30ರ ಬಳಿಕ ಸರ್ಕಾರಿ ಹುದ್ದೆಗೆ ಸೇರ್ಪಡೆ: ಹೆಚ್ಚುವರಿ ಅರ್ಹತಾದಾಯಕ ಸೇವೆ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
30ರ ಬಳಿಕ ಸರ್ಕಾರಿ ಹುದ್ದೆಗೆ ಸೇರ್ಪಡೆ: ಹೆಚ್ಚುವರಿ ಅರ್ಹತಾದಾಯಕ ಸೇವೆ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
30 ವರ್ಷ ವಯಸ್ಸು ತುಂಬಿದ ಬಳಿಕ ಸರಕಾರಿ ಸೇವೆಗೆ ಸೇರಿದ ನೌಕರರಿಗೆ ಹೆಚ್ಚುವರಿ ಅರ್ಹತಾದಾಯಕ ಸೇವೆ ನೀಡುವ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ.
30 ವರ್ಷ ತುಂಬಿದ ನಂತರ ಕರ್ನಾಟಕ ರಾಜ್ಯ ನಾಗರೀಕ ಸೇವೆಗೆ ನೇರ ನೇಮಕಾತಿ ಹೊಂದಿದ ನೌಕರರಿಗೆ ನೀಡತಕ್ಕ ಹೆಚ್ಚುವರಿ ಅರ್ಹತಾ ಸೇವೆಯು ಸರಕಾರದ ಕಾರ್ಯ ನೀತಿಗೆ ಸಂಬಂಧಪಟ್ಟ ವಿಷಯವಾಗಿದೆ ಎಂಬುದಾಗಿ ಕರ್ನಾಟಕ ಹೈಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಎಸ್. ಪಿ. ದಿನೇಶ್ ಕುಮಾರ್ ಮತ್ತು ಶ್ರೀ ರವಿ ಹೊಸಮನಿ ಇವರನ್ನೊಳಗೊಂಡ ವಿಭಾಗೀಯ ನ್ಯಾಯ ಪೀಠವು ಬಾಪು ಕಲ್ಲಪ್ಪ ಮದರಂಗಿ ಮತ್ತಿತರರು ವಿರುದ್ಧ ಕರ್ನಾಟಕ ರಾಜ್ಯ ಮತ್ತಿತರರು ಈ ಪ್ರಕರಣದಲ್ಲಿ ದಿನಾಂಕ 3-10-2020ರಂದು ಮಹತ್ವದ ತೀರ್ಪು ನೀಡಿದೆ.
30 ವರ್ಷ ವಯಸ್ಸು ತುಂಬಿದ ನಂತರ ಸರಕಾರಿ ಸೇವೆಗೆ ಸೇರಿದ ನೌಕರರಿಗೆ ಗರಿಷ್ಠ 8 ವರ್ಷಗಳ ಅರ್ಹತಾ ಸೇವೆಯನ್ನು ನೀಡಬಹುದಾಗಿದೆ ಎಂಬುದಾಗಿ ಕರ್ನಾಟಕ ಸರಕಾರವು ದಿನಾಂಕ 12.07.1978 ರಂದು ಆದೇಶ ಹೊರಡಿಸಿತು. ಸದರಿ ಎಂಟು ವರ್ಷಗಳ ಅವಧಿಗೆ ಇದ್ದ ಅರ್ಹತಾ ಸೇವೆಯನ್ನು ದಿನಾಂಕ 9.11 2004 ರಿಂದ ಜಾರಿಗೆ ಬರುವಂತೆ ನಾಲ್ಕು ವರ್ಷಗಳಿಗೆ ಇಳಿಸಲಾಯಿತು. ತದನಂತರ ದಿನಾಂಕ 15.2.2012 ರ ಸರಕಾರಿ ಆದೇಶ ಪ್ರಕಾರ ಕೆ ಸಿ ಎಸ್ ಆರ್ ನ 247 ಎ ನಿಯಮಕ್ಕೆ ತಿದ್ದುಪಡಿ ತಂದು ಪರಿಗಣಿಸಬಹುದಾದ ಗರಿಷ್ಠ ಅರ್ಹತಾ ಸೇವೆಯನ್ನು ಎರಡು ವರ್ಷಗಳಿಗೆ ನಿಗದಿಪಡಿಸಲಾಯಿತು.
