-->
ವ್ಯಾಸಂಗದ ರಜೆ ಮಂಜೂರಾತಿ: ಹಕ್ಕಿನ ರಜೆಯಲ್ಲ ಎಂಬ KCSR ನಿಯಮದಲ್ಲಿ ವಿನಾಯಿತಿ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ವ್ಯಾಸಂಗದ ರಜೆ ಮಂಜೂರಾತಿ: ಹಕ್ಕಿನ ರಜೆಯಲ್ಲ ಎಂಬ KCSR ನಿಯಮದಲ್ಲಿ ವಿನಾಯಿತಿ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ವ್ಯಾಸಂಗದ ರಜೆ ಮಂಜೂರಾತಿ: ಹಕ್ಕಿನ ರಜೆಯಲ್ಲ ಎಂಬ KCSR ನಿಯಮದಲ್ಲಿ ವಿನಾಯಿತಿ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು











ಸರಕಾರಿ ನೌಕರರು ರಜೆಯನ್ನು ತಮ್ಮ ಹಕ್ಕು ಎಂದು ಪ್ರತಿಪಾದಿಸುವಂತಿಲ್ಲ ಎಂಬ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮವನ್ನು ವ್ಯಾಸಂಗದ ರಜೆ ಮಂಜೂರಾತಿಗೆ ಅನ್ವಯಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು



ಕರ್ನಾಟಕ ರಾಜ್ಯದ ಸರಕಾರಿ ನೌಕರರು ಯಾವುದೇ ರಜೆಯನ್ನು ತಮ್ಮ ಹಕ್ಕು ಎಂದು ಪ್ರತಿಪಾದಿಸುವಂತಿಲ್ಲ ಎಂಬುದು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1957 ರ 107 ನೆಯ ನಿಯಮ. ಆದರೆ, ಈ ನಿಯಮ ಸರ್ಕಾರಿ ನೌಕರರ ವ್ಯಾಸಂಗದ ರಜೆ ಮಂಜೂರಾತಿಗೆ ಅನ್ವಯಿಸುವಂತಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಪ್ರಕಾಶ್ ನಾಯಕ್ Vs ಜಿಲ್ಲಾ ನ್ಯಾಯಾಧೀಶರು, ದ.ಕ. ಮಂಗಳೂರು ಪ್ರಕರಣದಲ್ಲಿ ಮೇಲ್ಮನವಿದಾರರ ಅರ್ಜಿಯನ್ನು ವಿಚಾರಣೆ ನಡೆಸಿದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಎ.ಜೆ. ಸದಾಶಿವ ಇವರ ಏಕ ಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.



ಪ್ರಕರಣ: ಪ್ರಕಾಶ್ ನಾಯಕ್ Vs ಜಿಲ್ಲಾ ನ್ಯಾಯಾಧೀಶರು, ದಕ್ಷಿಣ ಕನ್ನಡ ಮತ್ತೊಬ್ಬರು

ಕರ್ನಾಟಕ ಹೈಕೋರ್ಟ್, WP 32284/1995 Dated 3-09-1996


ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.


ಕರ್ನಾಟಕ ಲೋಕಸೇವಾ ಆಯೋಗ(KPSC)ದಿಂದ ಆಯ್ಕೆಗೊಂಡು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಗಳೂರಿನ ಶ್ರೀ ಪ್ರಕಾಶ್ ನಾಯಕ್ ಎಂಬವರು ಕಾನೂನು ಪದವಿ ವ್ಯಾಸಂಗವನ್ನು ತನ್ನ ಸ್ವಂತ ಊರು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ ಅರೆಕಾಲಿಕ ತರಗತಿಗಳಿಗೆ ಹಾಜರಾಗಿ ಮುಂದುವರಿಸಬೇಕೆಂಬ ಉದ್ದೇಶದಿಂದ ಬೆಂಗಳೂರು ಘಟಕದಿಂದ ದಕ್ಷಿಣ ಕನ್ನಡ ಜಿಲ್ಲಾ ಘಟಕಕ್ಕೆ ವರ್ಗಾವಣೆ ಪಡೆದರು.


