-->
"ನನ್ನನ್ನೇ ನಾಮಿನಿ ಮಾಡಿ": ಸರ್ಕಾರಿ ನೌಕರನ ಪತ್ನಿಗಿರುವ ಹಕ್ಕೇನು..?- ಹೈಕೋರ್ಟ್ ಮಹತ್ವದ ತೀರ್ಪಿನ ವಿಸ್ತೃತ ವಿವರಣೆ

"ನನ್ನನ್ನೇ ನಾಮಿನಿ ಮಾಡಿ": ಸರ್ಕಾರಿ ನೌಕರನ ಪತ್ನಿಗಿರುವ ಹಕ್ಕೇನು..?- ಹೈಕೋರ್ಟ್ ಮಹತ್ವದ ತೀರ್ಪಿನ ವಿಸ್ತೃತ ವಿವರಣೆ

"ನನ್ನನ್ನೇ ನಾಮಿನಿ ಮಾಡಿ": ಸರ್ಕಾರಿ ನೌಕರನ ಪತ್ನಿಗಿರುವ ಹಕ್ಕೇನು..?- ಹೈಕೋರ್ಟ್ ಮಹತ್ವದ ತೀರ್ಪಿನ ವಿಸ್ತೃತ ವಿವರಣೆ





ಸರಕಾರಿ ನೌಕರನ ಸೇವಾ ಪುಸ್ತಕದಲ್ಲಿ ತನ್ನನ್ನೇ ನಾಮಿನಿ ಯನ್ನಾಗಿ ಮಾಡುವಂತೆ ಕೇಳುವ ಹಕ್ಕು ಪತ್ನಿಗೆ ಇಲ್ಲ -- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು


ಸರಕಾರಿ ನೌಕರಿಯಲ್ಲಿರುವ ಪತಿಯ ಸೇವಾ ಪುಸ್ತಕದಲ್ಲಿ ತನ್ನನ್ನೇ ನಾಮಿನಿಯನ್ನಾಗಿ ಮಾಡಿ ಎಂದು ಕೇಳುವ ಹಕ್ಕು ಪತ್ನಿಗೆ ಇಲ್ಲ. ಆದರೆ ಪತಿಯ ಮರಣೋತ್ತರ ಪಿಂಚಣಿಯನ್ನು ಕೇಳಿ ಪಡೆಯುವ ಅಧಿಕಾರ ಪತ್ನಿಗೆ ಇದೆ ಎಂದು ಕರ್ನಾಟಕ ಹೈಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ "ಆದಮ್ ಸಾಹೇಬ್ Vs ರಜಿಯಾ ಬೇಗಂ ಮತ್ತಿತರರು" ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ.


ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.


ಶಿಕ್ಷಕರಾಗಿ ಸರಕಾರಿ ಸೇವೆಯಲ್ಲಿರುವ ತನ್ನ ಪತಿಯ ಸೇವಾ ಪುಸ್ತಕದಲ್ಲಿ ತನ್ನನ್ನು ನಾಮಿನಿ ಎಂದು ಘೋಷಿಸಿ ಸದರಿ ನಾಮನಿರ್ದೇಶನವನ್ನು ಸೇವಾ ಪುಸ್ತಕದಲ್ಲಿ ನಮೂದಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ತನ್ನ ಪತಿ ಆದಮ್ ಸಾಹೇಬ್ ಹಾಗೂ ಇತರ ಆರು ಮಂದಿ ಪಕ್ಷಕಾರರನ್ನು ಪ್ರತಿವಾದಿಗಳನ್ನಾಗಿಸಿ ವಾದಿ ಶ್ರೀಮತಿ ರಜಿಯಾ ಬೇಗಂ ಎಂಬುವರು ಬೆಳಗಾವಿಯ ಕೌಟುಂಬಿಕ ನ್ಯಾಯಾಲಯದಲ್ಲಿ ಮೂಲದಾವೆ ಒ.ಎಸ್.58/ 2016 ಎಂಬ ದಾವೆಯನ್ನು ಹೂಡಿದರು.


ಕೌಟುಂಬಿಕ ನ್ಯಾಯಾಲಯದಿಂದ ಹೊರಡಿಸಲಾದ ಸಮನ್ಸ್ ಸ್ವೀಕರಿಸಿದ ಪತಿ ಆದಂ ಸಾಹೇಬ್ ಅವರು ತನ್ನ ಪತ್ನಿಯು ಹೂಡಿದ ದಾವೆ ಕಾನೂನಿನಡಿ ಊರ್ಜಿತವಲ್ಲ ಎಂಬುದಾಗಿ ಲಿಖಿತ ಹೇಳಿಕೆ ಸಲ್ಲಿಸಿ, ದಾವೆಯನ್ನು ತಿರಸ್ಕರಿಸಬೇಕೆಂದು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಿದರು.