ಈತನ್ಮಧ್ಯೆ ದಿನಗೂಲಿ ಅಥವಾ ಮಿತವೇತನ ಪದವೀಧರರಾಗಿ ಸೇವೆ ಸಲ್ಲಿಸಿ ತದನಂತರ ಸರಕಾರಿ ಹುದ್ದೆಗಳಲ್ಲಿ ವಿಲೀನಗೊಳಿಸಲಾದ/ ಸೇವೆಯನ್ನು ಕ್ರಮಬದ್ಧಗೊಳಿಸಲಾದ ನೌಕರರಿಗೂ ಕೆಸಿಎಸ್ಆರ್ ನಿಯಮ 247ಎ ಇದರ ಸೌಲಭ್ಯವನ್ನು ಮಂಜೂರು ಮಾಡುವಂತೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಶ್ರೀ ನಾಗರಾಜು ಮತ್ತಿತರರು ಸಲ್ಲಿಸಿದ ಅರ್ಜಿಗಳನ್ನು ಪುರಸ್ಕರಿಸಿ ದಿನಾಂಕ 19.4.2016ರಂದು ತೀರ್ಪು ನೀಡಿತು. ಸದರಿ ತೀರ್ಪಿನ ವಿರುದ್ಧ ಕರ್ನಾಟಕ ರಾಜ್ಯ ಸರಕಾರವು ಸಲ್ಲಿಸಿದ ಪುನರಾವಲೋಕನ ಅರ್ಜಿಯನ್ನು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ದಿನಾಂಕ 21 9 2018 ರಂದು ವಜಾ ಗೊಳಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರವು ದಿನಾಂಕ 15. 2. 2012ರ ಸರಕಾರಿ ಆದೇಶವನ್ನು ಭಾಗಶಃ ಮಾರ್ಪಡಿಸಿ ದಿನಗೂಲಿ/ವಿತವೇತನ ಪದವೀಧರರಾಗಿ ಕಾರ್ಯನಿರ್ವಹಿಸಿ ನಂತರ ಸರಕಾರಿ ಸೇವೆಯಲ್ಲಿ ಸಕ್ರಮಗೊಂಡ ಸರಕಾರಿ ನೌಕರರಿಗೂ ಇತರ ಸರಕಾರಿ ನೌಕರರಿಗೆ ಅನ್ವಯವಾಗುವಂತೆ ಎರಡು ವರ್ಷಗಳ ಹೆಚ್ಚುವರಿ ಅರ್ಹತಾದಾಯಕ ಸೇವೆಯನ್ನು ಪಿಂಚಣಿಯ ಉದ್ದೇಶಕ್ಕೆ ಅರ್ಹತಾದಾಯಕ ಸೇವೆಯಾಗಿ ಪರಿಗಣಿಸಲು ದಿನಾಂಕ 10.04.2017ರಂದು ಸರಕಾರಿ ಆದೇಶ ಹೊರಡಿಸಿತು.
ಶ್ರೀ ಬಾಪು ಕಲ್ಲಪ್ಪ ಮರತಂಗಿ, ಶ್ರೀ ಮಾ. ಇಂಡಿಕರ್ ಮತ್ತು ಶ್ರೀ ರೇವಟಗಾವ್ ವಿ. ಬಿ. ಇವರುಗಳು ತಾತ್ಕಾಲಿಕ ನೆಲೆಯಲ್ಲಿ ಕ್ರಮವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತ್ ಕಾರ್ಯದರ್ಶಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಅವರ ನೇಮಕಾತಿಯನ್ನು ಕ್ರಮಬದ್ಧಗೊಳಿಸಲಾಯಿತು. 2004ರ ನಂತರ ನಿವೃತ್ತಿಯ ವಯಸ್ಸನ್ನು ತಲುಪಿದ ಬಳಿಕ ಅವರು ಸೇವೆಯಿಂದ ನಿವೃತ್ತರಾದರು. ಅವರ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯಗಳನ್ನು ಇತ್ಯರ್ಥಗೊಳಿಸಲಾಯಿತು. ದಿನಾಂಕ 10.04.2017ರ ಸರಕಾರಿ ಆದೇಶದಲ್ಲಿ ದಿನಗೂಲಿ ನೌಕರರಿಗೂ ಸಾಮಾನ್ಯ ಸರಕಾರಿ ನೌಕರರಂತೆ ಹೆಚ್ಚುವರಿ ಅರ್ಹತಾ ಸೇವೆಯನ್ನು ಪರಿಗಣಿಸುವಂತೆ ಆದೇಶವಾಗಿರುವುದರಿಂದ ದಿನಾಂಕ 12.07.1978ರ ಸರಕಾರಿ ಆದೇಶದ ಪ್ರಕಾರ ಎಂಟು ವರ್ಷಗಳ ಹೆಚ್ಚುವರಿ ಅರ್ಹತಾ ಸೇವೆಯನ್ನು ಸೇರಿಸಿ ಪರಿಷ್ಕೃತ ಪಿಂಚಣಿ ಮತ್ತು ಸೌಲಭ್ಯಗಳನ್ನು ನೀಡುವಂತೆ ಕೋರಿ ಸರಕಾರಕ್ಕೆ ಮನವಿ ಸಲ್ಲಿಸಿದರು.
