
ನಾಳೆಯಿಂದಲೇ 22 ಸಾವಿರ ಶಿಕ್ಷಕರಿಗೆ ಬಡ್ತಿ ಪ್ರಕ್ರಿಯೆ: ಪದವೀಧರ ಶಿಕ್ಷಕರಿಗೆ ಸಿಗುತ್ತಾ ಸಿಹಿ ಸುದ್ದಿ..?
ನಾಳೆಯಿಂದಲೇ 22 ಸಾವಿರ ಶಿಕ್ಷಕರಿಗೆ ಬಡ್ತಿ ಪ್ರಕ್ರಿಯೆ: ಪದವೀಧರ ಶಿಕ್ಷಕರಿಗೆ ಸಿಗುತ್ತಾ ಸಿಹಿ ಸುದ್ದಿ..?
ಪದವಿ ಪೂರೈಸಿರುವ ಶೇಕಡಾ 40ರಷ್ಟು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪರೀಕ್ಷೆ ಇಲ್ಲದೆ ಬಡ್ತಿ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಸಚಿವ ಸಂಪುಟದ ಸಮ್ಮತಿಯಷ್ಟೇ ಬಾಕಿ ಇದೆ.
ಪದವಿ ಪೂರ್ವ ನಂತರ ಎರಡು ವರ್ಷಗಳ ಶಿಕ್ಷಣ ಡಿಪ್ಲೊಮಾ ಡಿಇಡಿ ಪೂರೈಸಿದ ಅಭ್ಯರ್ಥಿಗಳು ಪ್ರಾಥಮಿಕ ಶಾಲೆಗಳಿಗೆ ನೇಮಕವಾಗಿದ್ದು, ಈ ಶಿಕ್ಷಕರು ಒಂದರಿಂದ ಏಳನೇ ತರಗತಿಗೆ ಪಾಠ ಮಾಡುತ್ತಿದ್ದಾರೆ.
ಈ ಶಿಕ್ಷಕರ ಪೈಕಿ 85 ಸಾವಿರಕ್ಕೂ ಅಧಿಕ ಶಿಕ್ಷಕರು ತಮ್ಮ ಸೇವಾ ಅವಧಿಯಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದಾರೆ. ಅಂತಹ ಶಿಕ್ಷಕರಿಗೆ ಪದವೀಧರ ಶಿಕ್ಷಕರ ಸ್ಥಾನಕ್ಕೆ (ಆರರಿಂದ ಎಂಟನೇ ತರಗತಿ) ಬಡ್ತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸರ್ಕಾರಕ್ಕೆ ಮನವಿ ಮಾಡಿತ್ತು.
ಸಂಘದ ಮನವಿಯನ್ನು ಶಿಕ್ಷಣ ಇಲಾಖೆ ಪುರಸ್ಕರಿಸಿತ್ತು. ಶೇಕಡಾ 40ರಷ್ಟು ಹುದ್ದೆಗಳನ್ನು ಬಡ್ತಿ ಮೂಲಕ ತುಂಬಿಸಿಕೊಳ್ಳಲು ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಿತ್ತು. ಇದಕ್ಕೆ ಆರ್ಥಿಕ ಇಲಾಖೆಯೂ ಸಮ್ಮತಿ ನೀಡಿದ್ದು, ಶಿಕ್ಷಕರ ಬಡ್ತಿ ಪ್ರಕ್ರಿಯೆ ಸರಾಗವಾಗಿ ಅಡೆತಡೆ ಇಲ್ಲದಂತೆ ನಡೆಯುವ ಸಾಧ್ಯತೆಯನ್ನು ನಿಚ್ಚಳಗೊಳಿಸಿತ್ತು.
ಸರ್ಕಾರ ಸಮ್ಮತಿ ನೀಡಿದರೆ ಮಾರ್ಚ್ 9ರಿಂದಲೇ ಈ ಪ್ರಕ್ರಿಯೆ ಆರಂಭವಾಗಲಿದ್ದು, ಪದವೀಧರ ಶಿಕ್ಷಕರಿಗೆ ಸಿಹಿ ಸುದ್ದಿಯಾಗಲಿದೆ.