ದಾವೆಯ ಊರ್ಜಿತದ ಬಗ್ಗೆ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯವು ವಾದಿ ರಜಿಯಾ ಬೇಗಂ ಅವರು ಸಲ್ಲಿಸಿದ ದಾವೆಯು ಕಾನೂನಿನಡಿ ಊರ್ಜಿತವಾಗಿದೆ ಎಂಬ ಅಭಿಪ್ರಾಯದೊಂದಿಗೆ ದಾವೆಯನ್ನು ತಿರಸ್ಕರಿಸಬೇಕೆಂದು ಕೋರಿ ಪ್ರತಿವಾದಿ ಆದಂ ಸಾಹೇಬ್ ಸಲ್ಲಿಸಿದ್ದ ಅರ್ಜಿಯನ್ನು ದಿನಾಂಕ 15.7.2017 ರಂದು ಹೊರಡಿಸಿದ ಆದೇಶ ಪ್ರಕಾರ ವಜಾಗೊಳಿಸಿತು.


ಕೌಟುಂಬಿಕ ನ್ಯಾಯಾಲಯದ ಆದೇಶದಿಂದ ಬಾಧಿತರಾದ ಆದಂ ಸಾಹೇಬ್ ಅವರು ಸದರಿ ಆದೇಶದ ವಿರುದ್ಧ ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ಸಿವಿಲ್ ರಿವಿಜನ್ ಪಿಟಿಷನ್ ನಂಬರ್ 100049/2017ರಲ್ಲಿ ಪುನರಾವಲೋಕನ ಅರ್ಜಿ ದಾಖಲಿಸಿದರು.


ಅರ್ಜಿದಾರ ಆದಮ್ ಸಾಹೇಬ್ ಪರವಾಗಿ ವಾದ ಮಂಡಿಸಿದ ವಕೀಲರು ತನ್ನ ಮರಣ ಉಪಾದಾನ (ಗ್ರಾಚ್ಯುಟಿ), ಕೆಜಿಐಡಿ, ಸಮೂಹ ವಿಮೆ ಇವುಗಳಿಗೆ ಸಂಬಂಧಪಟ್ಟಂತೆ ಫಲಪ್ರದ ಮೊತ್ತವನ್ನು ತನ್ನ ಮರಣಾ ನಂತರ ಪಡೆಯಲು ಯಾರನ್ನು ನಾಮ ನಿರ್ದೇಶಕರನ್ನಾಗಿ ಮಾಡಬೇಕೆಂಬುದು ಸರಕಾರಿ ನೌಕರರ ವೈಯಕ್ತಿಕ ವಿಷಯವಾಗಿದೆ ಹಾಗೂ ಆತನ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಅದರಲ್ಲಿ ಯಾರೂ ಹಕ್ಕು ಮಂಡಿಸಲಾಗದು. ಬಲವಂತವಾಗಿ ನ್ಯಾಯಾಲಯದ ಮೂಲಕ ನಿರ್ದೇಶನ ನೀಡಲು ಅವಕಾಶವಿಲ್ಲ. ಹಾಗಾಗಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದು ಪಡಿಸಬೇಕು ಎಂದು ಪ್ರಾರ್ಥಿಸಿದರು.


ಎದುರುದಾರರಾದ ಶ್ರೀಮತಿ ರಜಿಯಾ ಬೇಗಂ ಪರವಾಗಿ ವಾದ ಮಂಡಿಸಿದ ವಕೀಲರು ಪತಿಯ ಮರಣಾನಂತರ ಕಾನೂನು ಪ್ರಕಾರ ಪಿಂಚಣಿ ಪಡೆಯುವ ಹಕ್ಕು ಪತ್ನಿಗೆ ಇದೆ ಹಾಗಾಗಿ ಪತಿಯ ಸೇವಾ ಪುಸ್ತಕದಲ್ಲಿ ತನ್ನ ಹೆಸರನ್ನು ನಾಮಿನಿ ಯನ್ನಾಗಿ ಮಾಡುವಂತೆ ಕೇಳುವ ಹಕ್ಕು ಪತ್ನಿಗೆ ಇದೆ. ಆದುದರಿಂದ ಪತ್ನಿ ರಜಿಯಾ ಬೇಗಂ ರವರ ಹೆಸರನ್ನು ಆಕೆಯ ಪತಿ ಆದಮ್ ಸಾಹೇಬ್ ಅವರ ಸೇವಾ ಪುಸ್ತಕದಲ್ಲಿ ದಾಖಲು ಮಾಡುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಪ್ರಾರ್ಥಿಸಿದರು.


ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಹೈಕೋರ್ಟ್ ಮರಣ ಉಪಾದಾನದ (ಗ್ರಾಚ್ಯುಟಿ) ಉದ್ದೇಶಕ್ಕೆ ಕೆ.ಸಿ.ಎಸ್.ಆರ್. ನಿಯಮ 302 ರ ಪ್ರಕಾರ ಕುಟುಂಬ ಎಂಬ ಶಬ್ದದ ಪರಿಭಾಷೆಯಲ್ಲಿ ಪತ್ನಿ ಮತ್ತು ಮಕ್ಕಳನ್ನು ಹೊರತುಪಡಿಸಿ ಹೆತ್ತವರು, ಸಹೋದರರು, ಸಹೋದರಿಯರು ಮತ್ತು ಮೃತ ಮಗನ ಮಕ್ಕಳನ್ನು ಕೂಡ ನಾಮನಿರ್ದೇಶನ ಮಾಡಲು ಸರಕಾರಿ ನೌಕರ ಅಧಿಕಾರ ಉಳ್ಳವನಾಗಿದ್ದಾನೆ. ಕುಟುಂಬವೇ ಇಲ್ಲದಿದ್ದ ಪಕ್ಷದಲ್ಲಿ ಮೂರನೇ ವ್ಯಕ್ತಿಯನ್ನು ಕೂಡ ನಾಮ ನಿರ್ದೇಶಿತನನ್ನಾಗಿ (ನಾಮಿನಿ) ಮಾಡಬಹುದಾಗಿದೆ.


ಕಾನೂನಿನಡಿ ನಾಮನಿರ್ದೇಶಿತ ವ್ಯಕ್ತಿ (ನಾಮಿನಿ) ತನ್ನ ಅಭಿರಕ್ಷೆಯಲ್ಲಿರುವ ಹಣದ ಸಂಪೂರ್ಣ ಒಡೆತನವನ್ನು ಹೊಂದಲು ಸಾಧ್ಯವಿಲ್ಲ. ಸದರಿ ಹಣವನ್ನು ಮೃತ ವ್ಯಕ್ತಿಯ ನ್ಯಾಯಯುತ ವಾರಿಸುದಾರರಿಗೆ ನೀಡುವ ಜವಾಬ್ದಾರಿ ನಾಮನಿರ್ದೇಶಿತ ವ್ಯಕ್ತಿಯದ್ದಾಗಿದೆ. ನಾಮಿನಿ ಸದರಿ ಹಣದ ಮಾಲಕನಾಗಲು ಸಾಧ್ಯವಿಲ್ಲ. ಆದರೆ ಕುಟುಂಬದ ಸದಸ್ಯರು ಯಾರೂ ಜೀವಂತ ಇಲ್ಲದಿದ್ದರೆ ನಾಮಿನಿಯು ಸದರಿ ಹಣದ ಮಾಲಕನಾಗುವ ಸಾಧ್ಯತೆಗಳಿವೆ.


ಪತಿಯ ಮರಣಾ ನಂತರ ಕರ್ನಾಟಕ ಸರಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಗಳು 1964 ರ ನಿಯಮ 7 ರ ಪ್ರಕಾರ ಕುಟುಂಬ ಪಿಂಚಣಿಯನ್ನು ಪಡೆಯುವ ಹಕ್ಕು ಪತ್ನಿಗೆ ಪ್ರಾಪ್ತವಾಗಿದೆ.


ಅರ್ಜಿದಾರರ ಪರವಾಗಿ ಮಾನ್ಯ ಸುಪ್ರೀಂ ಕೋರ್ಟ್ ಸಾರ್ಬತಿ ದೇವಿ Vs ಉಷಾದೇವಿ ಪ್ರಕರಣದಲ್ಲಿ ನೀಡಿದ ತೀರ್ಪು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು ಶಕುಂತಲಾ ಬಾಯಿ Vs ಸಾಯಿಲತಾ ಆನಂದ್ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಲಾಯಿತು. ಎದುರುದಾರರ ಪರವಾಗಿ ಆಂಧ್ರಪ್ರದೇಶ ಹೈಕೋರ್ಟ್ ಗೆಟೆಮ್ ಇಸ್ರಾಯಿಲ್ Vs ಎಂ. ಸಿರೋಮಣಿ ಈ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಲಾಯಿತು.