ಆಗಿನ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಧೀಶರು ಪ್ರಕಾಶ್ ನಾಯಕ್ ಅವರನ್ನು ಪುತ್ತೂರಿನ ನ್ಯಾಯಾಲಯಕ್ಕೆ ಸ್ಥಳ ನಿಯುಕ್ತಿಗೊಳಿಸಿದರು.


ಕಾನೂನು ವ್ಯಾಸಂಗವನ್ನು ಮುಂದುವರಿಸಬೇಕೆಂಬ ಉತ್ಕಟ ಇಚ್ಛೆಯಿಂದ ತಾನು ಬೆಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆ ಪಡೆದಿರುವ ವಿಷಯವನ್ನು ಶ್ರೀ ಪ್ರಕಾಶ್ ನಾಯಕ್ ಅವರು ಮಾನ್ಯ ಜಿಲ್ಲಾ ನ್ಯಾಯಾಧೀಶರ ಅವಗಾಹನೆಗೆ ತಂದರು. ಹಾಗೂ, ಮಂಗಳೂರಿನ ಯಾವುದೇ ಒಂದು ನ್ಯಾಯಾಲಯಕ್ಕೆ ವರ್ಗಾವಣೆ ಅಥವಾ ನಿಯೋಜನೆ ಮಾಡುವ ಮೂಲಕ ತನಗೆ ಮಂಗಳೂರಿನ ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ ನಡೆಯಲಿರುವ ಅರೆಕಾಲಿಕ ತರಗತಿಗಳಿಗೆ ಹಾಜರಾಗಿ ಕಾನೂನು ಪದವಿಯ ವ್ಯಾಸಂಗವನ್ನು ಮುಂದುವರಿಸಲು ಅವಕಾಶ ನೀಡಬೇಕೆಂದು ಲಿಖಿತ ಕೋರಿಕೆ ಸಲ್ಲಿಸಿದರು. 


ಆದರೆ ಸದರಿ ಮನವಿಯ ಬಗ್ಗೆ ಯಾವುದೇ ಆದೇಶವನ್ನು ಮಾನ್ಯ ಜಿಲ್ಲಾ ನ್ಯಾಯಾಧೀಶರು ಹೊರಡಿಸಲಿಲ್ಲ.



ಮಂಗಳೂರಿನಿಂದ ಪುತ್ತೂರಿಗೆ ಒಂದು ಗಂಟೆಯ ಪ್ರಯಾಣದ ಅವಧಿ ಇರುವುದರಿಂದ ಕಾನೂನು ಕಾಲೇಜಿನ ಅರೆಕಾಲಿಕ ತರಗತಿಗಳು ಪೂರ್ವಾಹ್ನ 7:00 ಗಂಟೆಗೆ ಪ್ರಾರಂಭವಾಗಿ 9.30 ಗಂಟೆಗೆ ಕೊನೆಗೊಳ್ಳುವುದರಿಂದ ಕಚೇರಿಯ ಪ್ರಾರಂಭವಾಗುವ ಸಮಯ 10:45 ಆಗಿರುವುದರಿಂದ ತನಗೆ ಪ್ರತಿನಿತ್ಯ ಕಾನೂನು ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಿದ ಮನವಿಯನ್ನು ಕೂಡ ಮಾನ್ಯ ಜಿಲ್ಲಾ ನ್ಯಾಯಾಧೀಶರು ತಿರಸ್ಕರಿಸಿದರು.



ಕಾನೂನು ವ್ಯಾಸಂಗ ಮುಂದುವರಿಸಬೇಕೆಂಬ ಉತ್ಕಟ ಇಚ್ಚೆ ಹೊಂದಿದ ಅರ್ಜಿದಾರರು ಕೆ.ಸಿ.ಎಸ್.ಆರ್. ನಿಯಮ 61(1) (ಎ) ಮತ್ತು (ಬಿ) ಅಡಿ ಕಾನೂನು ಪದವಿ ವ್ಯಾಸಂಗ ಮುಂದುವರಿಸಲು ವ್ಯಾಸಂಗದ ರಜೆಯನ್ನು ಮಂಜೂರು ಮಾಡುವಂತೆ ಕೋರಿ ಮಾನ್ಯ ಕರ್ನಾಟಕ ಹೈಕೋರ್ಟ್ ನ ಮಹಾ ವಿಲೇಖನಾಧಿಕಾರಿಗಳಿಗೆ ಸಮುಚಿತ ಹಾದಿಯಲ್ಲಿ ಅರ್ಜಿ ಸಲ್ಲಿಸಿದರು.



