Suit Valuation- ದಾವೆ ಮೌಲ್ಯಮಾಪನ: ಅಧಿಕಾರ ವ್ಯಾಪ್ತಿ, ಕೋರ್ಟ್ ಫೀ ಪ್ರತ್ಯೇಕ ಮಾನದಂಡ ಇಲ್ಲ: ದೆಹಲಿ ಹೈಕೋರ್ಟ್
ದಾವೆ ಮೌಲ್ಯಮಾಪನ: ಅಧಿಕಾರ ವ್ಯಾಪ್ತಿ, ಕೋರ್ಟ್ ಫೀ ಪ್ರತ್ಯೇಕ ಮಾನದಂಡ ಇಲ್ಲ: ದೆಹಲಿ ಹೈಕೋರ್ಟ್
ಅಧಿಕಾರ ವ್ಯಾಪ್ತಿಯ ಉದ್ದೇಶಕ್ಕೆ ಮತ್ತು ನ್ಯಾಯಾಲಯ ಶುಲ್ಕ ಪಾವತಿಗೆ ಪ್ರತ್ಯೇಕವಾಗಿ ದಾವೆಯ ಮೌಲ್ಯಮಾಪನ ಮಾಡುವಂತಿಲ್ಲ-- ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು
ಯಾವುದೇ ದಾವೆಯನ್ನು ಅಧಿಕಾರ ವ್ಯಾಪ್ತಿಯ ಉದ್ದೇಶಕ್ಕೆ ಮತ್ತು ನ್ಯಾಯಾಲಯ ಶುಲ್ಕ ಪಾವತಿಗೆ ಪ್ರತ್ಯೇಕ ಮಾನದಂಡವನ್ನು ಅನುಸರಿಸಿ ಮೌಲ್ಯಮಾಪನ ಮಾಡುವಂತಿಲ್ಲ. ಈ ರೀತಿಯ ದ್ವಂದ್ವ ನೀತಿಯನ್ನು ಅನುಸರಿಸುವಂತಿಲ್ಲ ಎಂಬುದಾಗಿ ರಾಜೇಂದರ್ ಸಿಂಗ್ ಭಾಟಿಯಾ ವಿರುದ್ಧ ಮಂಜು ಭಾಟಿಯಾ ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿ ಶ್ರೀಮತಿ ನೀನಾ ಬನ್ಸಾಲ್ ಕೃಷ್ಣ ಅವರ ಏಕ ಸದಸ್ಯ ನ್ಯಾಯ ಪೀಠವು ದಿನಾಂಕ 22.8.2022 ರಂದು ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.
ವಾದಿ ರಾಜಿಂದರ್ ಸಿಂಗ್ ಭಾಟಿಯಾ ಎಂಬುವರು ಪ್ರತಿವಾದಿ ಮಂಜು ಭಾಟಿಯಾ ಎಂಬವರ ವಿರುದ್ಧ ಶಾಶ್ವತ ಹಾಗೂ ನಿರ್ದೇಶನಾತ್ಮಕ ನಿರ್ಬಂಧಕಾಜ್ಞೆ (permanent and mandatory injunction) ಕೋರಿ ದಾವೆ ಹೂಡಿದ್ದರು. ವಾದಪತ್ರದಲ್ಲಿ ಅಧಿಕಾರ ವ್ಯಾಪ್ತಿಯ ಉದ್ದೇಶಕ್ಕೆ ದಾವೆಯನ್ನು ಎರಡುವರೆ ಕೋಟಿ ರೂಪಾಯಿಗಳಿಗೆ ಮೌಲ್ಯಮಾಪನ ಮಾಡಲಾಗಿತ್ತು. ಆದರೆ ನ್ಯಾಯಾಲಯ ಶುಲ್ಕ ಪಾವತಿಯ ಉದ್ದೇಶಕ್ಕೆ ದಾವೆಯನ್ನು ರೂಪಾಯಿ ಒಂದು ಸಾವಿರಕ್ಕೆ ಮೌಲ್ಯಮಾಪನ ಮಾಡಲಾಗಿತ್ತು. ಹಾಗೂ ಸದರಿ 1000/- ರೂಪಾಯಿಗಳ ಮೇಲೆ ನಿಗದಿತ ನ್ಯಾಯಾಲಯ ಶುಲ್ಕವನ್ನು ಪಾವತಿಸಲಾಗಿತ್ತು.
