಿ: ಮತದಾರರ ಜಾಗೃತಿ ಅತ್ಯಗತ್ಯ- ವಿಶ್ರಾಂತ ನ್ಯಾ. ಮಿಟ್ಟಲ ಕೋಡ

ಜಡ್ಜ್ ಅಂಕಣ: ಪ್ರಜಾಪ್ರಭುತ್ವ ತಳಹದಿ: ಮತದಾರರ ಜಾಗೃತಿ ಅತ್ಯಗತ್ಯ- ವಿಶ್ರಾಂತ ನ್ಯಾ. ಮಿಟ್ಟಲ ಕೋಡ

ಜಡ್ಜ್ ಅಂಕಣ: ಪ್ರಜಾಪ್ರಭುತ್ವ ತಳಹದಿ: ಮತದಾರರ ಜಾಗೃತಿ ಅತ್ಯಗತ್ಯ- ವಿಶ್ರಾಂತ ನ್ಯಾ. ಮಿಟ್ಟಲ ಕೋಡ





ಇಂದಿನ ನಮ್ಮ ದೇಶದ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ, ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡು , ತಪ್ಪು ಮಾಡಿಕೊಂಡಿದ್ದೇವೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಪ್ರಜಾಪ್ರಭುತ್ವ ಅತ್ಯಂತ ಉತ್ತಮವಾದ ಸರಕಾರದ ವ್ಯವಸ್ಥೆ ಅನ್ನುವದನ್ನು ಮರೆಯಲಾಗದು.



ಜಗತ್ತಿನಲ್ಲಿ ನಮ್ಮ ದೇಶ ಒಂದು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಅಂತ ಹೆಸರು ಗಳಿಸಿದೆ.ಹಾಗಾದರೆ ನಾವು ಪ್ರಜಾಪ್ರಭುತ್ವ ಆಯ್ಕೆ ಮಾಡಿಕೊಂಡು ಯಾವ ತಪ್ಪೂ ಮಾಡಿಲ್ಲ ಅನ್ನುವದು ದಿಟ.ಆದರೂ ಇಂದು ನಡೆಯುತ್ತಿರುವ ಭ್ರಷ್ಟಾಚಾರ,ಸ್ವಜನ ಪಕ್ಷಪಾತ,ಕುಟುಂಬ ರಾಜಕೀಯ,ಅನೈತಿಕ ರಾಜನೀತಿ ಮತ್ತು ಸ್ವಾರ್ಥಿ ರಾಜಕಾರಣಿಗಳ ನಡೆ ಇವೆಲ್ಲ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ಹುಟ್ಟಿಸುತ್ತಿವೆ. ಶಾಸಕ ಸಂಸದ ಸ್ಥಾನಗಳು ಒಬ್ಬ ವ್ಯಕ್ತಿಯ ಕುಟುಂಬದ ಸ್ಥಾನಗಳು ಎನ್ನುವಂತೆ ಒಂದೇ ಕುಟುಂಬದವರನ್ನು ಆಯ್ಕೆ ಮಾಡುವದು ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುತ್ತದೆ.



ಹಾಗದರೆ ಎಲ್ಲಿದೆ ದೋಷ ಎನ್ನುವ ಬಗ್ಗೆ ಯೋಚಿಸುವುದು ಅವಶ್ಯಕ.ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಜನರಿಂದ ಜನರಿಗಾಗಿ ಇರುವ ಜನರ ಸರಕಾರ ಇರುತ್ತದೆ. ಅಂದರೆ ಜನರೇ ಆರಿಸಿದ ಜನಪ್ರತಿನಿಧಿಗಳ ಸರಕಾರ. ಆದರೆ ಇಂದು ಸರಕಾರಗಳು ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಿ, ಅದರಲ್ಲಿ ಶೇಕಡಾವಾರು ದಲ್ಲಾಳಿ ಹೊಡೆಯುವ ಭ್ರಷ್ಟರಿಂದ ತುಂಬಿವೆ.ಒಮ್ಮೆ ಆಯ್ಕೆಯಾದ ಶಾಸಕನನ್ನು ಐದು ವರ್ಷಗಳ ಕಾಲ ಏನೂ ಮಾಡಲು ಸಾಧ್ಯವಿಲ್ಲ.



ತಾನೇ ಆರಿಸಿದ ಪ್ರತಿನಿಧಿ ಜನ ಪರ ಕೆಲಸ ಮಾಡದಿದ್ದರೂ ಅವರ ವಿರುದ್ಧ ಏನೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.ಇದನ್ನು ಗಮನಿಸಿದರೆ ನಾವೇ ಆಯ್ಕೆ ಮಾಡುವ ವ್ಯಕ್ತಿ ಸದಾ ಜನಪರ ಕಾರ್ಯಕ್ರಮಗಳನ್ನು ಮಾಡುವಂತೆ ಇರಬೇಕು ಎನ್ನುವ ಎಚ್ಚರಿಕೆಯಿಂದ ಆಯ್ಕೆ ಮಾಡ ಬೇಕು.