ಕಾನೂನು ವ್ಯಾಸಂಗವು ಅರ್ಜಿದಾರರ ಕರ್ತವ್ಯದ ವ್ಯಾಪ್ತಿಯೊಳಗೆ ನೇರ ಹಾಗೂ ನಿಕಟ ಸಂಬಂಧ ಹೊಂದಿಲ್ಲ ಎಂಬ ಕಾರಣ ನೀಡಿ ಮಾನ್ಯ ದ. ಕ. ಜಿಲ್ಲಾ ನ್ಯಾಯಾಧೀಶರು ಅರ್ಜಿಯನ್ನು ತಿರಸ್ಕರಿಸಿದರು.



ಜಿಲ್ಲಾ ನ್ಯಾಯಾಧೀಶರ ಆದೇಶದಿಂದ ಬಾಧಿತರಾದ ಅರ್ಜಿದಾರರು ಮಾನ್ಯ ಕರ್ನಾಟಕ ಹೈಕೋರ್ಟಿನ ಮಹಾ ವಿಲೇಖಾಧಿಕಾರಿಗಳಿಗೆ ಆಡಳಿತಾತ್ಮಕ ಮೇಲ್ಮನವಿ ಸಲ್ಲಿಸಿದರು.

ದ.ಕ‌. ಜಿಲ್ಲಾ ನ್ಯಾಯಾಧೀಶರ ಆದೇಶವನ್ನು ಸಮರ್ಥಿಸಿದ ಕರ್ನಾಟಕ ಹೈಕೋರ್ಟಿನ ವಿಲೇಖನಾಧಿಕಾರಿಗಳು (ನ್ಯಾಯಾಂಗ) ಇವರು ಸರಕಾರಿ ನೌಕರರು ರಜೆಯನ್ನು ತಮ್ಮ ಹಕ್ಕೆಂದು ಪ್ರತಿಪಾದಿಸುವಂತಿಲ್ಲ ಎಂಬ ಕೆ ಸಿ ಎಸ್ ಆರ್ ನ ನಿಯಮ 107 ನ್ನು ಉಲ್ಲೇಖಿಸಿ ದ‌.ಕ. ಜಿಲ್ಲಾ ನ್ಯಾಯಾಧೀಶರ ಆದೇಶವನ್ನು ಸಮರ್ಥಿಸಿ ಅರ್ಜಿದಾರರು ಸಲ್ಲಿಸಿದ ಆಡಳಿತಾತ್ಮಕ ಮೇಲ್ಮನವಿಯನ್ನು ತಿರಸ್ಕರಿಸಿದರು.



ಸದರಿ ಆದೇಶದಿಂದ ಭಾದಿತರಾದ ಅರ್ಜಿದಾರರು ದ.ಕ. ಜಿಲ್ಲಾ ನ್ಯಾಯಾಧೀಶರು ಹಾಗೂ ಹೈಕೋರ್ಟಿನ ಮಹಾ ವಿಲೇಖನಾಧಿಕಾರಿಗಳು (ನ್ಯಾಯಾಂಗ) ಇವರ ಆದೇಶದ ವಿರುದ್ಧ ಮಾನ್ಯ ಕರ್ನಾಟಕ ಹೈಕೋರ್ಟಿನಲ್ಲಿ ರಿಟ್ ದಾಖಲಿಸಿದರು.



ಅರ್ಜಿದಾರರ ಪರವಾಗಿ ಮಾನ್ಯ ಹೈಕೋರ್ಟಿನಲ್ಲಿ ಈ ಕೆಳಗಿನ ವಾದ ಮಂಡಿಸಲಾಯಿತು.


