-->
ಕೋರ್ಟ್ ಕಲಾಪದಲ್ಲಿ ಪ್ರಾಕ್ಸಿ ವಕೀಲರಾಗಿ ಹಾಜರಾದ ಇಂಟರ್ನಿ: ಹೈಕೋರ್ಟ್ FIR ರದ್ದುಪಡಿಸಿದ್ದು ಯಾಕೆ..?

ಕೋರ್ಟ್ ಕಲಾಪದಲ್ಲಿ ಪ್ರಾಕ್ಸಿ ವಕೀಲರಾಗಿ ಹಾಜರಾದ ಇಂಟರ್ನಿ: ಹೈಕೋರ್ಟ್ FIR ರದ್ದುಪಡಿಸಿದ್ದು ಯಾಕೆ..?

ಕೋರ್ಟ್ ಕಲಾಪದಲ್ಲಿ ಪ್ರಾಕ್ಸಿ ವಕೀಲರಾಗಿ ಹಾಜರಾದ ಇಂಟರ್ನಿ: ಹೈಕೋರ್ಟ್ FIR ರದ್ದುಪಡಿಸಿದ್ದು ಯಾಕೆ..?





ವಿಚಾರಣಾ ನ್ಯಾಯಾಲಯದ ಮುಂದೆ ಬ್ಯಾಂಡ್ ಇಲ್ಲದೆ ನೋಂದಣಿಯಾಗದ ಕಾನೂನು ವಿದ್ಯಾರ್ಥಿಯೊಬ್ಬರು ಹಾಜರಾದ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ವಿದ್ಯಾರ್ಥಿಯ ವಿರುದ್ಧ ದಾಖಲಾದ ಎಫ್‌ಐಆರ್‌ನ್ನು ದೆಹಲಿ ಹೈಕೋರ್ಟ್ ರದ್ದುಪಡಿಸಿದೆ. ಸೀನಿಯರ್ ಲಾಯರ್ ಪರವಾಗಿ ವಿಚಾರಣಾ ನ್ಯಾಯಾಲಯದ ಮುಂದೆ ಪ್ರಾಕ್ಸಿ ವಕೀಲರಾಗಿ ಹಾಜರಾಗಿದ ಎರಡನೇ ವರ್ಷದ ಕಾನೂನು ವಿದ್ಯಾರ್ಥಿ ರಾಜೇಶ್ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.


ಕಾನೂನು ವಿದ್ಯಾರ್ಥಿಗಳ ಈ ಅಚಾತುರ್ಯ ಕೃತ್ಯಗಳಿಗೆ ಅವರನ್ನು ಶಿಕ್ಷಿಸುವುದು ಸೂಕ್ತವಲ್ಲ. ಅದರ ಬದಲು ನ್ಯಾಯಾಲಯಗಳ ಕಾರ್ಯವಿಧಾನ ಮತ್ತು ವಕೀಲಿ ವೃತ್ತಿ ಕುರಿತಂತೆ ಅವರಿಗೆ ಸಮರ್ಪಕ ಅರಿವು ಮೂಡಿಸುವ ಮತ್ತು ತರಬೇತಿ ನೀಡಬೇಕಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.


'ಪ್ರಾಕ್ಸಿ ವಕೀಲ'ರಾಗಿ ಹಾಜರಾಗಿದ್ದ ಕಾರಣಕ್ಕೆ ತಮ್ಮ ವಿರುದ್ದ ದಾಖಲಿಸಿರುವ ಎಫ್ಐಆರ್ ಅನ್ನು ರದ್ದುಪಡಿಸುವಂತೆ ಕೋರಿ ಕಾನೂನು ವಿದ್ಯಾರ್ಥಿ ರಾಜೇಶ್ ಶರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನೀಶ್ ದಯಾಳ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.


ಘಟನೆ ವಿವರ

ದೆಹಲಿಯ ಜಿಲ್ಲಾ ನ್ಯಾಯಾಲಯಗಳಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಅಭಯ್ ರಾಜ್ ವರ್ಮಾ ಅವರ ಕಚೇರಿಯಲ್ಲಿ ಕಾನೂನು ವಿದ್ಯಾರ್ಥಿ ರಾಜೇಶ್ ಶರ್ಮಾ ಇಂಟರ್ನ್ ಆಗಿದ್ದು, 2022ರ ಆಗಸ್ಟ್ 31 ರಂದು ದ್ವಾರಕಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಕೀಲ ಅಭಯ್ ರಾಜ್ ವರ್ಮಾ ನಗರದಿಂದ ಹೊರಹೋಗಿದ್ದ ಕಾರಣ ಪ್ರಕರಣ ಮುಂದೂಡುವಂತೆ ನ್ಯಾಯಾಲಯಕ್ಕೆ ಕೋರಲು ಇಂಟರ್ನ್ ರಾಜೇಶ್ ಶರ್ಮಾಗೆ ಸೂಚಿಸಿದ್ದರು.


ಈ ಸೂಚನೆ ಮೇರೆಗೆ ಇಂಟರ್ನ್ ರಾಜೇಶ್ ಶರ್ಮಾ ಕೋರ್ಟ್ ಮುಂದೆ ಹಾಜರಾದಾಗ, ನ್ಯಾಯಾಧೀಶರು ನೀವು ಮುಖ್ಯ ವಕೀಲರಾಗಿ ಹಾಜರಾಗಿದ್ದೀರೋ ಅಥವಾ ಪ್ರಾಕ್ಸಿ ವಕೀಲರಾಗಿ ಹಾಜರಾಗಿದ್ದೀರೋ ಎಂದು ಪ್ರಶ್ನಿಸಿದ್ದರು. ರಾಜೇಶ್ ಆತಂಕದಲ್ಲಿ ಪ್ರಾಕ್ಸಿ ಎಂದು ತಿಳಿಸಿದ್ದರು. 