ಅರ್ಜಿದಾರರ ಮನವಿಗೆ ಸರಕಾರವು ಯಾವುದೇ ಕ್ರಮ ಕೈಗೊಳ್ಳದ ಕಾರಣ ಅರ್ಜಿದಾರರು ರಾಜ್ಯ ಸರಕಾರ ಮತ್ತು ಇತರರನ್ನು ಪ್ರತಿವಾದಿಗಳನ್ನಾಗಿ ಮಾಡಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ (ಕೆ.ಎ.ಟಿ.) ಯಲ್ಲಿ ಪ್ರಕರಣ ದಾಖಲಿಸಿದರು. ಕೆ ಎ ಟಿ ದಿನಾಂಕ 30.11.2018 ರ ಸಾಮಾನ್ಯ ಆದೇಶದ ಮೂಲಕ ಕೆಸಿಎಸ್ಆರ್ ನ ನಿಯಮ 247 ಎ ಅಡಿಯಲ್ಲಿ ಹೆಚ್ಚುವರಿ ಅರ್ಹತಾ ಸೇವೆಯ ಪ್ರಯೋಜನವನ್ನು ಪಡೆಯಲು ತಮ್ಮ ಇಲಾಖೆಯ ಸಂಬಂಧ ಪಟ್ಟ ಇಲಾಖಾ ಮುಖ್ಯಸ್ಥರಿಗೆ ವೈಯಕ್ತಿಕ ಮನವಿ ಸಲ್ಲಿಸಲು ಅರ್ಜಿದಾರರಿಗೆ ನಿರ್ದೇಶಿಸಿ ಅರ್ಜಿಗಳನ್ನು ವಜಾಗೊಳಿಸಿತು.
ಕೆ ಎ ಟಿ ಆದೇಶದಿಂದ ಭಾದಿತರಾದ ಅರ್ಜಿದಾರರು ಸದರಿ ಆದೇಶವನ್ನು ಪ್ರಶ್ನಿಸಿ ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ದಾಖಲಿಸಿದರು. ಅರ್ಜಿದಾರರ ಪರವಾಗಿ ವಕೀಲರು ಈ ಕೆಳಗಿನ ವಾದ ಮಂಡಿಸಿದರು.
ದಿನಾಂಕ 8. 9. 2016 ರ ಸರಕಾರಿ ಆದೇಶ ಪ್ರಕಾರ 4 ವರ್ಷಗಳ ಹೆಚ್ಚುವರಿ ಅರ್ಹತಾ ಸೇವೆಯನ್ನು ಸೇರಿಸುವ ಸೌಲಭ್ಯವನ್ನು ನೀಡಲಾಗಿದ್ದು ಕೆಸಿಎಸ್ಆರ್ ನಯಮ 247 ಎ ತಿದ್ದುಪಡಿಗೂ ಮೊದಲು ದಿನಗೂಲಿ ಸೇವೆಯಲ್ಲಿದ್ದು ಆ ಬಳಿಕ ಸೇವೆ ಖಾಯಂಗೊಂಡು ನಿವೃತ್ತರಾದ ನೌಕರರಿಗೂ ಅನ್ವಯಿಸಲಾಗಿದೆ.