1) ಕೆಸಿಎಸ್ಆರ್ ನಿಯಮ 61 (1)(ಎ) ಪ್ರಕಾರ ಸರಕಾರಿ ನೌಕರನು ಕೈಗೊಳ್ಳಲು ಇಚ್ಚಿಸುವ ವ್ಯಾಸಂಗವು ಆತನ ಕರ್ತವ್ಯದ ವ್ಯಾಪ್ತಿಯೊಳಗೆ ನೇರ ಹಾಗೂ ನಿಕಟ ಸಂಬಂಧ ಹೊಂದಿದ್ದಲ್ಲಿ ರಾಜ್ಯ ಸರಕಾರವು ಸರಕಾರಿ ನೌಕರನಿಗೆ ವ್ಯಾಸಂಗದ ರಜೆಯನ್ನು ಮಂಜೂರು ಮಾಡಬಹುದು. ಕಾನೂನು ಪದವಿ ವ್ಯಾಸಂಗವು ಅರ್ಜಿದಾರರ ಕಾರ್ಯ ವ್ಯಾಪ್ತಿಯೊಳಗೆ ನೇರ ಹಾಗೂ ನಿಕಟ ಸಂಬಂಧ ಹೊಂದಿರುವುದರಿಂದ ವ್ಯಾಸಂಗ ರಜೆ ಮಂಜೂರಾತಿಗೆ ಯಾವುದೇ ತೊಡಕಿಲ್ಲ.



2) ಕೆಸಿಎಸ್ಆರ್ ನಿಯಮ 61 (1)(ಬಿ)ಪ್ರಕಾರ ಸರಕಾರಿ ನೌಕರರನು ಕೈಗೊಳ್ಳಲು ಇಚ್ಚಿಸುವ ವ್ಯಾಸಂಗವು ಆತನ ಕರ್ತವ್ಯದ ವ್ಯಾಪ್ತಿಯೊಳಗೆ ನೇರ ಹಾಗೂ ನಿಕಟ ಸಂಬಂಧ ಹೊಂದಿರದಿದ್ದರೂ ಸದರಿ ವ್ಯಾಸಂಗವು ಆತನ ಜ್ಞಾನವನ್ನು ವೃದ್ಧಿಸುವಂತಿದ್ದಲ್ಲಿ ಹಾಗೂ ಉತ್ತಮ ನಾಗರಿಕ ಸೇವಕನಾಗುವ ಸಾಮರ್ಥ್ಯವನ್ನು ಬೆಳೆಸುವಂತಿದ್ದಲ್ಲಿ ಮತ್ತು ಇತರ ಶಾಖೆಗಳ ಸಿಬ್ಬಂದಿಗಳೊಡನೆ ಉತ್ತಮ ರೀತಿಯ ಸಂವಹನ ಬೆಳೆಸುವಲ್ಲಿ ಸಹಕಾರಿಯಾಗಿದ್ದಲ್ಲಿ ರಾಜ್ಯ ಸರಕಾರವು ಸರಕಾರಿ ನೌಕರರಿಗೆ ವ್ಯಾಸಂಗದ ರಜೆಯನ್ನು ಮಂಜೂರು ಮಾಡಬಹುದು.



3) ಕೆಸಿಎಸ್ಆರ್ ನಿಯಮ 61(1) (ಎ) ಮತ್ತು (ಬಿ) ಇದು ಕೆಸಿಎಸ್ಆರ್ ನ ರಜೆ ಅಧ್ಯಾಯದೊಳಗೆ ಬಾರದೆ ಇರುವುದರಿಂದ ಯಾವುದೇ ರಜೆಯನ್ನು ಹಕ್ಕೆಂದು ಪ್ರತಿಪಾದಿಸುವಂತಿಲ್ಲ ಎಂಬ ರಜಾ ಅಧ್ಯಾಯದೊಳಗಿನ ನಿಯಮ 107 ನ್ನು ವ್ಯಾಸಂಗದ ರಜೆ ಮಂಜೂರಾತಿಗೆ ಅನ್ವಯಿಸುವಂತಿಲ್ಲ.



4) ಕಾನೂನು ಪದವಿ ಪಡೆದಲ್ಲಿ ಅರ್ಜಿದಾರರಿಗೆ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಲಯ ಅಧಿಕಾರಿ ಹುದ್ದೆಗೆ ಹಾಗೂ ಕಿರಿಯ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಸ್ಪರ್ಧಿಸುವ ಅವಕಾಶ ಲಭ್ಯವಾಗುವುದು.



