-->
13 ಸಚಿವರನ್ನೇ ಮನೆಗೆ ಕಳಿಸಿದ ಮತದಾರ: ಬಿಜೆಪಿಯ ಸೋಲಿಗೆ ಕಾರಣವೇನು...?

13 ಸಚಿವರನ್ನೇ ಮನೆಗೆ ಕಳಿಸಿದ ಮತದಾರ: ಬಿಜೆಪಿಯ ಸೋಲಿಗೆ ಕಾರಣವೇನು...?

13 ಸಚಿವರನ್ನೇ ಮನೆಗೆ ಕಳಿಸಿದ ಮತದಾರ: ಬಿಜೆಪಿಯ ಸೋಲಿಗೆ ಕಾರಣವೇನು...?





ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಪಾತಾಳಕ್ಕೆ ಕುಸಿದಿದೆ. ರಾಜ್ಯದ ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಗೆ ಕಮಲ ಪಾಳಯದ ಮಹಾ ನಾಯಕರೇ ಪತನಗೊಂಡಿದ್ದಾರೆ.



ದ್ವೇಷ ಭಾಷಣ, ಅಪಹಾಸ್ಯಕ್ಕೆ ಕುಖ್ಯಾತಿ ಪಡೆದಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇದೇ ಮೊದಲ ಬಾರಿ ಸೋಲಿನ ರುಚಿ ಕಂಡಿದ್ದಾರೆ. ನಾಲ್ಕು ಬಾರಿ ಶಾಸಕರಾಗಿದ್ದ ಸಿ.ಟಿ. ರವಿ ತನ್ನ ರಾಜಕೀಯ ಶಿಷ್ಯನ ಕೈಯಲ್ಲೇ ಸೋಲಿನ ರುಚಿ ಕಂಡು ಮನೆಗೆ ಮರಳಿದ್ದಾರೆ.



ಇನ್ನು ರಾಜ್ಯ ಸರ್ಕಾರದ 13 ಸಚಿವರು ಸೋತು ಸುಣ್ಣವಾಗಿದ್ದಾರೆ. ಕೋವಿಡ್ ಕಾಲಘಟ್ಟದಲ್ಲಿ ಬೇಕಾಬಿಟ್ಟಿ ರೂಲ್ಸ್ ಮಾಡಿ ರಾಜ್ಯದ ಜನರನ್ನು ಕಂಗೆಡಿಸಿ ಜನರ ಆಕ್ರೋಶಕ್ಕೆ ತುತ್ತಾಗಿದ್ದ ಕೆ. ಸುಧಾಕರ್ ಅವರೂ ಸೋತು ಹೋದರು.



ಪ್ರಭಾವಿ ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು, ಸೋಮಣ್ಣ, ಮಾಧುಸ್ವಾಮಿ ಅವರು ತಮ್ಮ ಎದುರಾಳಿಗಳ ಮುಂದೆ ತರಗೆಲೆಯಂತೆ ಮಣ್ಣು ಮುಕ್ಕಿದರು.



ಹಣಬಲದಿಂದ ಮೆರೆದಾಡಿದ್ದ ಆಪರೇಷನ್ ಕಮಲಕ್ಕೊಳಗಾದ ಸಚಿವ ಎಂ.ಟಿ.ಬಿ. ನಾಗರಾಜ್, ಬಿ.ಸಿ. ಪಾಟೀಲ್, ನಾಗೇಶ್ ಸೋತು ಹೋಗಿದ್ದಾರೆ.



ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಮುರುಗೇಶ ನಿರಾಣಿ, ಆರ್. ಅಶೋಕ್, ರೇಣುಕಾಚಾರ್ಯ, ನಾರಾಯಣ ಗೌಡ ಕೂಡ ತಮ್ಮ ಕ್ಷೇತ್ರಗಳಲ್ಲಿ ಸೋತು ಹೋದರು.



ಸಚಿವರಾದ ಸುನೀಲ್ ಕುಮಾರ್, ಯತ್ನಾಳ್ ಕಷ್ಟಪಟ್ಟು ಪ್ರಯಾಸದ ಜಯ ದಾಖಲಿಸಿದ್ದಾರೆ. ಹಾಸನದ ಪ್ರೀತಂ ಗೌಡ, ಸಿ.ಟಿ. ರವಿ ಅವರು ತಮ್ಮ "ಕುಲಗೆಟ್ಟ" ನಾಲಗೆಯ ಮೂಲಕವೇ ಮತದಾರನ ಮುಂದೆ ಬೆತ್ತಲಾಗಿದ್ದಾರೆ.



ರಾಜ್ಯದಲ್ಲಿ ಆಡಳಿತ ಇದ್ದರೂ ಅಭಿವೃದ್ಧಿ ವಿಚಾರ ಮುಂದಿಡುವ ಬದಲು ಧರ್ಮಾಧರಿತ, ದ್ವೇಷಭರಿತ ರಾಜಕಾರಣಕ್ಕೆ ಬಿಜೆಪಿ ಮಣೆ ಹಾಕಿದ್ದು ತನ್ನ ಪತನಕ್ಕೆ ತಾನೇ ನಾಂದಿ ಹಾಡಿತು ಎಂಬ ಅಭಿಪ್ರಾಯವೂ ಮೂಡುವಂತಾಯಿತು.



40% ಕಮಿಷನ್ ವಿಚಾರದಲ್ಲೂ ಕಾಂಗ್ರೆಸ್ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯಲು ಬಿಜೆಪಿ ತಿಣುಕಾಡಿತು. ಹುಬ್ಬಳ್ಳಿ, ತುಮಕೂರು, ಪುತ್ತೂರು ಹಾಗೂ ಇತರೆಡೆ ಬಿಜೆಪಿಯೊಳಗಿನ ಬಂಡಾಯವನ್ನು ಶಮನಗೊಳಿಸಲು ಪಕ್ಷ ಪ್ರಾಮಾಣಿಕ ಪ್ರಯತ್ನ ನಡೆಸಲಿಲ್ಲ. ಬದಲಿಗೆ ಉಡಾಫೆ ಹಾಗೂ ಮಟ್ಟ ಹಾಕುವ ರಾಜತಂತ್ರವನ್ನೇ ಅನುಸರಿಸಿತು.



ಇದೆಲ್ಲವೂ ಬಿಜೆಪಿಯ ಈಗಿನ ಸ್ಥಿತಿಗೆ ಕಾರಣವಾಯಿತು ಎನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯ.

.

Ads on article

Advertise in articles 1

advertising articles 2

Advertise under the article