ದಸ್ತಾವೇಜು ನೋಂದಣಿ ಇನ್ನು ಆನ್‌ಲೈನ್: ಮಂಗಳೂರಿನಲ್ಲಿ ವಕೀಲರ ವಿರೋಧ
ದಸ್ತಾವೇಜು ನೋಂದಣಿ ಇನ್ನು ಆನ್‌ಲೈನ್: ಮಂಗಳೂರಿನಲ್ಲಿ ವಕೀಲರ ವಿರೋಧ
ದಸ್ತಾವೇಜು ನೋಂದಣಿ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡುವ ಮಹತ್ವದ ಪ್ರಕ್ರಿಯೆ ಆರಂಭವಾಗಿದ್ದು, ಚಿಂಚೋಳಿಯಲ್ಲಿ ನಡೆದ ಪ್ರಾಯೋಗಿಕ ಪ್ರಯತ್ನದ ಬಳಿಕ ಮಂಗಳೂರಿನಲ್ಲಿ ಈ ಪ್ರಯೋಗ ನಡೆಯಲಿದೆ.
ಆದರೆ, ವಕೀಲರು ಮತ್ತು ದಸ್ತಾವೇಜು ಬರಹಗಾರರಿಗೆ ಯಾವುದೇ ಮಾಹಿತಿ ನೀಡದೆ, ತರಬೇತಿ ನೀಡದೆ ಏಕಾಏಕಿ ಆನ್‌ಲೈನ್ ಮಾಡುವ ಬಗ್ಗೆ ವಕೀಲರು ಮತ್ತು ದಸ್ತಾವೇಜು ಬರಹಗಾರರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಕಾವೇರಿ 2.0 ತಂತ್ರಾಂಶವನ್ನು ತರಾತುರಿಯಲ್ಲಿ ಜಾರಿಗೊಳಿಸಿರುವುದಕ್ಕೆ ಮಂಗಳೂರು ವಕೀಲರ ಸಂಘ ಅಧಿಕೃತ ವಿರೋಧ ದಾಖಲಿಸಿದೆ. ಹಿರಿಯ ಅಧಿಕಾರಿಗಳ ಜೊತೆಗೆ ನಡೆದ ಸಭೆಯಲ್ಲಿ ಆನ್‌ಲೈನ್ ಪದ್ಧತಿಯನ್ನು ಏಕಾಏಕಿ ಜಾರಿಗೊಳಿಸುವುದಕ್ಕೆ ವಕೀಲರು ವಿರೋಧ ವ್ಯಕ್ತಪಡಿಸಿದರು.
ಈ ಆನ್‌ಲೈನ್ ವ್ಯವಸ್ಥೆ ಬಗ್ಗೆ ಬಹಿರಂಗವಾಗಿ ಚರ್ಚಿಸದೆ, ಸೂಕ್ತ ತರಬೇತಿ ನೀಡದೆ, ಲೋಪದೋಷಗಳ ಬಗ್ಗೆ ಯಾವುದೇ ಪರಾಮರ್ಶೆ ಮಾಡದೆ ಆನ್‌ಲೈನ್ ವ್ಯವಸ್ಥೆಯನ್ನು ಅಳವಡಿಸುತ್ತಿರುವುದು ಸರಿಯಲ್ಲ ಎಂದು ವಕೀಲರ ಸಂಘ ಹೇಳಿದೆ.
ಈ ಬಗ್ಗೆ ಸ್ಥಳೀಯ ಸಂಸದರಿಗೆ, ಶಾಸಕರುಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ಸಂಘ ಹೇಳಿದೆ.