ಪ್ರತ್ಯರ್ಜಿದಾರರ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು.


1) ಅರ್ಜಿದಾರರ ಉನ್ನತ ವ್ಯಾಸಂಗವು ಅವರ ಕರ್ತವ್ಯ ವ್ಯಾಪ್ತಿಯೊಳಗೆ ನೇರ ಹಾಗೂ ನಿಕಟ ಸಂಬಂಧ ಹೊಂದಿಲ್ಲ.


2) ಕೆಸಿಎಸ್ಆರ್ ನಿಯಮ 107 ರ ಪ್ರಕಾರ ಯಾವುದೇ ರಜೆಯನ್ನು ಹಕ್ಕೆಂದು ಪ್ರತಿಪಾದಿಸುವಂತಿಲ್ಲ.


ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಹೈಕೋರ್ಟ್ ಕೆಸಿಎಸ್ಆರ್ ನಿಯಮ 61 (1)(ಬಿ) ಯನ್ನು ಪ್ರತ್ಯರ್ಜಿದಾರರು ಪರಿಗಣಿಸಿಲ್ಲ. 

ಅರ್ಜಿದಾರರು ಕೈಗೊಳ್ಳಲು ಇಚ್ಚಿಸುವ ವ್ಯಾಸಂಗವು ಆತನ ಕರ್ತವ್ಯದ ವ್ಯಾಪ್ತಿಯೊಳಗೆ ನೇರ ಹಾಗೂ ನಿಕಟ ಸಂಬಂಧ ಹೊಂದಿಲ್ಲವಾದರೂ ಸದರಿ ವ್ಯಾಸಂಗವು ಆತನ ಜ್ಞಾನವನ್ನು ವೃದ್ಧಿಸುವಂತಿದ್ದಲ್ಲಿ ಆತನಿಗೆ ವ್ಯಾಸಂಗದ ರಜೆಯನ್ನು ಮಂಜೂರು ಮಾಡತಕ್ಕದ್ದಾಗಿದೆ.


 ಕಾನೂನು ವ್ಯಾಸಂಗವು ನಾಗರಿಕ ಸೇವೆಯಲ್ಲಿ ಅರ್ಜಿದಾರರ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. 


ಪ್ರತ್ಯರ್ಜಿದಾರರು ತಮ್ಮ ಆದೇಶದಲ್ಲಿ ಈ ಅಂಶವನ್ನು ಪರಿಗಣಿಸಿಲ್ಲ. ನಿಯಮ 61 (1) (ಬಿ) ಇದರ ಬೆಳಕಿನಲ್ಲಿ ಯಾವುದೇ ರಜೆಯನ್ನು ಹಕ್ಕೆಂದು ಪ್ರತಿಪಾದಿಸುವಂತಿಲ್ಲ ಎಂಬ ಕೆಸಿಎಸ್ಆರ್ ನ 107 ನೇ ನಿಯಮದಿಂದ ವ್ಯಾಸಂಗದ ರಜೆಯ ಮಂಜೂರಾತಿಗೆ ಯಾವುದೇ ತೊಡಕಿಲ್ಲ ಎಂಬ ಅಭಿಪ್ರಾಯವನ್ನು ಹೈಕೋರ್ಟ್ ವ್ಯಕ್ತಪಡಿಸಿತು.


ಮಾನ್ಯ ದ.ಕ. ಜಿಲ್ಲಾ ನ್ಯಾಯಾಧೀಶರು ಹಾಗೂ ಹೈಕೋರ್ಟ್ ನ ವಿಲೇಖಾಧಿಕಾರಿಗಳು (ನ್ಯಾಯಾಂಗ) ಇವರ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್ ಅರ್ಜಿದಾರರಿಗೆ ವ್ಯಾಸಂಗದ ರಜೆಯನ್ನು ಮಂಜೂರು ಮಾಡುವಂತೆ ನಿರ್ದೇಶಿಸಿತು.


ಬರಹ: ✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ನ್ಯಾಯಾಂಗ ಇಲಾಖೆ, ಮಂಗಳೂರು




Ads on article

Advertise in articles 1

advertising articles 2

Advertise under the article