ತಂದೆ ಸ್ವಯಾರ್ಜಿತ ಆಸ್ತಿಯಲ್ಲಿ ಪುತ್ರ ಹಕ್ಕು ತ್ಯಜಿಸಿದ್ದರೆ ಆತನ ಮಗನಿಗೆ ಪಾಲು ಕೇಳಲು ನಿರ್ಬಂಧವಿದೆ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ತಂದೆ ಸ್ವಯಾರ್ಜಿತ ಆಸ್ತಿಯಲ್ಲಿ ಪುತ್ರ ಹಕ್ಕು ತ್ಯಜಿಸಿದ್ದರೆ ಆತನ ಮಗನಿಗೆ ಪಾಲು ಕೇಳಲು ನಿರ್ಬಂಧವಿದೆ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕನ್ನು ಮಗ ತ್ಯಜಿಸಿದ್ದರೆ, ಆ ಪುತ್ರನ ಮಕ್ಕಳಿಗೆ ಆ ಆಸ್ತಿಯಲ್ಲಿ ಪಾಲು ಪಡೆಯುವುದಕ್ಕೆ ಪ್ರತಿಬಂಧ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ಕೆ ಎಂ ಜೋಸೆಫ್ ಮತ್ತು ನ್ಯಾ. ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಸುಪ್ರೀಮ ಕೋರ್ಟ್ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ತಮ್ಮ ತಾತನ ಸ್ವಯಾರ್ಜಿತ ಆಸ್ತಿಯಲ್ಲಿ ಮೇಲ್ಮನವಿದಾರರಿಗೆ ಪಾಲು ನೀಡಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಸದ್ರಿ ದಾವಾ ಆಸ್ತಿಯಲ್ಲಿನ ಹಕ್ಕುಗಳನ್ನು ತಂದೆ ಬಿಟ್ಟುಕೊಟ್ಟಿರುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿತು. ತಂದೆಯ ಹಕ್ಕು ತ್ಯಾಗಪತ್ರವನ್ನು ಗಮನಿಸಿದ ಬಳಿಕ ಹೈಕೋರ್ಟ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿತ್ತು.
ಪ್ರಕರಣ: ಏಳುಮಲೈ ಅಲಿಯಾಸ್ ವೆಂಕಟೇಶನ್ ಮತ್ತಿತರರು VS ಎಂ ಕಮಲಾ ಮತ್ತಿರರು
ಸುಪ್ರೀಂ ಕೋರ್ಟ್
ಪ್ರಕರಣದ ವಿವರ
'ಸೆಂಗಲಾನಿ ಚೆಟ್ಟಿಯಾರ್' ಎನ್ನುವವರ ಎರಡನೇ ಸಂಬಂಧದಿಂದ ಜನಿಸಿದ ಅವರ ಇಬ್ಬರು ಮಕ್ಕಳು ಸಲ್ಲಿಸಿದ ಆಸ್ತಿ ಹಂಚಿಕೆ ವಿವಾದವೇ ಪ್ರಕರಣದ ಮೂಲ ಬಿಂದು. ವಿವಾದಿತ ದಾವಾ ಆಸ್ತಿ ಚೆಟ್ಟಿಯಾರ್ ಅವರ ಸ್ವಯಾರ್ಜಿತ ಆಸ್ತಿ. ತಮ್ಮ ಮೊದಲ ಮದುವೆಯಿಂದ, ಚೆಟ್ಟಿಯಾರ್ ಅವರಿಗೆ ಚಂದ್ರನ್ ಹೆಸರಿನ ಒಬ್ಬ ಮಗ ಜನಿಸಿದ್ದರು, ಎರಡನೇ ಮದುವೆಯಿಂದ, ಐವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಪಡೆದಿದ್ದರು.
ಚೆಟ್ಟಿಯಾರ್ ಅವರ ಮೊದಲ ಪತ್ನಿಗೆ ಚಂದ್ರನ್ ಏಕೈಕ ಪುತ್ರ. ಚಂದ್ರನ್ 1978ರಲ್ಲಿ ಮೃತಪಟ್ಟಿದ್ದು, ಸಾವಿಗೆ ಮುನ್ನವೇ 1975ರಲ್ಲಿ ದಾವಾ ಆಸ್ತಿಗೆ ಸಂಬಂಧಿಸಿದಂತೆ ಹಕ್ಕು ತ್ಯಾಗಪತ್ರಕ್ಕೆ ಸಹಿ ಹಾಕಿದ್ದರು.
