ಕಿರಿಯ ವಕೀಲರಿಗೆ ರೂ. 3000/- ಸ್ಟೈಪೆಂಡ್: ಯೋಜನೆಗೆ ಕೇರಳ ಸರ್ಕಾರ ಚಾಲನೆ
ಕಿರಿಯ ವಕೀಲರಿಗೆ ರೂ. 3000/- ಸ್ಟೈಪೆಂಡ್: ಯೋಜನೆಗೆ ಕೇರಳ ಸರ್ಕಾರ ಚಾಲನೆ
ಆರ್ಥಿಕವಾಗಿ ಹಿಂದುಳಿದ ಕಿರಿಯ ವಕೀಲರಿಗೆ ಶುಭ ಸುದ್ದಿ. ವಾರ್ಷಿಕವಾಗಿ ಒಂದು ಲಕ್ಷಕ್ಕಿಂತ ಕಡಿಮೆ ಆದಾಯ ಇರುವ, 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ನೂತನವಾಗಿ ವಕೀಲ ವೃತ್ತಿಗೆ ಸೇರಿದ ವಕೀಲರಿಗೆ ಪ್ರತಿ ತಿಂಗಳು ರೂ. 3000/- ಸ್ಟೈಪೆಂಡ್ ನೀಡುವ ಯೋಜನೆಗೆ ಕೇರಳದಲ್ಲಿ ಚಾಲನೆ ನೀಡಲಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಯೋಜನೆಗೆ ಚಾಲನೆ ನೀಡಿದರು. ಕೇರಳ ರಾಜ್ಯ ವಕೀಲರ ಪರಿಷತ್ತು ಹಾಗೂ ಕೇರಳ ವಕೀಲರ ಕಲ್ಯಾಣ ನಿಧಿ ಟ್ರಸ್ಟ್ ಸಮಿತಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು.
ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಸರ್ಕಾರ ಮಾರ್ಚ್ 2018ರಲ್ಲಿ ಈ ಬಗ್ಗೆ ಯೋಜನೆ ರೂಪಿಸಿ ಆದೇಶ ಹೊರಡಿತ್ತು. ಈ ಆದೇಶದಂತೆ, 2018ರ ಅಧಿಸೂಚನೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಕಿರಿಯ ವೃತ್ತಿಪರ ವಕೀಲರಿಗೆ ತಿಂಗಳಿಗೆ ರೂ. 5,000 ವೇತನ ನೀಡುವ ಪ್ರಸ್ತಾಪ ಇತ್ತು.
ಆದರೆ, ಮೂರು ವರ್ಷ ಕಳೆದರೂ ಯೋಜನೆ ಕಾರ್ಯಗತಗೊಂಡಿರಲಿಲ್ಲ. ಈ ಬಗ್ಗೆ ವಕೀಲರೊಬ್ಬರು ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಆದೇಶ ಜಾರಿಗೆ ತರಲು ವಿಳಂಬ ಮಾಡಿದ್ದಕ್ಕಾಗಿ ವಕೀಲರ ಪರಿಷತ್ ಬಗ್ಗೆ ಕೇರಳ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಡಿಸೆಂಬರ್ 2021ರಲ್ಲಿ ಹೊಸ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ ʼಕೇರಳ ವಕೀಲರ ಸ್ಟೈಪೆಂಡ್ ನಿಯಮಾವಳಿʼಗಳನ್ನು ಹೊರಡಿಸಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ನವ ವಕೀಲರಿಗೆ ವಾರ್ಷಿಕ ಆದಾಯ ಮಿತಿ ಅನ್ವಯಿಸುವುದಿಲ್ಲ ಎಂದು ಸರ್ಕಾರಿ ಆದೇಶ ಸ್ಪಷ್ಟಪಡಿಸಿತ್ತು.
ಕೇರಳ ವಕೀಲರ ಕಲ್ಯಾಣ ನಿಧಿ ಕಾಯಿದೆ, 1980ರ ಸೆಕ್ಷನ್ 9ರ ಅಡಿಯಲ್ಲಿ ಇದನ್ನು ಮಾಡಲು ಅಧಿಕಾರ ಇರುವ ಟ್ರಸ್ಟಿ ಸಮಿತಿಯು ಕೇರಳ ವಕೀಲರ ಕಲ್ಯಾಣ ನಿಧಿಯಿಂದ ಸ್ಟೈಪೆಂಡ್ ಅನ್ನು ವಿತರಿಸಬಹುದು ಎಂದು ಷರತ್ತು ವಿಧಿಸಿತು.
ಈ ನಿಯಮಗಳನ್ನು ಸೂಚಿಸಿದ ನಂತರ, ಟ್ರಸ್ಟಿ ಸಮಿತಿಯು ರಾಜ್ಯ ಸರ್ಕಾರಕ್ಕೆ ಕೆಲವು ಶಿಫಾರಸುಗಳನ್ನು ಮಾಡಿತು. ಅವುಗಳ ಆಧಾರದ ಮೇಲೆ 3 ವರ್ಷಕ್ಕಿಂತ ಕಡಿಮೆ ವೃತ್ತಿ ಅನುಭವ ಇರುವ ವಕೀಲರಿಗೆ ಹಾಗೂ ₹1 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುವವರಿಗೆ ₹3,000 ಸ್ಟೈಪೆಂಡ್ ಪಾವತಿಸಲು ಜೂನ್ 2022 ರಲ್ಲಿ ಮತ್ತೊಂದು ಸರ್ಕಾರಿ ಆದೇಶ ಹೊರಡಿಸಲಾಯಿತು.