ದಾವೆಯನ್ನು ಅಧಿಕಾರ ವ್ಯಾಪ್ತಿಯ ಉದ್ದೇಶಕ್ಕೆ ಮತ್ತು ನ್ಯಾಯಾಲಯ ಶುಲ್ಕ ಪಾವತಿಗೆ ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡುವಂತಿಲ್ಲ. ವಾದಿಯು ಅಧಿಕಾರ ವ್ಯಾಪ್ತಿಯ ಉದ್ದೇಶಕ್ಕೆ ಎರಡುವರೆ ಕೋಟಿಗಳಿಗೆ ಮೌಲ್ಯಮಾಪನ ಮಾಡಿರುವುದರಿಂದ ಸದರಿ ಮೌಲ್ಯಮಾಪನದ ಮೇಲೆ ನ್ಯಾಯಾಲಯ ಶುಲ್ಕ ಪಾವತಿಸ ತಕ್ಕದ್ದು. ವಾದಿಯು ನ್ಯಾಯಾಲಯ ಶುಲ್ಕ ಪಾವತಿಗೆ ರೂಪಾಯಿ ಒಂದು ಸಾವಿರಕ್ಕೆ ದಾವೆಯನ್ನು ಮೌಲ್ಯಮಾಪನ ಮಾಡಿ ಸದರಿ ಮೊತ್ತದ ಮೇಲೆ ನ್ಯಾಯಾಲಯ ಶುಲ್ಕ ಪಾವತಿಸಿರುವುದರಿಂದ ಸಮರ್ಪಕ ನ್ಯಾಯಾಲಯ ಶುಲ್ಕ ಪಾವತಿಸದಿರುವ ಕಾರಣ ವಾದಪತ್ರವನ್ನು ತಿರಸ್ಕರಿಸಬೇಕೆಂದು (Rejection of plaint) ಪ್ರತಿವಾದಿಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಪ್ರತಿವಾದಿಯು ಸಲ್ಲಿಸಿದ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಅರ್ಜಿಯನ್ನು ಪುರಸ್ಕರಿಸಿತು. ವಿಚಾರಣಾ ನ್ಯಾಯಾಲಯದ ಸದರಿ ಆದೇಶದಿಂದ ಬಾಧಿತರಾದ ವಾದಿಯು ದೆಹಲಿ ಹೈಕೋರ್ಟಿನಲ್ಲಿ ಆದೇಶವನ್ನು ಪ್ರಶ್ನಿಸಿ CS (OS) 172)2021 ನಂಬ್ರದಲ್ಲಿ ಪ್ರಕರಣ ದಾಖಲು ಮಾಡಿದರು.
ಅನಧಿಕೃತವಾಗಿ ವಾಸ್ತವ್ಯ ಮಾಡಿಕೊಂಡಿರುವ ಅಥವಾ ಅನುಮತಿ ಪಡೆದು ವಾಸ್ತವ್ಯ ಹೂಡಿರುವ ಇರುವ ವ್ಯಕ್ತಿಗಳನ್ನು ತೆರವುಗೊಳಿಸಲು ನಿರ್ದೇಶನಾತ್ಮಕ ನಿರ್ಬಂಧಕಾಜ್ಞೆ ಕೋರಿ ದಾವೆಯನ್ನು ಹೂಡಲು ಅವಕಾಶವಿದೆ. ಅಂತಹ ದಾವೆ ಕಾನೂನಿನಡಿ ಊರ್ಜಿತವಾಗಿದೆ. ಆದರೆ ಪ್ರಸ್ತುತ ಪ್ರಕರಣವನ್ನು ದಾವೆಯ ಊರ್ಜಿತದ ಬಗ್ಗೆ ಸಲ್ಲಿಸಿಲ್ಲ. ಬದಲಿಗೆ ಪ್ರಕರಣವು ದಾವಾ ಮೌಲ್ಯಮಾಪನ ಮತ್ತು ನ್ಯಾಯಾಲಯ ಶುಲ್ಕ ಪಾವತಿಗೆ ಸಂಬಂಧಿಸಿದ್ದಾಗಿದೆ.