ಆ ಸಮಯದಲ್ಲಿ ಇಂಟರ್ನ್ ರಾಜೇಶ್ ಬ್ಯಾಂಡ್ ಧರಿಸಿರಲಿಲ್ಲ. ಶರ್ಮಾ ಇಂಟರ್ನ್ ಎಂದು ಕೋರ್ಟ್ ಕಂಡುಹಿಡಿದ ನಂತರ ಈ ವಿಚಾರವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ಇರಿಸಿತ್ತು. ರಾಜೇಶ್ ಕಾನೂನು ಇಂಟರ್ನ್ ಆಗಿದ್ದರಿಂದ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ನಿರಾಕರಿಸಿದ್ದರು.


ಆದರೂ, ವಕೀಲರ ಸಂಘದ ಕಾರ್ಯದರ್ಶಿ ಜಿತೇಂದರ್ ಸೋಲಂಕಿ ದೂರು ನೀಡಿದ್ದು, ಅದರಂತೆ FIR ದಾಖಲಿಸಲಾಗಿತ್ತು. ಈ ಎಫ್ಐಆರ್ ರದ್ದು ಕೋರಿ ರಾಜೇಶ್ ಹೈಕೋರ್ಟ್ ಮೊರೆ ಹೋಗಿದ್ದರು.


ಹೈಕೋರ್ಟ್ ಹೇಳಿದ್ದೇನು..?

ಕಾನೂನು ವಿದ್ಯಾರ್ಥಿಗಳು, ಇಂಟರ್ನಿಗಳು ವೃತ್ತಿಪರ ವಕೀಲರಂತೆ ನ್ಯಾಯಾಲಯದ ಮುಂದೆ ಕಲಾಪದಲ್ಲಿ ಹಾಜರಾಗುವುದು ಸರಿಯಲ್ಲ. ಅದನ್ನು ನ್ಯಾಯಾಂಗ ಅಧಿಕಾರಿಗಳು ಆಕ್ಷೇಪಿಸುವುದು ಸರಿ ಇದೆ. ಆದರೆ, ಈ ಪ್ರಕರಣದಲ್ಲಿ ರಾಜೇಶ್ ತಾನು ಪ್ರಾಕ್ಸಿ ವಕೀಲ ಎಂದು ಹೇಳಿ ಸಿಕ್ಕಿ ಬಿದ್ದ ಬಳಿಕ ತಾನು ಇಂಟರ್ನ್ ಎಂದು ಕೋರ್ಟ್ ಮುಂದೆ ತಪ್ಪೊಪ್ಪಿಕೊಂಡಿದ್ದರು. 


ಬಳಿಕ, ವಕೀಲರಾಗಿ ನೋಂದಾಯಿಸಿಕೊಳ್ಳುವವರೆಗೂ ನ್ಯಾಯಾಲಯದ ಮುಂದೆ ಹಾಜರಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಹಾಗಾಗಿ, ಇಂಟರ್ನ್ ರಾಜೇಶ್ ಅವರನ್ನು ಶಿಕ್ಷಿಸುವುದು ಸೂಕ್ತವಲ್ಲ. ಬದಲಿಗೆ ಅವರಿಗೆ ಅಗತ್ಯ ಶಿಕ್ಷಣ ಮತ್ತು ಸಲಹೆ ನೀಡಬೇಕು ಎಂದು ಹೈಕೋರ್ಟ್ ಹೇಳಿದೆ.



ಅದೇ ರೀತಿ, ವಕೀಲರಾಗಿ ನೋಂದಣಿಯಾಗದ ವ್ಯಕ್ತಿಗಳು ವಕೀಲರ ಸಮವಸ್ತ್ರ ಧರಿಸಿ ನ್ಯಾಯಾಲಯದ ಮುಂದೆ ಹಾಜರಾಗುವ ಪ್ರಕರಣಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದನ್ನು ನಿರಾಕರಿಸಲಾಗದು ಎಂದು ಹೈಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.



ಕಾನೂನು ವಿದ್ಯಾರ್ಥಿಗಳ ಈ ಅಚಾತುರ್ಯ ಕೃತ್ಯಗಳಿಗೆ ಅವರನ್ನು ಶಿಕ್ಷಿಸುವುದು ಸೂಕ್ತವಲ್ಲ. ಬದಲಿಗೆ ಅವರಿಗೆ ನ್ಯಾಯಾಲಯಗಳ ಕಾರ್ಯವಿಧಾನ ಮತ್ತು ವಕೀಲಿ ವೃತ್ತಿ ಕುರಿತಂತೆ ಅರಿವು ಮೂಡಿಸುವ ಮತ್ತು ತರಬೇತಿ ನೀಡುವ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ಎಫ್‌ಐಆರ್‌ನ್ನು ರದ್ದುಪಡಿಸಿದೆ.



ನ್ಯಾಯಮೂರ್ತಿ ಅನೀಶ್ ದಯಾಳ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.




Ads on article

Advertise in articles 1

advertising articles 2

Advertise under the article