-->
PSI ನೇಮಕಾತಿ ಹಗರಣ: ಆರೋಪ ಗಂಭೀರ ಸ್ವರೂಪದ್ದು- ದಿವ್ಯಾ ಹಾಗರಗಿ ಜಾಮೀನು ತಿರಸ್ಕೃತ

PSI ನೇಮಕಾತಿ ಹಗರಣ: ಆರೋಪ ಗಂಭೀರ ಸ್ವರೂಪದ್ದು- ದಿವ್ಯಾ ಹಾಗರಗಿ ಜಾಮೀನು ತಿರಸ್ಕೃತ

PSI ನೇಮಕಾತಿ ಹಗರಣ: ಆರೋಪ ಗಂಭೀರ ಸ್ವರೂಪದ್ದು- ದಿವ್ಯಾ ಹಾಗರಗಿ ಜಾಮೀನು ತಿರಸ್ಕೃತ

ರಾಜ್ಯದಲ್ಲಿ ತಲ್ಲಣ ಮೂಡಿಸಿದ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಅಕ್ರಮ ಹಗರಣದ ಪ್ರಮುಖ ಆರೋಪಿ ಕಲಬುರ್ಗಿಯ ಜ್ಞಾನ ಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವ ಅಪರಾಧಕ್ಕಿಂತಲೂ ಗಂಭೀರ ಸ್ವರೂಪದ ಅಪರಾಧವನ್ನು ಈ ಪ್ರಕರಣದಲ್ಲಿ ಆರೋಪಿಗಳು ಎಸಗಿದ್ದಾರೆ ಎಂದು ಕಲಬುರ್ಗಿ ಜಿಲ್ಲಾ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಕಲಬುರ್ಗಿಯ ಚೌಕ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಕುರಿತಂತೆ ದಿವ್ಯಾ ಹಾಗರಗಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹೇಮಾವತಿ ಜಾಮೀನು ತಿರಸ್ಕರಿಸಿದ್ದಾರೆ.ದಿವ್ಯಾ ಮತ್ತು ಇತರ ಆರೋಪಿಗಳು ನೇಮಕಾತಿ ಪ್ರಕ್ರಿಯೆಯನ್ನು ಅಕ್ರಮ ವಾಣಿಜ್ಯ ಚಟುವಟಿಕೆಯನ್ನಾಗಿ ಮಾಡಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ದುರಾಚಾರ, ವಂಚನೆ ಮತ್ತು ಪಿತೂರಿಯ ಮೂಲಕ ಪೂರ್ತಿ ನೇಮಕಾತಿ ವ್ಯವಸ್ಥೆಯನ್ನೇ ಆರೋಪಿಗಳು ಧ್ವಂಸ ಮಾಡಿದ್ಧಾರೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.ಈ ಪ್ರಕರಣದಲ್ಲಿ ಅಪರಾಧದ ತೀವ್ರತೆ, ಗಂಭೀರತೆ ಮತ್ತು ಅದು ಸಮಾಜದ ಮೇಲೆ ಬೀರುವ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ಪರೀಕ್ಷೆ ಬರೆದಿದ್ದ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಆರೋಪಿಗಳ ದುಷ್ಕೃತ್ಯದಿಂದ ತೀವ್ರ ತೊಂದರೆಯಾಗಿದೆ. ಸರ್ಕಾರಿ ಕೆಲಸದ ನೇಮಕಾತಿಯಲ್ಲಿ ಪಾರದರ್ಶಕತೆ ನಿರೀಕ್ಷಿಸುವ, ವಿಶಾಲವಾದ ನೆಲೆಯಲ್ಲಿ ಸಾಮಾಜಿಕ ಸುಧಾರಣೆ ವಿಚಾರದಲ್ಲಿ ಇದು ಮಹತ್ವದ ಪರಿಣಾಮ ಬೀರುತ್ತದೆ ಎಂದು ಹೇಳಿದೆ.ಆರೋಪಿ ಮಹಿಳೆ ಆಗಿರುವುದರಿಂದ CrPC ಕಲಂ 437(1)ರ ಅಡಿ ಕೆಲವು ಸೌಲಭ್ಯ ಕಲ್ಪಿಸಬೇಕು. ಆದರೆ, ಈ ಪ್ರಕರಣದಲ್ಲಿ ಕಲಂ 437(1)ರ ಲಾಭ ನೀಡಲಾಗದು. ಏಕೆಂದರೆ ಪ್ರತಿಭಾನ್ವಿತ ಅಭ್ಯರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಉಂಟು ಮಾಡಬಹುದಾದ ಅಪರಾಧದಲ್ಲಿ ದಿವ್ಯಾ ಭಾಗಿಯಾಗಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.

Ads on article

Advertise in articles 1

advertising articles 2

Advertise under the article