ರಿಟ್ ಅರ್ಜಿದಾರರನ್ನು ಪ್ರಾರಂಭದಲ್ಲಿ ದಿನಕೂಲಿ ಆಧಾರದಲ್ಲಿ ನೇಮಿಸಲಾಗಿತ್ತು. ನಂತರ ಅವರ ನೇಮಕಾತಿಯನ್ನು ಕ್ರಮಬದ್ಧಗೊಳಿಸಲಾಯಿತು. ಅವರು ದಿನಾಂಕ 15.2.2012 ರ ಮೊದಲು ನಿವೃತ್ತರಾಗಿದ್ದಾರೆ. ಆದುದರಿಂದ ಕನಿಷ್ಠ ನಾಲ್ಕು ವರ್ಷಗಳ ಹೆಚ್ಚುವರಿ ಅರ್ಹತಾ ಸೇವೆಯನ್ನು ಸೇರಿಸಲು ಅರ್ಹರಾಗಿದ್ದಾರೆ
ಆದಾಗ್ಯೂ ದಿನಾಂಕ 12.07.1978 ರ ಆದೇಶ ಪ್ರಕಾರ ಸರಕಾರಿ ನೌಕರರು 8 ವರ್ಷಗಳ ಅರ್ಹತಾ ಸೇವೆ ಸೇರ್ಪಡೆಗೆ ಅರ್ಹರಾಗಿರುತ್ತಾರೆ. ಆದುದರಿಂದ ರಾಜ್ಯ ಸರಕಾರವು ಪಿಂಚಣಿ ಮತ್ತಿತ್ತರ ನಿವೃತ್ತಿ ಸೌಲಭ್ಯಗಳಿಗೆ 8 ವರ್ಷಗಳ ಹೆಚ್ಚುವರಿ ಅರ್ಹತಾ ಸೇವೆಯನ್ನು ಸೇರಿಸಬೇಕು ಎಂಬುದಾಗಿ ಹೈಕೋರ್ಟ್ ನಲ್ಲಿ ವಾದಿಸಿದರು.
ರಾಜ್ಯ ಸರಕಾರದ ಪರ ವಕೀಲರು ಮಂಡಿಸಿದ ವಾದ ಈ ಕೆಳಗಿನಂತಿದೆ.
ನಿರ್ದಿಷ್ಟ ಹೆಚ್ಚುವರಿ ಅರ್ಹತಾ ಸೇವೆಯನ್ನು ಸೇರಿಸುವುದು ಸರಕಾರದ ಕಾರ್ಯ ನೀತಿಗೆ ಸಂಬಂಧಪಟ್ಟ ವಿಷಯವಾಗಿದೆ. ರಾಜ್ಯ ಸರಕಾರವು ದಿನಾಂಕ 12.07.1978ರ ಅಧಿಸೂಚನೆ ಮೂಲಕ ಗರಿಷ್ಠ 8 ವರ್ಷಗಳವರೆಗೆ ಹೆಚ್ಚುವರಿ ಅರ್ಹತಾ ಸೇವೆಯನ್ನು ಸೇರಿಸಲು ಆದೇಶಿಸಿತು. ತದನಂತರ ದಿನಾಂಕ 9.11.2004 ರಿಂದ ಜಾರಿಗೆ ಬರುವಂತೆ ನಾಲ್ಕು ವರ್ಷಗಳಿಗೆ ಇಳಿಸಲಾಯಿತು. ದಿನಾಂಕ 15.2.2012ರ ಸರಕಾರಿ ಆದೇಶ ಪ್ರಕಾರ ಹೆಚ್ಚುವರಿ ಅರ್ಹತಾ ಸೇವೆಯ ಸೇರ್ಪಡೆಯ ಅವಧಿಯನ್ನು ಎರಡು ವರ್ಷಗಳಿಗೆ ಇಳಿಸಲಾಗಿದೆ. ದಿನಾಂಕ 8.9.2016 ರ ಸರಕಾರಿ ಆದೇಶದಲ್ಲಿ ನಾಲ್ಕು ವರ್ಷಗಳ ಹೆಚ್ಚುವರಿ ಅರ್ಹತಾ ಸೇವೆಯನ್ನು ಸೇರಿಸಲು ಯಾವುದೇ ಉಲ್ಲೇಖವಿಲ್ಲ. ಸರಕಾರಿ ನೌಕರರಿಗೆ ಸಿಗತಕ್ಕ ನಿವೃತ್ತಿ ವೇತನ ಮತ್ತಿತರ ಸೌಲಭ್ಯಗಳನ್ನು ಸರಕಾರಿ ನೌಕರರು ಸೇವೆಯಿಂದ ನಿವೃತ್ತಿಯಾದಾಗ ಅಥವಾ ಸೇವೆಯಿಂದ ಬಿಡುಗಡೆಗೊಳಿಸಿದಾಗ ಜಾರಿಯಲ್ಲಿರುವ ನಿಯಮಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ ಎಂದು ಕೆಸಿಎಸ್ಆರ್ ನಿಯಮ 6 ಸ್ಪಷ್ಟಪಡಿಸುತ್ತದೆ ಎಂಬುದಾಗಿ ಹೈಕೋರ್ಟಿನಲ್ಲಿ ವಾದಿಸಿದರು.
