ಅಡಮಾನ ಸಾಲ: ಆಸ್ತಿಯ ಹಕ್ಕುಪತ್ರವನ್ನು ಬ್ಯಾಂಕ್ ಇಟ್ಟುಕೊಳ್ಳಬಹುದೇ..?- ಹೈಕೋರ್ಟ್ ತೀರ್ಪು
ಅಡಮಾನ ಸಾಲ: ಆಸ್ತಿಯ ಹಕ್ಕುಪತ್ರವನ್ನು ಬ್ಯಾಂಕ್ ಇಟ್ಟುಕೊಳ್ಳಬಹುದೇ..?- ಹೈಕೋರ್ಟ್ ತೀರ್ಪು
ಅಡಮಾನ ಸಾಲ ತೀರಿಸಿದ ಬಳಿಕ ಆಸ್ತಿಯನ್ನು ಇನ್ನೊಬ್ಬರಿಗೆ ವರ್ಗಾವಣೆ ಮಾಡಿದ್ದಾರೆ ಎಂಬ ಕಾರಣಕ್ಕೆ ಸಾಲ ನೀಡಿರುವ ಹಣಕಾಸು ಸಂಸ್ಥೆ ಯಾ ಬ್ಯಾಂಕ್ ಆಸ್ತಿಯ ಹಕ್ಕುಪತ್ರವನ್ನು ಮರಳಿಸದೆ ತಡೆ ಹಿಡಿಯುವಂತಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾ. ಶಾಜಿ ಪಿ. ಚಾಲಿ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ.
ಅಡಮಾನದ ಮುಖ್ಯ ಉದ್ದೇಶವು ಪಡೆದುಕೊಂಡ ಸಾಲವನ್ನು ಮರುಪಾವತಿಸುವಲ್ಲಿ ಭದ್ರತೆಯಾಗಿದೆ. ಆ ಉದ್ದೇಶ ತೀರಿದ ಮೇಲೆ ಭದ್ರತೆಗಾಗಿ ಪಡೆದುಕೊಂಇರುವ ಭೂಮಿಯ ದಾಖಲೆಗಳನ್ನು ಮರಳಿಸದೇ ಇರುವುದು ಕಾನೂನು ಬಾಹಿರವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಅಡಮಾನದ ಅವಧಿಯಲ್ಲಿ ಅವರು ಅಡಮಾನದ ಆಸ್ತಿಯನ್ನು ಇನ್ನೊಬ್ಬರಿಗೆ ವರ್ಗಾಯಿಸಿದ್ದಾರೋ ಇಲ್ಲವೋ ಎಂಬುದು ಸಾಲ ತೀರಿಸಿದ ಮೇಲೆ ಅಪ್ರಸ್ತುತವಾಗಿರುತ್ತದೆ ಮತ್ತು ಹಣಕಾಸು ಸಂಸ್ಥೆ ಯಾ ಬ್ಯಾಂಕಿಗೆ ಅದು ಅನಗತ್ಯವಾಗಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಸದ್ರಿ ಪ್ರಕರಣದಲ್ಲಿ ಅಡಮಾನ ಆಧಾರವಾಗಿ ಇಟ್ಟಿರುವ ಸಂದರ್ಭದಲ್ಲಿ ಅರ್ಜಿದಾರರು ಆಸ್ತಿಯನ್ನು ವರ್ಗಾಯಿಸಿದ್ದಾರೆ. ಆದರೆ, ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡುವ ಮೂಲಕ ಬ್ಯಾಂಕ್ ಹಿತಾಸಕ್ತಿಯನ್ನು ಅವರು ರಕ್ಷಿಸಿದ್ದಾರೆ. ಬ್ಯಾಂಕಿಗೆ ಅಡಮಾನ ಇಟ್ಟಿರುವ ಅವಧಿಯಲ್ಲಿ ಆಸ್ತಿ ವರ್ಗಾವಣೆ ಮಾಡಿದ್ದಾರೆ ಎಂಬ ಕಾರಣಕ್ಕೆ ಆಸ್ತಿಯ ದಾಖಲೆಗಳನ್ನು ನೀಡದೇ ಇರುವುದು ಕಾನೂನುಬಾಹಿರ ಮತ್ತು ಅಂತಹ ಅಧಿಕಾರ ಬ್ಯಾಂಕಿಗೆ ಇರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಅಡಮಾನದ ಸಂದರ್ಭದಲ್ಲಿ ಹಕ್ಕು ವರ್ಗಾವಣೆ ಆಗಿರುವುದರಿಂದ ಬ್ಯಾಂಕ್ ಯಾವುದೇ ನಷ್ಟ ಅನುಭವಿಸಿದರೆ ಆ ಬಗ್ಗೆ ನ್ಯಾಯಾಲಯಗಳು ತೀರ್ಪು ನೀಡಬೇಕೇ ವಿನಃ ಅದನ್ನು ನಿರ್ಧರಿಸುವ ಹಕ್ಕು ಬ್ಯಾಂಕಿಗೆ ಇಲ್ಲ ಎಂದು ಸ್ಪಷ್ಟ ಶಬ್ದಗಳಲ್ಲಿ ಬ್ಯಾಂಕ್ ಅಧಿಕಾರಿಗಳ ಕ್ರಮವನ್ನು ಟೀಕಿಸಿದೆ.
ಸದ್ರಿ ಪ್ರಕರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗೃಹ ಸಾಲ ಪಡೆದ ವ್ಯಕ್ತಿಯೊಬ್ಬರಿಗೆ ಹಕ್ಕು ಪತ್ರ ಸೇರಿದಂತೆ ಎಲ್ಲ ಭೂ ದಾಖಲೆಗಳನ್ನು ಮರಳಿ ನೀಡಬೇಕು ಎಂದು ನ್ಯಾಯಪೀಠ ಆದೇಶ ನೀಡಿತು.
ಪ್ರಕರಣ: ವಿನೂ ಮಾಧವನ್ Vs ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಕೇರಳ ಹೈಕೋರ್ಟ್) Date: 17-03-2023