"ಅಸ್ತಿತ್ವ"ರಹಿತ ಮಹಿಳೆ ಬಗ್ಗೆ ಆರು ವರ್ಷ ವಾದ: ಇಬ್ಬರು ವಕೀಲರಿಗೆ ಬಿತ್ತು 50 ಸಾವಿರ ದಂಡ!
"ಅಸ್ತಿತ್ವ"ರಹಿತ ಮಹಿಳೆ ಬಗ್ಗೆ ಆರು ವರ್ಷ ವಾದ: ಇಬ್ಬರು ವಕೀಲರಿಗೆ ಬಿತ್ತು 50 ಸಾವಿರ ದಂಡ!
ಅಸ್ತಿತ್ವದಲ್ಲಿ ಇಲ್ಲದ ಮಹಿಳೆಯೊಬ್ಬರ ಬಗ್ಗೆ ಆರು ವರ್ಷಕ್ಕೂ ಅಧಿಕ ಕಾಲ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಇಬ್ಬರು ವಕೀಲರಿಗೆ ತಲಾ 50 ಸಾವಿರ ದಂಡ ವಿಧಿಸಿದ ಅಪರೂಪದ ಘಟನೆ ಗುವಾಹಟಿ ಹೈಕೋರ್ಟ್‌ನಲ್ಲಿ ನಡೆದಿದೆ.
ಅಷ್ಟೇ ಅಲ್ಲ, ಈ ಸುಳ್ಳು ವ್ಯಾಜ್ಯವನ್ನು ನ್ಯಾಯಾಲಯದ ಬಾಗಿಲಿಗೆ ತಂದ ಈ ವಕೀಲರ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯದ ವಕೀಲರ ಪರಿಷತ್ತಿಗೆ ನಿರ್ದೇಶನ ನೀಡಿದೆ.
ನ್ಯಾಯಿಕ ಪ್ರಕ್ರಿಯೆಯನ್ನು ತಮಗೆ ಇಷ್ಟ ಬಂದಂತೆ ಬಳಸಬಹುದು ಎಂದು ಈ ವಕೀಲರು ಅಂದುಕೊಂಡಿದ್ದಾರೆ ಎಂಬುದು ನಿಜಕ್ಕೂ ಆಘಾತಕಾರಿ ಎಂದು ನ್ಯಾ. ಸಂಜಯ್ ಕುಮಾರ್ ಮೇಧಿ ನೇತೃತ್ವದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತು.
ಈ ವ್ಯಾಜ್ಯವನ್ನು ಬಿಯೋಲಿನ್ ಖರ್ಭೀತ್ ಎಂಬ ಮಹಿಳೆ ಹೆಸರಲ್ಲಿ ದಾಖಲಿಸಲಾಗಿತ್ತು. ಅಸಲಿಗೆ, ಈ ಹೆಸರಿನ ವ್ಯಕ್ತಿಯೇ ಇರಲಿಲ್ಲ ಎಂಬುದು ಆರು ವರ್ಷಗಳ ಬಳಿಕ ಗೊತ್ತಾಯಿತು. ಈ ಕೇಸಿನಲ್ಲಿ ಅಸ್ತಿತ್ವದಲ್ಲಿ ಇಲ್ಲದ ಮಹಿಳೆಯೊಬ್ಬರ ವಕಾಲತ್‌ನಾಮ ಪಡೆಯುವುದರಿಂದ ಹಿಡಿದು ಕಾಲ ಕಾಲಕ್ಕೆ ಸೂಕ್ತ ಕ್ರಮ (Steps)ಕ್ಕೆ ಮುಂದಾಗುವಲ್ಲಿಯವರೆಗೆ ವಾದಿಸಿದ ವಕೀಲರ ಬದ್ಧತೆ ಮತ್ತು ನಿಪುಣತೆ ಪ್ರಶ್ನಾರ್ಹವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಖರ್ಭೀತ್ ಎನ್ನುವುದು ಮೇಘಾಲಯದ ಬುಡಕಟ್ಟು ಸಮುದಾಯದ ಒಂದು ಸಾಮಾನ್ಯ ಉಪನಾಮವಾಗಿದೆ. ಕಳೆದ ವರ್ಷದ ವರೆಗೆ ಈ ಪ್ರಕರಣ ದಾಖಲಿಸಿದ ಮಹಿಳೆ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ.
ನ್ಯಾಯಾಲಯ ಕಲಾಪದ ಒಂದು ಹಂತದಲ್ಲಿ ನ್ಯಾಯಾಧೀಶರು ವ್ಯಾಜ್ಯ ದಾಖಲಿಸಿರುವ ಖರ್ಭೀತ್ ಅವರನ್ನು ಹಾಜರುಪಡಿಸುವಂತೆ ಎಚ್.ಎಸ್. ಕಲ್ಸಿ ವಕೀಲರಿಗೆ ಹೇಳಿತು. ಮಹಿಳೆಗೆ ಕೋರ್ಟ್ ನೋಟೀಸ್ ಜಾರಿಯಾಗಿ, ಅಂತಹ ವ್ಯಕ್ತಿ ಈ ವಿಳಾಸಲ್ಲಿ ಇಲ್ಲ ಎಂಬ ಹಿಂಬರಹದೊಂದಿಗೆ ರಿಜಿಸ್ಟರ್ಡ್ ನೋಟೀಸ್ ವಾಪಸ್ ಬಂತು.
ಸದ್ರಿ ಪ್ರಕರಣದಲ್ಲಿ, ಖರ್ಭೀತ್ ಅವರು ಸಿಐಡಿಯ ಡಿಎಸ್‌ಪಿ ಆಗಿದ್ದ ಶಂಕರ್ ಪ್ರಸಾದ್ ನಾಥ್ ಅವರ ನಿಕಟ ಸಂಬಂಧಿ ಎಂದು ಹೇಳಲಾಗಿತ್ತು.