ಇಂದು ನಾವು ಕೇವಲ ಪಕ್ಷಗಳ ಹಿನ್ನಲೆಯಲ್ಲಿ ಶಾಸಕ ಸಂಸದ ರನ್ನು ಆಯ್ಕೆ ಮಾಡುತ್ತಿದ್ದೇವೆ.ಇಂದು ಎಲ್ಲ ರಾಜಕೀಯ ಪಕ್ಷಗಳು ಭ್ರಷ್ಟಚಾರದಲ್ಲಿ ಮುಳುಗಿವೆ.ಹೀಗಿದ್ದಾಗ ಕೇವಲ ಪಕ್ಷದ ಅಭ್ಯರ್ಥಿ ಎನ್ನುವ ಕಾರಣ ಆಯ್ಕೆ ಮಾಡುವ ಬದಲು, ನಮಗೆ ಗೊತ್ತಿರುವ ಒಳ್ಳೆಯ ಅಭ್ಯರ್ಥಿಯನ್ನು ಪಕ್ಷಗಳನ್ನು ಬದಿಗಿರಿಸಿ ಆಯ್ಕೆ ಮಾಡುವ ಹೊಸ ಪ್ರಯೋಗ ಇಂದು ಮಾಡುವದು ಅಗತ್ಯ.


ಹಿಂದೆ ಕೇವಲ ಇಂದಿರಾಗಾಂಧಿ ಹೆಸರು ಹೇಳಿ, ಯಾವದೇ ವಿಳಾಸ ಇಲ್ಲದವರು ಆಯ್ಕೆಯಾಗಿ, ಜನರಿಗೆ ನಾಮ ಹಾಕಿದ್ದು ಮರೆಯಲಾಗದು. ಇಂದೂ ಕೂಡ ಯಾರದೋ ಹೆಸರು ಹೇಳಿ ಆಯ್ಕೆ ಯಾಗುವ ಪರಿಪಾಠ ಇದೆ.ಯಾವದೋ ಒಬ್ಬ ವ್ಯಕ್ತಿ ಹೆಸರು ಹೇಳಿ ಮತ ಪಡೆಯುವವರನ್ನು ತಿರಸ್ಕರಿಸಿ, ಸ್ವಂತ ಯೋಗ್ಯತೆ ಹೇಳಿಕೊಳ್ಳುವವರನ್ನು ಗುರುತಿಸಿ ಮತ ನೀಡಬೇಕು.




ಪ್ರಜಾಪ್ರಭುತ್ವ ಮತದಾರರ ಇಚ್ಚೆಯಂತೆ ನಡೆಯ ಬೇಕೆ ಹೊರತು, ಮತದಾರರಿಂದ ಆಯ್ಕೆಯಾಗಿ ಮತದಾರರನ್ನು ನಿರ್ಲಕ್ಷ ಮಾಡುವ ರಾಜಕಾರಣಿಗಳಿಂದ ಅಲ್ಲ.ಇದಕ್ಕಾಗಿ ಮತದಾರರ ಜಾಗೃತಿ ಇಂದು ಅತೀ ಅಗತ್ಯ.ಮತದಾರರಿಗೆ ಆಮಿಷ ಒಡ್ಡುವ ನೀಚ ಕೆಲಸ ಎಲ್ಲ ಪಕ್ಷಗಳು ಮಾಡುತ್ತಿವೆ.ಹಾಗಂತ ಎಲ್ಲ ಮತದಾರರು ಭ್ರಷ್ಟರು ಅಲ್ಲ.



ಪ್ರಜಾಪ್ರಭುತ್ವ ಇಂದು ಉಳಿಯಲು ಮತ್ತು ಪ್ರಬಲ ಆಗಲು ಈಗ ಮತದಾರರು ಜಾಗೃತರಾಗುವ ಅಗತ್ಯ ಇದೆ.ಜಾಗೃತ ಮತದಾರ ಪ್ರಜಾಪ್ರಭುತ್ವದ ಜೀವಾಳ.



ಜಾಗೃತ ಮತದಾರರ ಯಶಸ್ವಿ ಪ್ರಜಾಪ್ರಭುತ್ವದ ಸೂತ್ರಧಾರ.



ಲೇಖನ: ಎಸ್. ಎಚ್. ಮಿಟ್ಟಲ ಕೋಡ. ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ

Ads on article

Advertise in articles 1

advertising articles 2

Advertise under the article