-->
ಕ್ಲಪ್ತ ಕಾಲಕ್ಕೆ ನಡೆಯದ ಮಹಾಸಭೆ: ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರ ಮೇಲಿನ ಪ್ರಕರಣ ರದ್ದು- ಹೈಕೋರ್ಟ್ ಆದೇಶ

ಕ್ಲಪ್ತ ಕಾಲಕ್ಕೆ ನಡೆಯದ ಮಹಾಸಭೆ: ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರ ಮೇಲಿನ ಪ್ರಕರಣ ರದ್ದು- ಹೈಕೋರ್ಟ್ ಆದೇಶ

ಕ್ಲಪ್ತ ಕಾಲಕ್ಕೆ ನಡೆಯದ ಮಹಾಸಭೆ: ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರ ಮೇಲಿನ ಪ್ರಕರಣ ರದ್ದು- ಹೈಕೋರ್ಟ್ ಆದೇಶ

 


ಕ್ಲಪ್ತ ಕಾಲದಲ್ಲಿ ವಾರ್ಷಿಕ ಮಹಾಸಭೆ ನಡೆಸದ ಕಾರಣ ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದು ಪಡಿಸಿದ ಕರ್ನಾಟಕ ಹೈಕೋರ್ಟ್

 

ಮಂಗಳೂರು ವಕೀಲರ ಸಂಘಕ್ಕೆ ಚುನಾವಣೆ ನಡೆದು ನೂತನ ಸಮಿತಿಯ ಅಸ್ತಿತ್ವಕ್ಕೆ ಬಂದ 9 ತಿಂಗಳೊಳಗೆ ವಾರ್ಷಿಕ ಮಹಾಸಭೆ ನಡೆಸದಿರುವ ಕಾರಣ ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರ ವಿರುದ್ಧ ದಾಖಲಿಸಲಾದ ಕ್ರಿಮಿನಲ್ ಪ್ರಕರಣವು ಕಾಲಭಾಧಿತವಾಗಿದೆ ಎಂಬ ನೆಲೆಯಲ್ಲಿ ಕರ್ನಾಟಕ ಹೈಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಇವರಿದ್ದ ಏಕ ಸದಸ್ಯ ನ್ಯಾಯಪೀಠ ದಿನಾಂಕ 12.1.2023 ರಂದು ಮಹತ್ವದ ತೀರ್ಪು ನೀಡಿದೆ.

 

ಮಂಗಳೂರು ವಕೀಲರ ಸಂಘದ ವಾರ್ಷಿಕ ಮಹಾಸಭೆಯನ್ನು ಚುನಾವಣೆಯ ದಿನಾಂಕದಿಂದ 9 ತಿಂಗಳೊಳಗೆ ನಡೆಸದೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ಕಲಂ 11(2)ಅನ್ನು  ಉಲ್ಲಂಘಿಸಿ ಕಲಂ 28 ರಡಿ ಶಿಕ್ಷಾರ್ಹ  ಅಪರಾಧ ಎಸಗಿದ್ದಾರೆ ಎಂದು ಆರೋಪಿಸಿ ಮಂಗಳೂರಿನ ವಕೀಲರಾದ ಶ್ರೀ ಅಂಬಿಗ ವಸಂತ್ ಅವರು ವಕೀಲರ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಪಿ. ಅಶೋಕ್ ಅರಿಗ ಇವರ ವಿರುದ್ಧ ದಂಡ ಪಕ್ರಿಯಾ ಸಂಹಿತೆ ಕಲಂ 200 ರಡಿ ಮಂಗಳೂರಿನ ಜೆ. ಎಂ. ಎಫ್. ಸಿ. ಎರಡನೇ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ದಂಡ ಪ್ರಕ್ರಿಯ ಸಂಹಿತೆ ಕಲಂ 156(3)ರಡಿ ತನಿಖೆ ನಡೆಸಲು ಸದರಿ ದೂರನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರಿಗೆ ಕಳುಹಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ದೋಷಾರೋಪಣಾ ಪತ್ರ ಸಲ್ಲಿಸಿದರು. ಆರೋಪವನ್ನು ಅವಗಾಹನಿಸಿದ ನ್ಯಾಯಾಲಯದ ಆದೇಶವನ್ನು ರದ್ದು ಪಡಿಸುವಂತೆ ಕೋರಿ  ಶ್ರೀ ಪಿ.ಅಶೋಕ್ ಅರಿಗ ಅವರು ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಮತ್ತು ಅದು ರಿಟ್ ಅರ್ಜಿ ಸಂಖ್ಯೆ 35914/2016 ಆಗಿ ದಾಖಲಾಗಿತ್ತು.

 

ರಿಟ್ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು ಮಂಗಳೂರು ವಕೀಲರ ಸಂಘದ ಚುನಾವಣೆಯು ದಿನಾಂಕ 16.11.2012 ರಲ್ಲಿ ಜರುಗಿದ್ದು ಸದರಿ ದಿನಾಂಕದಿಂದ  9 ತಿಂಗಳೊಳಗೆ ಅಂದರೆ ದಿನಾಂಕ 16.8.2013 ರೊಳಗೆ ಮಹಾಸಭೆಯನ್ನು ನಡೆಸಬೇಕಾಗಿತ್ತು. ಖಾಸಗಿ ದೂರನ್ನು ಒಂಭತ್ತು ತಿಂಗಳ ಅವಧಿ ಕಳೆದು ಒಂದು ವರ್ಷದ ಬಳಿಕ ಸಲ್ಲಿಸಲಾಗಿದೆ. ಅಪರಾಧದ ದಿನಾಂಕದಿಂದ ಆರು ತಿಂಗಳೊಳಗೆ ಖಾಸಗಿ ದೂರ ಸಲ್ಲಿಸದೆ ಇರುವುದರಿಂದ ಸದರಿ ದೂರು ಕಾಲ ಬಾಧಿತವಾಗಿದೆ. ಆದುದರಿಂದ ಮಾನ್ಯ ದಂಡಾಧಿಕಾರಿಗಳ ಅವಗಾಹನೆ ಆದೇಶವನ್ನು ರದ್ದುಪಡಿಸಬೇಕಾಗಿ ಪ್ರಾರ್ಥಿಸಿದರು.

