Mutual Divorce: ಸಮ್ಮತಿಯ ವಿಚ್ಚೇದನಕ್ಕೆ 6 ತಿಂಗಳ ಅವಧಿ ಅನಗತ್ಯ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
Mutual Divorce: ಸಮ್ಮತಿಯ ವಿಚ್ಚೇದನಕ್ಕೆ 6 ತಿಂಗಳ ಅವಧಿ ಅನಗತ್ಯ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಪರಸ್ಪರ ಒಟ್ಟಾಗಿ ಬಾಳಲು ಸಾಧ್ಯವೇ ಇಲ್ಲ.. ಹಾಗೂ ಮದುವೆ ಮುರಿದುಬೀಳದೆ ಅನ್ಯ ವಿಧಿ ಇಲ್ಲ ಎಂಬ ಪರಿಸ್ಥಿತಿಯಲ್ಲಿ ನ್ಯಾಯಾಲಯವು ಸಂವಿಧಾನದ 142ನೇ ವಿಧಿ ಬಳಸಿ ತಕ್ಷಣವೇ ದಾಂಪತ್ಯಕ್ಕೆ ಅಂತ್ಯ ಹಾಕಿ ವಿಚ್ಚೇದನ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾ. ಸಂಜೀವ್ ಖನ್ನಾ, ನ್ಯಾ. ಅಭಯ ಶ್ರೀನಿವಾಸ ಓಕಾ, ನ್ಯಾ. ವಿಕ್ರಮ್‌ನಾಥ್ ಮತ್ತು ನ್ಯಾ. ಜೆ.ಕೆ. ಮಾಹೇಶ್ವರಿ ಅವರನ್ನೊಳಗೊಂಡ ಸಂವಿಧಾನಿಕ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಹಿಂದೂ ವಿವಾಹ ಕಾಯ್ದೆಯಡಿ ವಿಚ್ಚೇದನಕ್ಕಾಗಿ ನಿಗದಿಪಡಿಸಿದ ಆರು ತಿಂಗಳ ಅವಧಿಯನ್ನು ಈ ಮೇಲೆ ಹೇಳಿದಂತಹ ಪರಿಸ್ಥಿತಿಯಲ್ಲಿ ಸ್ಥಗಿತಗೊಳಿಸಬಹುದು. ಇದಕ್ಕೆ ನ್ಯಾಯಾಲಯ ತನ್ನ ಪೂರ್ಣ ಅಧಿಕಾರವನ್ನು ಚಲಾಯಿಸಿ ವಿಚ್ಚೇದನವನ್ನು ನೀಡಬಹುದು ಎಂದು ನ್ಯಾಯಪೀಠ ಹೇಳಿದೆ.
ಈ ಹಿಂದೆ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(b) ಅಡಿಯಲ್ಲಿ ವಿಚ್ಚೇದನ ಬಯಸಿ ಅರ್ಜಿ ಸಲ್ಲಿಸುವ ದಂಪತಿಗೆ ವಿಚ್ಚೇದನ ನೀಡಲು ಆರು ತಿಂಗಳ ಕಡ್ಡಾಯ ಅವಧಿ(Cooling Period)ಯನ್ನು ನ್ಯಾಯಾಲಯ ನೀಡುತ್ತಿತ್ತು. ಈ ಅವಧಿಯನ್ನು ಪ್ರಶ್ನಿಸಿ ಸಂವಿಧಾನ ಪೀಠದ ಮುಂದೆ ಅರ್ಜಿ ಸಲ್ಲಿಸಲಾಗಿತ್ತು.
ಜೊತೆಗೆ ಕೌಟುಂಬಿಕ ನ್ಯಾಯಾಲಯಗಳ ಮೆಟ್ಟಿಲೇರದೆ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಚೇದನ ಪಡೆಯಲು ಸುಪ್ರೀಂ ಕೋರ್ಟ್‌ಗೆ ಇರುವ ಸಂಪೂರ್ಣ ಅಧಿಕಾರ ಬಳಕೆ ಮಾಡಿ ಸೂಕ್ತ ತೀರ್ಪು ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.
ಸದ್ರಿ ಪ್ರಕರಣದಲ್ಲಿ ಸಂವಿಧಾನ ಪೀಠಕ್ಕೆ ಅಮಿಕಸ್ ಕ್ಯೂರಿಯಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿಗಳಾದ ಇಂದಿರಾ ಜೈಸಿಂಗ್, ವಿ.ಗಿರಿ, ಕಪಿಲ್ ಸಿಬಲ್, ದುಷ್ಯಂತ್ ದವೆ ಹಾಗೂ ಮೀನಾಕ್ಷಿ ಆರೋರಾ ಅವರು ನ್ಯಾಯಿಕ ನೆರವು ನೀಡಿದರು.
ಸಂವಿಧಾನದ 142ನೇ ವಿಧಿ ಏನು ಹೇಳುತ್ತದೆ...?
ಸಂವಿಧಾನದ 142ನೇ ವಿಧಿಯು ಸುಪ್ರೀಂ ಕೋರ್ಟ್ ಮುಂದೆ ಬಾಕಿ ಇರುವ ಯಾವುದೇ ದಾವೆ ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ನ್ಯಾಯ ಒದಗಿಸುವುದಕ್ಕಾಗಿ ಅಗತ್ಯ ತೀರ್ಪು ಮತ್ತು ಆದೇಶ ನೀಡಲು ನ್ಯಾಯಪೀಠಕ್ಕೆ ಅಧಿಕಾರ ನೀಡುತ್ತದೆ.
ಸಂವಿಧಾನದ 142ನೇ ವಿಧಿ ಅಡಿಯಲ್ಲಿ ವಿಚ್ಚೇದನ ನೀಡಲು ಸುಪ್ರೀಂ ಕೋರ್ಟ್ ತನ್ನ ಅಧಿಕಾರ ಚಲಾಯಿಸಬಹುದೇ.. ? ಮತ್ತು ಇಂತಹ ಅಧಿಕಾರಗಳ ವಿಶಾಲ ಮಾನದಂಡಗಳ ಕುರಿತ ವಿಚಾರವು ಸದ್ರಿ ಪ್ರಕರಣದಲ್ಲಿ ಒಳಗೊಂಡಿತ್ತು.
2016ರ ಜೂನ್ 29ರಂದು ನ್ಯಾಯಮೂರ್ತಿಗಳಾದ ಶಿವ ಕೀರ್ತಿ ಸಿಂಗ್ ಮತ್ತು ಆರ್. ಭಾನುಮತಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಪ್ರಕರಣವನ್ನು ಇತ್ಯರ್ಥಪಡಿಸಲು ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು.
ಅರ್ಜಿ ಕುರಿತು ಪೂರ್ಣ ವಾದ ಆಲಿಸಿದ್ದ ಸಂವಿಧಾನಿಕ ಪೀಠ ತನ್ನ ತೀರ್ಪನ್ನು 2022ರ ಸೆಪ್ಟಂಬರ್ 29ರಂದು ತೀರ್ಪಿಗಾಗಿ ಕಾಯ್ದಿರಿಸಿತ್ತು.
ಪ್ರಕರಣ: ಶಿಲ್ಪಾ ಶೈಲೇಶ್ Vs ವರುಣ್ ಶ್ರೀನಿವಾಸನ್ (ಸುಪ್ರೀಂ ಕೋರ್ಟ್)
Transfer Petition(Civil) 1118/2014 Dated: 01-05-2023