ಉಭಯ ಪಕ್ಷಕಾರರ ಪಾದವನ್ನು ಆಲಿಸಿದ ಹೈಕೋರ್ಟ್ ನ ವಿಭಾಗೀಯ ಪೀಠವು ವೇತನ ಮತ್ತು ಭತ್ಯೆಗೆ ಸಂಬಂಧಿಸಿದಂತೆ ಸರಕಾರಿ ನೌಕರನ ಹಕ್ಕು ಕೆಸಿಎಸ್ಆರ್ ನ ನಿಯಮ 6 ರಂತೆ ನಿಯಂತ್ರಿಸಲ್ಪಡುತ್ತದೆ. ಅದರ ಪರಿಭಾಷೆಯಲ್ಲಿ ಸರಕಾರಿ ನೌಕರರ ನಿವೃತ್ತಿಯ ಸಮಯದಲ್ಲಿ ಜಾರಿಯಲ್ಲಿದ್ದ ನಿಯಮವನ್ನು ಗಣನೆಗೆ ತೆಗೆದುಕೊಳ್ಳಬೇಕು. ಕೆಸಿಎಸ್ಆರ್ ನಿಯಮ 247 ಕ್ಕೆ ಪರ್ಯಾಯವಾಗಿ ತಿದ್ದುಪಡಿ ಮಾಡಲಾಗಿದೆ. ಹೆಚ್ಚುವರಿ ಅರ್ಹತಾ ಸೇವೆಗಾಗಿ ಪರಿಗಣಿಸಬಹುದಾದ ಗರಿಷ್ಠ ಅವಧಿಯು ಎರಡು ವರ್ಷಗಳಿಗಿಂತ ಹೆಚ್ಚಿರಬಾರದು, ದಿನಾಂಕ 12.07.1978 ರ ಸರಕಾರಿ ಆದೇಶದಂತೆ ಗರಿಷ್ಠ 8 ವರ್ಷಗಳ ಅವಧಿಗೆ ಇದ್ದ ಅರ್ಹತಾ ಸೇವೆಯನ್ನು ದಿನಾಂಕ 9.11. 2004 ರಿಂದ ಜಾರಿಗೆ ಬರುವಂತೆ ನಾಲ್ಕು ವರ್ಷಗಳಿಗೆ ಇಳಿಸಿ ನಂತರ ದಿನಾಂಕ 15.2.2012 ರಿಂದ ಜಾರಿಗೆ ಬರುವಂತೆ ಎರಡು ವರ್ಷಗಳಿಗೆ ಇಳಿಸಲಾಗಿದೆ.
ದಿನಾಂಕ 5.11.2018ರ ಸರಕಾರಿ ಆದೇಶ ಪ್ರಕಾರ ಕೆ ಸಿ ಎಸ್ ಆರ್ ನಿಯಮ 247 ಎ ಇದರ ಸೌಲಭ್ಯವನ್ನು ಮಂಜೂರು ಮಾಡುವ ಅಧಿಕಾರವನ್ನು ಇಲಾಖಾ ಮುಖ್ಯಸ್ಥರುಗಳಿಗೆ ನೀಡಲಾಗಿದೆ. ಆದುದರಿಂದ ಇಲಾಖಾ ಮುಖ್ಯಸ್ಥರನ್ನು ಸಂಪರ್ಕಿಸುವಂತೆ ಕರ್ನಾಟಕ ಆಡಳಿತ ಮಂಡಳಿಯು ದಿನಾಂಕ 30.11.2018 ರ ತನ್ನ ತೀರ್ಪಿನಲ್ಲಿ ಅರ್ಜಿದಾರರಿಗೆ ನೀಡಿದ ನಿರ್ದೇಶನವು ನಿಯಮಾನುಸಾರ ಸರಿಯಾಗಿದೆ ಹಾಗೂ ಕಾನೂನು ಬದ್ಧವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ವಿಭಾಗಿಯ ನ್ಯಾಯ ಪೀಠವು ಅರ್ಜಿದಾರರು ಸಲ್ಲಿಸಿದ ರಿಟ್ ಅರ್ಜಿಗಳನ್ನು ತಿರಸ್ಕರಿಸಿತು.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