 

ಸರಕಾರಿ ವಕೀಲರು ತಮ್ಮ ವಾದದಲ್ಲಿ ವಕೀಲರ ಸಂಘದ ನೂತನ ಸಮಿತಿ ಅಸ್ತಿತ್ವಕ್ಕೆ ಬಂದ ಹದಿನೈದು ತಿಂಗಳೊಳಗೆ ಮಹಾ ಸಭೆಯನ್ನು ಜರಗಿಸದಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದುದರಿಂದ ಪ್ರಾಜ್ಞ ದಂಡಾಧಿಕಾರಿಗಳ ಆದೇಶ ಕ್ರಮಬದ್ಧವಾಗಿದೆ ಎಂದು ವಾದಿಸಿದರು.

 

ಉಭಯ ಪಕ್ಷಕಾರ ವಾದವನ್ನು ಆಲಿಸಿದ ಹೈಕೋರ್ಟ್ ಕೆಳಗಿನ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

 

ಕರ್ನಾಟಕ ಸಂಘ ಸಂಸ್ಥೆಗಳ ನೋಂದಣಿ  ಕಾಯ್ದೆ ಸೆಕ್ಷನ್ 11(2) ಪ್ರಕಾರ ವರ್ಷಾಂತ್ಯದ 9 ತಿಂಗಳೊಳಗೆ ಪ್ರಥಮ ವಾರ್ಷಿಕ ಸಭೆಯನ್ನು ಜರಗಿಸತಕ್ಕದ್ದು. ದಿನಾಂಕ 16.11.2012 ರಂದು ಸಮಿತಿ ಅಸ್ತಿತ್ವಕ್ಕೆ ಬಂತು. ನಿಗದಿತ ಸಮಯದೊಳಗೆ ಮಹಾಸಭೆಯನ್ನು ನಡೆಸಿಲ್ಲ. ದೂರರ್ಜಿದಾರರು ನಿಗದಿತ ಸಮಯ ಕಳೆದು ಆರು ತಿಂಗಳ ಒಳಗೆ ದೂರು ಸಲ್ಲಿಸಬೇಕಿತ್ತು.


ಪ್ರಸ್ತುತ ಪಕರಣದಲ್ಲಿ ಆರು ತಿಂಗಳು ಕಳೆದ ಬಳಿಕ ದಿನಾಂಕ 10.7.2014  ರಂದು ದೂರು ದಾಖಲಿಸಲಾಗಿದೆ. ಕರ್ನಾಟಕ ಸಂಘ ಸಂಸ್ಥೆಗಳ ಕಾಯಿದೆ 1960   ಸೆಕ್ಷನ್ 11(2) ಉಲ್ಲಂಘನೆಗೆ ರೂಪಾಯಿ 1000 ದಂಡ ವಿಧಿಸಬಹುದಾಗಿದೆ


ದಂಡ ಪ್ರಕ್ರಿಯಾ ಸಂಹಿತೆ ಕಲಂ 468(2)() ಪ್ರಕಾರ ದಂಡಪಾವತಿಯ ಪ್ರಕರಣದಲ್ಲಿ ಅಪರಾಧ ನಡೆದ ಆರು ತಿಂಗಳೊಳಗೆ ದಂಡಾಧಿಕಾರಿಗಳು ಅಪರಾಧದ ಅವಗಾಹನೆಗೆ ತೆಗೆದುಕೊಳ್ಳತಕ್ಕದ್ದು. ಆದುದರಿಂದ ಕಾಲಮಿತಿ ಮೀರಿದ ಬಳಿಕ ದಾಖಲಿಸಿದ ಪ್ರಕರಣ ಕಾನೂನಿನಡಿ ಊರ್ಜಿತವಲ್ಲ ಹಾಗೂ ಸದರಿ ಪ್ರಕರಣದ ಅವಗಾಹನೆಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿತು. ಹಾಗೂ ರಿಟ್ ಅರ್ಜಿಯನ್ನು  ಪುರಸ್ಕರಿಸಿತು.

ಈ ಆದೇಶದೊಂದಿಗೆ ರಿಟ್ ಅರ್ಜಿದಾರರ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣವನ್ನು ಮಾನ್ಯ ಕರ್ನಾಟಕ ಹೈಕೋರ್ಟ್ ರದ್ದು ಪಡಿಸಿತು.


ಪ್ರಕರಣ: ಪಿ. ಅಶೋಕ್ ಅರಿಗ Vs ಕರ್ನಾಟಕ ರಾಜ್ಯ ಮತ್ತು ಇತರರು

ಕರ್ನಾಟಕ ಹೈಕೋರ್ಟ್, WP NO.35914/2016 (GM-RES), Dated: 12-01-2023

Ads on article

Advertise in articles 1

advertising articles 2

Advertise under the article