ಚೆಕ್ ಅಮಾನ್ಯ ಪ್ರಕರಣ ರಾಜ್ಯದಿಂದ ರಾಜ್ಯಕ್ಕೆ ವರ್ಗಾಯಿಸಬಹುದು: ಸುಪ್ರೀಂ ಕೋರ್ಟ್
ಚೆಕ್ ಅಮಾನ್ಯ ಪ್ರಕರಣ ರಾಜ್ಯದಿಂದ ರಾಜ್ಯಕ್ಕೆ ವರ್ಗಾಯಿಸಬಹುದು: ಸುಪ್ರೀಂ ಕೋರ್ಟ್
ಅಪರಾಧ ದಂಡ ಸಂಹಿತೆ ಕಲಂ 406 ಅಡಿಯಲ್ಲಿ ಅಪರಾಧ ಪ್ರಕರಣಗಳನ್ನು ವರ್ಗಾಯಿಸುವ ಅಧಿಕಾರವು ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, 1881 (ಎನ್ಐ ಆಕ್ಟ್) ನ ಸೆಕ್ಷನ್ 138ರ ಅಡಿಯಲ್ಲಿ ಚೆಕ್ ಅಮಾನ್ಯ ಪ್ರಕರಣಗಳಿಗೂ ಅಬಾಧಿತವಾಗಿ ಹಾಗೆಯೇ ಉಳಿದಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ದಿನೇಶ್ ಮಹೇಶ್ವರಿ ಮತ್ತು ನ್ಯಾ. ಸಂಜಯ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ ಹಾಗೂ, ಸಿಆರ್‌ಪಿಸಿಯ ಸೆಕ್ಷನ್ 142 (1) ಕಲಂನ್ನು NI ಆಕ್ಟ್ ಅತಿಕ್ರಮಿಸುತ್ತದೆ ಎಂಬ ವಾದವನ್ನು ಸುಪ್ರೀಂ ನ್ಯಾಯಪೀಠ ತಿರಸ್ಕರಿಸಿದೆ. ಈ ತೀರ್ಪು ನ್ಯಾಯದ ದೃಷ್ಟಿಯಿಂದ ಸರಿಯಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ಒಬ್ಬ ವ್ಯಕ್ತಿ ವೈಯಕ್ತಿಕವಾಗಿ ಮತ್ತು ಅವರ ಆಸ್ತಿಗೆ ಸಂಬಂಧಿಸಿದಂತೆ ಒಟ್ಟು ಆರು ಚೆಕ್ ಅಮಾನ್ಯ ಪ್ರಕರಣಗಳನ್ನು ಎದುರಿಸುತ್ತಿದ್ದರು. ಅದರಲ್ಲಿ ಎರಡು ಪ್ರಕರಣಗಳನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿ ದಾಖಲಿಸಲಾಗಿದ್ದು, ಉಳಿದ ನಾಲ್ಕು ಪ್ರಕರಣಗಳು ದೆಹಲಿಯಲ್ಲಿ ದಾಖಲಿಸಲಾಗಿತ್ತು.
"ಸೆಕ್ಷನ್ 406 ಸಿ.ಆರ್.ಪಿ.ಸಿ. ಅಡಿಯಲ್ಲಿ ಬಾಕಿ ಇರುವ ಕ್ರಿಮಿನಲ್ ವಿಚಾರಣೆಯನ್ನು ವರ್ಗಾಯಿಸುವ ಈ ನ್ಯಾಯಾಲಯದ ಅಧಿಕಾರವು 1881 ರ ಕಾಯಿದೆಯ ಸೆಕ್ಷನ್ 138 ರ ಅಡಿಯಲ್ಲಿ ಅಪರಾಧಗಳಿಗೆ ಸಂಬಂಧಿಸಿದಂತೆ ರದ್ದುಗೊಂಡಿಲ್ಲ" ಎಂದು ನ್ಯಾಯಪೀಠ ಪುನರುಚ್ಚರಿಸಿತು.
ನಾಗ್ಪುರದಲ್ಲಿ ದಾಖಲಾದ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ನ್ಯಾಯಪೀಠ ಪುರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸದ್ರಿ ಈ ಪ್ರಕರಣದ ಅರ್ಜಿದಾರರು ಸಲ್ಲಿಸಿದ ದಾವೆಯನ್ನು ತಿರಸ್ಕರಿಸಿದ ನ್ಯಾಯಪೀಠ, ಒಟ್ಟಾಗಿ ಈ ಆರು ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು ಎಂದು ಹೇಳಿದೆ.
ಈ ಆರು ಚೆಕ್‌ಗಳೂ ಒಂದೇ ವಹಿವಾಟಿಗೆ ಸಂಬಂಧಿಸಿವೆ ಎಂದು ಅರ್ಜಿದಾರರು ವಾದಿಸಿದರು. ಆದ್ದರಿಂದ, ಈ ಎಲ್ಲ ಚೆಕ್ ಅಮಾನ್ಯ ಪ್ರಕರಣಗಳ ವಿಚಾರಣೆಯನ್ನು ಒಂದೇ ಕಡೆ, ಒಟ್ಟಿಗೆ ಇತ್ಯರ್ಥ ಮಾಡುವುದು ಸೂಕ್ತ ಎಂದು ಅರ್ಜಿದಾರರು ವಾದಿಸಿದ್ದರು.
ದೆಹಲಿಯಲ್ಲಿ ಎಲ್ಲಾ ಆರು ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆಗೆ ಒಳಪಡಿಸಿದರೆ ಪಕ್ಷಕಾರರಿಗೆ ಅನುಕೂಲಕರವಾಗಿದೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯ ಪುರಸ್ಕರಿಸಿತು. ಈ ಎಲ್ಲ ಆರು ಪ್ರಕರಣಗಳು ಒಂದೇ ವಹಿವಾಟಿಗೆ ಸಂಬಂಧಿಸಿದ್ದಾಗಿದೆ. ಸಾಮಾನ್ಯ ತೀರ್ಪಿನ ಪ್ರಕಾರ ವಿಭಿನ್ನ ನ್ಯಾಯಾಲಯಗಳಲ್ಲಿ ವಿರೋಧಾತ್ಮಕ ತೀರ್ಪುಗಳು ಬರುವ ಸಾಧ್ಯತೆಯನ್ನು ವರ್ಗಾವಣೆ ನಿವಾರಿಸುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.
ಈ ಅಂಶವನ್ನು ಗಮನದಲ್ಲಿಟ್ಟುಕೊಂಡು, ಅರ್ಜಿದಾರರ ಮನವಿಗೆ ನಾಗ್ಪುರದಲ್ಲಿ ಸಲ್ಲಿಸಿದ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿತು. ಹೀಗಾಗಿ ಅರ್ಜಿದಾರರ ವಿರುದ್ಧ ದಾಖಲಾದ ಎಲ್ಲಾ ಆರು ಪ್ರಕರಣಗಳನ್ನು ದೆಹಲಿಯಲ್ಲಿ ಒಟ್ಟಿಗೆ ವಿಚಾರಣೆಗೆ ಒಳಪಡಿಸಬಹುದು.
ಪ್ರಕರಣ: ಯೋಗೇಶ್ ಉಪಾಧ್ಯಾಯ Vs ಅಟ್ಲಾಂಟ ಲಿ.
ಸುಪ್ರೀಂ ಕೋರ್ಟ್; Dated 21-02-2023