ಕೊಲೀಜಿಯಂ: ಕೇಂದ್ರ Vs ಸುಪ್ರೀಂ ತಿಕ್ಕಾಟ- ಡೆಡ್‌ಲೈನ್ ನೀಡಿದ ಸುಪ್ರೀಂ ಕೋರ್ಟ್
ಕೊಲೀಜಿಯಂ: ಕೇಂದ್ರ Vs ಸುಪ್ರೀಂ ತಿಕ್ಕಾಟ- ಡೆಡ್‌ಲೈನ್ ನೀಡಿದ ಸುಪ್ರೀಂ ಕೋರ್ಟ್
ಕೊಲೀಜಿಯಂ ಶಿಫಾರಸ್ಸು ಅಂಗೀಕರಿಸಲು ಸುಪ್ರೀಂ ಕೋರ್ಟ್ 10 ದಿನಗಳ ಗಡುವು ನೀಡಿದೆ. ಕೇಂದ್ರವು ಅನಗತ್ಯ ಹಾಗೂ ಉದ್ದೇಶಪೂರ್ವಕ ವಿಳಂಬ ಮಾಡುತ್ತಿರುವ ಬಗ್ಗೆ ಸುಪ್ರೀಂ ನ್ಯಾಯಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳ ನೇಮಕಾತಿ ಮತ್ತು ವರ್ಗಾವಣೆ ವಿಚಾರದಲ್ಲಿ ವಿಳಂಬ ಮಾಡಿದರೆ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ಬಹಿರಂಗ ನ್ಯಾಯಾಲಯದ ಮೂಲಕ ಕೇಂದ್ರಕ್ಕೆ ರವಾನೆ ಮಾಡಿದೆ.
ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ. ಅಭಯ ಶ್ರೀನಿವಾಸ ಓಕಾ ಅವರ ನೇತೃತ್ವದ ನ್ಯಾಯಪೀಠ, ಕೊಲೀಜಿಯಂ ಶಿಫಾರಸ್ಸು ಪ್ರಕಾರ ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ ಮಾಡಿ ಯಾವಾಗ ಅಧಿಸೂಚನೆ ಹೊರಡಿಸುತ್ತೀರಿ ಎಂದು ಅಟಾರ್ನಿ ಜನರಲ್ ಅವರನ್ನು ಪ್ರಶ್ನಿಸಿತು.
ಶೀಘ್ರದಲ್ಲೇ ನೇಮಕಾತಿ ಎಂಬ ಎಜಿ ಅವರ ಪ್ರತಿಕ್ರಿಯೆಗೆ ಸಮಾಧಾನ ಹೊಂದದ ನ್ಯಾಯಪೀಠ, ಆ 'ಶೀಘ್ರ' ಎಂಬುದು ಯಾವಾಗ ಆಗುತ್ತದೆ ಹೇಳಿ ಎಂದು ಒತ್ತಾಯ ಮಾಡಿತು.
ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ, 10 ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ. ಇದು ಗಂಭೀರ ವಿಚಾರವಾಗಿದೆ. ವರ್ಗಾವಣೆ ವಿಚಾರದಲ್ಲಿ ವಿಳಂಬ ಮಾಡಿವುದು ನ್ಯಾಯಾಲಯದ ಆಡಳಿತಾತ್ಮಕ ಮತ್ತು ನ್ಯಾಯಿಕ ಕ್ರಮಕ್ಕೆ ಮುಂದಾಗಲು ದಾರಿ ಮಾಡಿಕೊಡಲಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ನ್ಯಾಯಪೀಠ ಎಚ್ಚರಿಸಿತು.
ಹಿಂತಿರುಗಿಸಿ ಹೆಸರನ್ನು ಮತ್ತೆ ಕೊಲೀಜಿಯಂ ಪುನರುಚ್ಚರಿಸಿದಾಗ ಸರ್ಕಾರಕ್ಕೆ ಮತ್ತೇನೂ ಅವಕಾಶ ಇರುವುದಿಲ್ಲ. ಪದೇ ಪದೇ ಕೊಲೀಜಿಯಂಗೆ ಸರ್ಕಾರ ಹೆಸರು ಮರಳಿಸಲಾಗದು ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದಿಸಿದ್ದರು.
ಕಿರಣ್ ರಿಜಿಜು ಹೇಳಿದ್ದೇನು..?
ಈ ಮಧ್ಯೆ, ರಾಜ್ಯಸಭೆಗೆ ಉತ್ತರ ನೀಡಿದ ಕಾನೂನು ಸಚಿವ ಕಿರಣ್ ರಿಜಿಜು, 18 ಹೆಸರುಗಳನ್ನು ಮರಳಿ ಪರಿಶೀಲಿಸಲು ಕೊಲೀಜಿಯಂಗೆ ಹಿಂತಿರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೊಲೀಜಿಯಂ ಶಿಫಾರಸ್ಸು ಮಾಡಿರುವ 64 ಹೆಸರುಗಳು ಪರಿಶೀಲನೆಗೆ ಬಾಕಿ ಇದೆ. ಒಟ್ಟು 1108 ನ್ಯಾಯಮೂರ್ತಿಗಳ ಹುದ್ದೆ ಇದ್ದು, ಇದರಲ್ಲಿ 775 ಹುದ್ದೆಗಳು ಭರ್ತಿಯಾಗಿವೆ. 333 ಹುದ್ದೆಗಳು ಪ್ರಸ್ತುತ ಖಾಲಿ ಇವೆ ಎಂದು ಕಿರಣ್ ರಾಜ್ಯಸಭೆಗೆ ತಿಳಿಸಿದ್ದಾರೆ.