RTI- ಗ್ರಾ.ಪಂ. ಸಿಬ್ಬಂದಿ ಹಾಜರಾತಿ ಪುಸ್ತಕದ ಮಾಹಿತಿ ನೀಡದ ಅಧಿಕಾರಿಗೆ ದಂಡ ವಿಧಿಸಿದ ಮಾಹಿತಿ ಆಯೋಗ
RTI- ಗ್ರಾ.ಪಂ. ಸಿಬ್ಬಂದಿ ಹಾಜರಾತಿ ಪುಸ್ತಕದ ಮಾಹಿತಿ ನೀಡದ ಅಧಿಕಾರಿಗೆ ದಂಡ ವಿಧಿಸಿದ ಮಾಹಿತಿ ಆಯೋಗ
ಗ್ರಾಮ ಪಂಚಾಯತ್ ಸಿಬ್ಬಂದಿ ಹಾಜರಾತಿ ಪುಸ್ತಕವೂ ಮಾಹಿತಿ ಹಕ್ಕಿನಡಿ ಬರುತ್ತದೆ ಎಂದು ಮಾಹಿತಿ ಆಯೋಗ ತೀರ್ಪು ನೀಡಿದೆ. ಅಷ್ಟೇ ಅಲ್ಲ, ಆರ್‌ಟಿಐ ಅರ್ಜಿಯಲ್ಲಿ ಈ ಬಗ್ಗೆ ಕೇಳಲಾದ ಮಾಹಿತಿಯನ್ನು ನೀಡದ ಗ್ರಾಮ ಪಂಚಾಯತ್ ಸಿಬ್ಬಂದಿಗೆ ರೂ. 15,000/- ರೂಗಳ ದಂಡವನ್ನು ವಿಧಿಸಿದೆ.
RTI ಅಡಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸದ ಗ್ರಾಮ ಪಂಚಾಯತ್ ಅಧಿಕಾರಿ ವಿರುದ್ಧ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ಆಯುಕ್ತ ಎಸ್.ಎಲ್. ಪಾಟೀಲ್ ಅವರ ನ್ಯಾಯಪೀಠ ಈ ತೀರ್ಪು ನೀಡಿದೆ.
ಪ್ರಕರಣದ ಮಾಹಿತಿ:
ಚಿತ್ರದುರ್ಗದ ಚಳ್ಳಕರೆಯ ಗ್ರಾಮ ಪಂಚಾಯತ್ ವೊಂದರಲ್ಲಿ ವ್ಯಕ್ತಿಯೊಬ್ಬರು ಮಾಹಿತಿ ಹಕ್ಕು(Right to Information)ಗಳ ನಿಯಮದಡಿಯಲ್ಲಿ ಅರ್ಜಿ ಸಲ್ಲಿಸಿ ಗ್ರಾಮ ಪಂಚಾಯತ್ ಸಿಬ್ಬಂದಿಯ ಹಾಜರಾತಿ ದಾಖಲೆಗಳನ್ನು ಕೋರಿದ್ದರು.
ಆದರೆ, ಸದ್ರಿ ಅರ್ಜಿಯನ್ನು ಪುರಸ್ಕರಿಸದ ಪಂಚಾಯತ್ ಅಧಿಕಾರಿ, ಸಿಬ್ಬಂದಿಯ ಹಾಜರಾತಿ ಮಾಹಿತಿ ನೀಡಲು ನಿರಾಕರಿಸಿದ್ದರು. ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ(PDO) ಹನುಮಂತ ಕುಮಾರ್ ಅವರ ವಿರುದ್ಧ ಅರ್ಜಿದಾರರು ಮಾಹಿತಿ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಗ್ರಾಮ ಪಂಚಾಯತ್ ಸಿಬ್ಬಂದಿ ಹಾಜರಾತಿ ಪುಸ್ತಕವೂ ಆರ್‌ಟಿಐ ವ್ಯಾಪ್ತಿಯಲ್ಲಿ ಬರುತ್ತದೆ. ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಪಿಡಿಒಗೆ ಹದಿನೈದು ಸಾವಿರ ರುಪಾಯಿ ದಂಡ ವಿಧಿಸಲಾಗಿದೆ ಎಂದು ಆಯೋಗ ತಮ್ಮ ತೀರ್ಪಿನಲ್ಲಿ ತಿಳಿಸಿದೆ. ಈ ದಂಡದ ಮೊತ್ತವನ್ನು ಹನುಮಂತ ಕುಮಾರ್ ಅವರ ವೇತನದಿಂದ ಪ್ರತಿ ತಿಂಗಳು 5 ಸಾವಿರ ರೂ ನಂತೆ ಕಡಿತಗೊಳಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.