ಅಧಿಕಾರ ವ್ಯಾಪ್ತಿಯ ಉದ್ದೇಶಕ್ಕೆ ಒಂದು ರೀತಿಯ ಮಾನದಂಡ ಬಳಸುವುದು ಹಾಗೂ ಹಾಗೂ ನ್ಯಾಯಾಲಯ ಶುಲ್ಕ ಪಾವತಿಗೆ ಇನ್ನೊಂದು ರೀತಿಯ ಮಾನದಂಡವನ್ನು ಅನುಸರಿಸಿ ದಾವೆಯ ಮೌಲ್ಯಮಾಪನವನ್ನು ಮಾಡುವಂತಿಲ್ಲ. ಈ ರೀತಿಯ ದ್ವಂದ್ವ ನೀತಿಯನ್ನು ವಾದಿಯು ಅನುಸರಿಸುವಂತಿಲ್ಲ. ದಾವೆಯನ್ನು ಒಂದು ಬಾರಿ ನಿಗದಿತ ಮೊತ್ತಕ್ಕೆ ಮೌಲ್ಯಮಾಪನ ಮಾಡಿದ ಬಳಿಕ ಸದರಿ ಮೌಲ್ಯಕ್ಕೆ ಸರಿಯಾಗಿ ನ್ಯಾಯಾಲಯ ಶುಲ್ಕವನ್ನು ಪಾವತಿಸತಕ್ಕದ್ದಾಗಿದೆ.
ವಾದಿಯು ತನ್ನ ದಾವೆಯನ್ನು ಅಧಿಕಾರ ವ್ಯಾಪ್ತಿಯ ಉದ್ದೇಶಕ್ಕೆ ರೂಪಾಯಿ ಎರಡೂವರೆ ಕೋಟಿಗಳಿಗೆ ಮೌಲ್ಯಮಾಪನ ಮಾಡಿದ್ದು ನ್ಯಾಯಾಲಯ ಶುಲ್ಕ ಪಾವತಿಯ ಉದ್ದೇಶಕ್ಕೆ ರೂಪಾಯಿ 1000/-ಕ್ಕೆ ಮೌಲ್ಯಮಾಪನ ಮಾಡಿರುತ್ತಾರೆ. ಈ ರೀತಿ ಎರಡು ಉದ್ದೇಶಗಳಿಗೆ ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಲು ನ್ಯಾಯಾಲಯ ಶುಲ್ಕ ಮತ್ತು ದಾವಾ ಮೌಲ್ಯಮಾಪನ ಕಾಯ್ದೆಯಡಿ ಅವಕಾಶವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್ ಅಧಿಕಾರ ವ್ಯಾಪ್ತಿಯಡಿ ರೂಪಾಯಿ ಎರಡುವರೆ ಕೋಟಿಗಳಿಗೆ ಮೌಲ್ಯಮಾಪನ ಮಾಡಿರುವುದರಿಂದ ಸದರಿ ಮೌಲ್ಯದ ಮೇಲೆ ನ್ಯಾಯಾಲಯ ಶುಲ್ಕವನ್ನು ಪಾವತಿಸಬೇಕೆಂಬ ಆದೇಶವನ್ನು ಹೊರಡಿಸಿತು. ಕೊರತೆ ನ್ಯಾಯಾಲಯ ಶುಲ್ಕ ಪಾವತಿಸಲು ವಾದಿಗೆ ಒಂದು ತಿಂಗಳ ಕಾಲಾವಕಾಶ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಲಾಯಿತು.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