ಚೆಟ್ಟಿಯಾರ್ 1988ರಲ್ಲಿ ನಿಧನರಾಗಿದ್ದು, ಅವರ ಎರಡನೇ ಪತ್ನಿ 2005ರಲ್ಲಿ ಇಹಲೋಕ ತ್ಯಜಿಸಿದ್ದರು. ಆ ಬಳಿಕ, ಚೆಟ್ಟಿಯಾರ್ ಅವರ ಎರಡನೇ ಮದುವೆಯಿಂದ ಜನಿಸಿದ ಇಬ್ಬರು ಮಕ್ಕಳು ಆಸ್ತಿಯಲ್ಲಿ ಪಾಲುಪಟ್ಟಿ ಮಾಡುವಂತೆ ಕೋರಿ ಈ ಮೊಕದ್ದಮೆ ಸಲ್ಲಿಸಿದ್ದರು.
ಪ್ರಸ್ತುತ ಮೇಲ್ಮನವಿದಾರರಾಗಿರುವ ಚಂದ್ರನ್ ಅವರ ಉತ್ತರಾಧಿಕಾರಿಯನ್ನು ಮೊಕದ್ದಮೆಗೆ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.
ವಿಚಾರಣಾ ನ್ಯಾಯಾಲಯದ ಮುಂದೆ ಸಲ್ಲಿಸಲಾಗಿದ್ದ ಆಸ್ತಿ ಪಾಲಿನ ಮೊಕದ್ದಮೆಯಲ್ಲಿ, ಮೇಲ್ಮನವಿದಾರರ ತಂದೆ ಚಂದ್ರನ್ ಅವರು ಕಾರ್ಯಗತಗೊಳಿಸಿದ ಪತ್ರದ ಆಧಾರದ ಮೇಲೆ ಪ್ರಸ್ತುತ ಮೇಲ್ಮನವಿದಾರರನ್ನು ಹೊರಗಿಡಲು ಫಿರ್ಯಾದಿಗಳು ಪ್ರಾರ್ಥಿಸಿದರು. ಆದರೆ ಅರ್ಜಿದಾರರ ತಂದೆ 1975ರಲ್ಲಿ ಅವರ ತಂದೆ ಚೆಟ್ಟಿಯಾರ್ ಬದುಕಿದ್ದಾಗ ತ್ಯಾಗಪತ್ರವನ್ನು ಕಾರ್ಯಗತಗೊಳಿಸಿದ್ದರಿಂದ ಅರ್ಜಿದಾರರು ತಮ್ಮ ಅಜ್ಜನ ಆಸ್ತಿ ಉತ್ತರಾಧಿಕಾರವಾಗಿ ಪಡೆಯುವುದನ್ನು ಅಂತಹ ತ್ಯಾಗಪತ್ರ ತಡೆಯುವುದಿಲ್ಲ ಎಂದು ಅಧೀನ ನ್ಯಾಯಾಲಯ ಹೇಳಿತ್ತು. ಆದ್ದರಿಂದ ಪಾಲಿಗೆ ಸಂಬಂಧಿಸಿದ ಮೊಕದ್ದಮೆಯಲ್ಲಿನ ಫಿರ್ಯಾದಿಗಳಿಗೆ ಆಸ್ತಿಯ 2/7 ಪಾಲನ್ನು ಮಾತ್ರ ನೀಡಲಾಗಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಚೆಟ್ಟಿಯಾರ್ ಅವರ ಎರಡನೇ ಪತ್ನಿಯ ಮಕ್ಕಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮೇಲ್ಮನವಿದಾರರು ತಮ್ಮ ತಂದೆ ಚಂದ್ರನ್ ಕಾರ್ಯಗತಗೊಳಿಸಿದ ತ್ಯಾಗಪತ್ರ ಆಧರಿಸಿ ಈ ಆಸ್ತಿಯಲ್ಲಿ ಯಾವುದೇ ಪಾಲು ಪಡೆಯಬಾರದು ಎಂದು ಸೂಚಿಸಿತು. ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.