ಉಭಯ ಪಕ್ಷಕಾರರು ಹಾಜರುಪಡಿಸಿದ ಸಿದ್ಧ ನಿರ್ಣಯಗಳನ್ನು ಅವಲೋಕಿಸಿದ ಹೈಕೋರ್ಟ್ ಸಾರ್ಬತಿ ದೇವಿ Vs ಉಮಾದೇವಿ ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಈ ಪ್ರಕರಣಕ್ಕೂ ಅನ್ವಯವಾಗುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಸರಕಾರಿ ನೌಕರಿಯಲ್ಲಿರುವ ಪತಿಯ ಸೇವಾ ಪುಸ್ತಕದಲ್ಲಿ ತನ್ನನ್ನೇ ನಾಮಿನಿಯನ್ನಾಗಿ ಮಾಡಿ ಎಂದು ಕೇಳುವ ಹಕ್ಕು ಪತ್ನಿಗೆ ಇಲ್ಲ.


ಆದರೆ, ಗಂಡ ಮರಣೋತ್ತರ ಪಿಂಚಣಿ ಹಣವನ್ನು "ಕೇಳಿ ಪಡೆಯುವ" ಹಕ್ಕು/ಅಧಿಕಾರ ಪತ್ನಿಗೆ ಇದೆ. ನಾಮಿನಿಯನ್ನಾಗಿ ಯಾರನ್ನು ಮಾಡಬೇಕು ಎಂಬುದು ಸರಕಾರಿ ನೌಕರನ ವೈಯಕ್ತಿಕ ವಿಷಯ ಹಾಗೂ ಆತನ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಅದರಲ್ಲಿ ಯಾರೂ ಹಕ್ಕು ಮಂಡಿಸಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಪತ್ನಿಗೆ ಪಿಂಚಣಿ ಪಡೆಯುವ ಹಕ್ಕು ಇರುವಂತೆ ಪತಿಯ ಸೇವಾ ಪುಸ್ತಕದಲ್ಲಿ ತನ್ನ ಹೆಸರನ್ನು ನಾಮನಿರ್ದೇಶನ (ನಾಮಿನಿ) ಮಾಡಬೇಕೆಂಬ ಅಧಿಕಾರ ತನಗಿದೆ ಎಂಬುದಾಗಿ ಪತ್ನಿ ರಜಿಯಾ ಬೇಗಂ ಪರವಾಗಿ ಮಂಡಿಸಿದ ವಾದವನ್ನು ಹೈಕೋರ್ಟ್ ತಿರಸ್ಕರಿಸಿತು.


ನಿಯಮಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮತ್ತು ಸುಪ್ರೀಂಕೋರ್ಟಿನ ತೀರ್ಪಿನ ಬೆಳಕಿನಲ್ಲಿ ಕೆ. ಸಿ. ಎಸ್. ಆರ್. ನಿಯಮ 302ರ ಸ್ಥಿತಿ ಬದಲಾಗುವುದಿಲ್ಲ. ನೌಕರರ ಸೇವಾ ಪುಸ್ತಕದಲ್ಲಿ ನಾಮಿನಿ ಯನ್ನಾಗಿ ಮಾಡುವಂತೆ ಕೋರುವ ನ್ಯಾಯಯುತ ಹಕ್ಕು ಸಂಗಾತಿಗೆ ಲಭಿಸುವುದಿಲ್ಲ ಎಂಬುದಾಗಿ ಮಾನ್ಯ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.


ಪತಿ ಆದಮ್ ಸಾಹೇಬ್ ಸಲ್ಲಿಸಿದ ಪುನರಾವಲೋಕನಾ ಅರ್ಜಿಯನ್ನು ಪುರಸ್ಕರಿಸಿದ ಮಾನ್ಯ ಹೈಕೋರ್ಟ್ ಪತ್ನಿ ರಜಿಯಾಬೇಗಂ ಕೌಟುಂಬಿಕ ನ್ಯಾಯಾಲಯದಲ್ಲಿ ತನ್ನ ಪತಿ ಆದಮ್ ಸಾಹೇಬ್ ಹಾಗೂ ಇತರರ ವಿರುದ್ಧ ಸಲ್ಲಿಸಿದ ದಾವೆಯನ್ನು ವಜಾ ಗೊಳಿಸಿತು.




✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ



Get the Judgement here;

ಪ್ರಕರಣ: ಆದಂ ಸಾಹೇಬ್ Vs ರಜಿಯಾ ಬೇಗಂ

ಕರ್ನಾಟಕ ಹೈಕೋರ್ಟ್, CRP 100049/2017 Dated 02-04-2018

Ads on article

Advertise in articles 1

advertising articles 2

Advertise under the article